ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕೈಯಲ್ಲಿ ಹಾವು, ಚೇಳು!

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಈ ಮಕ್ಕಳು ಅಂತಿಂಥವರಲ್ಲ. ವಿಜ್ಞಾನ ಪ್ರೇಮಿಗಳು. ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಪ್ರಾಣಿ–ಪಕ್ಷಿಗಳ ಮೇಲೆ ನಿರಂತರ ಪ್ರಯೋಗ ನಡೆಸಿ ಬಾಲ ವಿಜ್ಞಾನಿಗಳು ಎನಿಸಿಕೊಂಡಿದ್ದಾರೆ. ವಿಜ್ಞಾನ ಮತ್ತು ಗಣಿತ ಪಠ್ಯ ಕ್ರಮದಲ್ಲಿನ ಅಧ್ಯಯನಗಳ ಕುರಿತು ಅನ್ವೇಷಣೆ ನಡೆಸಿ ವೈಜ್ಞಾನಿಕ ಕ್ರಾಂತಿ ಮಾಡಿದ್ದಾರೆ.

ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ವಿಜ್ಞಾನ ಕ್ಷೇತ್ರದ ಭಾಗಶಃ ಅಧ್ಯಯನವನ್ನು ಅರ್ಥಪೂರ್ಣಗೊಳಿಸಿಕೊಂಡು ಬಾಲ ವಿಜ್ಞಾನಿಗಳಂತೆ ಪಾಠ ಬೋಧನೆ, ಪ್ರಯೋಗ, ವಿಜ್ಞಾನ ಜಾತ್ರೆ, ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ನಡೆಸುತ್ತಿದ್ದಾರೆ.

ಇವರೇ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸೂಡಿ ಗ್ರಾಮದ ‘ಸರ್ಕಾರಿ ಮಾದರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆ’ಯ ವಿದ್ಯಾರ್ಥಿಗಳು. ವಿಜ್ಞಾನ ಮತ್ತು ಗಣಿತ ವಿಷಯಗಳು ಕಠಿಣವೆಂದು ಭಾವಿಸಿ ಅಸಡ್ಡೆ ಮನೋಭಾವ ಹೊಂದಿದ್ದ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಕ್ರಾಂತಿಯತ್ತ ಆಕರ್ಷಿತರನ್ನಾಗಿಸುವಲ್ಲಿ ಶಾಲೆಯ ವಿಜ್ಞಾನ ಶಿಕ್ಷಕ ಅಶೋಕ ಉಂಡಿ ಅವರು ಯಶಸ್ವಿಯಾದರು.
ಹಾವು, ಚೇಳು, ತೋಳ, ಉಡಾ, ಕಪ್ಪೆ ಮುಂತಾದ ಪ್ರಾಣಿಗಳನ್ನು ಜೀವಂತವಾಗಿ ಹಿಡಿಯುವ ಕಲೆಯನ್ನು ಶಿಕ್ಷಕ ಉಂಡಿ ಅವರಿಂದ ವಿದ್ಯಾರ್ಥಿಗಳು ಕರಗತ ಮಾಡಿಕೊಂಡಿದ್ದಾರೆ.

ಶಿಕ್ಷಕ ಅಶೋಕ ಉಂಡಿ ಅವರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು 2005ರಲ್ಲಿ ‘ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಿಜ್ಞಾನ ಸಂಘ’ ಸ್ಥಾಪಿಸಿದರು. ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಆಸಕ್ತಿ ತೋರದ ವಿದ್ಯಾರ್ಥಿಗಳಿಗೆಂದು ‘ವಿಜ್ಞಾನ ಜಾತ್ರೆ’, ‘ವಿಜ್ಞಾನ ಮಾದರಿ ತಯಾರಿಕೆ’, ‘ವಿಜ್ಞಾನ ಮೇಳ’, ‘ವಿಜ್ಞಾನ ವಸ್ತು ಪ್ರದರ್ಶನ’ಗಳನ್ನು ನಡೆಸುತ್ತಾರೆ.

ವಿಜ್ಞಾನದ ಕುರಿತು ವಿಚಾರ ಸಂಕಿರಣಗಳನ್ನು ನಿರಂತರವಾಗಿ ಇಲ್ಲಿ ನಡೆಸಲಾಗುತ್ತಿದೆ. ಪರಿಣಾಮ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗೆಗಿನ ಆಸಕ್ತಿ ವೃದ್ಧಿಸಿದೆ ಎನ್ನುತ್ತಾರೆ ವಿಜ್ಞಾನ ಸಂಘದ ಅಧ್ಯಕ್ಷ, ವಿದ್ಯಾರ್ಥಿ ಆಕಾಶ ಸೂಡಿ. 

ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ನೆಲೆಯೂರಿರುವ ಮೂಢನಂಬಿಕೆ, ದೇವರ ಹೆಸರಿನಲ್ಲಿ ನಡೆಯುವ ಅನಾಚಾರ ಗಳನ್ನು ಬೇರು ಸಹಿತ ಕಿತ್ತು ಹಾಕುವ ಉದ್ದೇಶದಿಂದ ವಿದ್ಯಾರ್ಥಿಗಳು ‘ಪವಾಡ ರಹಸ್ಯ ಬಯಲು’ ಕಾರ್ಯಕ್ರಮ ನಡೆಸುತ್ತಾರೆ. ತಾಲ್ಲೂಕಿನಾದ್ಯಂತ ನಡೆಯುವ ಜಾತ್ರೆ, ಉತ್ಸವ, ವಿಶೇಷ ಕಾರ್ಯಕ್ರಮಗಳಂದು ಆಯಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಂಘಟಿಕರು ಆಹ್ವಾನ ನೀಡಿದರೆ ಮುಕ್ತ ಮನಸಿನಿಂದ ಒಪ್ಪಿಕೊಂಡು ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಲು ಮುಂದಾಗುತ್ತಾರೆ. ಇದರಿಂದ ಜನರ ಮೂಢ ನಂಬಿಕೆ ಹೋಗಲಾಡಿಸಲು ಸಾಧ್ಯವಾಗುತ್ತಿದೆ. ವಿಜ್ಞಾನ ಮಾದರಿಗಳ ಪ್ರದರ್ಶನದ ಜತೆಗೆ ವಿಶ್ಲೇಷಣೆಯನ್ನೂ ಮಾಡುತ್ತಾರೆ.

ಪ್ರತಿಫಲ  ಮತ್ತು ಪ್ರಸರಣ, ನೈಜ ಪ್ರಾಣಿಗಳ ದೇಹಗಳ ಭಾಗಗಳು, ವಿದ್ಯುತ್ ಜನಕ, ಸೂಜಿರಂಧ್ರ, ಬಿಂಬಗ್ರಾಯಿ, ಪ್ರತಿಫಲನ, ನಿಯಮಗಳು, ಹಗಲು ರಾತ್ರಿ, ಚಂದರನ ಕಲೆಗಳು, ಕಾಂತದ ನಿಯಮಗಳು ಮುಂತಾದ ವಿಜ್ಞಾನ ಮಾದರಿಗಳು ವಿಜ್ಞಾನ ಜಾತ್ರೆಯಲ್ಲಿ ಇರುತ್ತವೆ.

ಮಕ್ಕಳ ಕೈಯಲ್ಲಿ ವಿಷಜಂತು
ಬಳವಡಕ, ಮಣ್ಣಮುಕ್ಕ, ನಾಗರಹಾವು, ಕಪ್ಪು ಮತ್ತು ಕೆಂಪು ಚೇಳುಗಳನ್ನು ಈ ಶಾಲೆಯ ವಿದ್ಯಾರ್ಥಿಗಳು ಜೀವಂತವಾಗಿ ಹಿಡಿಯುತ್ತಾರೆ. ವಿಷ ಜಂತುಗಳೆಂದು ಭಾವಿಸಿ ಈ ಪ್ರಾಣಿಗಳನ್ನು ಸಾಯಿಸುವ ಜನತೆಗೆ ತಿಳಿ ಹೇಳಿ ಅವುಗಳನ್ನು ಹಿಡಿದು ತಂದು ಶಾಲೆಯ ಪ್ರಯೋಗಾಲಯದಲ್ಲಿ ಇರಿಸಿದ್ದಾರೆ.

ಎತ್ತು, ಎಮ್ಮೆ, ಆಡುಗಳ ಮೂತ್ರ ಜನಕಾಂಗಗಳನ್ನು, ಯಕೃತ್, ಹಾವುಗಳ ಮೂಳೆ, ನರಿ, ಆಮೆಗಳ ಅಸ್ತಿಪಂಜರ, ಎತ್ತು, ಎಮ್ಮೆ, ಆಕಳುಗಳ ಮೆದುಳು, ಕಣ್ಣುಗಳನ್ನು ರಾಸಾಯನಿಕಗಳೊಂದಿಗೆ ಗಾಜಿನ ಡಬ್ಬಗಳಲ್ಲಿ ಸಂಗ್ರಹಿಸಿಡಲಾಗಿದೆ. ಪರಿಣಾಮಕಾರಿ ಕಲಿಕೆಗೆ ನೆರವಾಗಲು ವಿವಿಧ ಪ್ರಾಣಿಗಳ ಆಯ್ದ ಭಾಗಗಳನ್ನು ರಾಸಾಯನಿಕಗಳೊಂದಿಗೆ ಬೆರೆಸಿ ಸಂಗ್ರಹಿಡಲಾಗಿದೆ. ಗ್ರಾಮದಲ್ಲಿ ಯಾವುದೇ ಪ್ರಾಣಿ ಸತ್ತರೂ ವಿದ್ಯಾರ್ಥಿಗಳು ಶಾಲೆಗೆ ತಂದು ಅವುಗಳ ಅಂಗಾಂಗಗಳನ್ನು ಬೇರ್ಪಡಿಸಿ ಪ್ರಯೋಗಾಲಯಲ್ಲಿ ಇಡುತ್ತಾರೆ. ಗಣಿತಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳೂ ಪ್ರಯೋಗಾಲಯದಲ್ಲಿವೆ. ಸದ್ಯ ವಿದ್ಯಾರ್ಥಿಗಳು 2005 ರಿಂದ ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿ ಸಂಗ್ರಹಿಸಿಡಲಾದ ಅಂಗಾಂಗಗಳು ವಿಜ್ಞಾನ ಲೋಕವನ್ನೇ ಸೃಷ್ಟಿಸಿದೆ.

ವಿದ್ಯಾರ್ಥಿಗಳು ಶಿಕ್ಷಕ ಉಂಡಿ ಮಾರ್ಗದರ್ಶನದಲ್ಲಿ ನಿರ್ಮಿಸಿರುವ ವಿಜ್ಞಾನ ಪ್ರಯೋಗಾಲಯ ವೀಕ್ಷಿಸಲು ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು, ವಿವಿಧ ಪ್ರತಿಷ್ಠಾನ ಸಂಸ್ಥೆಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 600ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಹೊಂದಿರುವುದು ಈ ಶಾಲೆ  ಮಹತ್ವ ಸಾರುತ್ತದೆ.

ಪ್ರಶಸ್ತಿ, ಪುರಸ್ಕಾರ
ವಿದ್ಯಾರ್ಥಿಗಳ ಈ ಸಾಧನೆಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಈ ಪ್ರತಿಭೆಗಳ ಜೊತೆ ಕ್ರೀಡೆ, ಈಜು, ರಸ ಪ್ರಶ್ನೆ, ಚರ್ಚಾ ಕೂಟಗಳಲ್ಲಿ ಈ ವಿದ್ಯಾರ್ಥಿಗಳು ಮೈಲುಗಲ್ಲನ್ನು ಸ್ಥಾಪಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT