ಫಲ ವೃಕ್ಷಗಳಿಗೆ ನೀರುಣಿಸಬೇಕು, ಗೊಬ್ಬರ ಅಗತ್ಯ ಪೋಷಕಾಂಶ ನೀಡಬೇಕೆಂದು ತೋಟಗಾರಿಕಾ ತಜ್ಞರು ಯಾವತ್ತೂ ಹೇಳುತ್ತಿರುತ್ತಾರೆ. ಕೀಟ ಬಂದರೆ ರಾಸಾಯನಿಕ ಸಿಂಪಡಿಸಲು ಉಪದೇಶಿಸುತ್ತಾರೆ. ನಮ್ಮ ತೋಟಗಳಲ್ಲಿ ಬದುಕು ಸಾಗಿಸುವ ಕೆಂಪಿರುವೆಗಳು ಹಾನಿಕಾರಕ ಕೀಟಗಳನ್ನು ತಿಂದು ಬೆಳೆ ರಕ್ಷಣೆಯ ಮಹತ್ವದ ಕಾರ್ಯ ಮಾಡುತ್ತಿವೆ.

ಕೃಷಿ ಏಳಿಗೆಗೆ ಕಾಸಿಲ್ಲದೇ ದುಡಿಯುವ ಇರುವೆ ಲೋಕದ ಅಚ್ಚರಿಯ ಕತೆಗಳು ಇಲ್ಲಿದೆ.

ನಮ್ಮ ತೋಟದಂಚಿನಲ್ಲಿ ಉಪ್ಪಿನಕಾಯಿಗೆ ಶ್ರೇಷ್ಠವಾದ ಜೀರಿಗೆ ಮಿಡಿ ಮಾವಿನ ಮರವಿದೆ. 50–60 ಅಡಿ ಎತ್ತರದ ಮರದಲ್ಲಿ ಗೊಂಚಲು ಫಲಗಳಿವೆ, ಒಂದೊಂದು ಗೊಂಚಲಿನಲ್ಲಿ ಸುಮಾರು 50 ರಿಂದ 150 ಮಿಡಿಗಳನ್ನು ನೋಡಬಹುದು.

ಮಿಡಿಯ ತೊಟ್ಟು ಮುರಿದರೆ ಜೀರಿಗೆ ಪರಿಮಳ ಅಡುಗೆ ಮನೆಯಿಂದ ಜಗುಲಿಗೂ ಪಸರಿಸುತ್ತದೆ. ಆದರೆ ಮಿಡಿಮಾವು ಕೊಯ್ಯಲು ಮರವೇರಲು ಧೈರ್ಯವಿಲ್ಲ. ಬುಡದಿಂದ ತುತ್ತ ತುದಿಯ ತನಕ ‘ಸೆಕ್ಯುರಿಟಿ ಗಾರ್ಡ್’ಗಳಂತೆ ಕೆಂಪಿರುವೆಗಳು ದಾಳಿಗೆ ಸದಾ ಸನ್ನದ್ಧವಾಗಿವೆ. ಹತ್ತಿರ ಸುಳಿದರೆ ಗಡಿ ಕಾಯುವ ಸೈನಿಕರಂತೆ ತಲೆ, ಕಣ್ಣು, ಕಿವಿ, ಮೂಗು ಮೈ ಮೇಲೆಲ್ಲ ಕಡಿದು ಓಡಿಸುತ್ತವೆ.

ಫಲಗುಣ ಬಲ್ಲವರು ಇಡೀ ಮರಕ್ಕೆ ಕೀಟನಾಶಕ ಸಿಂಪಡಿಸಿ ಇರುವೆಗಳನ್ನು ಕೊಂದು ಕಾಯಿಕೊಯ್ಯುವ ಸಲಹೆ ನೀಡುತ್ತಾರೆ. ‘ದರಿದ್ರ ಇರುವೆಗಳು ಕಾಯಿ ಕೊಯ್ಯಲು ಬಿಡುತ್ತಿಲ್ಲ’ ಇರುವೆಗಳಿಗೆ ಬೈಯ್ಗುಳದ ಪ್ರವರ ಸಲ್ಲುತ್ತದೆ. ಎರಡು ಮೂರು ವರ್ಷಕ್ಕೆ ಒಮ್ಮೆ ಫಲ ನೀಡುವ ಮಾವಿನ ಮರದಲ್ಲಿ ಆಗ ಎರಡು ಮೂರು ದಿನದ ಕೆಲವು ತಾಸುಗಳಷ್ಟೇ ನಾವು ಮರವೇರಿ ಕಾಯಿಕೊಯ್ಯಲು ಹಾಜರಾಗುತ್ತೇವೆ.

ದಾಖಲೆ ಪ್ರಕಾರ ಮರ ನಮ್ಮದಾದರೂ ಅದರಲ್ಲಿ ಗೂಡು ನಿರ್ಮಿಸಿ ತಲತಲಾಂತರಗಳಿಂದ ವಾಸ್ತವ್ಯವಿರುವವು ಕೆಂಪಿರುವೆಗಳು, ನಮಗಿಂತ ಹೆಚ್ಚು ಹಕ್ಕು ಅವುಗಳಿಗಿದೆ. ವಾಸದ ನೆಲೆಗೆ ಅತಿಕ್ರಮ ಪ್ರವೇಶಿಸಿ ನಿಯಮ ಉಲ್ಲಂಘಿಸುವವರ ಮೇಲೆ ದಾಳಿ ನಡೆಸುತ್ತವೆ. ಅಡಿಕೆ ತೋಟದ ಕಾಳು ಮೆಣಸಿನ ಬಳ್ಳಿಗಳಲ್ಲಿಯೂ ಇದೇ ಕತೆ! ಎಲ್ಲ ಕೃಷಿಕರು ಅತಿಹೆಚ್ಚು ಕಾಳುಮೆಣಸಿರುವ ಬಳ್ಳಿಯನ್ನು ಕೊಯ್ಯಲು ಅಂಜುತ್ತಾರೆ, ಮರಕ್ಕೆ ಏಣಿ ಹಾಕಿದರೆ ಕೆಂಪಿರುವೆಗಳ ದಾಳಿ ಶುರುವಾಗುತ್ತದೆ.

ಆಗ ಮಿಡಿಮಾವಿನ ಮರವಾಯ್ತು, ಈಗ ಕಾಳು ಮೆಣಸಿನ ಬಳ್ಳಿಯಾಯ್ತು. ಕೃಷಿ ಪರಿಸರ ಗಮನಿಸಿದರೆ ಅಡಿಕೆ, ತೆಂಗು, ಹಲಸು, ಮಾವು, ಗೋಡಂಬಿ, ಕೋಕಂ, ಪಪ್ಪಾಯ, ನೇರಳೆ ಯಾವುದೇ ವೃಕ್ಷಗಳಲ್ಲಿ ಕೆಂಪಿರುವೆ ಜಾಸ್ತಿಯಿದ್ದರೆ ಫಸಲು ಉತ್ತಮ.

* ಕಾಸಿಲ್ಲದೇ ಕೃಷಿಗೆ ದುಡಿಯುವವರು
ಬಯಲುನಾಡಿನ ಒಂದು ತೆಂಗಿನ ತೋಟಕ್ಕೆ ಹೋಗಿದ್ದಾಗ ಕೆಲವು ಮರದಲ್ಲಿ ಫಲಗಳು ಜಾಸ್ತಿಯಿದ್ದವು, ಇನ್ನುಳಿದ ಮರಗಳ ಕೆಳಗಡೆ ಎಳೆ ಮಿಳ್ಳೆಗಳು ರಾಶಿ ಬಿದ್ದಿದ್ದವು. ಇಲಿಗಳ ದಾಳಿಯಿಂದ ಅವು ನಾಶವಾಗಿದ್ದವು. ಕೆಂಪಿರುವೆಗಳಿದ್ದ ಮರಗಳಲ್ಲಿ ಇಲಿಗಳ ದಾಳಿಯಿರಲಿಲ್ಲ, ಇರುವೆಗಳು ಇಲಿಯಿಂದ ಫಲ ರಕ್ಷಿಸಿದ್ದವು. ಆದರೆ ಕೃಷಿಕರು ಇಲಿಗಳ ಸಮಸ್ಯೆಗಿಂತ ಇರುವೆ ಸಮಸ್ಯೆಯನ್ನೇ ದೊಡ್ಡದಾಗಿ ಹೇಳುತ್ತಿದ್ದರು! ವಿಶೇಷವೆಂದರೆ ಇರುವೆಗಳ ನೆರವಿನಿಂದಲೇ ಮರಗಳಿಗೆ ಫಲ ಜಾಸ್ತಿಯಿದೆಯೆಂದು ಯಾರೂ ಯೋಚಿಸುವುದಿಲ್ಲ.

ಲಾಗಾಯ್ತಿನಿಂದ ಫಲ ಕೊಯ್ಯುವ ನಮ್ಮ ಮೊದಲ ಕೆಲಸ ಮರದ ಇರುವೆ ಓಡಿಸುವುದಾಗಿದೆ. ಕೃಷಿಕರ ಕಣ್ಣಿಗೆ ಉಪಕಾರಿ ಇರುವೆಗಳು ಖಳನಾಯಕನಂತೆ ಕಾಣಿಸುತ್ತಿವೆ. ಇತ್ತೀಚಿನ ತಾಜಾ ಘಟನೆ ಹೇಳಬೇಕು. ಬೆಳಿಗ್ಗೆ ತರಕಾರಿ ಗಿಡಗಳಿಗೆ ನೀರುಣಿಸಲು ಹೋಗಿದ್ದೆ, ನೆಲದಲ್ಲೆಲ್ಲ ಕೆಂಪಿರುವೆಗಳು ಸಂಚರಿಸುತ್ತಿದ್ದವು.

ಮೂಲಂಗಿ ಎಲೆಗಳ ಮೇಲಂತೂ ಇರುವೆ ಸೈನ್ಯ ಸಂಭ್ರಮದಲ್ಲಿದ್ದವು. ಮೂಲಂಗಿ ಹಸಿರೆಲೆಗಳನ್ನು ಕತ್ತರಿಸುವ ಕಪ್ಪು ಹುಳುಗಳನ್ನೆಲ್ಲ ಅಪಹರಿಸಿ ಹೊತ್ತೊಯ್ಯುತ್ತಿದ್ದವು. ಎರಡು ದಿನಗಳ ಬಳಿಕ ನೋಡಿದರೆ ಇರುವೆಗಳೂ ಇಲ್ಲ, ಕಪ್ಪು ಹುಳುಗಳೂ ಕಾಣಿಸುತ್ತಿಲ್ಲ. ಮೂಲಂಗಿ ಸಖತ್ತಾಗಿ ಬೆಳೆಯಲು ಆರಂಭಿಸಿತು. ಹತ್ತಾರು ದಿನಕ್ಕೊಮ್ಮೆ ಬಂದು ಈಗಲೂ ಪಾಲಾಕ್, ಟೊಮೆಟೊ, ಹಾಗಲ, ಬದನೆ ಗಿಡಗಳ ಎಲೆಗಳ ಮೇಲೆ ಸುತ್ತಾಡಿ ಮರಳುತ್ತಿವೆ.

ಸೌಳಿ, ಸವಳಿ, ಚಗಳಿ, ಚೌಳಿ, ಉರಿ ಕೆಂಚುಗ ಮುಂತಾದ ಹೆಸರು ಇವಕ್ಕಿದೆ. ಕೆಂಪಿರುವೆಗಳಿಗೆ ಮುಖ್ಯವಾಗಿ ಪ್ರೊಟೀನ್ ಹಾಗೂ ಸಕ್ಕರೆ ಆಹಾರ. ಪ್ರೊಟೀನ್ ಇಲಿ, ಕೀಟ, ಮಿಡತೆ, ಚಿಟ್ಟೆಗಳಿಂದ ದೊರೆಯುತ್ತದೆ. ಎಲೆ ಚಿಗುರಿದಾಗ, ಹೂವರಳಿ, ಫಲ ಬಿಡುವಾಗ ವೃಕ್ಷಗಳಿಗೆ ದಾಳಿ ಇಡುವ ಕೀಟಗಳನ್ನು ಹಿಡಿದು ತಿನ್ನುತ್ತವೆ.

ನಾವು ಹಾಲಿಗಾಗಿ ಹಸು ಸಾಕಿದಂತೆ ತಮ್ಮ ಗೂಡಿನ ಸನಿಹದ ಎಲೆಗಳ ನಡುವೆ ಗಿಡಹೇನುಗಳನ್ನು ಸಾಕಿ ಅವು ಸ್ರವಿಸುವ ‘ಸಿಹಿಜೇನು’ ಮೆಲ್ಲುತ್ತವೆ. ಆಹಾರ ದೊರೆಯುವ ನೆಲೆ ಹುಡುಕಿ ಗೂಡು ಮಾಡುತ್ತವೆ. ಮರದ ಬುಡದಿಂದ ತುತ್ತ ತುದಿ ತನಕ ಟೊಂಗೆ ಟಿಸಿಲುಗಳಲ್ಲಿ ಸರಸರ ಓಡಾಡುತ್ತ ಆಹಾರ ಬೇಟೆ ನಡೆಸುತ್ತವೆ.

ಮರದಲ್ಲೋ, ನೆಲದಲ್ಲೋ ಆಹಾರ ಪತ್ತೆ ಹಚ್ಚಿದಾಗ ಎರಡು ಇರುವೆಗಳು ಎದುರು ನಿಂತು ಮುಖಕ್ಕೆ ಮುಖ ತಾಗಿಸುತ್ತ, ಮೀಸೆ ಆಡಿಸುತ್ತ, ಗಂಧ ಪಸರಿಸಿ ಇಡೀ ತಂಡಕ್ಕೆ ಸಂದೇಶ ರವಾನಿಸುತ್ತವೆ. ಆಹಾರ ಎಲ್ಲಿದೆ? ಎಷ್ಟು ದೊಡ್ಡದಿದೆ? ಎಷ್ಟು ದೂರವಿದೆ? ಅಲ್ಲಿಗೆ ಹೋಗುವುದು ಹೇಗೆ? ನಿಖರ ಮಾಹಿತಿ ಕ್ಷಣಾರ್ಧದಲ್ಲಿ ಇಡೀ ತಂಡಕ್ಕೆ ನಂಬಲರ್ಹ ‘ಬ್ರೇಕಿಂಗ್ ನ್ಯೂಸ್’ ಪ್ರಸಾರವಾಗುತ್ತದೆ.

ಒಬ್ಬರ ಮಾತನ್ನು ಒಬ್ಬರು ಆಲಿಸುವ, ಆದೇಶ ಪರಿಪಾಲಿಸುವ, ಸಮೂಹ ಶಕ್ತಿಯಾಗಿ ಬದುಕುವ ನಿಯತ್ತಿನಿಂದಾಗಿ ಇರುವೆ ಸಾಮ್ರಾಜ್ಯ ಬದುಕಿದೆ. ಎರಡು ಕುಟುಂಬಗಳ ನಡುವೆ ಕೆಲವೊಮ್ಮೆ ಅಸ್ತಿತ್ವಕ್ಕೆ ಜಗಳ ನಡೆಯುತ್ತದೆ, ಸಿಟ್ಟಿಗೆದ್ದ ಇರುವೆಗಳು ‘ಫಾರ್ಮಿಕ್ ಆ್ಯಸಿಡ್’ ಸ್ರವಿಸುತ್ತವೆ. ಇದರಿಂದ ಇರುವೆಗಳಷ್ಟೇ ಅಲ್ಲ ಕದನದ ನೆಲೆಯ ಟೊಂಗೆಗಳು ಸಾಯುತ್ತವೆ.

ನಮ್ಮ ಮೇಲೆ ದಾಳಿ ಮಾಡುವಾಗ ಕಚ್ಚಿ ಚರ್ಮದ ಮೇಲೆ ಪುಟ್ಟ ಗಾಯಮಾಡುತ್ತವೆ, ಗಾಯದಿಂದ ಅಂಥ ನೋವಾಗುವುದಿಲ್ಲ, ಆದರೆ ಬಳಿಕ ಅರೆಕ್ಷಣದಲ್ಲಿ ಗಾಯದ ಮೇಲೆ ಉಪ್ಪು ಸವರಿದಂತೆ ಈ ‘ಫಾರ್ಮಿಕ್ ಆ್ಯಸಿಡ್’ ಸ್ರವಿಸುತ್ತವೆ, ಹೀಗಾಗಿಯೇ ಉರಿಯೆದ್ದು ಕಾಲ್ಕೀಳುತ್ತೇವೆ. ವಿಸ್ಮಯವೆಂದರೆ ಪರಿಸರದಲ್ಲಿ ಬದುಕಲು ಇರುವೆಗಳಿಗೆ ರಾಸಾಯನಿಕ ಯುದ್ಧ ವಿದ್ಯೆ ನಮಗಿಂತ ಮುಂಚೆ ತಿಳಿದಿದೆ.

* ಇರುವೆ ಎಲ್ಲಿರುವೆ?
ಕೆಂಪಿರುವೆಗಳ ಒಂದು ಗೂಡಿನಲ್ಲಿ ಸಾಮಾನ್ಯವಾಗಿ 4000-6000 ಪ್ರೌಢ ಕೆಲಸಗಾರ ಇರುವೆಗಳಿರುತ್ತವಂತೆ, ಸುಮಾರು ಒಂದು ಸಾವಿರ ಚದರ ಮೀಟರ್ ಕ್ಷೇತ್ರದ 10–15 ಮರಗಳಲ್ಲಿ ಒಂದು ಕುಟುಂಬದ ನೂರಾರು ಗೂಡುಗಳಿಂದ ಸುಮಾರು ಐದು ಲಕ್ಷ ಪ್ರೌಢ ಕೆಲಸಗಾರ ಇರುವೆಗಳಿರುತ್ತವೆ.

ಇರುವೆಗಳ ಕೈಯಲ್ಲಿ ಸೂಜಿ, ದಾರಗಳಿಲ್ಲ. ಆದರೆ ಎಲೆಗಳನ್ನು ಜೋಡಿಸಿ ಹೊಲಿದು ಪರ್ಣಕುಟಿ ನಿರ್ಮಿಸುವ ಕೌಶಲ್ಯವಿದೆ. ಇರುವೆಗಳು ಲಾರ್ವಾ(ಹುಳು) ಹಂತದಲ್ಲಿರುವಾಗ ಬಾಯಲ್ಲಿ ಜೊಲ್ಲು ಸ್ರವಿಸುತ್ತವೆ, ಇವು ನಯವಾದ ರೇಷ್ಮೆ ದಾರವಾಗಿ ಪ್ರೌಢ ಕೆಲಸಗಾರರಿಗೆ ಗೂಡು ನೇಯ್ಗೆಯ ಸಾಮಗ್ರಿಯಾಗುತ್ತದೆ.
ಹಸಿರೆಲೆಗಳ ಕಲಾತ್ಮಕ ಜೋಡಣೆಯಿಂದ ಸುಂದರ ಮನೆ ನಿರ್ಮಾಣವಾಗುತ್ತದೆ. ಇವುಗಳಿಗೆ ನೇಯುವ ಇರುವೆ ಎಂಬ ಹೆಸರಿದೆ. ನೆಲ್ಲಿ, ಹುಣಸೆಯಂತೆ ಮರದ ಎಲೆಗಳು ಅತ್ಯಂತ ಕಿರಿದಾಗಿದ್ದರೆ ಗೂಡು ನಿರ್ಮಾಣಕ್ಕೆ ದಾರ ಬಹಳ ಖರ್ಚಾಗುತ್ತದೆ. ಮರದ ಎಲೆಗಳ ಗಾತ್ರ, ಸ್ವರೂಪ ಗಮನಿಸಿಕೊಂಡು ಗೂಡು ನಿರ್ಮಾಣ ಮಾಡುತ್ತದೆ. ಬಾಳೆ, ಅಡಿಕೆ, ಮಾವು, ಕೊಕ್ಕೋ, ಗೇರು ಹೀಗೆ ದೊಡ್ಡ ದೊಡ್ಡ ಎಲೆಗಳಿದ್ದರೆ ನಿರ್ಮಾಣ ಸುಲಭವಾಗುತ್ತದೆ.

ಮಳೆಗಾಲದಲ್ಲಿ ಮರಗಳ ಎತ್ತರಕ್ಕೆ ಗೂಡು ನಿರ್ಮಿಸುವ ಇವು ಬೇಸಿಗೆಯ ಬಿಸಿಲಿನ ಪ್ರಖರತೆ, ಎಲೆ ಉದುರಿಸುವ ಮರಗಳ ಸ್ವರೂಪ ಗಮನಿಸಿಕೊಂಡು ಗೂಡಿನ ನೆಲೆಯನ್ನು ಕೆಳಹಂತಕ್ಕೆ ವರ್ಗಾಯಿಸುತ್ತವೆ. ಸಾಮಾನ್ಯವಾಗಿ 26–34 ಡಿಗ್ರಿ ಉಷ್ಣಾಂಶದಲ್ಲಿ ಇವುಗಳ ಆವಾಸ, ಬದುಕು ಸಾಗುತ್ತದೆ.

ನಮ್ಮ ಮನೆ ಸನಿಹದ ಹುನಾಲು(ಕಿಂದಳ) ಮರದ ಎಲೆ ದೂರವಾಣಿ ತಂತಿಗೆ ತಾಗುತ್ತಿತ್ತು, ಅಲ್ಲಿಂದ ತಂತಿ ಏರಿದ ಕೆಂಪಿರುವೆಗಳ ಸಾಲು ಸರ್ಕಸ್ ಹುಡುಗಿಯರಂತೆ ಸಾಗಿದ್ದವು. ಇವು ಎಲ್ಲಿಗೆ ಹೊರಟವೆಂದು ನೋಡುತ್ತ ಹೊರಟೆ. ಸುಮಾರು ಕಿಲೋ ಮೀಟರ್ ಉದ್ದಕ್ಕೂ ತಂತಿ ಮೂಲಕ ಮರದಿಂದ ಮರಕ್ಕೆ ದಾಟುತ್ತ 15–20 ಮರಗಳಲ್ಲಿ ಒಂದು ಕುಟುಂಬದ ಗೂಡುಗಳಿದ್ದವು.

ಕೌಲು ಮರ ಸಂಪೂರ್ಣ ಎಲೆ ಉದುರಿಸುತ್ತವೆ, ಇವುಗಳ ಮೇಲೆ ‘ಬಂದಳಿಕೆ’ ಪರಾವಲಂಬಿ ಸಸ್ಯ ಬೆಳೆಯುತ್ತದೆ. ಕೌಲು ಮರದ ಎಲೆಗಳು ಖಾಲಿಯಾದರೂ ಬಂದಳಿಕೆ ಹಸಿರಾಗಿರುತ್ತವೆ, ಅಲ್ಲಿ ಇರುವೆಗಳು ಬೇಸಿಗೆಯಲ್ಲಿ ತಾತ್ಕಾಲಿಕ ಗೂಡು ನಿರ್ಮಿಸುತ್ತವೆ. ಕಾಸರಕ ಮರದ ಮೇಲೆ ಕರಿಬಸರಿ ಮರ ಪರಾವಲಂಬಿಯಾಗಿ ಬೆಳೆದಿತ್ತು, ಕಾಸರಕ ಎಲೆ ಉದುರಿಸಿದಾಗ ಅದರ ಜೊತೆಗಿದ್ದ ಕರಿಬಸರಿ ಬೇಗ ಎಲೆ ಉದುರಿಸಿ ಚಿಗುರಿತ್ತು, ಈ ಸೂಕ್ಷ್ಮ ಅರಿತ ಜಾಣ ಇರುವೆಗಳು ಕರಿಬಸರಿ ಎಲೆಗಳಿಂದ ಗೂಡು ಮಾಡಿದ್ದವು.

* ಇರುವೆ ತಾಕತ್ತು ನಮಗಿದೆಯೇ?
ಮರಗಳಲ್ಲಿ ಹೆಚ್ಚು ಇರುವೆ ಗೂಡುಗಳಿವೆಯೆಂದರೆ ಉತ್ತಮ ಪರಿಸರವಿದೆ, ಅವುಗಳಿಗೆ ಆಹಾರ ಯೋಗ್ಯ ಕೀಟಗಳು ಸಾಕಷ್ಟು ದೊರೆಯುತ್ತಿವೆಯೆಂದು ತಿಳಿಯಬಹುದು.

ಮಾಲಿನ್ಯರಹಿತ ತಾಜಾ ಗಾಳಿ ಇರುವೆಗಳಿಗೆ ಇಷ್ಟ. ಹೀಗಾಗಿ ಎತ್ತರದ ಮರಗಳಲ್ಲಿ ವಾಸಿಸುತ್ತವೆ. ಒಂದು ಕಂಬಳಿ ಹುಳುವನ್ನು ಕೆಂಪಿರುವೆಗಳಿರುವ ಮರದ ಟೊಂಗೆಯಲ್ಲಿಟ್ಟು ನೋಡಬೇಕು. ಆಹಾರ ಗುರುತಿಸಿದ ಇರುವೆಗಳು ತಮಗಿಂತ ಬಲಶಾಲಿ ಹುಳುವನ್ನು ಎತ್ತಿ ಹೊತ್ತೊಯ್ಯಲು ಆಣಿಯಾಗುತ್ತವೆ.

ಇರುವೆಗಳ ತಾಕತ್ತು ಎಷ್ಟಿದೆಯೆಂದರೆ ಅವು ತಮ್ಮ ದೇಹ ತೂಕಕ್ಕಿಂತ ನೂರು ಪಟ್ಟು ಭಾರ ಹೊರುತ್ತವಂತೆ! ಇದೇ ಲೆಕ್ಕದಲ್ಲಿ ನಮ್ಮಂಥ ಮನುಷ್ಯರು ಕೆಲಸ ನಿರ್ವಹಿಸುವುದಾದರೆ ಕನಿಷ್ಠ 8000 ಕಿಲೋ ಹೊರಬೇಕು, ಸಾಧ್ಯವೆ? ಇರುವೆ ಕುಟುಂಬದಲ್ಲಿ ರಾಜ ಇರುವೆ ಬಣ್ಣ ಕಪ್ಪು, ರಾಣಿಗಿಂತ ಸಣ್ಣ ದೇಹ. ರಾಣಿಯ ಜೊತೆ ಮಿಲನದ ಬಳಿಕ ತಕ್ಷಣ ಸಾವನ್ನಪ್ಪುತ್ತವೆ.ಆದರೆ ಕೆಲಸಗಾರ ಇರುವೆಗಳು ತಿಂಗಳು ಕಾಲ ಬದುಕಬಹುದು, ರೆಕ್ಕೆಯಿರುವ ರಾಣಿ ಮಿಲನದ ಬಳಿಕ ಅದನ್ನು ಕಳಚಿಕೊಳ್ಳುತ್ತದೆ, ಸಂತಾನಾಭಿವೃದ್ಧಿ ಕಾರ್ಯ ನಡೆಸುತ್ತದೆ.

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕುಟುಂಬದ ರಕ್ಷಣೆ, ಆಹಾರ ಸಂಗ್ರಹ, ಮನೆ ನಿರ್ಮಾಣ ಕಾರ್ಯಕ್ಕೆ ಶ್ರಮಿಸುವ ಕೆಲಸಗಾರರು ಇರುವೆ ಕುಟುಂಬದ ಆಧಾರಗಳು. ತೋಟದ ಬೆಳೆಗಳಿಗೆ ಅನೇಕ ಕೀಟಗಳು ರಾತ್ರಿ ದಾಳಿ ಮಾಡುತ್ತವೆ, ಹಗಲಿನಲ್ಲಿ ಎಲೆಯ ಮರೆಯಲ್ಲಿ ಅವಿತು ವಿಶ್ರಾಂತಿ ಪಡೆಯುತ್ತವೆ. ಇಂಥ ಸಮಯಕ್ಕೆ ಚಟುವಟಿಕೆಯಲ್ಲಿರುವ ಕೆಲಸಗಾರರು ಹೊಂಚುಹಾಕಿ ಕೀಟ ಹಿಡಿದು ಬೆಳೆ ರಕ್ಷಿಸುತ್ತವೆ.

ಇರುವೆ ಸಹಾಯದಿಂದ ಮರಗಳಲ್ಲಿ ಒಳ್ಳೆ ಫಲ ಬರಬಹುದು, ಕೊಯ್ಲು ಮಾಡುವುದು ಹೇಗೆ? ಕೃಷಿಕರು ಪ್ರಶ್ನಿಸಬಹುದು. ಮೈಗೆ ಬೂದಿ ಹಚ್ಚಿಕೊಂಡು ಮಾವಿನ ಫಲ ಕೊಯ್ಯುವ ನಮ್ಮ ಗ್ರಾಮೀಣ ತಂತ್ರ ಆಸ್ಟ್ರೇಲಿಯಾ, ಚೀನಾದಲ್ಲೂ ಇದೆ. ಮುಂಜಾನೆ ಮರವೇರಿ ನಿಧಾನಕ್ಕೆ ಇರುವೆ ಗೂಡಿನ ಟೊಂಗೆ ಕತ್ತರಿಸಿ ಫಲಗಳಿಲ್ಲದ ಪಕ್ಕದ ಮರಗಳಲ್ಲಿಟ್ಟು ಕೊಯ್ಲು ನಡೆಸುವ ತಂತ್ರವಿದೆ.

ಕಬ್ಬಿನ ಸಿಪ್ಪೆಗಳನ್ನು ಮರದ ಬುಡದಲ್ಲಿ ಹಾಕಿದರೆ ಒಂದೆರಡು ವಾರದಲ್ಲಿ ಅದರಲ್ಲಿ ಜಾಲ ಇರುವೆಗಳು ಕಾಣಿಸಿಕೊಳ್ಳುತ್ತವೆ, ‘ಜಾಲ ಇರುವೆ’ ಇದ್ದಲ್ಲಿ ಕೆಂಪಿರುವೆಗಳು ಅಲ್ಲಿಂದ ಕಾಲ್ತೆಗೆಯುತ್ತವೆ. ಕೀಟನಾಶಕ ಸಿಂಪರಣೆಗಿಂತ ಇದು ಉತ್ತಮ ವಿಧಾನ. ಮುಖ್ಯವಾಗಿ ಫಲ ಕೊಯ್ಲಿನ ನಂತರ ಇರುವೆಗಳು ಮರಳಿ ಮರಕ್ಕೆ ಬರುವ ಅನುಕೂಲತೆ ಕಲ್ಪಿಸಿದರೆ ಮಾತ್ರ ಮುಂದಿನ ವರ್ಷವೂ ಕೀಟಬಾಧೆ ನಿಯಂತ್ರಿಸಿ ಉತ್ತಮ ಫಲ ಪಡೆಯಬಹುದು.

ಜೇನು ಹಾಗೂ ಇರುವೆ ನಿಸರ್ಗದಲ್ಲಿ ಪರಸ್ಪರ ವೈರಿಗಳಾದರೂ ಕೃಷಿಕರಾದ ನಮಗೆ ಇಬ್ಬರೂ ಮಿತ್ರರು. ಜೇನು ಗೂಡಿನ ಸುತ್ತ ಬೂದಿ ಹಾಕಿದರೆ ಇರುವೆಗಳು ಅತ್ತ ಹೋಗುವುದಿಲ್ಲ, ಜಗಳವನ್ನು ಸಂಯಮದಲ್ಲಿ ಪರಿಹರಿಸಿ ಹೀಗೆ ಇಬ್ಬರಿಗೂ ಬದುಕುವ ಅವಕಾಶ ನೀಡಬೇಕು.

ಒಂದು ಸಾವಿರ ವರ್ಷಗಳ ಹಿಂದೆಯೇ ಚೀನೀಯರು ಕೆಂಪಿರುವೆಗಳನ್ನು ‘ಲಿಂಬುತೋಟದ ಗೆಳೆಯ’ ಎಂದು ಕೊಂಡಾಡಿದ್ದಾರೆ. ಆಸ್ಟ್ರೇಲಿಯಾ, ವಿಯಟ್ನಾಂನ ಹಣ್ಣಿನ ತೋಟಗಳಲ್ಲಿ ಕೆಂಪಿರುವೆ ಇರುವಿಕೆಯಿಂದ ಶೇಕಡಾ 25–50ರಷ್ಟು ಕೀಟನಾಶಕ ಖರ್ಚು ಉಳಿತಾಯವಾಗಿದೆಯೆಂದು ಅಧ್ಯಯನಗಳು ಸಾರುತ್ತಿವೆ.

ಅತ್ಯುತ್ತಮ ಗುಣಮಟ್ಟದ ಫಲ ಪಡೆಯಲು ತೋಟದಲ್ಲಿ ಕೆಂಪಿರುವೆ ಉಳಿಸುವ ಕಾಳಜಿ ಅಲ್ಲಿನ ಕೃಷಿಕರಲ್ಲಿದೆ. ನಮ್ಮ ಸಾವಯವ ಕೃಷಿಕರೆಲ್ಲೂ ಇರುವೆಗಳ ಕುರಿತು ತಿಳಿವಳಿಕೆ ಹೆಚ್ಚಿದರೆ ಇನ್ನೂ ಅತ್ಯುತ್ತಮ ಸಾವಯವ ಫಲ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.