ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಮೃತ್ಯುಂಜಯ

Last Updated 5 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಬಿರುನಾಣಿ, ಪರಕಟಗೇರಿ, ತೆರಾಲು ಮತ್ತು ಬಾಡಗರಗೇರಿ ಗ್ರಾಮಗಳನ್ನು `ಮರೆನಾಡು ಪ್ರದೇಶ~ ಎಂದು ಕರೆಯುತ್ತಾರೆ. ಇದು ಪ್ರಕೃತಿ ಸೊಬಗಿನ, ಸುಂದರ ನದಿ ವನಗಳ ಬೀಡು. ಕೃಷಿಯೇ ಇಲ್ಲಿ ಪ್ರಧಾನ ಕಸುಬು. 

  ಕೊಡಗಿನ ಉತ್ತರ ಭಾಗವನ್ನು ಪಾಳೆಗಾರರೂ, ಪೂರ್ವ ಭಾಗವನ್ನು ನಾಯಕರು, ದಕ್ಷಿಣ ಕೊಡಗಿನ ಪಶ್ಚಿಮ ಭಾಗದ ಕೆಲವೆಡೆ ಬೆಟ್ಟಗುಡ್ಡದ ಬದಿಯನ್ನು ಕೇರಳದ ಕಣ್ಣೂರಿನ ರಾಜ ಚೆರಕಲ್ ಆಳುತ್ತಿದ್ದ ಕಾಲ ಅದು. ಅವರು ಬೆಟ್ಟದ ಮರೆಯಲ್ಲಿರುವ ಈ ಪ್ರದೇಶಕ್ಕೆ ಮಲಯಾಳಂನಲ್ಲಿ  ಮರೆನಾಟ್ (ಮರೆಯ ನಾಡು) ಎಂದು ಕರೆಯುತ್ತಿದ್ದರು. ವರ್ಷಗಳು ಉರುಳಿದಂತೆ ಮರೆನಾಟ್ ಎಂಬುದು ಮರೆನಾಡು ಆಯಿತೆಂದು ಹೇಳುತ್ತಾರೆ.

  ಇಲ್ಲಿನ ಪ್ರಧಾನ ಆರಾಧ್ಯ ದೈವ ಶ್ರೀ ಮೃತ್ಯುಂಜಯ ದೇವರು. ಸುಮಾರು ಒಂದು ಸಾವಿರ ವರ್ಷದ ಹಿಂದೆ ಸ್ಥಾಪನೆಯಾದ ಭಕ್ತಿಭಾವದ, ಸಾಕಷ್ಟು ಮಹಿಮೆಯುಳ್ಳ ಸ್ಥಳ ಇದು. ಅಲ್ಲದೆ ಮೃತ್ಯಂಜಯನ ಅಪರೂಪದ ಮಂದಿರಗಳಲ್ಲೊಂದು. ಅಕಾಲ ಮೃತ್ಯು ಭಯದಿಂದ ಪಾರಾಗಲು ಭಕ್ತರು ಇಲ್ಲಿ ಪೂಜೆ ಸಲ್ಲಿಸುತ್ತಾರೆ.

ಹಿಂದೆ ಮರೆನಾಡಿನೊಳಗೆ ಬಾಡಗರಕೇರಿ ಒಂದು ಉಪ ನಾಡು ಆಗಿತ್ತು. ಇಲ್ಲಿ ಅಮ್ಮ ಕೊಡವರ ಕುಟುಂಬ ಇತ್ತು. ರಾಜನ ಆಜ್ಞೆಯಂತೆ ತೆಕ್ಕಡಮ್ಮನ ಅಚ್ಚಮ್ಮ ಎಂಬುವವರು ಊರಿನ ಕಂದಾಯ ವಸೂಲಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಒಮ್ಮೆ ಕಣ್ಣೂರಿನ ಚೆರಕಲ್ ರಾಜನ ಮೇಲೆ ಶತ್ರು ದಾಳಿ ನಡೆಯಿತು. ಆಗ ರಾಜ ತನ್ನ ಇಷ್ಟ ದೇವತೆಯಾದ ಮೃತ್ಯುಂಜಯನನ್ನು ನೆನೆದು ಯುದ್ಧ ಮಾಡಿ ವಿಜಯಿಶಾಲಿಯಾದ. ಅದರ ಕೃತಜ್ಞತೆಯ ಕುರುಹಾಗಿ ಬಾಡಗರಕೇರಿಯಲ್ಲಿ ಶ್ರೀ ಮೃತ್ಯುಂಜಯ ಲಿಂಗವನ್ನು ಜೀರ್ಣೋದ್ಧಾರ ಮಾಡಿಸಿದ. ದೇವರ ಕಾರ್ಯಗಳಲ್ಲಿ, ತೆಕ್ಕಡ ಕೊಡವ ಹಾಗೂ ತೆಕ್ಕಡಮ್ಮನ ಕುಟುಂಬದವರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆದೇಶಿಸಿದ.

ಮುಂದೆ ಚರಕಲ್ ರಾಜನಿಂದ ಪಾಳೇಗಾರರು ಕೊಡಗನ್ನು ವಶಪಡಿಸಿಕೊಂಡ ನಂತರ ಕಳ್ಳೇಂಗಡ, ಅಮ್ಮತ್ತಿರ ಮತ್ತು ಅಣ್ಣೀರ ಕುಟುಂಬದವರು ಪೂಜೆ ಪುನಸ್ಕಾರಕ್ಕೆ ತೆರಿಗೆ ವಸೂಲಿ ಮಾಡಿ, ದೇವಸ್ಥಾನವನ್ನು ಅಭಿವೃದ್ಧಿಪಡಿಸಿದರು. ನಂತರ ಲಿಂಗರಾಜ ಅರಸರ ಕಾಲದಲ್ಲೂ ಯಾವುದೇ ಅಡೆತಡೆ ಇಲ್ಲದೆ ಪೂಜೆ ಕಾರ್ಯಗಳು ಸಾಗಿ ಈಗಲೂ ಮುಂದುವರಿದಿವೆ.

ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ವಾರ್ಷಿಕ ಹಬ್ಬದ ಆಚರಣೆ ಮಾರ್ಚ್ 3 ರಿಂದ ಆರಂಭವಾಗಿದ್ದು, 13 ರಂದು ಕೊನೆಗೊಳ್ಳುತ್ತದೆ. ಆರಿದ್ರಾ ನಕ್ಷತ್ರದಲ್ಲಿ ಕೊಡಿ ಮರ ನಿಲ್ಲಿಸಿ, 11 ದಿನದ ವರೆಗೆ ಸಾಂಪ್ರದಾಯಿಕ ಪೂಜೆ ಪುನಸ್ಕಾರ ನಡೆಸುತ್ತಾರೆ. 10ನೇ ದಿನ  ನೆರಪು. ಅಂದು ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ವಿಷ್ಣುದೇವರ ಅಲಂಕಾರ ಪೂಜೆ ನಡೆಯುತ್ತದೆ. 11ನೇ ದಿನ ಕಕ್ಕಟ್ಟು ಹೊಳೆಯಲ್ಲಿ ದೇವರ ಜಳಕ (ಸ್ನಾನ) ದೊಂದಿಗೆ ಹಬ್ಬವು ಕೊನೆಗೊಳ್ಳುತ್ತದೆ.

ದೇವಸ್ಥಾನದ ದಾರಿ: ವೀರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದಿಂದ ಪೊನ್ನಂಪೇಟೆ, ಹುದಿಕೇರಿ ಮೂಲಕ ಸುಮಾರು 35 ಕಿ.ಮೀ. ಕ್ರಮಿಸಿದರೆ ದೇವಸ್ಥಾನ ತಲುಪಬಹುದು. ಆದರೆ ಉಳಿದುಕೊಳ್ಳಲು ಪೊನ್ನಂಪೇಟೆ ಇಲ್ಲವೆ ಗೋಣಿಕೊಪ್ಪಕ್ಕೆ ಬರಬೇಕು.

ಸೇವಾ ವಿವರ
ಮೃತ್ಯುಂಜಯ ಹೋಮ 50 ರೂ
ರುದ್ರಾಭಿಷೇಕ 50 ರೂ
ಜಪಗಳು 50 ರೂ
ಗ್ರಹಶಾಂತಿ ಹೋಮ  2500 ರೂ
ನಾಮಕರಣ 300 ರೂ
ನವಗ್ರಹ ಪೂಜೆ  2500 ರೂ
ಮಹಾ ಹೋಮ  1700 ರೂ
ಸತ್ಯನಾರಾಯಣ ಪೂಜೆ 1000 ರೂ
ವಾಹನ ಪೂಜೆ  50 ರೂ
ಬಿಲ್ವಪತ್ರೆ ಪೂಜೆ 50 ರೂ
ಶತ ರುದ್ರಾಭಿಷೇಕ 8000 ರೂ
ನಾಮಕರಣ 300 ರೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT