ಕೇಳುತಿದೆ ಅರ‘ಕೆರೆ’ಒಡಲ ಆರ್ತನಾದ

7

ಕೇಳುತಿದೆ ಅರ‘ಕೆರೆ’ಒಡಲ ಆರ್ತನಾದ

Published:
Updated:
Deccan Herald

ಬೆಂಗಳೂರು: ಒಂದು ಕಾಲದಲ್ಲಿ ಮೈದುಂಬಿಕೊಂಡು ಸಮೃದ್ಧವಾಗಿದ್ದ ಐತಿಹಾಸಿಕ ‘ಅರಕೆರೆ ಕೆರೆ’ ಕಸ ಹಾಗೂ ಒತ್ತುವರಿಯಿಂದಾಗಿ ಅಳವಿನಂಚಿಗೆ ಬಂದು ನಿಂತಿದೆ. ಅದು ತನ್ನೊಳಗಿನ ಸೆಲೆಯನ್ನು ಬತ್ತಿಸಿಕೊಂಡು ಆರ್ತನಾದದ ಮೂಲಕ ರಕ್ಷಣೆಗೆ ಮೊರೆ ಇಡುತ್ತಿದೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರುಘಟ್ಟ ಮುಖ್ಯ ರಸ್ತೆಯ ಹತ್ತಿರ ಮೈಚಾಚಿಕೊಂಡಿರುವ ಈ ಕೆರೆಯ ಕಣ್ಣಿನಲ್ಲಿ ರಾಶಿ–ರಾಶಿ ಕಸ ಬಿದ್ದಿದೆ. ಅಲ್ಲದೆ ಒಡಲಾಳದಲ್ಲಿ ತುಂಬಿದ ಹೂಳು ಹುಣ್ಣಿನಂತೆ ಬಾಧಿಸುತ್ತಿದೆ.

ಕೆರೆಯಂಗಳದ ಬಹುತೇಕ ಭಾಗವನ್ನು ಕಳೆ ಗಿಡಗಳು ಹಾಗೂ ಪಾಚಿ ಆವರಿಸಿಕೊಂಡು ಬಿಟ್ಟಿದೆ. ಜನರು ಕೋಳಿಯಂಗಡಿ ತ್ಯಾಜ್ಯವನ್ನು ಚೀಲದಲ್ಲಿ ತುಂಬಿಕೊಂಡು ಬಂದು ಕೆರೆಯ ಉದ್ದಕ್ಕೂ ಸುರಿಯುತ್ತಾರೆ. ಸತ್ತ ಪ್ರಾಣಿಗಳ ಕಳೆಬರಹವನ್ನು ಸಹ ಎಸೆಯಲಾಗುತ್ತಿದೆ. ಜೊತೆಗೆ ಸುತ್ತಲಿನ 110 ಗ್ರಾಮಗಳ ಒಳಚರಂಡಿ ನೀರು ಸಹ ಸೇರುತ್ತಿರುವುದರಿಂದ ಕೆರೆ ದುರ್ವಾಸನೆ ಬೀರುತ್ತಿದೆ.

ಕೆರೆಯ ಪಕ್ಕದಲ್ಲಿ ಗಣೇಶ ವಿಸರ್ಜನೆಗಾಗಿ ತೊಟ್ಟಿ ನಿರ್ಮಿಸಲಾಗಿದೆ. ಪ್ರತಿವರ್ಷ ಅಲ್ಲಿ ವಿಸರ್ಜಿಸಲಾದ ಗಣೇಶ ಮೂರ್ತಿಗಳನ್ನು ಮೇಲೆ ತಂದು ಒಡೆದು ಹಾಕಿ ಅದರ ಮಣ್ಣನ್ನು ಕೆರೆಯ ಒಡಲಿಗೆ ಸುರಿಯಲಾಗುತ್ತದೆ. ಜೊತೆಗೆ ಸುಮಾರು ದಿನದಿಂದ ಕೆರೆಯನ್ನು ಸ್ವಚ್ಛ ಮಾಡದ್ದರಿಂದ ಹೂಳು ತುಂಬಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕೆರೆಗೆ ಚರಂಡಿ ನೀರನ್ನು ಬಿಡದಂತೆ ಸೂಚನೆ ನೀಡಿತ್ತು. ಆದರೂ ಅದನ್ನು ತಡೆದಿಲ್ಲ ಎನ್ನುತ್ತಾರೆ ಸ್ಥಳೀಯರು. 

ಬಯಲು ಶೌಚಾಲಯವಾದ ಕೆರೆ: ನೀರು ಕಡಿಮೆ ಇರುವುದರಿಂದ ಸುತ್ತಮುತ್ತಲಿನ ನಿವಾಸಿಗಳು ಕೆರೆ ಏರಿ ಹಾಗೂ ಅದರ ಪಾತ್ರದಲ್ಲಿ ಬಹಿರ್ದೆಸೆ ಮಾಡುತ್ತಾರೆ. ಸಾಯಿ ಬಾಬಾ ದೇವಸ್ಥಾನದ ರಸ್ತೆಯಲ್ಲಿ ಚಲಿಸುವ ಸವಾರರು ವಾಹನಗಳನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರ ಪಕ್ಕದಲ್ಲಿಯೇ ಸರ್ಕಾರಿ ಶಾಲೆಯೂ ಇದೆ. 

ಖಾಸಗಿ ವ್ಯಕ್ತಿಗಳು ಕೆರೆಯನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಹಿಂದೆ ಬಿಡಿಎ ಅಧಿಕಾರಿಗಳು ಒತ್ತುವರಿ ತೆರವಿಗೆ ಮುಂದಾಗಿ 2 ಗುಂಟೆ ತೆರವುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಖಾಸಗಿ ವ್ಯಕ್ತಿಗಳು ಕೋರ್ಟ್‌ ಮೆಟ್ಟಿಲೇರಿ ಅದಕ್ಕೆ ತಡೆ ತಂದಿದ್ದಾರೆ.

ಕಾಮಗಾರಿ ಸ್ಥಗಿತ: ₹7 ಕೋಟಿಯಲ್ಲಿ ಕೆರೆ ಅಭಿವೃದ್ಧಿಗೆ ಗುತ್ತಿಗೆ ನೀಡಲಾಗಿದೆ. ಅದರಲ್ಲಿ ಈಗಾಗಲೇ ₹3.50 ಕೋಟಿ ಖರ್ಚು ಮಾಡಲಾಗಿದ್ದು, ಹೈಕೋರ್ಟ್‌ನಿಂದ ತಡೆ ಇರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎನ್ನುತ್ತಾರೆ ಬಿಡಿಎ ಅಧಿಕಾರಿಗಳು.

***

ದುರ್ವಾಸನೆ

‘ಜನ ತ್ಯಾಜ್ಯವನ್ನು ಚೀಲದಲ್ಲಿ ತುಂಬಿಕೊಂಡು ಬಂದು ಕೆರೆಯ ಒಳಗೆ ಎಸೆದು ಹೋಗುತ್ತಾರೆ. ಆದ್ದರಿಂದ ಕೆರೆ ದುರ್ನಾತ ಬೀರುತ್ತದೆ. ಮಳೆ
ಗಾಲದಲ್ಲಿ ದುರ್ವಾಸನೆಯಿಂದ ಉಸಿರಾಡುವುದೂ ಕಷ್ಟ. ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗುತ್ತದೆ. ಆದಷ್ಟು ಬೇಗ ಕೆರೆಯನ್ನು ಅಭಿವೃದ್ಧಿಪಡಿಸಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸತೀಶ್‌.

 
‘ಅಭಿವೃದ್ಧಿಯಾಗಲಿ’

‘ದುರ್ನಾತದಿಂದಾಗಿ ಕೆರೆಯ ಪಕ್ಕ ಓಡಾಡಂತಹ ಸ್ಥಿತಿ ನಿರ್ಮಾಣವಾಗಿದೆ. ಕೆರೆಗೆ ಕಸ ಹಾಕುವುದನ್ನು ತಡೆದು, ಎಸ್‌ಟಿಪಿ ಅಳವಡಿಸಿ ಇತರೆ ಕೆರೆಗಳಂತೆ ಈ ಕೆರೆಯನ್ನು ಸಹ ಅಭಿವೃದ್ಧಿಪಡಿಸಿಬೇಕಿದೆ’ ಎನ್ನುತ್ತಾರೆ ಇಲ್ಲಿಯ ನಿವಾಸಿ ರಾಹುಲ್‌.

‌***

ಖಾಸಗಿ ವ್ಯಕ್ತಿಯೊಬ್ಬರು ಹೈಕೋರ್ಟ್‌ನಿಂದ ತಡೆ ತಂದಿದ್ದಾರೆ. ಆದ್ದರಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ತಡೆಯಾಜ್ಞೆಯನ್ನು ತೆರವುಗೊಳಿಸಿದ ತಕ್ಷಣ ಕೆರೆಯ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು.

–ಸುಮತಿ ಎಂ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿಡಿಎ

***

ಅಂಕಿ–ಅಂಶಗಳು

37.21 ಎಕರೆ

ಒಟ್ಟು ಕೆರೆಯ ವಿಸ್ತೀರ್ಣ

3 ಎಕರೆ

ಕೊಳಗೇರಿ ನಿರ್ಮಾಣ

1.4 ಎಕರೆ

ಕೈಗಾರಿಕೆ ಶೆಡ್‌ ನಿರ್ಮಾಣ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !