ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರಿನ ಕುಮಾರ ಸ್ವಾಮಿ

Last Updated 31 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಸಂಡೂರು ಸಮೀಪದ ಬೆಟ್ಟ ಪ್ರದೇಶದಲ್ಲಿರುವ ಕುಮಾರಸ್ವಾಮಿ ಹಾಗೂ ಪಾರ್ವತಿದೇವಿ ದೇವಸ್ಥಾನಗಳು ಸುಂದರ ವಾಸ್ತುಶಿಲ್ಪಕ್ಕೂ ಹೆಸರುವಾಸಿ. ಈ ದೇವಸ್ಥಾನಗಳಲ್ಲಿ ನೂರಾರು ವರ್ಷಗಳಿಂದ ಪೂಜೆ ನಡೆಯುತ್ತಿದೆ.

ಸಂಡೂರಿನ ದಕ್ಷಿಣಕ್ಕೆ ಕಾರ್ತಿಕೇಯ ಬೆಟ್ಟದಲ್ಲಿರುವ ಕುಮಾರಸ್ವಾಮಿ ದೇವಸ್ಥಾನವು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಯಿತು. ರಾಷ್ಟ್ರಕೂಟರ ಕಾಲದಲ್ಲಿ ಗದಾಧರ ಎಂಬುವರು ದೇವಸ್ಥಾನವನ್ನು ನಿರ್ಮಿಸಿ ಸ್ಕಂದನ (ಕುಮಾರಸ್ವಾಮಿ) ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರೆಂಬ ಉಲ್ಲೇಖ ಇಲ್ಲಿನ ಶಾಸನವೊಂದರಲ್ಲಿದೆ. ಆನಂತರ ಕಲ್ಯಾಣರ ಚಾಲುಕ್ಯರ ಕಾಲದಲ್ಲಿ ಈ ದೇವಸ್ಥಾನವನ್ನು ವಿಸ್ತೃತವಾಗಿ ನಿರ್ಮಿಸಿದ ದಾಖಲೆಗಳಿವೆ.

ಕುಮಾರಸ್ವಾಮಿ ದೇವಸ್ಥಾನಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಶಿವನ ಮಗನಾದ ಸ್ಕಂದನು ಪ್ರಾಯಕ್ಕೆ ಬಂದಾಗ ತಾಯಿ ಪಾರ್ವತಿ ದೇವಿ ಮಗನ ಮದುವೆಗೆ ತಯಾರಿ ನಡೆಸಿದಳು. ಮಗನಿಗೆ ಯೋಗ್ಯ ಕನ್ಯೆಯನ್ನೂ ಹುಡುಕಿ ಸ್ಕಂದ ಕುಮಾರನಿಗೂ ತಿಳಿಸಿದಳು. ಕನ್ಯೆ ಹೇಗಿದ್ದಾಳೆ ಎಂಬ ಮಗನ ಪ್ರಶ್ನೆಗೆ ತಾಯಿ ಪಾರ್ವತಿ ಅವಳು ತನ್ನಂತೆಯೇ ರೂಪವತಿ ಎಂದು ಉತ್ತರಿಸಿದಳು. ನಿನ್ನ ರೂಪದವಳು ಅಂದ ಮೇಲೆ ಅವಳು ನನಗೆ ತಾಯಿಯ ಸಮಾನ ಎಂದು ಉತ್ತರಿಸಿದ ಸ್ಕಂದ ಮದುವೆ ನಿರಾಕರಿಸಿದ. ಇದರಿಂದ ಅಸಮಾಧಾನಗೊಂಡ ಪಾರ್ವತಿ ನೀನು ನನ್ನ ಎದೆಯ ಹಾಲು ಕುಡಿದು ಬೆಳೆದವನು. ನನ್ನ ಮಾತನ್ನು ಮೀರಿದರೆ ನಿನಗೆ ಆಪತ್ತು ಬಂದೀತು ಎಚ್ಚರಿಸಿದಳು. ಈ ಮಾತಿನಿಂದ ಹೆದರಿದ ಸ್ಕಂದ ಕುಮಾರ ತಾನು ಕುಡಿದ ತಾಯಿಯ ಎದೆಯ ಹಾಲನ್ನೆಲ್ಲ ವಾಂತಿ ಮಾಡಿದ. ಹಾಲಿನ ಜತೆಯಲ್ಲಿ ರಕ್ತವೂ ಬಂತು. ಹಾಗೆ ಹೊರಬಿದ್ದ ರಕ್ತ ಬೆಟ್ಟಗಳಷ್ಟು ಬಿದ್ದಿತು ಎಂಬ ಐತಿಹ್ಯವಿದೆ. ರಕ್ತ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ರೂಪ ಪಡೆಯಿತು. ಇಂದಿಗೂ ಸಂಡೂರು ಸುತ್ತಲಿನ ಬೆಟ್ಟಗಳಲ್ಲಿ ಅಲ್ಲಲ್ಲಿ ವಿಭೂತಿಯಂತಹ ಬಿಳಿಯ ಪುಡಿಯೂ ಸಿಗುತ್ತದೆ. ಸಂಡೂರು ಬಳಿ  `ವಿಭೂತಿ ಗುಡ್ಡ~ ಎಂಬ ಹೆಸರಿನ ಪ್ರದೇಶವೂ ಇದೆ. ಕಾರ್ತೀಕೇಯ ಬೆಟ್ಟದಲ್ಲಿ ಅಸಂಖ್ಯಾತ ನವಿಲುಗಳಿವೆ. ನವಿಲು ಕುಮಾರಸ್ವಾಮಿಯ ವಾಹನ.

ಕುಮಾರಸ್ವಾಮಿ ದೇವಸ್ಥಾನದ ಮುಖ ಮಂಟಪ, ಅಂತರಾಳ, ವಿಶಾಲ ಗರ್ಭಗೃಹದಿಂದ ಕೂಡಿದೆ. ಮುಖ ಮಂಟಪದ ಇಕ್ಕೆಲಗಳಲ್ಲಿ ಕಂಬಗಳ ಮೇಲೆ ದ್ವಾರಪಾಲಕರ ವಿಗ್ರಹಗಳಿವೆ. ಸಭಾ ಮಂಟಪದ ಮಧ್ಯದ ನಾಲ್ಕೂ ಕಂಬಗಳ ಕೆಳ ಮತ್ತು ಮೇಲ್ಭಾಗ ಚೌಕಾಕಾರ, ಮಧ್ಯ ವೃತ್ತಾಕಾರದಲ್ಲಿದ್ದು (ಅದರಲ್ಲಿ ಚೈತ್ಯಾಕಾರದ ಕೆತ್ತನೆಗಳಿವೆ) ಫಲಕ ಭೋಧಿಗೆಗಳನ್ನು ಹೊಂದಿವೆ.

ಗರ್ಭಗೃಹದ ಪ್ರವೇಶ ದ್ವಾರವು ಹೂವಿನ ಎಸಳುಗಳು, ಮಯೂರ (ನವಿಲು) ಸಾಲು ಮುಂತಾದ ಅಲಂಕಾರಗಳಿಂದ ಕೂಡಿದೆ. ಗರ್ಭಗೃಹದ ಮಧ್ಯದ ಕಂಬಗಳು ಅಂತರಾಳದ ಕಂಬಗಳಂತಿವೆ. ಅವುಗಳ ಮಧ್ಯದಲ್ಲಿ ಎತ್ತರದ ಪೀಠದ ಮೇಲೆ ಕುಮಾರಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪಾರ್ವತಿದೇವಿಯ ದೇವಸ್ಥಾನ ಕೂಡ ವಿಶೇಷ ಕೆತ್ತನೆಯಿಂದ ಕೂಡಿದೆ. ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ವಿಜಯನಗರ ಅರಸರ ವಾಸ್ತು ಶೈಲಿಯನ್ನು ಇಲ್ಲಿ ಕಾಣಬಹುದು.

ಕುಮಾರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಅಗಸ್ತ್ಯ ಮುನಿಗಳು  ನಿರ್ಮಿಸಿದರೆಂದು ಹೇಳಲಾದ ಪುಷ್ಕರಣಿ ಇದೆ. ಈ ಪುಷ್ಕರಣಿಯ ನೀರಿನಿಂದ ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ದೇವಸ್ಥಾನದಿಂದ ಎರಡು ಕಿ.ಮೀ.ದೂರದಲ್ಲಿ ನವಿಲು ವಾಹನವೇರಿದ ಕುಮಾರಸ್ವಾಮಿಯ ಸುಂದರ ವಿಗ್ರಹವಿದೆ.
 
ದೇವಸ್ಥಾನದ ಪೂರ್ವ ಭಾಗದಲ್ಲಿ ಒಂದು ಪುಷ್ಕರಣಿ ಇದೆ. ದೇವಸ್ಥಾನಕ್ಕೆ ಹೋಗುವ ಹಾದಿಯಲ್ಲಿ `ಹರಿಶಂಕರ~ ಹೆಸರಿನ ತೀರ್ಥವಿದೆ. ಇದು ಚಿಲುಮೆ. ಅಲ್ಲಿ ಸದಾ ನೀರು ಲಭ್ಯವಿದೆ.

ವರ್ಷವಿಡೀ ದೇವಸ್ಥಾನಕ್ಕೆ ಭಕ್ತರು ಬರುತ್ತಾರೆ. ಮೂರನೇ ಶ್ರಾವಣ ಸೋಮವಾರದಂದು ವಿಶೇಷ ಪೂಜೆ ನಡೆಯುತ್ತದೆ. ಅಧಿಕ ಮಾಸದ ಕಾರ್ತಿ ಪೂರ್ಣಿಮೆಯಂದು (5ವರ್ಷದಲ್ಲಿ 2ಬಾರಿ) ಜರುಗುವ ಜಾತ್ರೆಗೆ ಹೊರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಸಂಡೂರು ರಾಜಮನೆತನದವರು ಈ ದೇವಸ್ಥಾನದ ಟ್ರಸ್ಟಿನ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಸಂಡೂರಿನಿಂದ ಕುಮಾರಸ್ವಾಮಿ ದೇವಸ್ಥಾನಕ್ಕೆ ಉತ್ತಮ ರಸ್ತೆ ಇದೆ. ಸಂಡೂರಿನಿಂದ ಬಸ್ ಸೌಕರ್ಯವಿದೆ. ತೋರಣಗಲ್ ಸಮೀಪದ ರೈಲು ನಿಲ್ದಾಣ. ದೇವಸ್ಥಾನ ಅರಣ್ಯ ಪ್ರದೇಶದಲ್ಲಿದೆ. ಅಲ್ಲಿ ಊಟ, ಉಪಹಾರದ ವ್ಯವಸ್ಥೆ ಇಲ್ಲ. ಭಕ್ತರು ಸಂಡೂರಿನಲ್ಲಿ ಉಳಿಯಬಹುದು. ಅಲ್ಲಿ ಹೊಟೇಲ್‌ಗಳಿವೆ. ವಿವರಗಳಿಗೆ  08395- 211750, 215525 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT