ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿನಾಡಲ್ಲಿ ಹಸಿರ ಖನಿ

Last Updated 14 ಜುಲೈ 2014, 19:30 IST
ಅಕ್ಷರ ಗಾತ್ರ

ಗಣಿಗಾರಿಕೆಯಿಂದ ಕುಪ್ರಸಿದ್ಧಿ ಪಡೆದಿದ್ದ ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಈಗ ಹೋದರೆ ನಿಮ್ಮ ಬಾಯಲ್ಲಿ ಬರುವ ಹಾಡು, ‘ಎಂಥಾ ಸೌಂದರ್ಯ ನೋಡು, ನಮ್ಮ ಕರುನಾಡ ಬೀಡು...’! ಇದು ನಿಜ. ಸಂಡೂರಿನ ಗುಡ್ಡ ಬೆಟ್ಟಗಳೆಲ್ಲ ಕೆಂಪು ದೂಳಿನ ಹೊದಿಕೆ ಕಳಚಿಟ್ಟು ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ.

ಕಾಡು ಹಾದಿಯಲ್ಲೀಗ ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು. ಜೊತೆಗೆ ನವಿಲು, ಮೊಲ, ಚಿಗರೆ, ಕರಡಿ, ಕಾಡು ಕುರಿ, ತೋಳ, ಕಾಡುಹಂದಿ, ಚಿರತೆಗಳು ಸೇರಿದಂತೆ ಅನ್ಯ ವನ್ಯಜೀವಿಗಳ ಇರುವಿಕೆ ಪರಿಸರ ಪ್ರಿಯರಿಗೆ ಸಂತಸ ಮೂಡಿಸುತ್ತಿವೆ. 1934ರಲ್ಲಿ ಸಂಡೂರಿನ ಪರಿಸರವನ್ನು ಖುದ್ದು ವೀಕ್ಷಿಸಿದ್ದ ಮಹಾತ್ಮ ಗಾಂಧೀಜಿಯವರು ಇದು ಕರ್ನಾಟಕದ ಸ್ವಿಟ್ಜರ್ಲೆಂಡ್ ಎಂದು ಬಣ್ಣಿಸಿದ್ದರು. 

ಅವರ ಮಾತುಗಳಿಗೆ, ಅಂದು ಶ್ರೀಮಂತವಾಗಿದ್ದ  ಅರಣ್ಯ ಸಂಪತ್ತು ಕಾರಣವಾಗಿತ್ತು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ಗಣಿಗಾರಿಕೆಯ ಹೆಸರಿನಲ್ಲಿ ಸಾವಿರಾರು ಎಕರೆ ಪ್ರದೇಶದ  ದಟ್ಟವಾದ ಕಾಡು ನಾಶವಾಗಿದೆ. ಕೆಲ ರಕ್ಷಿತ ಪ್ರದೇಶದಲ್ಲಿ ಅರಣ್ಯ ತನ್ನ ಸಹಜತೆಯನು ಕಾಪಾಡಿಕೊಂಡಿದೆ.  ಹಲವು ವರ್ಷಗಳಿಂದ ಕಣ್ಮರೆಯಾಗಿದ್ದ ವನ್ಯಜೀವಿ ಸಂಕುಲ ಈ ಪ್ರದೇಶದಲ್ಲಿ ಮತ್ತೆ ನೆಲೆ ಕಂಡು ಕೊಳ್ಳುತ್ತಿದೆ.

ಮೂಲಸೌಕರ್ಯ ವಂಚಿತ ತಾಣಗಳು
ಇತಿಹಾಸ ಪ್ರಸಿದ್ಧ ಕುಮಾರಸ್ವಾಮಿ ದೇವಾಲಯ, ಹರಿಶಂಕರ, ಗಂಡಿನರಸಿಂಹಸ್ವಾಮಿ ದೇವಾಲಯ, ಭೀಮತೀರ್ಥ, ನವಿಲು ತೀರ್ಥ, ಭೈರವ ತೀರ್ಥ ನಾರಿಹಳ್ಳ ಜಲಾಶಯ, ರಾಮಘಡದ ಬ್ರಿಟಿಷರ ಕಾಲದ ಆರಾಮ ಧಾಮಗಳು, ಉಬ್ಬಲಗಂಡಿ ಏಕಶಿಲಾ ಪರ್ವತ, ತಾಲ್ಲೂಕಿನ ಬೊಮ್ಮಘಟ್ಟ ಹುಲಿಕುಂಟೇಶ್ವರ ದೇವಸ್ಥಾನ, ಜೋಗಿಕಲ್ಲು,  ಕೃಷ್ಣಾನಗರದ ಕೋಟೆಗಳು ಸ್ಮಾರಕಗಳಾಗಿವೆಯೇ ಹೊರತು ಜನರಲ್ಲಿ ಆಸೆ ಚಿಗುರಿಸುವ ಅಭಿಮಾನ ಪಡುವಂತಹ ಪ್ರವಾಸಿ ಕೇಂದ್ರಗಳಾಗಿಲ್ಲ ಎಂಬುದು ವಿಷಾದನೀಯ.

ಚಾರಣ ಮತ್ತು ಜಲಕ್ರೀಡೆಗಳ (ನಾರಿಹಳ್ಳದಲ್ಲಿ ನೀರಿದ್ದಾಗ) ಯೋಜನೆಗೆ ಉತ್ತಮ ಹವಾಮಾನ ಹೊಂದಿರುವ ಪ್ರದೇಶ ಇದಾಗಿದೆ. ಸುಂದರ ಗುಡ್ಡಗಾಡಿನಲ್ಲಿರುವ ಸ್ಥಳಗಳ ವೀಕ್ಷಣೆಗೆ, ಇಲ್ಲಿನ ಸಂಡೂರು ಬೆಟ್ಟದಲ್ಲಿ ಚಾರಣ ಮಾಡಲು ಅಣಿಯಾಗಬಹುದು. ಪಟ್ಟಣದಲ್ಲಿ ಉಳಿದು ಕೊಳ್ಳಲು ಖಾಸಗಿ ಹೊಟೆಲ್‌ಗಳೂ ಸಾಕಷ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT