ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟೇರಮ್ಮನ ‘ಕಾಟ’ಕ್ಕೆ ಬೀಗ...!

Last Updated 2 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಮೂವತ್ತು ವರ್ಷಗಳ ಹಿಂದಷ್ಟೇ ಈ ಗ್ರಾಮದಲ್ಲಿನ ಅರವತ್ತು ಮನೆಗಳು ಜನರಿಂದ ತುಂಬಿ ತುಳುಕಾಡುತ್ತಿದ್ದವು. ರೆಡ್ಡಿ, ಕೊರಚ, ಆದಿಕರ್ನಾಟಕ ಸೇರಿದಂತೆ ವಿವಿಧ ಜನಾಂಗದ ಜನರು ಇಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದರು. ಗಲ್ಲಿ ಗಲ್ಲಿಗಳಲ್ಲಿ ಚಿಣ್ಣರ ಆಟದ ನೋಟವಿತ್ತು. ಕಾಲ ಕಾಲಕ್ಕೆ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದವು.

ಆದರೆ ಒಂದೆರಡು ಕುಟುಂಬದವರನ್ನು ಬಿಟ್ಟರೆ ಇಂದು ಇಡೀ ಗ್ರಾಮ ಬಣಗುಟ್ಟುತ್ತಿದೆ.  ಎಲ್ಲರೂ ಊರು ಬಿಟ್ಟು ಪರಾರಿ. ಮನೆಗಳಿಗೆಲ್ಲ ದೊಡ್ಡ ದೊಡ್ಡ ಬೀಗ. ಹಲವು ಮನೆಗಳು ಜನರಿಲ್ಲದೇ ಪಾಳುಬಿದ್ದಿವೆ. ಇನ್ನುಳಿದವು ನೆಲಕಚ್ಚಿವೆ. ಜನರೆಲ್ಲ ಇಲ್ಲಿ ವಾಸವಾಗಿದ್ದರು ಎಂಬ ಕುರುಹು ಕೂಡ ಇಲ್ಲದಂತೆ ಗ್ರಾಮದ ಚಿತ್ರಣವಿದೆ. ಇದಕ್ಕೆಲ್ಲ ಕಾರಣ ಗ್ರಾಮ ದೇವತೆ ಕಾಟೇರಮ್ಮ!

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಕಸಬಾ ಹೋಬಳಿ ಯಲವಹಳ್ಳಿ ಕಂದಾಯ ವೃತ್ತದಲ್ಲಿ ಇರುವ ಕೋಣನಕುಂಟೆ ಗ್ರಾಮದ ವ್ಯಥೆ ಇದು. ಗ್ರಾಮದೇವತೆ ಕಾಟೇರಮ್ಮ ಕಾಟ ಕೊಡುತ್ತಾಳೆಂದು ನಂಬಿ ಗ್ರಾಮಸ್ಥರು ಭಯಭೀತರಾಗಿ ಗ್ರಾಮ ತೊರೆದು ಹೋಗಿದ್ದಾರೆ.

‘ಗ್ರಾಮ ತೊರೆಯುವ ಕೆಲ ವರ್ಷಗಳ ಹಿಂದೆ ಗ್ರಾಮದಲ್ಲಿ ನೆಲೆಸಿರುವಾಗಲೂ ಕಾಟೇರಮ್ಮ ಮನೆಯೊಳಕ್ಕೆ ಬರುತ್ತಾಳೆಂದು ಇಡೀ ದಿನ ಮನೆಯ ಬಾಗಿಲು ಹಾಕಿಕೊಂಡೇ ಭಯದಿಂದ ಜನರು ಇರುತ್ತಿದ್ದರು. ಅದೇ ಕಾರಣಕ್ಕೆ ಪಕ್ಕದ ಈರಗಮತ್ತನಹಳ್ಳಿಯ ಶ್ಯಾನುಭೋಗರಾದ ನಾರಾಯಣರಾವ್ ಅವರಿಗೆ ದುಂಬಾಲು ಬಿದ್ದು ಅಲ್ಲಿಯೇ ಎರಡು ಎಕರೆ ಜಮೀನು ಪಡೆದು ಗ್ರಾಮ ನಿರ್ಮಿಸಿಕೊಂಡಿದ್ದಾರೆ’ ಎಂದು ವಿವರಿಸುತ್ತಾರೆ ಗ್ರಾಮಸ್ಥ ದಾಸಪ್ಪ.

ಆದರೆ ಕಾಟೇರಮ್ಮನಿಗೆ ಹೆದರದ  ವೆಂಕಟಸ್ವಾಮಿರೆಡ್ಡಿ ಎನ್ನುವವರು ಧೈರ್ಯವಾಗಿ ಹಳೇ ಗ್ರಾಮದಲ್ಲಿಯೇ ವಾಸವಾಗಿದ್ದಾರೆ. ‘ನನಗಾಗಲೀ ನನ್ನ ಕುಟುಂಬದವರಿಗಾಗಲೀ ಇದುವರೆಗೂ ಕಾಟೇರಮ್ಮ ಯಾವುದೇ ರೀತಿಯ ತೊಂದರೆ ನೀಡಿಲ್ಲ. ಇಲ್ಲಿ ನಮಗೆ ಭಯವೇ ಇಲ್ಲ. ಎಂಥ ಕೆಟ್ಟ ಅನುಭವವೂ ಆಗಿಲ್ಲ’ ಎನ್ನುತ್ತಾರೆ ಅವರು. ಅವರಿಗೆ ಏನೂ ಮಾಡದ ಕಾಟೇರಮ್ಮ ಗ್ರಾಮದ ಉಳಿದ ಜನರಿಗೆ ಭಯ ಹುಟ್ಟಿಸುತ್ತಿದ್ದುದು ಯಾಕೆ, ಈ ಭಯವನ್ನು ಜನರಲ್ಲಿ ತುಂಬಿದ್ದು ಯಾರು, ಯಾವ ರೀತಿ ಆಕೆ ಕಾಟ ಕೊಡುತ್ತಿದ್ದಳು ಎಂಬುದು ಮಾತ್ರ ಇಂದಿನ ಪ್ರಶ್ನೆಯಾಗಿಯೇ ಉಳಿದಿದೆ, ಅದನ್ನು ಹೇಳಲು ಕೂಡ ಇಲ್ಲಿಯವರಿಗೆ ಭಯ.

ಅದೇನೇ ಇದ್ದರೂ ಯಾರೋ ಹುಟ್ಟಿಸಿದ ಭೀತಿಯಿಂದ ಜನರು ಈ ರೀತಿ ಗ್ರಾಮವನ್ನೇ ತೊರೆದಿರುವುದು ಮಾತ್ರ ವಿಷಾದನೀಯ.
ಇದು ಕೋಣನಕುಂಟೆ ಒಂದರ ಚಿತ್ರಣ ಮಾತ್ರವಲ್ಲ. ಇಲ್ಲಿಯ ಆಸುಪಾಸಿನ ಕೆಲವು ಗ್ರಾಮಗಳ ಚಿತ್ರಣವೂ ಇದಕ್ಕಿಂತ ಭಿನ್ನವಲ್ಲ. ಈ ಹಿಂದೆ ಗ್ರಾಮದ ಒಬ್ಬರಿಗೆ ಕಾಲರಾ, ಸಿಡುಬು, ಮಲೇರಿಯಾ ಬಂತೆಂದರೆ ಅದು ಸಾಂಕ್ರಾಮಿಕ ರೂಪ ಪಡೆದು ಇಲ್ಲವೇ ಎಲ್ಲರೂ ಇದಕ್ಕೆ ತುತ್ತಾಗುವ ಭೀತಿಯಿಂದ ಗ್ರಾಮ ತೊರೆಯುವುದು ಮಾಮೂಲಿಯಾಗಿತ್ತು. ಇದರ ಹೊರತಾಗಿಯೂ ಜಮೀನನ್ನು ಕಬಳಿಸಬೇಕು ಎಂಬ ಹುನ್ನಾರಕ್ಕೆ ತುತ್ತಾಗಿಯೋ ಅಥವಾ ವಿನಾಕಾರಣ ಯಾರ್‍್ಯಾರೋ ಸೃಷ್ಟಿ ಮಾಡಿರುವ ಭಯದಿಂದ ಜನರು ಗ್ರಾಮವನ್ನೇ ತೊರೆಯುವ ಪರಿಸ್ಥಿತಿ ಅಲ್ಲಲ್ಲಿ ಇಂದಿಗೂ ಇದೆ.

ಹಲವೆಡೆ, ಹಳೆಯ ಗ್ರಾಮ ಇರುವ ಜಾಗದಲ್ಲಿಯೇ ‘ಹೊಸ ಗ್ರಾಮ’ ಹುಟ್ಟಿಕೊಳ್ಳುವುದು ಮಾಮೂಲು. ಹೊಸಗ್ರಾಮಗಳ ಸೃಷ್ಟಿಯ ನಂತರ ಹಳೆಯ ಗ್ರಾಮಗಳು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ಸರ್ಕಾರದ ಕಂದಾಯ ದಾಖಲೆಗಳಾದ ಬಂಜರು ತಖ್ತೆಯಲ್ಲಿ ಅದು ಸರ್ಕಾರಿ ಜಮೀನಾಗಿ ಉಳಿಯುತ್ತದೆ. ನಂತರ ಆ ಜಮೀನು ಬಲಾಢ್ಯರ ಪಾಲಾಗುತ್ತದೆ. ಆ ನಂತರ ಅಲ್ಲಿ ಗ್ರಾಮ ಇತ್ತೆಂಬ ಯಾವುದೇ ಕುರುಹುಗಳೂ ಕಾಣಸಿಗುವುದಿಲ್ಲ.

ಇದಕ್ಕೆ ಇನ್ನಷ್ಟು ಉದಾಹರಣೆ ನೀಡಬೇಕೆಂದರೆ ಮುಳಬಾಗಿಲಿನ ದುಗ್ಗಸಂದ್ರ ಹೋಬಳಿಯ ಮಣಿಕನತ್ತ ಗ್ರಾಮ. ಇಲ್ಲಿಯ ಗ್ರಾಮದೇವಿ ಕೊಲದೇವಿಯ ಭಯದಿಂದ ಜನರು ಭಯಭೀತರಾಗಿದ್ದರು. ಇದರಿಂದ ಹಲವಾರು ಮಂದಿ ಗ್ರಾಮ ತೊರೆದಿದ್ದಾರೆ. ಮನೆ ಬಿಟ್ಟು ಹೋಗಲಾಗದವರು ಕೋಲದೇವಿಯನ್ನು ಸಂತೈಸಲು, ಗ್ರಾಮದ ಅಸ್ತಿತ್ವ ಉಳಿಸಿಕೊಳ್ಳಲು ದೇವಾಲಯವೊಂದನ್ನು ನಿರ್ಮಿಸಿದ್ದಾರೆ. ಅಲ್ಲಿ ವರ್ಷಕ್ಕೊಮ್ಮೆ ಧಾರ್ಮಿಕ ಕಾರ್ಯಕ್ರಮ ನಡೆಸು ತ್ತಾರೆ.

ಈ ಮೂಲಕ ತಕ್ಕಮಟ್ಟಿಗೆ ಪರಿಹಾರ ಕಂಡುಕೊಂಡು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಆದರೆ ಅಲ್ಲಿಯೇ ಪಕ್ಕದಲ್ಲಿದ್ದ ಮಂಡಿಕಲ್‌ ಮಾತ್ರ ಭೂತಕಾಲಕ್ಕೆ ಸರಿದಿದೆ. ಇಲ್ಲಿ ಒಂದಾನೊಂದು ಕಾಲದಲ್ಲಿ ಗ್ರಾಮ ಇತ್ತು ಎಂಬುದರ ಕುರುಹೂ ಇಲ್ಲದೇ ಎಲ್ಲವೂ ನಾಮಾವಶೇಷವಾಗಿದೆ. ಕಂದಾಯ ಬಂಜರು ತಖ್ತೆ ದಾಖಲೆಗಳಲ್ಲಿ ಮಾತ್ರ ‘ಗ್ರಾಮ’ ಎಂದು ಉಳಿದುಕೊಂಡಿದೆ. ಇದಕ್ಕೆ ತಾಲ್ಲೂಕಿನ ಸೊನ್ನವಾಡಿ ಗ್ರಾಮ ಕೂಡ ಹೊರತಾಗಿಲ್ಲ.

ಒಂದೇ ತಾಲ್ಲೂಕಿನ ಇಷ್ಟೆಲ್ಲ ಗ್ರಾಮಗಳ ಕಥೆ ಇದಾದರೆ ರಾಜ್ಯದ ಇನ್ನೆಷ್ಟು ಗ್ರಾಮಗಳು ಅಸ್ತಿತ್ವ ಕಳೆದುಕೊಂಡಿವೆಯೋ, ಯಾವ ದೇವಿಯ ಕಾಟದಿಂದ ಎಷ್ಟು ಮಂದಿ ಗ್ರಾಮ ತೊರೆದಿದ್ದಾರೋ ಎನ್ನುವುದು ಪ್ರಶ್ನಾತೀತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT