ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಕೋಳಿ ಕೂಗದ, ಮಂಚ ಇಲ್ಲದ ಮೈಲಾಪುರ

ಯಾದಗಿರಿ ತಾಲ್ಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ವಿಶೇಷತೆ
Last Updated 14 ಜನವರಿ 2023, 2:49 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಮೈಲಾಪುರ ಕುಂಬಾರರು, ಕಮ್ಮಾರರು ಮತ್ತು ಮುಸ್ಲಿಂ ಸಮುದಾಯದವರು ಸಿಗುವುದು ಅಪರೂಪ. ಇಲ್ಲಿ ಪ್ರತಿ ದಿನ ಬೆಳಿಗ್ಗೆ ಕೋಳಿ ಕೂಗುವ ಶಬ್ದ ಕೇಳಿಸುವುದಿಲ್ಲ. ಯಾವ ಮನೆಯಲ್ಲೂ ಮಂಚವೂ ಇಲ್ಲ. ಇದು ಇಲ್ಲಿನ ವಿಶೇಷ.

ಅರಕೇರಾ(ಕೆ) ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಮೈಲಾಪುರ ಗ್ರಾಮದಲ್ಲಿ 400 ಕುಟುಂಬಗಳು ಇವೆ. 2,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.

ವಿವಾಹ ಮಾಡಿ, ಮಗಳನ್ನು ಗಂಡನ ಮನೆಗೆ ಕಳಿಸುವಾಗ ತವರಿನವರು ಮಂಚ ಸೇರಿ ಅಗತ್ಯ ಮನೆಬಳಕೆ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ರೂಢಿ. ಆದರೆ, ಈ ಊರಿಗೆ ಮದುವೆಯಾಗಿ ಬರುವವರಿಗೆ ಮತ್ತು ಬೇರೆಡೆ ಹೋಗುವವರಿಗೆ ಮಂಚವನ್ನು ಉಡುಗೊರೆಯಾಗಿ ಕೊಡುವುದಿಲ್ಲ.

‘ಹೆರಿಗೆಯಾದರೂ ಬಾಣಂತಿ ನೆಲದ ಮೇಲೆ ಮಲಗುತ್ತಾರೆ. ಮಲ್ಲಯ್ಯನ ಪವಾಡದಿಂದ ಇರುವೆ ಇರುವುದಿಲ್ಲ. ಕೆಲ ಗ್ರಾಮಗಳಲ್ಲಿ ಮಂಚ ಇದ್ದರೆ ಇರುವೆ ಕಚ್ಚುತ್ತವೆ ಎಂದು ಮಂಚದ ಕಾಲುಗಳಿಗೆ ನೀರನ್ನು ತುಂಬಿಸಿಡುತ್ತಾರೆ. ಆದರೆ, ನಮ್ಮ ಗ್ರಾಮದಲ್ಲಿ ಬಾಣಂತಿ, ನವಜಾತ ಶಿಶುವಿಗೆ ಸಮಸ್ಯೆಯಾಗುವುದಿಲ್ಲ’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಮೈಲಾರಲಿಂಗೇಶ್ವರ ದೇವರಿಗೆ ಕೋಳಿ ಕೂಗುವ ಶಬ್ದ ಕೇಳಬಾರದು. ದೇವಸ್ಥಾನದ ತುರಂಗ ಬಾಲಮ್ಮ ಗುಡಿಯಲ್ಲಿ ಮರದ ಮಂಚ, ಗಾದಿ ಇರುವುದರಿಂದ ಗ್ರಾಮದಲ್ಲಿ ಯಾರೊಬ್ಬರೂ ಮಂಚ ಬಳಸುವುದಿಲ್ಲ. ಕೋಳಿ ಸಾಕಾಣಿಯೂ ಇಲ್ಲ.

ಸಂಕ್ರಾಂತಿ ಪ್ರಯುಕ್ತ ಪ್ರತಿ ವರ್ಷ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಈ ಬಾರಿ ಜನವರಿ 13 ರಿಂದ 18 ವರೆಗೆ ಉತ್ಸವ ಇದೆ. ಕೋವಿಡ್‌ ಕಾರಣದ ಎರಡು ವರ್ಷಗಳಿಂದ ಜಾತ್ರೆ ರದ್ದು ಪಡಿಸಲಾಗಿತ್ತು. ಆದರೆ, ಈ ಬಾರಿ ಯಾವುದೇ ನಿರ್ಬಂಧಗಳಿಲ್ಲ. ಹೀಗಾಗಿ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ.

ಜಾತ್ರೆಗೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಇತರೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಭಕ್ತರು ಮಲ್ಲಯ್ಯನ ದರ್ಶನ ಪಡೆಯುತ್ತಾರೆ. ಕೆಲವರು ವಿವಿಧ ಜಿಲ್ಲೆಗಳಿಂದ ‍ಪಾದಯಾತ್ರೆ ಮೂಲಕ ಬರುತ್ತಾರೆ. ಯಾದಗಿರಿ ಜಿಲ್ಲೆಯಲ್ಲದೇ ಅಕ್ಕಪಕ್ಕದ ರಾಯಚೂರು, ಕಲಬುರಗಿ, ವಿಜಯಪುರ, ಕೊಪ್ಪಳ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಬರುತ್ತಾರೆ.

ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ವಿವಿಧ ಕಡೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಗೋಧಿ ಹುಗ್ಗಿ, ಪಲಾವ್‌, ಅನ್ನ ಸಂಬಾರ್‌ ಸೇರಿದಂತೆ ಬಾಳೆ ಹಣ್ಣು, ನೀರಿನ ವ್ಯವಸ್ಥೆ ಮೈಲಾಪುರಕ್ಕೆ ತೆರಳುವ ಮಾರ್ಗದುದ್ದಕ್ಕೂ ಮಾಡಲಾಗಿದೆ.

***

ಸರಪಳಿ ಹರಿಯುವ ಸಂಪ್ರದಾಯ

ಜಾತ್ರೆಯ ಪ್ರಯುಕ್ತ ಹೊನ್ನಕೆರೆಯಲ್ಲಿ ಗಂಗಾಸ್ನಾನದ ನಂತರ ಸರಪಳಿ ಹರಿಯುವ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಭಕ್ತರು ಸೇರಿಬರುತ್ತಾರೆ. ಒಂದೇ ಬಾರಿ ಸರಪಳಿ ಹರಿದರೆ ಈ ವರ್ಷ ಮಳೆ, ಬೆಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಇದೆ.

ಜಾತ್ರೆಯ ಪ್ರಯುಕ್ತ ದೇವಸ್ತಾನ ಸುತ್ತಮುತ್ತಲಿನ ಪ್ರದೇಶದಲ್ಲಿ ಪೂಜಾ ಸಮಾಗ್ರಿ ಮಾರಾಟಕ್ಕೆ ಇಡಲಾಗಿದೆ. ಭಂಡಾರ, ಕುಂಕುಮ, ವಿಭೂತಿ, ಕಾಯಿ, ಕರ್ಪೂರ ಸೇರಿದಂತೆ ವಿವಿಧ ಪೂಜಾ ಸಾಮಾಗ್ರಿ ಇಡಲಾಗಿದೆ.

ಮೈಲಾರಲಿಂಗೇಶ್ವರ ಗಂಗಾಸ್ನಾನ ನಡೆಯುವ ಹೊನ್ನಕೆರೆಯಲ್ಲಿ ಭಕ್ತರು ಪುಣ್ಯಸ್ಥಾನ ಮಾಡುತ್ತಾರೆ. ಹರಿಕೆ ತೀರಿಸಿ ಕೆರೆಯಲ್ಲಿ ಮಿಂದೆಳುತ್ತಾರೆ.

***

ಐದು ದಿನಗಳಿಂದಲೂ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಿಂದ ಪಾದಯಾತ್ರೆ ಮಾಡಿಕೊಂಡು ಮಲ್ಲಯ್ಯನ ದರ್ಶನಕ್ಕೆ ಬಂದಿದ್ದೇವೆ. ದಾರಿಯುದ್ದಕ್ಕೆ ಭಂಡಾರದ ಒಡೆಯನ ಸ್ಮರಿಸುತ್ತೇವೆ
ಶ್ರೀಮಂತ ಹೆಬಳೆ, ಮಂಠಗಿ, ‍ಪಾದಯಾತ್ರಿ

***

ಗುಹಾಂತರ ದೇವಾಲಯಕ್ಕೆ ಇತಿಹಾಸವಿದೆ. ಮೈಲಾಪುರ ಗ್ರಾಮದಲ್ಲಿ ಕುಂಬಾರರು, ಕಮ್ಮಾರರು, ಮುಸ್ಲಿಮರು ಇಲ್ಲ, ಮಸೀದಿಯೂ ಇಲ್ಲ. ಕೋಳಿ, ಮಂಚ ಇರದಿರುವುದು ವಿಶೇಷ.
ಬಸವರಾಜಪ್ಪ ಪೂಜಾರಿ, ಮೈಲಾರಲಿಂಗೇಶ್ವರ ಪ್ರಧಾನ ಆರ್ಚಕ

***

ಮಕರ ಸಂಕ್ರಮಣದಂದು ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಗೆ ಅಕ್ಕಪಕ್ಕದ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಅಂದು ರಾತ್ರಿ ಮೈಲಾರಲಿಂಗೇಶ್ವರ ಮತ್ತು ಗಂಗಿಮಾಳಮ್ಮ ವಿವಾಹ ಮಹೋತ್ಸವ ನಡೆಯಲಿದೆ
ಬನ್ನಪ್ಪ ಪೂಜಾರಿ, ಮೈಲಾರಲಿಂಗೇಶ್ವರ ಪೂಜಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT