ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ನಡುವೆ ಅದ್ಭುತ ಕಲೆ!

Last Updated 24 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ದಿನ ಬೆಳಿಗ್ಗೆ ಕೈಯಲ್ಲಿ ಬುತ್ತಿ, ಹೆಗಲ ಮೇಲೆ ಕಬ್ಬಿಣದ ಬುಟ್ಟಿ, ಮನದಲ್ಲಿ ಕೂಲಿ ಸಿಗುತ್ತದೋ ಇಲ್ಲವೋ ಎಂಬ ಚಿಂತೆ...
ಶಾಲೆ ಮುಖ ನೋಡದ, ಬಳಪ ಹಿಡಿಯದ, ದಿನ ಬೆಳಗಾದರೆ ಕೂಲಿ ಕೆಲಸವನ್ನೇ ನಂಬಿದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಗ್ರಾಮ ಯುವಕರ ಪಡೆ ಇದು. ಆದರೆ ಇವರು ವೇದಿಕೆ ಏರಿ ಹೆಜ್ಜೆ ಹಾಕಿದರೆಂದರೆ ನೋಡುಗರ ಕಣ್ಣಿಗೆ ಹಬ್ಬ, ಸಿಳ್ಳೆಗಳ ಮಹಾಪೂರ...

ಗುರುವೇ ಇಲ್ಲದ ಗುರಿ ಸಾಧನೆ ಇವರದ್ದು! ಐದು ವರ್ಷಗಳ ಹಿಂದೆ ಹೀಗೆ ನೃತ್ಯ ಕಾರ್ಯಕ್ರಮ ನೋಡಲು ಹೋದ ಈ ತಂಡಕ್ಕೆ ತಾವೂ ರಂಗ ಏರುವ ಆಸೆಯಾಯಿತು. ಬೆಳ್ಳಂಬೆಳಿಗ್ಗೆ ಕೂಲಿ ಅರಸಿ ಹೋದರೆ ಬರುವುದು ಸೂರ್ಯ ಮುಳುಗಿದ ಮೇಲೆ. ದಿನಪೂರ್ತಿ ದುಡಿದು ದಣಿದಿರುವ ದೇಹ ಬೇರೆ. ನೃತ್ಯ ಕಲಿಕೆ ಇನ್ನೆಲ್ಲಿ ಸಾಧ್ಯ ಎನ್ನುವುದು ಇವರ ದುಗುಡವಾಗಿತ್ತು.

  ದೇಹಕ್ಕೆ ದಣಿವಾದರೂ ಇವರ ಮನಸ್ಸು ನೃತ್ಯದತ್ತ ಇತ್ತು. ಅದಕ್ಕಾಗಿ ಸಾಧನೆ ಮಾಡಬೇಕೆಂಬ ಹುಮ್ಮಸ್ಸು ಇದ್ದರೆ ಅದಕ್ಕೆ ಯಾವುದೂ ಅಡ್ಡಿಯಾಗುವುದಿಲ್ಲ ಎಂದರಿತ ಈ ಯುವಕರು ಪ್ರತಿದಿನ ರಾತ್ರಿ ಕೆಲಸ ಮುಗಿಸಿ ಬಂದ ಮೇಲೆ ಒಂದೆಡೆ ಗುಂಪುಗೂಡಿ ಹೆಜ್ಜೆ ಹಾಕತೊಡಗಿದರು. ‘ಎಸ್.ಪಿ. ಸ್ಟೈಲ್ ಗ್ರೂಪ್ ’ ಹೆಸರಿನೊಂದಿಗೆ 20 ಜನರ ಒಂದು ಗುಂಪು ತಯಾರಾಯಿತು. ಗುರು ಇಲ್ಲದೇ ವಿದ್ಯೆ ಕಲಿಯುವುದು ತುಸು ಕಷ್ಟ ಎನಿಸಿದರೂ, ಅನುಭವಕ್ಕಿಂತ ಬೇರೆ ಗುರು ಬೇಕಿಲ್ಲ ಎಂದುಕೊಂಡು ಮುನ್ನಡೆದರು.

ಈ ನೃತ್ಯ ತಂಡದಲ್ಲಿ ಇರುವ ಎಲ್ಲರೂ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು. ಹಲವರು ಶಾಲೆಯ ಮುಖವನ್ನೇ ನೋಡಿಲ್ಲ. ಇನ್ನೊಂದಿಷ್ಟು ಮಂದಿ ಅಷ್ಟಿಷ್ಟು ಓದಿಕೊಂಡಿದ್ದಾರೆ. ಈ ತಂಡಕ್ಕೆ ನೃತ್ಯ ಕಲಿಸುವ ಜೊತೆ ತಂಡದ ಹೊಣೆಯನ್ನು  ಹೊತ್ತಿದ್ದಾರೆ ಶ್ಯಾಮ್ ಮೆತ್ತಿನಾಳ.

ಅಲ್ಲಿಲ್ಲಿ ನೋಡಿದ ನೃತ್ಯದಂತೆ ತಾವೂ ನೃತ್ಯ ಮಾಡುತ್ತ ಹಲವು ವೇದಿಕೆ ಏರಿದ್ದಾರೆ. ಇವರ ನೃತ್ಯಕ್ಕೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿದೆ, ಜೊತೆಗೆ ಕೆಲವು ಪ್ರಶಸ್ತಿಗಳೂ ದಕ್ಕಿವೆ. ಇವರ ನೃತ್ಯ ಇರುವುದು ಗೊತ್ತಾದರೆ ಸುತ್ತಲಿನ ಗ್ರಾಮಸ್ಥರು ಕಿಕ್ಕಿರಿದು ತುಂಬುತ್ತಾರೆ!
ಪ್ರತಿ ವರ್ಷದ ಗಣೇಶ ಹಬ್ಬದಲ್ಲಿ ದಿನದ ಕೂಲಿ ಕೆಲಸಕ್ಕೆ ವಿರಾಮ ಕೊಟ್ಟು, ವಿವಿಧ ಕಡೆಗಳಲ್ಲಿ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತದೆ ಈ ತಂಡ.

ಆಸಕ್ತಿ ಇದೆ, ಕಲೆ ಇದೆ. ಆದರೆ ಕೈಯಲ್ಲಿ ಹಣವಿಲ್ಲ. ಕೂಲಿ ನಾಲಿ ಮಾಡಿ ಬಂದ ಹಣ ಸಂಸಾರಕ್ಕಷ್ಟೇ ಸಾಕಾಗುತ್ತದೆ. ಬಡತನ ಎನ್ನುವುದು ಇವರ ಕಲೆಗೆ ಅಡ್ಡಿಬಾರದಿದ್ದರೂ ಇನ್ನಷ್ಟು ಮುಂದೆ ಹೋಗಲು ಹಣದ ಅವಶ್ಯಕತೆ ಇದ್ದೇ ಇದೆ. ಇಂಥ ಯುವಕರಿಗೆ ಆರ್ಥಿಕ ನೆರವಿನ ಅವಶ್ಯಕತೆ ಇದೆ. ಇವರ ಸಂಪರ್ಕಕ್ಕೆ ೯೭೪೧೮೦೩೪೦೩ , ೯೯೧೬೬೪೬೬೧೮

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT