ಭಾನುವಾರ, ಸೆಪ್ಟೆಂಬರ್ 19, 2021
23 °C
ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆಯ ಕಣ್ಣಾಮುಚ್ಚಾಲೆ

ಕೊಳ್ಳೇಗಾಲ: ಕೆರೆ ಕಟ್ಟೆ ಬರಿದು: ನೀರು, ಮೇವಿನ ಕೊರತೆ ಆತಂಕ

ಅವಿನ್‌ ಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ತಾಲ್ಲೂಕಿನಾದ್ಯಂತ ಮಳೆ ಕಣ್ಣಾಮುಚ್ಚಾಲೆಯಾಡುತ್ತಿದ್ದು, ಬೇಸಿಗೆಯ ರಣಬಿಸಿಲಿಗೆ ಕೆರೆ-ಕಟ್ಟೆಗಳು ಬರಿದಾಗಿವೆ. ಕೃಷಿ ಜಮೀನುಗಳು ಕೂಡ ಬರಡಾಗಲು ಆರಂಭಿಸಿದ್ದು, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆ ಕಾಡುವ ಆತಂಕ ಎದುರಾಗಿದೆ. 

ಎರಡು ದಿನಗಳಿಂದ ಸಂಜೆ ಹೊತ್ತು ಮಳೆಯಾಗುತ್ತಿರುವುದು ರೈತರಲ್ಲಿ ಆಶಾಭಾವ ಮೂಡಿಸಿದೆ. ಇನ್ನೂ ಕೆಲವು ದಿನಗಳ ಕಾಲ ಈ ರೀತಿ ಮಳೆಯಾದರೆ ತೊಂದರೆ ಇಲ್ಲ. ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಾರೆ ಹಿರಿಯರು.

ಬಿರು ಬೇಸಿಗೆಯ ನಡುವೆಯೇ ತಾಲ್ಲೂಕಿನ ಅಲ್ಲಲ್ಲಿ ಮಳೆ ಬಿದ್ದಿದ್ದರೂ ನಗರದ ಸುತ್ತಮುತ್ತ ಒಂದು ತಿಂಗಳಿನಿಂದ  ಸರಿಯಾಗಿ ಮಳೆ ಬಾರದ ಕಾರಣ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಸುತ್ತಮುತ್ತಲಿನ ಕೆರೆಗಳು ಬರಿದಾಗಿವೆ.

ಸಾವಿರಾರು ಎಕರೆ ಜಮೀನುಗಳಿಗೆ ನೀರುಣಿಸುತ್ತಿದ್ದ ಪಾಪನಕೆರೆ, ಚಿಕ್ಕರಂಗನಾಥ ಕೆರೆ, ದೊಡ್ಡರಂಗನಾಥ ಕೆರೆ, ಸರಗೂರು ಕೆರೆ, ಕೊಂಗಳಗೆರೆ, ತಟ್ಟೆ ಕೆರೆ, ಹಂಪಾಪುರ ಕೆರೆ, ಮುಳ್ಳೂರು ಕೆರೆ, ತೇರಂಬಳ್ಳಿ ಕೆರೆ, ಕುಣಗಳ್ಳಿ ಕೆರೆ, ಕುಂತೂರು ಕೆರೆ, ಕುಣಗಳ್ಳಿ ಕೆರೆಗಳಲ್ಲಿ ನೀರು ತಳ ಸೇರಿವೆ.

ಮಳೆಯಾಶ್ರಿತ ಪ್ರದೇಶದ ರೈತರು ಕೃಷಿ ಚಟುವಟಿಕೆಗಾಗಿ ಭೂಮಿ ಹದಗೊಳಿಸಲು ಮಳೆಯನ್ನೇ ಎದುರು ನೋಡುತ್ತಿದ್ದಾರೆ. ಈಗ ಬಿದ್ದಿರುವ ಮಳೆ ಉಳುಮೆ ಮಾಡಲು ಸಾಲದು ಎಂಬುದು ಅವರ ಅಭಿಪ್ರಾಯ.

ಕೃಷಿ ಚಟುವಟಿಕೆ ಕಡಿಮೆ: ಮುಂಗಾರು ಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಬರದೇ ಇರುವುದರಿಂದ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಕಡಿಮೆಯಾಗಿವೆ.

ಕಳೆದ ಬಾರಿ ಉತ್ತಮ ಮಳೆಯಾಗಿತ್ತು. ಹಾಗಾಗಿ ಏಪ್ರಿಲ್‌, ಮೇ ತಿಂಗಳುಗಳಲ್ಲಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆದಿತ್ತು. 

ದನಕರುಗಳಿಗೆ ನೀರಿಲ್ಲ: ಕೆರೆ, ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗುತ್ತಿದೆ. ಮೇವಿನ ಸಮಸ್ಯೆಯು ತಲೆದೋರಲು ಆರಂಭಿಸಿದೆ.

ಸದ್ಯ ಜನರು ಮನೆಯ ಕೊಟ್ಟಿಗೆಗಳಲ್ಲಿ ಜಾನುವಾರುಗಳಿಗೆ ಮೇವು ಮತ್ತು ನೀರು ಒದಗಿಸುತ್ತಿದ್ದಾರೆ. ತಾಲ್ಲೂಕಿನ ಪ್ರಕಾಶ್‍ಪಾಳ್ಯ ಗ್ರಾಮದಲ್ಲಿ ನೀರಿನ ಕೊರತೆಯಿಂದಾಗಿ 2 ಹಸುಗಳು ಮೃತಪಟ್ಟಿದ್ದವು ಎಂದು ಹೇಳುತ್ತಾರೆ ರೈತ ಚಿಕ್ಕಣ್ಣ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು