ಕುದುರೆಮುಖ ಪಟ್ಟಣದಿಂದ 2 ಕಿ.ಮೀ ದೂರದಲ್ಲಿ ಬಲಭಾಗದಲ್ಲಿ ನುಣುಪಾದ ಹುಲ್ಲಿನ ಮೇಲೆ ಕಾಣುವ ‘ಲಕ್ಯಾ ಡ್ಯಾಮ್’ ಬರಹ ಎಂತಹ ಅರಸಿಕರನ್ನೂ ಸೆಳೆಯುತ್ತದೆ. ಕುದುರೆಮುಖಕ್ಕೆ ಭೇಟಿ ನೀಡುವ ಪ್ರವಾಸಿಗಳ ಪಾಲಿಗೆ ಲಕ್ಯಾ ಅಣೆಕಟ್ಟೆ ಅವರು ಮರೆಯದೇ ನೋಡಬೇಕಾದ ವಿಹಂಗಮ ತಾಣ. ಇಲ್ಲಿ ಹಚ್ಚ ಹಸುರಿನ ಬೆಟ್ಟ ಗುಡ್ಡಗಳ ನಡುವೆ ನಿಂತ ತಿಳಿಬಣ್ಣದ ನೀರು ಮೂಡಿ ಮರೆಯಾಗುವ ಮುಗಿಲಿನ ನಡುವೆ ಸ್ವರ್ಗಲೋಕದ ಚಿತ್ರಣವನ್ನು ನೀಡುತ್ತದೆ. ಆದರೆ ಈ ಅಣೆಕಟ್ಟಿನ ಪೂರ್ವಾಪರ ಅರಿತುಕೊಂಡರೆ ಅಣೆಕಟ್ಟು ಕಣ್ಣಿಗೆ ಕಾಣುವಷ್ಟು ರಮ್ಯವಾದುದ್ದಲ್ಲ ಮತ್ತು ಭವಿಷ್ಯದಲ್ಲಿ ಇದು ರೌದ್ರ ಕಲ್ಪನೆಯೊಂದನ್ನು ಮೂಡಿಸಬಹುದು ಎಂಬ ಆತಂಕ ತರುತ್ತದೆ.

ನಾಲ್ಕು ದಶಕಗಳ ಹಿಂದೆ ಕುದುರೆಮುಖದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ನಡೆಸಲು ಅನುಮತಿ ಸಿಕ್ಕಾಗ ಗಣಿಗಾರಿಕೆಯ ಹೂಳನ್ನು ಸಂಗ್ರಹಿಸಲು ಅಣೆಕಟ್ಟನ್ನು ನಿರ್ಮಿಸುವುದು ಸಂಸ್ಥೆಗೆ ಅನಿವಾರ್ಯವಾಗಿತ್ತು. ಎತ್ತರದ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದರೂ ತಗ್ಗು ಪ್ರದೇಶದ ಭದ್ರಾ ನದಿಗೆ ಹೂಳು ಹೋಗದಂತೆ ತಡೆಯಲು ಲಕ್ಯಾ ಹೊಳೆಗೆ ಅಣೆಕಟ್ಟು ನಿರ್ಮಾಣ ಮಾಡಲಾಯಿತು. ಅದಿರು ಸಂಸ್ಕರಣೆಯ ಘಟಕದಿಂದ ಹೊರಬಂದ ಲಕ್ಷಾಂತರ ಟನ್ ಹೂಳು ಹೀಗೆ ಈ ಅಣೆಕಟ್ಟೆಯಲ್ಲಿ ಜಮಾವಣೆ ಆಯಿತು. ಅಣೆಕಟ್ಟಿನ ಮುಂಭಾಗ ಗಮನಿಸಿದರೆ ಈಗ ನೀರಿನ ಬದಲು ಹೂಳೇ ಕಾಣುತ್ತದೆ. ಆದರೆ ಇದರ ಒಳಭಾಗಕ್ಕೆ ಹಾದು ನೋಡಿದರೆ ಹಿನ್ನೀರಿನ ವಿಹಂಗಮ ನೋಟ ಕಾಣುತ್ತದೆ. 1048 ಮೀಟರ್ ಉದ್ದದ ಮತ್ತು 108 ಎತ್ತರದ ಈ ಅಣೆಕಟ್ಟನ್ನು ಮಣ್ಣಿನ ತಡೆಗೋಡೆಯ ಆಧಾರದಲ್ಲಿ ನಿರ್ಮಿಸಲಾಗಿದೆ. ಇದು ಭದ್ರಾ ನದಿಯ ಉಪನದಿಯಾದ ಲಕ್ಯಾ ಹೊಳೆಯ ಸಂಪೂರ್ಣ ಹರಿವನ್ನು ತಡೆದು ನಿಲ್ಲಿಸುತ್ತಿದೆ.

572 ಹೆಕ್ಟೇರ್ ಪ್ರದೇಶದಲ್ಲಿ ಲಕ್ಯಾ ಅಣೆಕಟ್ಟು ಮತ್ತು ಅದರ ಹಿನ್ನೀರಿನ ಪ್ರದೇಶ ಹರಡಿಕೊಂಡಿದ್ದು ಅತ್ಯಮೂಲ್ಯವಾದ ಶೋಲಾ ಕಾಡು ಮತ್ತು ವನ್ಯಸಂಪತ್ತನ್ನು ಮುಳುಗಿಸಿದೆ. ಈ ಪ್ರದೇಶವು ಕಂದಾಯ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಡುತ್ತದೆ. ಗಣಿಗಾರಿಕೆ ನಿಂತ ಮೇಲೆ ಈ ಅಣೆಕಟ್ಟಿನ ನೀರನ್ನು ಮಂಗಳೂರಿನಲ್ಲಿ ಇರುವ ಕುದುರೆಮುಖ ಕಬ್ಬಿಣ ಸಂಸ್ಕರಣೆಯ ಘಟಕಕ್ಕೆ ಗುರುತ್ವಾಕರ್ಷಣೆಯ ಮೂಲಕ ರವಾನಿಸಲಾಗುತ್ತಿದೆ.

ಅಣೆಕಟ್ಟಿನ ತ್ಯಾಜ್ಯದಲ್ಲಿ ಅಲ್ಪ ಪ್ರಮಾಣದ ಕಬ್ಬಿಣದ ಅಂಶ ಇದ್ದರೂ ಅದನ್ನು ಸಂಸ್ಕರಿಸುವುದು ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ಸಂಸ್ಥೆ ಅದನ್ನು ಹಾಗೇ ಬಿಟ್ಟಿದೆ. ಈ ಹೂಳಿನಿಂದ ಇಟ್ಟಿಗೆ ತಯಾರಿಸುವ ಬಗ್ಗೆ ದಶಕದ ಹಿಂದೆಯೇ ಎಂಜಿನಿಯರಿಂಗ್ ಕಾಲೇಜೊಂದು ಸಂಶೋಧನಾ ವರದಿ ತಯಾರಿಸಿದ್ದರೂ ಆ ಆಸೆ ಕೈಗೂಡಲಿಲ್ಲ.

1992–94ರ ಅವಧಿಯಲ್ಲಿ ಅಣೆಕಟ್ಟಿನ ಎತ್ತರವನ್ನು ಕುದುರೆಮುಖ ಸಂಸ್ಥೆ ಏರಿಸಿತ್ತು. ಇದೀಗ ಗಣಿಗಾರಿಕೆ ನಿಂತು ಹೋದ ಹಿನ್ನೆಲೆಯಲ್ಲಿ ಅಣೆಕಟ್ಟಿನ ವಿಚಾರ ಕುದುರೆಮುಖ ಸಂಸ್ಥೆಯ ಪಾಲಿಗೆ ಅಪ್ರಸ್ತುತವೇ ಆಗಿದೆ. ಆದರೆ ಆ ಅಣೆಕಟ್ಟಿನಲ್ಲಿರುವ ಲಕ್ಷಾಂತರ ಟನ್ ಹೂಳು ಮಾತ್ರ ಭದ್ರಾ ನದಿಯ ಭವಿಷ್ಯದ ಕಾರಣಕ್ಕೆ ಪರಿಸರಪ್ರೇಮಿಗಳ ಪಾಲಿಗೆ ಅಪಾಯದ ಸಂಕೇತವೇ ಆಗಿದೆ. ‘ಕುದುರೆಮುಖದ ಲಕ್ಯಾ ಅಣೆಕಟ್ಟು ಬೇರೆ ಅಣೆಕಟ್ಟುಗಳ ಹಾಗೆ ಕಾಂಕ್ರೀಟ್ನಿಂದ ನಿರ್ಮಾಣವಾಗದೆ ಮಣ್ಣಿನಿಂದ ನಿರ್ಮಾಣವಾಗಿದೆ. ಮುಂಬರುವ ವರ್ಷಗಳಲ್ಲಿ ಅಣೆಕಟ್ಟಿನ ದಂಡೆ ಒಡೆದರೆ ಅದರಲ್ಲಿರುವ ಲೆಕ್ಕವಿಲ್ಲದಷ್ಟು ಅದಿರಿನ ತ್ಯಾಜ್ಯ ಭದ್ರಾ ನದಿಗೆ ಸೇರಿದರೆ ನದಿಯ ಗತಿ ಏನು. ನದಿಯನ್ನು ನಂಬಿ ಕೃಷಿ ಮಾಡುತ್ತಿರುವ ಲಕ್ಷಾಂತರ ಕೃಷಿಕರ ಗತಿ ಏನು’ ಎಂದು ಪರಿಸರವಾದಿ ಸ.ಗಿರಿಜಾಶಂಕರ್ ಪ್ರಶ್ನಿಸುತ್ತಾರೆ. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಬದುಕಿದ್ದಾಗ ಈ ಅಣೆಕಟ್ಟನ್ನು ಇದೇ ಕಾರಣಕ್ಕೆ ಟೈಂ ಬಾಂಬ್ ಎನ್ನುತ್ತಿದ್ದರು.

‘ಈಗ ಕುದುರೆಮುಖ ಸಂಸ್ಥೆಯು ಅಣೆಕಟ್ಟಿನ ನಿರ್ವಹಣೆ ಮಾಡುತ್ತಿರುವುದರಿಂದ ಒಡೆಯುವ ಭೀತಿ ಇಲ್ಲ. ಮುಂದೆ ಯಾರೂ ನಿರ್ವಹಣೆ ಮಾಡದಿದ್ದಾಗ ಮತ್ತು ಮಳೆ ಹೆಚ್ಚಾದಾಗ ಅಣೆಕಟ್ಟು ಒಡೆಯಲಾರದು ಎಂದು ಹೇಳುವಂತಿಲ್ಲ’ ಎಂದು ಸ್ಥಳೀಯರು ಆತಂಕ ಹೊರಹಾಕುತ್ತಾರೆ. ಸದ್ಯ ಸುರಂಗ ಒಂದರ ಮೂಲಕ ಲಕ್ಯಾ ಅಣೆಕಟ್ಟಿನ ನೀರನ್ನು ಭದ್ರಾ ನದಿಗೆ ಹರಿಬಿಡಲಾಗುತ್ತಿದೆ. ಆದರೆ ಈ ಸುರಂಗದ ನಿರ್ವಹಣೆಯನ್ನು ಭವಿಷ್ಯದಲ್ಲಿ ಯಾರು ಮಾಡುತ್ತಾರೆ ಎಂಬುದೂ ಯಕ್ಷಪ್ರಶ್ನೆಯೇ.

‘ಎರಡು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆಯು ಕುದುರೆಮುಖ ಸಂಸ್ಥೆಗೆ ಲಕ್ಯಾ ಅಣೆಕಟ್ಟಿನ ಬಗ್ಗೆ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರವಾಗಿ ಸಂಸ್ಥೆಯು ಹೂಳನ್ನು ತೆಗೆಯುವ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಪ್ರಸ್ತಾಪ ತಿರಸ್ಕರಿಸಿದ್ದರು. ಕಂದಾಯ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಇರುವ ಈ ಅಣೆಕಟ್ಟು ಮತ್ತು ಸುರಂಗವನ್ನು ಭವಿಷ್ಯದಲ್ಲಿ ಕುದುರೆಮುಖ ಸಂಸ್ಥೆಯೇ ನಿರ್ವಹಣೆ ಮಾಡಬೇಕು’ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ತನುಜ್ ಕುಮಾರ್ ಹೇಳುತ್ತಾರೆ.

‘ಕುದುರೆಮುಖ ಸಂಸ್ಥೆಯು ಕುದುರೆಮುಖದಿಂದ ಹೊರಹೋಗುವಾಗ ಲಕ್ಯಾ ಅಣೆಕಟ್ಟಿನ ಬಗ್ಗೆ ಸ್ಪಷ್ಟ ಕ್ರಮ ತೆಗೆದುಕೊಳ್ಳಬೇಕು’ ಎಂಬುದು ಪರಿಸರವಾದಿಗಳ ಆಗ್ರಹ.

ಕುದುರೆಮುಖ ಸಂಸ್ಥೆಯ ನಿರ್ದೇಶಕರಾದ ವಿದ್ಯಾನಂದ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವರು ‘ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಅದರ ನಿರ್ವಹಣೆ ಮಾಡುತ್ತಿದ್ದೇವೆ. ಅಣೆಕಟ್ಟು ಸುರಕ್ಷತಾ ಸಮಿತಿಯೂ ಆಗಾಗ್ಗೆ ಭೇಟಿ ನೀಡಿ ವರದಿ ನೀಡುತ್ತಿದೆ. ಗಣಿಗಾರಿಕೆ ಮುಚ್ಚುವ ಯೋಜನೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಅಣೆಕಟ್ಟೂ ಸೇರಿದಂತೆ ಎಲ್ಲ ಜಮೀನು ಹಸ್ತಾಂತರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಲಕ್ಯಾ ಅಣೆಕಟ್ಟಿನ ನಿರ್ವಹಣೆ ಮತ್ತು ಅದರ ಭವಿಷ್ಯದ ಹೊಣೆಗಾರಿಕೆ ಯಾರದು ಎಂಬ ಅಂಶಕ್ಕಿಂತ ಅದು ಭವಿಷ್ಯದಲ್ಲಿ ತರಬಹುದಾದ ಅಪಾಯ ತಡೆಗಟ್ಟುವುದು ಹೇಗೆ ಎಂಬುದು ಈಗ ಹೆಚ್ಚು ಪ್ರಸ್ತುತವಾಗಿದೆ. ಈ ಹಿನ್ನೆಲೆಯಲ್ಲಿ ಲಕ್ಯಾ ಅಣೆಕಟ್ಟಿನ ಕೆಳಭಾಗದ ಭದ್ರಾ ನದಿಯನ್ನೇ ನಂಬಿದವರು ಮತ್ತು ಭದ್ರಾ ಜಲಾಶಯವನ್ನು ನಂಬಿಕೊಂಡವರು ಹೆಚ್ಚು ಚಿಂತಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.