ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿ ನಡುವೆ ಜಾರಿದ ಬದುಕು

Last Updated 5 ಮೇ 2014, 19:30 IST
ಅಕ್ಷರ ಗಾತ್ರ

ಸೂರ್ಯನ ರಶ್ಮಿ ಭುವಿ ಸ್ಪರ್ಶಿಸುವ ಮುನ್ನವೇ ಇವರ ಕಾಯಕ ಆರಂಭ. ಕೈಯಲ್ಲಿ ಸುತ್ತಿಗೆ, ಕಂಕುಳಿನಲ್ಲೊಂದು, ಹೊಟ್ಟೆಯಲ್ಲೊಂದು ಕಂದಮ್ಮ... ಕಣ್ಣಲ್ಲಿ ಮಕ್ಕಳ ಭವಿಷ್ಯದ ಚಿಂತೆ... ಜಲ್ಲಿಕಲ್ಲಿನ ಮಧ್ಯೆ ಕೂತರೆ ಅಲ್ಲಿಂದ ಏಳುವ ಹೊತ್ತಿಗೆ ಕತ್ತಲು ಕವಿದಿರುತ್ತದೆ. ಸಂಸಾರದ ನೊಗ ಹೊತ್ತು, ಹೊತ್ತು ಗೊತ್ತಿಲ್ಲದೇ ದುಡಿವ ಈ ‘ಜಲ್ಲಿಕಲ್ಲು ಮಹಿಳೆ’ಯರ ಲೇಖನ ಮೇ 11ರ ‘ಅಮ್ಮಂದಿರ ದಿನ’ದ ವಿಶೇಷ.

ಬಿಸಿಲು–ಗಾಳಿ, ಮಳೆ–ಚಳಿ, ಹಗಲು–ರಾತ್ರಿ, ನೋವು–ನಲಿವು, ಹಬ್ಬ–ಹರಿದಿನ, ಬಿಡುವು–ವಿಶ್ರಾಂತಿ ಇವ್ಯಾವನ್ನೂ ಲೆಕ್ಕಿಸದೆ ಪರಿಶ್ರಮದ ಜಲ್ಲಿಕಲ್ಲು ಒಡೆಯುವ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿರುವ ಅಮ್ಮಂದಿರಿವರು.

ಬದುಕಿನುದ್ದಕ್ಕೂ ಶಾಪದಂತೆ ಬೆನ್ನಿಗಂಟಿಕೊಂಡಿರುವ ಅನಕ್ಷರತೆ ಒಂದೆಡೆ, ಬಿಟ್ಟರೂ ಬಿಡದೀ ಮಾಯೆ ಎಂಬಂತೆ ಬಡತನ ಇನ್ನೊಂದೆಡೆ... ಭಾರವಾದ ಸುತ್ತಿಗೆಯಿಂದ ದೊಡ್ಡ ಗಾತ್ರದ ಕಲ್ಲು (ಚಿಂಚು)ಗಳನ್ನು ಒಡೆಯುತ್ತಾ ಮಾರಾಟ ಮಾಡುವುದು ಇವರ ನಿತ್ಯದ ಕಾಯಕ. ಉದ್ಯೋಗ ಹೀನ, ಕುಡುಕ ಪತಿಯ ಹಿಂಸೆ, ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿ ಎಲ್ಲವುಗಳ ನಡುವೆ ವರ್ಷಕ್ಕೊಂದು ಮಗು ಹೆತ್ತು ಹೊಟ್ಟೆಯ ಲ್ಲೊಂದು, ಮಡಿಲಿನಲ್ಲೊಂದು, ಬೀದಿಯಲ್ಲೊಂದು ಕೂಸುಗಳನ್ನು ಇಟ್ಟುಕೊಂಡು ಸಂಭಾಳಿಸುವ ಅನಿವಾರ್ಯದ ಬದುಕು ಇವರದ್ದು.

ಗ್ರಾಮ, ನಗರ, ಪಟ್ಟಣಗಳ ಬೇಧವಿಲ್ಲದೇ ಎಲ್ಲೆಡೆ ಕಾಣಿಸುವ ಸಾಮಾನ್ಯ ದೃಶ್ಯವಿದು. ಇಂಥ ನೋವು, ಅನಿವಾರ್ಯಗಳ ನಡುವೆ ಕುಟುಂಬ ಸದಸ್ಯರ ತುತ್ತಿನ ಚೀಲ ತುಂಬಿಸುವುದರ ಜತೆಗೆ ಕುಟುಂಬದ ಆರ್ಥಿಕ ಸದೃಢತೆಗೆ ಶ್ರಮಿಸುತ್ತಿದ್ದಾರೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡ ನಗರದ ಭೋವಿ (ವಡ್ಡರ) ಸಮುದಾಯದ ಮಹಿಳೆಯರು.

ಹಿರಿಕರಿಂದ ಬಳುವಳಿಯಾಗಿ ಬಂದಿರುವ ಜಲ್ಲಿಕಲ್ಲು ಒಡೆಯುವ ವೃತ್ತಿಯನ್ನು ಇಲ್ಲಿನ ಭೋವಿ ಸಮಾಜದ ಮಹಿಳೆ ಯರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸೂರ್ಯೋದಯವಾಗುತ್ತಿದ್ದಂತೆಯೇ ಕಲ್ಲು ಒಡೆಯುವ ಕಾಯಕಕ್ಕೆ ಮುಂದಾಗುವ ಈ ಅಮ್ಮಂದಿರು ಹಸುಳೆಗಳನ್ನು ಮಡಿಲಲ್ಲಿಟ್ಟುಕೊಂಡೇ ಕಾಯಕ ಆರಂಭಿಸುತ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ರಟ್ಟೆಯಲ್ಲಿನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಕಲ್ಲು ಒಡೆದರೂ ದಿನಕ್ಕೆ ₨ 100 ಗಿಟ್ಟುವುದೂ ಕಷ್ಟವೇ!

ಸಂಘಟನಾ ಕೊರತೆ
ತಲತಲಮಾರುಗಳಿಂದಲೂ ಜಲ್ಲಿಕಲ್ಲು ಒಡೆಯುತ್ತಾ ಬಂದಿರುವ ಗಜೇಂದ್ರಗಡದ ಮಹಿಳೆಯರು ಇಂದಿಗೂ ಅಸಂಘಟಿತರೇ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಇವರುಗಳಿಗೆ ಹೊರಗಿನ ಪ್ರಪಂಚದ ಕನಿಷ್ಠ ಪ್ರಜ್ಞೆ ಇಲ್ಲ. ಇದರಿಂದ ಸಂಘಟನೆ ಕಷ್ಟವಾಗಿದೆ. ಜೊತೆಗೆ ವ್ಯವಹಾರ ಜ್ಞಾನವಿಲ್ಲ. ಇದರಿಂದ ಜಲ್ಲಿಕಲ್ಲುಗಳನ್ನು ಹೇಗೆ, ಎಷ್ಟು ದರಕ್ಕೆ ಮಾರಾಟ ಮಾಡಬೇಕು, ಇಂದಿನ ಬೆಲೆ ಎಷ್ಟು, ದರ ನಿಗದಿ ಹೇಗೆ ಎಂಬುದರ ಅರಿವು ಇಲ್ಲದೇ ಮೋಸಹೋಗುತ್ತಿದ್ದಾರೆ. ಜಲ್ಲಿಕಲ್ಲು ಖರೀದಿಗೆ ಬರುವ ಗಿರಾಕಿಗಳಿಗೆ ದರ ನಿಗದಿ ಮಾಡುವಲ್ಲಿ ಮಧ್ಯವರ್ತಿಗಳಷ್ಟೇ ಅಲ್ಲ, ಪತಿಯಂದಿರು ಕೂಡ ಮೋಸ ಮಾಡುತ್ತಾರೆ.

ರಸ್ತೆ ನಿರ್ಮಾಣ, ಮನೆ ಕಟ್ಟಡ, ಸರ್ಕಾರಿ ಕಟ್ಟಡ ಸೇರಿದಂತೆ ಪ್ರತಿಯೊಂದು ನೂತನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅವಶ್ಯವಾಗಿರುವ ಜಲ್ಲಿಕಲ್ಲಿಗೆ ಸದ್ಯ ಭಾರಿ ಬೇಡಿಕೆ ಇದೆ. ಹೀಗಾಗಿ ಇಲ್ಲಿನ ಜಲ್ಲಿಕಲ್ಲು ತಯಾರಿಕಾ ಕಾರ್ಮಿಕರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ವಜ್ರಬಂಡಿ ಗ್ರಾಮದಲ್ಲಿ ದೊರೆಯುವ ಚಿಂಚಕಲ್ಲಿಗೆ ಟ್ರ್ಯಾಕ್ಟರ್‌ಗೆ (ಬಾಡಿಗೆ ಸಹಿತ) ₨ 2,500 ನೀಡಿ ಖರೀದಿಸುತ್ತಾರೆ. ಹೀಗೆ ಖರೀದಿಸಿ ತರಲಾದ ಚಿಂಚಕಲ್ಲಿನ ಗಾತ್ರ ದೊಡ್ಡದಾಗಿರುತ್ತದೆ. ಮೊದಲು 8 ಪೌಂಡ್‌ನ ಸುತ್ತಿಗೆಯಿಂದ ದೊಡ್ಡ ಗಾತ್ರದ ಚಿಂಚಕಲ್ಲನ್ನು ತುಂಡರಿಸಲಾಗುತ್ತದೆ. ಬಳಿಕ 40 ಪೌಂಡ್‌ ತೂಕದ ಸುತ್ತಿಗೆಯಿಂದ ಹೊಡೆದಾಗ 40 ಎಂಎಂ ಗಾತ್ರದ ಕಡಿಯಾಗಿ ಪರಿವರ್ತನೆಗೊಳ್ಳುತ್ತದೆ.

ನಂತರ 4 ಪೌಂಡ್ ತೂಕದ ಸುತ್ತಿಗೆಯಿಂದ ಹೊಡೆದಾಗ 20 ಎಂಎಂ ಗಾತ್ರದ ಕಡಿಯಾಗಿ ಪರಿವರ್ತನೆಗೊಳ್ಳುತ್ತದೆ. ಈ ಎಲ್ಲಾ ಪ್ರಕ್ರಿಯೆಗೆ ಕನಿಷ್ಠ ಒಂದು ಕುಟುಂಬದ ನಾಲ್ಕರಿಂದ ಐದು ಜನರ ನಿರಂತರ ಶ್ರಮದ ಅವಶ್ಯಕತೆ ಇದೆ. ಒಂದು ಟ್ರ್ಯಾಕ್ಟರ್‌್ ಕಡಿ ಒಡೆಯಲು (ನಾಲ್ಕು ಜನ ನಿರಂತರ ಶ್ರಮಿಸಿದರೆ) ಮೂರು ದಿನಕ್ಕೆ ಒಂದು ಟ್ಯ್ರಾಕ್ಟರ್‌್ ಕಡಿ ತಯಾರಾಗುತ್ತವೆ. ಸದ್ಯ ₨ 4,500 ರಿಂದ ₨ 4,600 ವರೆಗೆ ದರವಿದೆ. ಹೀಗಾಗಿ ಕಡಿ ತಯಾರಿಕೆಯಲ್ಲಿ ಶ್ರಮಕ್ಕೆ ತಕ್ಕ ಫಲ ದೊರೆಯುತ್ತಿಲ್ಲ ಎಂಬ ಕೊರಗು ಕಲ್ಲಿಕಲ್ಲು ತಯಾರಿಕೆಯ
ಮಹಿಳಾ ಕಾರ್ಮಿಕರದ್ದು.

ಅಸಂಖ್ಯ ಮಕ್ಕಳು
ತಮ್ಮ ಕುಟುಂಬದ ವೃತ್ತಿಗೆ ಅನುಕೂಲವಾಗಲಿ ಎಂದು ಮಕ್ಕಳನ್ನು ಹೆರುತ್ತಲೇ ಇರುತ್ತಾರೆ ಮಹಿಳೆಯರು. ಆದರೆ, ಕುಟುಂಬದ ಜನಸಂಖ್ಯೆಗೆ ಅನುಗುಣವಾಗಿ ಆರ್ಥಿಕ ಬಲ ಇಲ್ಲವಾಗಿದೆ. ‘ಜಲ್ಲಿಕಲ್ಲು ಒಡೆಯುವವರು ಎಲ್ಲರೂ ಮಹಿಳೆಯರೇ. ಬೆಳಿಗ್ಗೆಯಿಂದ ರಾತ್ರಿವರೆಗೂ ಬೆವರು ಸುರಿಸಿ ಕಲ್ಲು ಒಡೆದು ತರುವ ಹಣವನ್ನು ಪತಿ ಹಾಗೂ ಗಂಡುಮಕ್ಕಳು ಬಲವಂತವಾಗಿ ಕಿತ್ತುಕೊಂಡು ಹೋಗಿ ಮೋಜು–ಮಸ್ತಿಗೆ ಮುಂದಾಗುತ್ತಾರೆ. ಹೀಗಾಗಿ ಗಂಜಿಗೂ ಕಾಸಿಲ್ಲದೆ ನೀರು ಕುಡಿದು ಹಸಿವಿನ ದಾಹ ನೀಗಿಸಿಕೊಳ್ಳುವ ದಿನಗಳೇ ಹೆಚ್ಚು’ ಎಂದು ಕಾರ್ಮಿಕರಾದ ಹನಮವ್ವ ಮುಶಿಗೇರಿ, ಯಮನವ್ವ ಕಲ್ಲೂರ ಕಣ್ಣೀರಿಡುತ್ತಾರೆ.

ರೋಗ ಭಯ
ಜಲ್ಲಿಕಲ್ಲು ತಯಾರಿಕೆಯಿಂದಾಗಿ ಕಾರ್ಮಿಕರಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿವೆ. ಕಲ್ಲನ್ನು ಒಡೆಯುವಾಗ ಎಷ್ಟೋ ಕಾರ್ಮಿಕರು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ದೇಹದ ನಾನಾ ಭಾಗಗಳು ಊನವಾಗಿವೆ. ಕರ್ಕಶವಾದ ಶಬ್ದದ ರಭಸಕ್ಕೆ ಅನೇಕ ಮಂದಿ ಶ್ರವಣ ಶಕ್ತಿ ಕಳೆದುಕೊಂಡಿದ್ದಾರೆ. ಇಷ್ಟೊಂದು ಅಪಾಯಕಾರಿ ಪರಿಶ್ರಮದ ವೃತ್ತಿಯನ್ನೇ ನೆಚ್ಚಿಕೊಂಡಿರುವ ಈ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿದೆ.

ಕೆಲವು ಕಡೆಗಳಲ್ಲಿ ಸಂಚಾರಕ್ಕೆ ಅಡ್ಡಿ ಆಗುವ ಕಾರಣ, ಸ್ಥಳೀಯ ಆಡಳಿತ ಮಂಡಳಿಯಿಂದ ಕಿರಿಕಿರಿ ಬೇರೆ. ಕಲ್ಲುಗಳನ್ನು ಬೇರೆಡೆ ಹಾಕಿಕೊಳ್ಳಿ ಎಂಬ ತಾಕೀತು. ಇದರಿಂದ ಕಾರ್ಮಿಕರು ಬೇಸತ್ತು ಹೋಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT