ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ ‌| ಆದಿಮಾನವರ ಕಲಾಸಂಗ್ರಹಾಲಯ ಭೀಮ್‌ಬೆಟ್ಕಾ

Published 10 ಡಿಸೆಂಬರ್ 2023, 0:18 IST
Last Updated 10 ಡಿಸೆಂಬರ್ 2023, 0:18 IST
ಅಕ್ಷರ ಗಾತ್ರ

ಮಧ್ಯಪ್ರದೇಶದ ಭೀಮ್‌ಬೆಟ್ಕಾದ ಗುಹೆಗಳಲ್ಲಿ ಅರಳಿರುವ ಕಲೆ ಅಧ್ಯಯನಯೋಗ್ಯ. ಏಳು ಕಾಲಘಟ್ಟಗಳಲ್ಲಿ ರೇಖಾಚಿತ್ರಗಳು ಹೇಗೆಲ್ಲ ವೈವಿಧ್ಯಮಯವಾಗಿ ಮೂಡಿವೆ ಎನ್ನುವುದಕ್ಕೆ ಈ ಕಲಾಸಂಗ್ರಹಾಲಯ ಕನ್ನಡಿ ಹಿಡಿಯುತ್ತದೆ.

ಪುಟ್ಟ ಮಗುವಿನ ಕೈಯ್ಯ ಚಿತ್ರ, ಕೆಂಪು ಬಣ್ಣದಲ್ಲಿ... ಗಮನಿಸಿ ನೋಡಿದರೆ ಸ್ಪಷ್ಟವಾಗಿಯೇ ಕಾಣುತ್ತಿತ್ತು... ಮಕ್ಕಳು ತಮ್ಮ ಕೈಯ್ಯನ್ನು ಬಿಳಿ ಹಾಳೆಯ ಮೇಲಿಟ್ಟು ಪೆನ್ಸಿಲ್‌ನಲ್ಲಿ ಬರೆಯುವುದಿಲ್ಲವೇ… ಥೇಟ್ ಹಾಗೆಯೇ; ಆದರಿದು ಗುಹೆಯ ಮೇಲ್ಭಾಗದಲ್ಲಿ ಸಾವಿರಾರು ವರ್ಷಗಳ ಹಿಂದೆ ಮಗುವೊಂದು ಬರೆದಿದ್ದು. ಅದನ್ನು ನೋಡುತ್ತಾ ರೋಮಾಂಚನ, ಮಾನವ ವಿಕಾಸದ ಹಾದಿ ಕಣ್ಮುಂದೆ ಸ್ಪಷ್ಟವಾಗಿದ್ದರೂ ಮಗುಮನಸ್ಸು ಬದಲಾಗಿಲ್ಲ ಎಂಬ ಅಚ್ಚರಿಯೊಂದಿಗೆ ಗುಹಾಸಮೂಹದ ನಡುವೆ ನಮ್ಮ ಪಯಣ ಸಾಗಿತು.

ಮಧ್ಯಪ್ರದೇಶವನ್ನು ಆದಿವಾಸಿಗಳ ರಾಜ್ಯ ಎಂದೇ ಗುರುತಿಸಲಾಗುತ್ತದೆ. ಹಾಗಾಗಿಯೇ ಇಲ್ಲಿನ ನೃತ್ಯ, ಸಂಗೀತ, ಭಾಷೆ, ಆಚಾರ ಎಲ್ಲವೂ ವಿಶಿಷ್ಟ. ರಾಜಧಾನಿ ಭೋಪಾಲದಿಂದ ನಲವತ್ತೈದು ಕಿ.ಮೀ. ದೂರದಲ್ಲಿ ರೈಸನ್ ಜಿಲ್ಲೆಯಲ್ಲಿರುವ ಭೀಮ್‌ಬೆಟ್ಕಾ ಗುಹೆಗಳು ಆದಿಮಾನವರ ಕಲಾಸಂಗ್ರಹಾಲಯ. ಮಾನವ ಇತಿಹಾಸ ಮತ್ತು ವಿಕಾಸವನ್ನು ತೋರುವ ವರ್ಣಮಯ ಚಿತ್ರಗಳನ್ನು ಒಳಗೊಂಡ ಈ ಗುಹೆಗಳು ವಿಂಧ್ಯ ಪರ್ವತದ ತಪ್ಪಲಲ್ಲಿವೆ. ಅವುಗಳಲ್ಲಿ ಒಂದು ಲಕ್ಷ ವರ್ಷಕ್ಕೂ ಹಿಂದೆ ಮಾನವ ವಸತಿ ಇತ್ತೆಂದು ಹೇಳಲಾಗುತ್ತದೆ. ಇಲ್ಲಿರುವ ಚಿತ್ರಗಳನ್ನು ಪರಿಶೀಲಿಸಿದಾಗ ಕೆಲವು ಹದಿನೈದು ಸಾವಿರ ವರ್ಷಗಳಷ್ಟು ಹಳೆಯದಾದರೆ, ಇತ್ತೀಚಿನದು ಸಾವಿರ ವರ್ಷಗಳಷ್ಟು ಹಳೆಯದು. 2003ರಲ್ಲಿ ಈ ಗುಹೆಗಳನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು.

ಹೆಸರಿಗೆ ಕಾರಣ

ಭೀಮ್‌ಬೆಟ್ಕಾ ಎನ್ನುವ ಹೆಸರಿಗೆ ಕಾರಣ ಮಹಾಭಾರತದ ಭೀಮ. ಪಾಂಡವರು ವನವಾಸದಲ್ಲಿದ್ದಾಗ ಇಲ್ಲಿಗೆ ಬಂದು ನೆಲೆಸಿದ್ದರು. ಇಲ್ಲಿ ಭೀಮ ವಿಶ್ರಾಂತಿ ಪಡೆಯುತ್ತಿದ್ದ ಕಾರಣಕ್ಕೆ ಭೀಮ್ ಬೈಠಕ್, ಭೀಮ ಕುಳಿತ ಸ್ಥಳ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ. ಇದಕ್ಕೆ ಪೂರಕವಾಗಿ ಸುತ್ತಲಿರುವ ಹಳ್ಳಿಗಳ ಹೆಸರಿನಲ್ಲಿಯೂ ಪಾಂಡವರ ಉಲ್ಲೇಖವಿದೆ. ಪಾಂಡಾಪುರ್ ಹತ್ತಿರದ ಹಳ್ಳಿಯಾದರೆ ಭೀಯಾಪುರ್, ಬೀಮ್ ಪುರ್ ಅಪಭ್ರಂಶ. ಸುತ್ತಲೂ ಇರುವ ಲಖಾರ್ ಜೋಹಾರ್ ಪ್ರದೇಶ ಪಾಂಡವರು ವಾಸಿಸುತ್ತಿದ್ದ ಅರಗಿನ ಅರಮನೆ ಇದ್ದ ಸ್ಥಳ ಎಂದು ಜನರು ನಂಬುತ್ತಾರೆ.

ಇವುಗಳನ್ನು ಕಂಡುಹಿಡಿದಿದ್ದೂ ಆಕಸ್ಮಿಕ. 1957ರಲ್ಲಿ ಭಾರತೀಯ ಇತಿಹಾಸ ತಜ್ಞ ವಿ.ವಾಕನ್ಕರ್ ನಾಗಪುರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ರೈಲಿನ ಕಿಟಕಿಯಿಂದ ಕಂಡಂತಹ ದಟ್ಟಕಾಡು, ದೈತ್ಯ ಬಂಡೆಗಲ್ಲುಗಳು ಐರೋಪ್ಯ ರಾಷ್ಟ್ರಗಳಲ್ಲಿ ಕಂಡ ಗುಹೆಗಳನ್ನು ನೆನಪಿಸಿ ಅವರ ಕುತೂಹಲ ಕೆರಳಿಸಿದವು. ಅನ್ವೇಷಣೆಗೆ ಹೊರಟಾಗ ಕಂಡುಬಂದಿದ್ದು ಹಸಿರಿನಲ್ಲಿ ಅಡಗಿದ್ದ ಈ ಅಪೂರ್ವ ಸಂಪತ್ತು. ತಂಡದ ಸಮೇತ ಹುಡುಕುತ್ತಾ ಹೋದಂತೆ ಈ ಜಾಗದಲ್ಲಿ ಆರುನೂರು ಶಿಲಾ ಆಶ್ರಯತಾಣಗಳು ಬೆಳಕಿಗೆ ಬಂದವು. ಇವುಗಳಲ್ಲಿ ಸುಮಾರು ಐನೂರು ಗುಹೆಗಳಲ್ಲಿ ಆದಿಮಾನವರ ಜೀವನ ಶೈಲಿಯನ್ನು ವಿವರಿಸುವ ಚಿತ್ರಗಳಿವೆ. ಅವುಗಳಲ್ಲಿ ಹದಿನೈದು ಮಾತ್ರ ಪ್ರವಾಸಿಗಳ ವೀಕ್ಷಣೆಗೆ ತೆರೆದಿವೆ. 

ಪ್ರಮುಖ ಗುಹೆಗಳು

ಈ ಗುಹೆಗಳಲ್ಲಿ ಆಡಿಟೋರಿಯಂ ಕೇವ್ ಅಥವಾ ಸಭಾಂಗಣ ಗುಹೆ ಅತ್ಯಂತ ವಿಶಾಲವಾದದ್ದು ಮತ್ತು ಮುಖ್ಯವಾದದ್ದು. ಮರಳುಗಲ್ಲಿನ ಗೋಪುರದಿಂದ ಸುತ್ತುವರಿದ ವಿಶಾಲ ಗುಹೆ ಇದಾಗಿದ್ದು, ಮಧ್ಯದಲ್ಲಿ ದೊಡ್ಡ ಬಂಡೆ ಇದೆ. ನಾಯಕ ಅಥವಾ ಆಡಳಿತಗಾರನ ಸ್ಥಳ ಇದಾಗಿದ್ದು,  ಬಹುಶಃ ಸುತ್ತಮುತ್ತ ವಾಸವಾಗಿದ್ದ ಜನರೆಲ್ಲರೂ ಸೇರುತ್ತಿದ್ದ ಸಭೆಯ ಸ್ಥಳ ಇದಾಗಿರಬಹುದು ಎಂದು ಊಹಿಸಲಾಗಿದೆ. ಭೀಮ್ ಬೆಟ್ಕದ ಪ್ರಮುಖ ಆಕರ್ಷಣೆ ಎಂದರೆ ಅತ್ಯಂತ ಹೆಚ್ಚು ರೇಖಾಚಿತ್ರಗಳನ್ನು ಒಳಗೊಂಡಿರುವ ಪ್ರಾಣಿ ಸಂಗ್ರಹಾಲಯದಂತೆ ಕಾಣುವ ಝೂ ರಾಕ್. ಈ ಶಿಲೆಯಲ್ಲಿ ಸಾಂಬಾರ್‌ ಜಿಂಕೆ, ಆನೆ, ಚಿರತೆ, ತೋಳ, ಕರಡಿ, ಹಂದಿ ಹೀಗೆ ಸೆಂಟಿಮೀಟರ್‌ನಷ್ಟು ಚಿಕ್ಕದಾದ ಚಿತ್ರಗಳಿಂದ ನಾಲ್ಕು ಮೀಟರ್ ದೊಡ್ಡದಾದ ಚಿತ್ರಗಳನ್ನು ಒಂದೇ ಶಿಲೆಯ ಮೇಲೆ ಬರೆಯಲಾಗಿದೆ.

ವೈವಿಧ್ಯಮಯ ಚಿತ್ರಗಳು

ಪ್ರಮುಖವಾಗಿ ಬಿಳಿ, ಕೆಂಪು ಬಣ್ಣ ಮತ್ತು ಅಲ್ಲಲ್ಲಿ ಹಸಿರು-ಹಳದಿ ಬಣ್ಣಗಳಲ್ಲಿ ಗುಹೆಗಳಲ್ಲಿ ಬಿಡಿಸಿರುವ ಚಿತ್ರಗಳು ಅಂದಿನ ಜನಜೀವನವನ್ನು ವಿವರಿಸುತ್ತವೆ. ಬೇಟೆ, ನೃತ್ಯ, ಸಂಗೀತ, ಕುದುರೆ ಮತ್ತು ಆನೆ ಸವಾರಿ, ಪ್ರಾಣಿಗಳ ಕಾದಾಟ, ಜೇನು ಸಂಗ್ರಹ, ದೇಹದ ಶೃಂಗಾರ ಹೀಗೆ ದೈನಂದಿನ ಬದುಕು ರೇಖೆಗಳಲ್ಲಿ ಚಿತ್ರಿತವಾಗಿದೆ. ಬೇಟೆಯನ್ನೇ ಆಧರಿಸಿದ ಬದುಕಾದ್ದರಿಂದ ಕಾಡಿನ ಪ್ರಾಣಿಗಳನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಈ ರೇಖಾಚಿತ್ರಗಳು ಹಾಗೂ ವರ್ಣಕಲೆಯನ್ನು ಏಳು ಬೇರೆ ಬೇರೆ ಕಾಲಘಟ್ಟಕ್ಕೆ ಅನುಗುಣವಾಗಿ ಗುರುತಿಸಲಾಗಿದೆ.

ಕಾಲಘಟ್ಟ ಒಂದು;

ಶಿಲಾಯುಗ- ಇಲ್ಲಿ ಸರಳ ರೇಖೆಗಳಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಹಸಿರು ಮತ್ತು ಗಾಢ ಕೆಂಪು ಬಣ್ಣದ ಬಳಸಲಾಗಿದೆ. ಕಾಡೆಮ್ಮೆ, ಹುಲಿಯಂತಹ ಪ್ರಾಣಿಗಳ ದೊಡ್ಡ ರೇಖಾ ಚಿತ್ರವನ್ನು ಕಾಣಬಹುದು.

ಕಾಲಘಟ್ಟ ಎರಡು;

ಮಧ್ಯಶಿಲಾಯುಗ- ಇಲ್ಲಿ ಬಿಡಿಸಿರುವ ಚಿತ್ರಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಆಲಂಕಾರಿಕವಾಗಿವೆ. ಪ್ರಾಣಿಗಳ ಚಿತ್ರಗಳ ಜೊತೆಗೆ ಮನುಷ್ಯರು ಮತ್ತು ಬೇಟೆಯಾಡುವ ಅನೇಕ ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. ಈಟಿ, ಹರಿತವಾದ ಕೋಲು, ಬಿಲ್ಲು- ಬಾಣ, ಚೂಪಾದ ಕಡ್ಡಿಗಳು ಹೀಗೆ ಅಂದು ಉಪಯೋಗಿಸುತ್ತಿದ್ದ ಆಯುಧಗಳ ಚಿತ್ರಣ ಇಲ್ಲಿ ಸಿಗುತ್ತದೆ. ಜನರೆಲ್ಲರೂ ಒಟ್ಟಾಗಿ ನರ್ತಿಸುವ ದೃಶ್ಯ ಹಕ್ಕಿಗಳು, ಸಂಗೀತ ಉಪಕರಣಗಳು, ಗರ್ಭಿಣಿ ಸ್ತ್ರೀ, ತಾಯಿ ಮತ್ತು ಮಗು, ಸತ್ತ ಪ್ರಾಣಿಗಳನ್ನು ಹೊತ್ತೊಯ್ಯುವ ಮನುಷ್ಯರು ಹೀಗೆ ದಿನನಿತ್ಯದ ಚಿತ್ರಣವನ್ನು ಕಾಣಬಹುದು.

ಕಾಲಘಟ್ಟ ಮೂರು;

ಕಂಚಿನ ಯುಗ- ಈ ಸಮಯದಲ್ಲಿ ಗುಹೆಗಳಲ್ಲಿ ವಾಸವಾಗಿದ್ದ ಜನರು, ಬಯಲು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ಮಾಲ್ವ ಜನರೊಂದಿಗೆ ಸಂಪರ್ಕಕ್ಕೆ ಬಂದರು. ಅವರಿಬ್ಬರ ನಡುವೆ ಪರಸ್ಪರರ ಅವಶ್ಯಕತೆಗಳಿಗಾಗಿ ವಿನಿಮಯ ನಡೆಯುತ್ತಿತ್ತು ಎಂಬುದನ್ನು ಸೂಚಿಸುತ್ತದೆ.

ಕಾಲಘಟ್ಟ ನಾಲ್ಕು ಮತ್ತು ಐದು;

ಆರಂಭಿಕ ಐತಿಹಾಸಿಕ ಯುಗ- ಕೆಂಪು, ಬಿಳಿ ಮತ್ತು ಹಳದಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಈ ಚಿತ್ರಗಳು ಪ್ರಾಣಿಗಳನ್ನು ಏರಿದ ಸವಾರರು, ಸಾಕಷ್ಟು ಧಾರ್ಮಿಕ ಸಂಕೇತಗಳು, ಉದ್ದವಾದ ನಿಲುವಂಗಿ ಧರಿಸಿದ ಜನರು ಮತ್ತು ವಿವಿಧ ಲಿಪಿಗಳನ್ನು ಕಾಣಬಹುದು. ಮರದೇವತೆಗಳು, ಯಕ್ಷರು ಮತ್ತು ಆಕಾಶ ರಥಗಳ ಮೂಲಕ ಧಾರ್ಮಿಕ ನಂಬಿಕೆಗಳನ್ನೂ ಚಿತ್ರಿಸಲಾಗಿದೆ.

ಕಾಲಘಟ್ಟ ಆರು ಮತ್ತು ಏಳು;

ಮಧ್ಯ ಯುಗ- ಇಲ್ಲಿರುವ ಚಿತ್ರಗಳು ಸ್ಪಷ್ಟವಾದ ರೇಖೆಗಳು ಮತ್ತು ರಚನಾ ಕ್ರಮವನ್ನು ಹೊಂದಿದ್ದರೂ ಕಲಾತ್ಮಕವಾಗಿ ಅಷ್ಟೇನೂ ಗಮನಾರ್ಹವಾಗಿಲ್ಲ.

ಭೀಮ್‌ಬೆಟ್ಕಾದಲ್ಲಿ ಕತೆಯನರುಹುವ ಚಿತ್ರ
ಭೀಮ್‌ಬೆಟ್ಕಾದಲ್ಲಿ ಕತೆಯನರುಹುವ ಚಿತ್ರ

ಈ ಚಿತ್ರಗಳನ್ನು ಬರೆಯಲು ಆದಿಮಾನವರು ಮೃದುವಾದ ಕೆಂಪುಕಲ್ಲು ಮತ್ತು ಮರದ ಇದ್ದಿಲಿಗೆ ಕೆಲವೊಮ್ಮೆ ಪ್ರಾಣಿಗಳ ಕೊಬ್ಬು ಮತ್ತು ಎಲೆಗಳ ರಸವನ್ನು ಸೇರಿಸಿ ಬೇಕಾದ ಬಣ್ಣ ಪಡೆಯುತ್ತಿದ್ದರು. ಮರದ ಕಡ್ಡಿಗಳನ್ನು ಚೂಪಾಗಿಸಿ ಬಣ್ಣ ಹಚ್ಚಿ ಸರಳ ರೇಖೆಗಳನ್ನು ಬರೆದಿರಬಹುದು ಎನ್ನಲಾಗಿದೆ. ಸಾವಿರಾರು ವರ್ಷಗಳು ಕಳೆದರೂ ಈ ಬಣ್ಣಗಳು ಮಾಸದೇ ಇರಲು ಬಂಡೆಗಳ ಮೇಲ್ಮೈಯಲ್ಲಿರುವ ಆಕ್ಸೈಡ್‌ಗಳ ರಾಸಾಯನಿಕ ಕ್ರಿಯೆ ಎಂದು ಹೇಳಲಾಗುತ್ತದೆ.

ಭೀಮ್‌ ಬೆಟ್ಕಾ ಗುಹೆಗಳು ಬೆಳಿಗ್ಗೆ ಏಳರಿಂದ ಸಂಜೆ ಆರರವರೆಗೆ ಎಲ್ಲಾ ದಿನಗಳೂ ವೀಕ್ಷಣೆಗೆ ತೆರೆದಿವೆ. ಪ್ರವೇಶಧನ ಭಾರತೀಯರಿಗೆ ಇಪ್ಪತ್ತೈದು ರೂಪಾಯಿ. ಗುಹೆಗಳ ವೀಕ್ಷಣೆಗೆ ಎರಡರಿಂದ ಮೂರು ತಾಸು ಸಮಯ ಬೇಕು. ಸಾಕಷ್ಟು ನಡೆಯಬೇಕಿರುವುದರಿಂದ ಬಿಸಿಲೇರುವ ಮುನ್ನ ಹೊರಡುವುದು ಒಳ್ಳೆಯದು. ಭೋಪಾಲದಿಂದ ಒಂದು ತಾಸಿನ ದಾರಿ; ರಸ್ತೆ ಉತ್ತಮವಾಗಿದ್ದು ಬಸ್ಸು, ಕಾರು ಸುಲಭವಾಗಿ ಲಭ್ಯವಿದೆ.

ಭೀಮ್‌ಬೆಟ್ಕಾದ ಝೂ ರಾಕ್‌
ಭೀಮ್‌ಬೆಟ್ಕಾದ ಝೂ ರಾಕ್‌

ಬೇಟೆಯಾಡಿ ಆಹಾರ ಸಂಗ್ರಹಿಸುತ್ತಾ ಅಲೆಮಾರಿಯಾಗಿದ್ದ ಮಾನವ ನಂತರ ಕೃಷಿ ಚಟುವಟಿಕೆ ಆರಂಭಿಸಿ, ಕಂಚು-ಕಬ್ಬಿಣ ಮುಂತಾದ ಲೋಹಗಳ ಬಳಕೆ ಕಂಡುಹಿಡಿದು ಹೊಸದೊಂದು ಜೀವನಶೈಲಿಯನ್ನು ರೂಪಿಸಿಕೊಂಡ ಸಾವಿರಾರು ವರ್ಷಗಳ ಪಯಣವನ್ನು ಚಿತ್ರಗಳ ಮೂಲಕ ತಿಳಿಸುವ ಭೀಮ್‌ ಬೆಟ್ಕಾ ಗುಹೆಗಳು ಕಲೆ ಮತ್ತು ಇತಿಹಾಸದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT