ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿಂಜ ಗಿರಿಯ ಕಾಣಬನ್ನಿ

Last Updated 18 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಟ್ಟದ ಮೇಲೊಂದು ಬೆಟ್ಟ! ಪರಿಸರ ಪ್ರೇಮಿಗಳ ಸ್ವರ್ಗ! ಸಮುದ್ರ ಮಟ್ಟದಿಂದ ೧೫೦೦ ಅಡಿ ಎತ್ತರದಲ್ಲಿ ಪ್ರಕೃತಿ ಬರೆದ ಸೊಗಸಾದ  ದೃಶ್ಯ-ಕಾವ್ಯವನ್ನು ನೋಡಲು ಹೋಗಬೇಕು ಮಂಗಳೂರು ಸಮೀಪದ ಕಾರಿಂಜ ಬೆಟ್ಟಕ್ಕೆ.

ಸುತ್ತಲೂ ಹಚ್ಚ ಹಸುರಿನ ಸೌಂದರ್ಯ. ಇಲ್ಲಿನ ಅದ್ಭುತ ಕಲಾ ಪ್ರಪಂಚವನ್ನು ಪ್ರಕೃತಿ ಪ್ರಿಯರು  ಕಣ್ತುಂಬಿಸಿಕೊಂಡು ಬರಬಹುದು. ಮೊದಲು ಬೆಟ್ಟದ ಬುಡದಲ್ಲಿರುವ ಗದೆಯ ಆಕಾರದ (೨೩೭ ಮೀ. ಉದ್ದ, ೫೫ ಮೀ.ಅಗಲ, ೭ಮೀ. ಆಳ) ಗದಾ ತೀರ್ಥವೆಂಬ ವಿಶಾಲವಾದ ಶುದ್ಧ ನೀರ ಕೊಳ ಸಿಗುತ್ತದೆ. ಈ ಕೊಳದಲ್ಲಿ ಮುಖಕ್ಕೆ ನೀರು ಚಿಮುಕಿಸಿ ತಂಪು ಮಾಡಿಕೊಂಡು ಬೆಟ್ಟವನ್ನೇರಲು ತೊಡಗಬಹುದು.

ಬೃಹತ್ ಬಂಡೆಯಲ್ಲಿ ಕೆತ್ತಿದ ಮೆಟ್ಟಲುಗಳನ್ನೇರಿ ಒಂದು ಹಂತದಲ್ಲಿ ಗಣಪತಿ ಗುಡಿ, ನಂತರ ಪಾರ್ವತಿ ದೇವಿಯ ಗುಡಿ ಕಾಣಸಿಗು­ತ್ತದೆ. ಹಸಿರು ಸೀರೆಯುಟ್ಟು ನಲಿಯುತ್ತಿರುವ ಪ್ರಕೃತಿಯು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದಾಳೆ.  ಬೆಟ್ಟವನ್ನೇರುವಾಗ ವಿವಿಧ ಕಸರತ್ತಿನಲ್ಲಿ ತೊಡಗಿರುವ ಮಂಗಗಳು ನಮ್ಮನ್ನು ಸ್ವಾಗತಿಸುತ್ತವೆ. ಮಂಗಗಳ ವಿವಿಧ ಭಾವ ಭಂಗಿಗಳು ಮನಸ್ಸಿಗೆ ಮುದ ನೀಡುತ್ತದೆ.  ಕೈಯಲ್ಲಿ ಹಣ್ಣುಕಾಯಿ ಹಿಡಿದುಕೊಂಡಿದ್ದರೆ ನಮಗೇ ಮೊದಲು ಸಮರ್ಪಿಸಿ ಮುಂದೆ ಸಾಗಿ ಎಂಬಂತೆ ನಮ್ಮನ್ನೇ ದಿಟ್ಟಿಸುತ್ತವೆ! 

ಮೆಟ್ಟಿಲುಗಳನ್ನು ಏರಿ ಸಾಗಿದಾಗ ಮೊದಲು ನಮ್ಮನ್ನು ಎದುರುಗೊಳ್ಳುವುದು ಪಾರ್ವತಿ  ದೇವಿ ದೇವಸ್ಥಾನ. ಚೆಲುವನ್ನು ಮತ್ತಷ್ಟು ಕಣ್ತುಂಬಿಕೊಳ್ಳಬೇಕಾದರೆ ಸ್ವಲ್ಪ ಶ್ರಮ ಪಡಬೇಕಾಗುತ್ತದೆ. ಮುಂದೆ ೧೪೨ ಮೆಟ್ಟಿಲುಗಳನ್ನು ಕ್ರಮಿಸಿದರೆ ಉಕ್ಕುಡದ ಬಾಗಿಲು ಎಂಬ ಶಿಲಾದ್ವಾರ ಸಿಗುತ್ತದೆ. ಅಲ್ಲಿಂದ ಪುನಃ ೧೧೮ ಮೆಟ್ಟಿಲುಗಳನ್ನೇರಿದರೆ ಶ್ರೀ ಕಾರಿಂಜೇಶ್ವರ ದೇವಾಲಯ ಸಿಗುತ್ತದೆ.  ರುದ್ರನ ದೇವಸ್ಥಾನ ನಿಜಕ್ಕೂ ರುದ್ರ ರಮಣೀಯವೇ ಸರಿ!ಮೆಟ್ಟಿಲುಗಳನ್ನೇರಿದಷ್ಟೂ ಮುಗಿಯುವುದೇ ಇಲ್ಲ ಎಂದೆನಿಸಿದರೂ ಸುತ್ತಲಿನ ರಮಣೀಯ ನಿಸರ್ಗ ಸೌಂದರ್ಯವು ನಮ್ಮ ಆಯಾಸವನ್ನೆಲ್ಲಾ ಮರೆಸಿಬಿಡುತ್ತದೆ.  ಆಹ್ಲಾದಕರ ಗಾಳಿ, ತಂಪಾದ ವಾತಾವರಣ! ನಡು ಮಧ್ಯಾಹ್ನದ ಹೊತ್ತಿಗೂ ಬೆವರಿಳಿಸದೇ ಬೆಟ್ಟವನ್ನೇರಬಹುದು. ಅಂತಹ ಮನಮೋಹಕ ತಾಣ ಕಾರಿಂಜ ಗಿರಿ.

ಪೌರಾಣಿಕ ಹಿನ್ನೆಲೆ
ಈ ಕ್ಷೇತ್ರವನ್ನು ಕೃತ ಯುಗದಲ್ಲಿ ರೌದ್ರಗಿರಿ, ತ್ರೇತಾ ಯುಗದಲ್ಲಿ ಗಜೇಂದ್ರಗಿರಿ, ದ್ವಾಪರದಲ್ಲಿ ಭೀಮ ಶೈಲವೆಂದು ಕರೆಯುತ್ತಿದ್ದರಂತೆ. ಇಡೀ ಗಿರಿ ಪ್ರದೇಶವು ಸುಮಾರು ೨೫ ಎಕರೆಗಳಷ್ಟು ವ್ಯಾಪಿಸಿದೆ. ಇದನ್ನು ಕೊಡ್ಯಮಲೆ (ಅರಣ್ಯ) ಎನ್ನುತ್ತಾರೆ. ಮಧ್ಯಾಹ್ನ ಕಾರಿಂಜೇಶ್ವರನ ಮಹಾಪೂಜೆಯಾದ ಬಳಿಕ ಮೂರು ಸೇರು ಅಕ್ಕಿಯ ದೇವರ ನೈವೇದ್ಯವನ್ನು ಕಲ್ಲು ಚಪ್ಪಡಿಯೊಂದರ ಮೇಲೆ ಹಾಕಿ ಮಂಗಗಳಿಗೆ ಅರ್ಪಿಸಲಾಗುತ್ತದೆ. 

ಬೆಟ್ಟದ ತುದಿಯಲ್ಲಿ ಶಿವಾಲಯದಲ್ಲಿ ನಿಂತು ನೋಡಿದರೆ ಸುತ್ತಲೂ ಕಾಣುವ ಹಚ್ಚ ಹಸುರಿನ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಶಿವನ ದೇಗುಲದ ಮೊದಲು ಮೆಟ್ಟಿಲುಗಳ ಬಳಿ ಉಂಗುಷ್ಟ ತೀರ್ಥ, ಜಾನುತೀರ್ಥ ಸಿಗುತ್ತದೆ. ಈ ತೀರ್ಥಕೆರೆಗಳನ್ನು ಹಾಗೂ ಕೆಳಗಿನ ಗದಾತೀರ್ಥ­ವನ್ನು ಮಹಾಭಾರತ ಕಾಲದಲ್ಲಿ ಭೀಮಸೇನನು ನಿರ್ಮಿಸಿದ­ನೆಂಬ ನಂಬಿಕೆ. ಈ ಕೆರೆ­ಗಳಲ್ಲಿ ವರ್ಷಪೂರ್ತಿ ನೀರು ಬತ್ತದೇ ಇರುವುದು ವಿಶೇಷ. ದೇವಳದ ಹತ್ತಿರ ಅರ್ಜುನ ನಿರ್ಮಿಸಿದ ಹಂದಿ ಕೆರೆ  ಇದೆ.  

ಹೀಗೆ ಬನ್ನಿ
ಮಂಗಳೂರಿನಿಂದ  ೩೫ ಕಿ.ಮೀ., ಬಂಟ್ವಾಳದಿಂದ ೧೪ ಕಿ.ಮೀ ದೂರ. ಬಂಟ್ವಾಳದಿಂದ ಧರ್ಮಸ್ಥಳಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸುಮಾರು ೧೦ ಕಿ.ಮೀ. ಸಾಗಿದರೆ ವಗ್ಗ ಸಿಗುತ್ತದೆ.  ಅಲ್ಲಿಂದ ೪ ಕಿ.ಮೀ. ಡಾಮರು ರಸ್ತೆಯಲ್ಲಿ ಸಾಗಿದರೆ ಕಾರಿಂಜ ಬೆಟ್ಟ ಸಿಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT