ಭಾನುವಾರ, ಮೇ 31, 2020
27 °C
ತನ್ನ ದೇಶದಲ್ಲಿ ತಾನೇ ಅನ್ಯನಂತೆ ಬದುಕುವುದಾದರೆ, ಮಾನವ ಸಂಬಂಧಗಳಿಗೆ ಬೆಲೆ ಎಲ್ಲಿ?

ಹಳ್ಳಿಗೆ ಹಿಂದಿರುಗಲು ದಾರಿ ತೋರಿ

ಮೊಗಳ್ಳಿ ಗಣೇಶ್ Updated:

ಅಕ್ಷರ ಗಾತ್ರ : | |

ಹಳ್ಳಿಗಳ ಭಾರತವೀಗ ನಗರಗಳ ಭಾರತವಾಗುತ್ತಿದೆ. ನಗರಗಳ ಮಾಯಾಜಾಲದ ಹೆದ್ದಾರಿಗಳು ಯಾವ ಹಳ್ಳಿಯನ್ನೂ, ಕಾಡನ್ನೂ ಬಿಡದಂತೆ ಆವರಿಸಿಕೊಳ್ಳುತ್ತಿವೆ. ಅಭಿವೃದ್ಧಿಯ ಅಬ್ಬರದ ಅಲೆಗಳಲ್ಲಿ ಹಳ್ಳಿಗಳು ತೇಲುತ್ತಿವೆಯೋ ಮುಳುಗುತ್ತಿವೆಯೋ ಎಂಬುದೇ ಅಸ್ಪಷ್ಟವಾಗಿದೆ. ಉತ್ಪಾದನಾ ವಿಧಾನಗಳು ಬದಲಾಗಿ ಹಳ್ಳಿಯ ಯುವಜನಾಂಗ ನಗರಗಳತ್ತ ಓಡುತ್ತಿದೆ. ನಗರಗಳು ಸಾವಿರಾರು ರೀತಿಯ ಹೊಸ ಕೆಲಸಗಳನ್ನು ಸೃಷ್ಟಿಸಿವೆ. ಅವೆಲ್ಲ ಕಾಯಂ ವೃತ್ತಿಗಳಲ್ಲ. ನಿತ್ಯ ತರಾವರಿ ಸೇವೆ ಮಾಡುವ ಅಂತಹ ಚಾಕರಿಗಳಿಗೆ ಊರೂರುಗಳೇ ಬೇಕು. ಹಳ್ಳಿಗಳು ನಗರಗಳ ಜೀತಕ್ಕೆ ಈಡಾದಂತಾದರೆ, ಈ ಬಗೆಯ ಗುಲಾಮಗಿರಿಯನ್ನು ಹೇಗೆಂದು ವಿವರಿಸುವುದು? ತನ್ನ ದೇಶದಲ್ಲಿ ತಾನೇ ಅನ್ಯನಾದಂತೆ, ರಕ್ಷಣೆ ಇಲ್ಲದವನಂತೆ ಬದುಕುವುದಾದರೆ, ಮಾನವ ಸಂಬಂಧಗಳಿಗೆ ಬೆಲೆ ಎಲ್ಲಿ?

ನಗರೋದ್ಯಮವೇ ಬೃಹತ್ ಬಂಡವಾಳಶಾಹಿ ವ್ಯವಸ್ಥೆಯಾಗಿದೆ. ರಾಷ್ಟ್ರ ನಿರ್ಮಾಣ ಎಂದರೆ ಹೈಟೆಕ್ ಹಾಗೂ ಸ್ಮಾರ್ಟ್ ಸಿಟಿಗಳ ನಿರ್ಮಾಣ ಎಂದಾಗಿದೆ. ಹಳ್ಳಿಗಳ ಮಾನವ ಸಂಪತ್ತು ಜುಜುಬಿ ಬೆಲೆಗೆ ಹರಾಜಾಗುವಾಗ ಜಂಬದ ಅಭಿವೃದ್ಧಿ ಸೂಚ್ಯಂಕಕ್ಕೆ ಯಾವ ಘನತೆಯೂ ಇರುವುದಿಲ್ಲ. ಹಳ್ಳಿಗಳಿಗೆ ಹಣದ ಅಗತ್ಯವೇ ಒಂದು ಕಾಲಕ್ಕೆ ಇರಲಿಲ್ಲ. ಹಣ ಇಲ್ಲದಿದ್ದಾಗಲೇ ಅವು ಹೆಚ್ಚು ಸುಖವಾಗಿದ್ದವು. ವಿಪರೀತ ಹಣದ ಮೋಹವನ್ನು ಹಳ್ಳಿಗಳಿಗೆ ಬಿತ್ತಿದ್ದು ನಗರಗಳೊ, ಅಭಿವೃದ್ಧಿ ಹೆಸರಿನ ಲೂಟಿ ಯೋಜನೆಗಳೊ, ಸರ್ಕಾರಗಳೊ... ಯಾರು ಇದಕ್ಕೆ ಹೊಣೆ? ಇವತ್ತು ಹಳ್ಳಿಗಳ ಕೇರಿ ಕೇರಿಗೂ ಲೋಡುಗಟ್ಟಲೆ ಹೊಸ ನೋಟುಗಳನ್ನು ಚೆಲ್ಲಿದರೂ ಸಾಕಾಗುತ್ತಿಲ್ಲ. ಹಣದ ಬರದಿಂದ ಹಳ್ಳಿಗಳು ಎಲ್ಲವನ್ನೂ ಮಾರಿಕೊಳ್ಳುವ ಸ್ಥಿತಿಗೆ ತಲುಪಿವೆ. ಹಣ, ಹಳ್ಳಿಗಳಿಗೆ ತಮ್ಮನ್ನು ತಾವೇ ಮಾರಿಕೊಳ್ಳುವುದನ್ನು ಕಲಿಸಿ, ಪಡೆದುಕೊಳ್ಳುವ ಹಕ್ಕನ್ನೇ ಮರೆಸಿಬಿಟ್ಟಿತು.

ಜಗತ್ತಿನ ಯಾವ ದೇಶದಲ್ಲೂ ಇರದಷ್ಟು ವೈವಿಧ್ಯ ಉತ್ಪಾದನಾ ಕ್ರಮಗಳು ನಮ್ಮ ದೇಶದ ಹಳ್ಳಿಗಳ ಕೈಗಳಲ್ಲಿದ್ದವು. ಅವನ್ನೆಲ್ಲ ನಿರುಪ‍ಯುಕ್ತ ಎಂದು ಕೈಕಟ್ಟಿ ಹಾಕಿದ್ದು ನಮ್ಮವರೇ. ಹಳ್ಳಿಗಳ ಮಾನವ ಸಂಪತ್ತನ್ನು ಬಹಳ ಕೀಳಾಗಿ ಬಳಸುವ ರೂಢಿ ವ್ಯವಸ್ಥೆಗಳಿಗೆ ಬಂದು ಬಿಟ್ಟಿದೆ. ಸ್ವಾತಂತ್ರ್ಯಬಂದು ಇಷ್ಟು ವರ್ಷಗಳಾಗಿದ್ದರೂ ನಮ್ಮ ಹಳ್ಳಿಗಳಿಗೆ ಪಕ್ವ ಸ್ವಾತಂತ್ರ್ಯವೇ ಬಂದಿಲ್ಲ. ಆಯಾ ಊರು ಕೇರಿಗಳ
ಅಳತೆಗಳಿಗೆ ಹೊಂದುವಂತೆ ಏನೋ ಒಂದು ಮತದಾನದ ಸಂಗತಿ ಬಂದಿದೆ. ಒಂದು ಕಾಲಕ್ಕೆ ಗುಲಾಮಗಿರಿಯಿತ್ತು. ಈಗದು ಆಧುನೀಕರಣಗೊಂಡಿದೆ. ದೇಶಿ– ವಿದೇಶಿ ಕಂಪನಿಗಳು ಹಳ್ಳಿಗಳ ಚಾವಡಿಗೆ ಬಂದು ಕೂತು ವ್ಯವಹಾರ ಕುದುರಿಸುತ್ತಿವೆ. ನಗರಗಳ ಭಾರತವೀಗ ಬಲಿಷ್ಠವಾಗಿದೆ. ಉದ್ಯಮಿಗಳು, ರಾಜಕಾರಣಿಗಳು ಸರ್ಕಾರಗಳ ಯಜಮಾನರಾಗಿದ್ದಾರೆ. ಹಳ್ಳಿಗಳನ್ನೇ ಇಡಿಯಾಗಿ ಖರೀದಿಸಬಲ್ಲ ಕಂಪನಿಗಳು ತಲೆ ಎತ್ತಿವೆ.

ಶೋಷಣೆಯನ್ನು ಈಗ ‘ಶೋಷಣೆ’ ಎಂದೆನ್ನುವಂತಿಲ್ಲ, ಅದು ಒಪ್ಪಿತ ಜೀವನ ಕ್ರಮವಾಗಿದೆ. ಹಳ್ಳಿಗಳಿಗೆ ಬದಲಾವಣೆ ಬೇಕಿತ್ತು. ಸ್ವಾತಂತ್ರ್ಯ ಬಂದಿತ್ತು. ಹಳ್ಳಿಗಳು ಎಲ್ಲದಕ್ಕೂ ಬಾಗಿಲು ತೆಗೆದವು. ಈಗಂತೂ ಯಾರು ಬೇಕಾದರೂ ಸಲೀಸಾಗಿ ಹಳ್ಳಿಗೆ ನುಗ್ಗಿ ಹೆದರಿಸಬಹುದು, ಬಂಧಿಸಬಹುದು. ದಲ್ಲಾಳಿಗಳು ರೈತರನ್ನು ಹೇಗೆ ಬೇಕಾದರೂ ಸುಲಿಯಬಹುದು. ಅವರಿಗೆ ತಡೆಯೇ ಇಲ್ಲ. ಎಲ್ಲರಿಗೂ ತರಾವರಿ ಸಾಲ ನೀಡುವ ಬ್ಯಾಂಕುಗಳು ರೈತರು ಇನ್ನಷ್ಟು ಸಾಲಗಾರರಾಗಲಿ ಎಂದು ಕಾಯುತ್ತಿರುತ್ತವೆ. ಬೆಲೆ ಕುಸಿತ ಸೃಷ್ಟಿಸಿ, ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದಂತೆ ಮಾಡಿ ಸಾವಿನ ದವಡೆಗೆ ತಳ್ಳುವ ವ್ಯವಸ್ಥೆಯ ಮೇಲೆ ಸರ್ಕಾರಗಳಿಗೆ ನಿಯಂತ್ರಣವೇ ಇಲ್ಲ. ಇಂಥಲ್ಲಿ ಈ ಹಳೆಯ ಚಾಕರಿಯೇ ಬೇಡ ಎಂದು ನಗರಗಳಿಗೆ ಹೋಗಿ ಬಚಾವಾದೆವೆಂದು ಕೆಳಜಾತಿಗಳು ಆಕರ್ಷಕ ಜೀತಗಾರಿಕೆಯ ಬಲೆಗಳಿಗೆ ಸಿಲುಕುವವು. ಆಧುನಿಕೋತ್ತರ ಕಾಲದ ಜಾಗತೀಕರಣ ಬಾಹ್ಯ ಬದಲಾವಣೆ ತಂದಿದೆ ನಿಜ; ಅದರಿಂದ ಏನೋ ಆಗಿದೆ ಎಂಬ ಭ್ರಮೆಯೂ ಇದೆ. ಹಳ್ಳಿಗಳ ಮೇಲಿನ ಜಾಗತೀಕರಣದ ದಾಳಿ ಇತ್ತೀಚಿನದು. ನಮ್ಮ ವೈಫಲ್ಯಗಳನ್ನೆಲ್ಲ ಜಾಗತೀಕರಣದ ಮೇಲೆ ಹಾಕಿ ಹಳ್ಳಿಗಳ ನಾಶದ ಬಗ್ಗೆ ಸಾರಾಸಗಟಾಗಿ ಹೇಳಬಾರದು. ಇವತ್ತಿಗೂ ನಮ್ಮವರೇ ಹಳ್ಳಿಗಳನ್ನು ಜಾಗತೀಕರಣದ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ. ಹಳ್ಳಿಗಳ ಸಾಮಾಜಿಕ ರಚನೆ ಸಡಿಲವಾಗಿದೆ, ದುರ್ಬಲವಾಗಿದೆ. ಹಾಗೆಯೇ ಸಾಂಸ್ಕೃತಿಕ ಪ್ರತಿರೋಧ ಶಕ್ತಿಯನ್ನೂ ಕಳೆದುಕೊಳ್ಳುತ್ತಿವೆ.

ಇವತ್ತಿನ ಹಳ್ಳಿಗಳಿಗೆ ಆಯ್ಕೆಗಳೇ ಇಲ್ಲ. ಸರ್ಕಾರಗಳು ಹಳ್ಳಿಗಳಿಗೆ ಸಹಾಯ ಮಾಡುತ್ತಿವೆ. ಹಲವಾರು ಭಾಗ್ಯಗಳನ್ನು ಎಲ್ಲ ಸರ್ಕಾರಗಳು ನೀಡಿವೆ. ಈ ಭಾಗ್ಯಗಳಿಂದ ಹಳ್ಳಿಗಳು ಸುಭದ್ರವಾಗಲಾರವು. ಹಳ್ಳಿಗಳ ಇಚ್ಛಾಶಕ್ತಿಯನ್ನು ದುರ್ಬಲಗೊಳಿಸಿ ಹಳ್ಳಿಗಳನ್ನು ನಾವೇ ಸಾಕುತ್ತೇವೆ ಎಂದು ಸರ್ಕಾರಗಳು ಮುಂದಾಗುವುದರಿಂದ ಹಳ್ಳಿಗಳು ವಿಕಾಸವಾಗಲಾರವು. ಹಿಂದೆ ರಾಜರು ದಾನ ದತ್ತಿ ನೀಡುತ್ತಿದ್ದಂತೆ ಈಗಲೂ ಸರ್ಕಾರಗಳು ಹಲವಾರು ದಾನಕ್ರಮಗಳನ್ನು ಮುಂದುವರೆಸಿವೆ. ಇಂತಹವು ಚಲನೆ ಅಲ್ಲ. ಹಳ್ಳಿಗಳಿಲ್ಲದೆ ನಗರಗಳು ಬದುಕಲಾರವು. ಹಳ್ಳಿಗಳಿಗೆ ಜಾತ್ಯತೀತವಾದ ಆಧುನಿಕತೆ ಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ಮಾತ್ರ ಅದು ಬೇಕಾಗಿಲ್ಲ. ಸಮಾಜ ಈ ಬಗ್ಗೆ ಆಳವಾಗಿ ಚಿಂತಿಸಬೇಕಾಗಿದೆ.

ಜಾತಿನಿಷ್ಠ ಹಳ್ಳಿಯ ಸಮಾಜಗಳು ಹಲವು ಬಗೆಯಲ್ಲಿ ಗಾಯಗೊಂಡಿವೆ. ಹಳ್ಳಿಗಳಲ್ಲೂ ಜಾಗತೀಕರಣ ಸಲೀಸಾಗಿ ನುಗ್ಗಿ ಬರಲು ಇದರಿಂದ ಅವಕಾಶವಾಗಿದೆ. ಒಂದೊಂದು ಜಾತಿಯೂ ತಪ್ಪಿಸಿಕೊಂಡು ದೂರ ಹೋಗಿ ಬದುಕಲು ದಾರಿ ಹುಡುಕುವಾಗ, ಜಾಗತೀಕರಣದ ದಾರಿಗಳು ಆಕರ್ಷಿಸುತ್ತವೆ. ಜಗತ್ತಿನ ಮಾರುಕಟ್ಟೆಗಳೀಗ ಹಳ್ಳಿಗರ ಕೈಗೂ ತಲುಪಿವೆ. ವಿದ್ಯುನ್ಮಾನ ಮಾಧ್ಯಮಗಳು ಜೀವನ ಕ್ರಮಗಳನ್ನೇ ಭ್ರಷ್ಟಗೊಳಿಸುವಂತೆ ಸಲ್ಲದ ವಿಚಾರಗಳತ್ತ ಸೆಳೆಯುತ್ತಿರುತ್ತವೆ. ಎಲ್ಲೆಲ್ಲಿ ಅಸಮಾನತೆ ಹೆಚ್ಚಿದೆಯೊ ಅಲ್ಲೆಲ್ಲ ಹೋರಾಟಗಳು ಹುಟ್ಟಬೇಕಾಗಿತ್ತು. ವಿಷಾದ ಎಂದರೆ ಇಂತಹ ಅಸಮಾನತೆಯಲ್ಲೇ ಭ್ರಷ್ಟಾಚಾರದ ರಾಜಕಾರಣವೂ, ಜಾಗತೀಕರಣವೂ ಮುನ್ನುಗ್ಗುತ್ತಿರುವುದು.

ಗಡಿ ನುಸುಳಿ ಬರುವವರ ಮೇಲೆ ಲಘು ಯುದ್ಧಗಳುಸದಾ ಘಟಿಸುತ್ತಿರುತ್ತವೆ. ಆದರೆ ಹಳ್ಳಿಗಳ ಗಡಿಗಳನ್ನು ದಾಟಿ ನಗರಗಳು ಅತಿಕ್ರಮಿಸುತ್ತಿವೆಯಲ್ಲಾ; ಸರ್ಕಾರಗಳೇ ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರ ಭೂಮಿಗಳನ್ನು ಕಿತ್ತುಕೊಡುತ್ತಿವೆಯಲ್ಲಾ... ಈ ಬಗ್ಗೆ ಏನೆನ್ನುವುದು? ರೈತ ಸಂಘದ ನಂಜುಂಡಸ್ವಾಮಿ ಅವರಿದ್ದಾಗ ಹಳ್ಳಿಯನ್ನು ಪ್ರವೇಶಿಸಲು ಅಧಿಕಾರಿಗಳು, ಬ್ಯಾಂಕಿನವರು, ರಾಜಕಾರಣಿಗಳು ಹೆದರುತ್ತಿದ್ದರು. ಈಗ ಹಳ್ಳಿಗಳು ಶಾಸಕರ, ರಾಜಕೀಯ ಪಕ್ಷಗಳ ಸಾರಾಸಗಟು ಆಸ್ತಿಯಾಗಿ ಮಾರ್ಪಟ್ಟಿವೆ. ದೊಡ್ಡ
ದೊಡ್ಡ ರಾಜಕಾರಣಿಗಳು ಹಳ್ಳಿಯ ಬಡ ರೈತರ ಆಸ್ತಿ ಪಾಸ್ತಿಗಳನ್ನು ಖರೀದಿಸಿ ಹೊಸ ಬಗೆಯ ಭೂ ಮಾಲೀಕತ್ವವನ್ನು ಸ್ಥಾಪಿಸಿದ್ದಾರೆ. ಬ್ರಿಟಿಷರು ಹಳ್ಳಿಗಳನ್ನು ಲೂಟಿ ಮಾಡಿದ್ದನ್ನು ಲೆಕ್ಕ ಮಾಡಬಹುದು, ಆದರೆ ಸ್ವಾತಂತ್ರ್ಯ ಬಂದ ನಂತರ ನಮ್ಮವರಿಂದಲೇ, ನಗರಗಳಿಂದಲೇ ಹಳ್ಳಿಗಳು ಎಷ್ಟೊಂದು ಲೂಟಿಗೀಡಾಗಿವೆ ಎಂದು ಲೆಕ್ಕ ಹಾಕಲು ಸಾಧ್ಯವಿಲ್ಲ. ದಿಕ್ಕೆಟ್ಟಹಳ್ಳಿಗಳ ಕೆಳ ಜಾತಿಗಳನ್ನು ಜುಜುಬಿ ದಿನಗೂಲಿಗಳಾಗಿ ಬಳಸಿ ಬಿಸಾಡುವ ಬಗ್ಗೆ ಯಾರಿಗೂ ಕಾಳಜಿ ಇಲ್ಲ.

ಹಳ್ಳಿಗಳು ಬರಿದಾಗುತ್ತಿವೆ. ಹಳ್ಳಿಯ ಸಂಪತ್ತೆಲ್ಲ ಯಾವ ಯಾವ ನಗರಗಳ ಯಾರ ಯಾರ ಖಾತೆಗಳಲ್ಲಿ ಎಷ್ಟೆಲ್ಲ ದೇಶಿ, ವಿದೇಶಿ ಬ್ಯಾಂಕುಗಳಲ್ಲಿ ಬಚ್ಚಿಟ್ಟುಕೊಂಡಿರಬಹುದು? ಒಂದು ಕಾಲಕ್ಕೆ ಹಳ್ಳಿಗಳಲ್ಲಿ ಬಡತನವಿತ್ತು. ಆ ಬಡತನಕ್ಕೆ ಒಂದು ನೈತಿಕ ಶಕ್ತಿಯಿತ್ತು. ಹಸಿವಿನಲ್ಲೂ ಪ್ರಾಮಾಣಿಕತೆಯಿತ್ತು, ದುಡಿಮೆಯಿತ್ತು, ಈಗ ಅವೇ ಹಳ್ಳಿಗಳು ದಿವಾಳಿಯಾಗುತ್ತಿವೆ. ಹಳ್ಳಿಯ ಭಾವನಾತ್ಮಕ ಸಂಬಂಧಗಳು ವಿಘಟನೆಗೆ ಈಡಾಗಿವೆ. ಇಷ್ಟಾದರೂ ಹಳ್ಳಿಗಳು ಹಿಂಸೆಗೆ ಇಳಿದಿಲ್ಲ, ವಿಶ್ವಾಸ ಕಳೆದುಕೊಂಡಿಲ್ಲ. ಹಳ್ಳಿಗಳು ಈವರೆಗೆ ಕಳೆದುಕೊಂಡಿರುವ ಆಸ್ತಿಪಾಸ್ತಿಗಳು ಎಷ್ಟು? ಅವನ್ನು ಪಡೆದಿರುವವರು ಯಾರು ಎಂಬ ಲೆಕ್ಕದಲ್ಲಿ ಭೂಮಿಯ ಒಡೆತನದ ಗಣತಿ ಮಾಡಿಸಬೇಕು. ಅಕ್ರಮ ಭೂ ಸಂಪತ್ತಿನ ಮೇಲೆ ನಿಯಂತ್ರಣ ತರಬೇಕು. ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸಂಕಷ್ಟಕ್ಕೀಡಾಗಿ ಭೂಮಿ ಕಳೆದುಕೊಂಡವರ ಭೂಮಿಯನ್ನು ಹಿಂತಿರುಗಿಸಬೇಕು. ‘ಧರ್ಮದ ಆಚೆಗೆ ಹೋಗಿರುವವರೆಲ್ಲ ಮರಳಿ ನಮ್ಮ ಧರ್ಮಕ್ಕೆ ಹಿಂತಿರುಗಿ’ ಎಂದು ಹೇಳುವುದು ದೊಡ್ಡದಲ್ಲ. ಕಳೆದುಹೋಗಿರುವ ಹಳ್ಳಿಗಳನ್ನು ಪುನರ್ ನಿರ್ಮಾಣ ಮಾಡಬೇಕು. ಮರಳಿ ಹಳ್ಳಿಗೆ ಹಿಂತಿರುಗುವ ಯೋಗ್ಯ ದಾರಿಗಳನ್ನು ಸೃಷ್ಟಿಸಬೇಕು. ಹಳ್ಳಿಗಳ ಋಣ ತೀರಿಸದೆ ಯಾವುದೇ ಸರ್ಕಾರಕ್ಕೂ ಮುಕ್ತಿ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು