ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಿಕ್‌ ಇನ್ ಮಾಗಡಿ

Last Updated 23 ಜನವರಿ 2020, 7:04 IST
ಅಕ್ಷರ ಗಾತ್ರ
ADVERTISEMENT
""

ಸುರಿಯುತ್ತಿದ್ದ ಮಂಜಿನ ಹನಿಗಳನ್ನು ಸರಿಸುತ್ತಾ ಸೂರ್ಯನ ಕಿರಣಗಳು ಕೆರೆಯ ನೀರಿಗೆ ಮುತ್ತಿಕ್ಕುತ್ತಿದ್ದರೆ, ಪೊದೆಯಲ್ಲಿ, ಮೈಮುದುಡಿ ಕುಳಿತಿದ್ದ ಪಕ್ಷಿಗಳೆಲ್ಲ ರೆಕ್ಕೆ ಬಿಚ್ಚಿ ಹಾರುತ್ತಿವೆ. ದೊಡ್ಡ ರೆಕ್ಕೆಯ ಪಕ್ಷಿ ನೀರಿಗಿಳಿದು ಮೀನನ್ನು ಕೊಕ್ಕಿನಲ್ಲಿ ಕಚ್ಚಿ ಹಾರುತ್ತಿದ್ದರೆ, ಸಂಗಾತಿಗಳೊಂದಿಗೆ ಈಜುತ್ತಿರುವ ಪುಟ್ಟಗಾತ್ರದ ಪಕ್ಷಿಗಳು, ನೀರಿನೊಳಗೆ ತಲೆ ಮುಳುಗಿಸುತ್ತಾ ಚಿನ್ನಾಟವಾಡುತ್ತಿವೆ..

ಡಿಸೆಂಬರ್ ಬಂತೆಂದರೆ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆಯ ಅಂಗಳ ಇಂಥ ಪಕ್ಷಿಗಳ ಆತಿಥ್ಯದ ತಾಣವಾಗುತ್ತದೆ. ಸುತ್ತಲಿನ ಹೊಲ ಗದ್ದೆಗಳಲ್ಲಿ ಸಮೃದ್ಧ ಬೆಳೆ. ಆವಾಸಕ್ಕೆ ಅನುಕೂಲವಾಗುವಂತಹ ಪೊದೆಗಳು, ಶೀತ ಪ್ರದೇಶದಿಂದ ವಲಸೆ ಬರುವ ಬಾನಾಡಿಗಳಿಗೆ ಬೆಚ್ಚಗಿನ ವಾತಾವರಣ... ಇವೆಲ್ಲ ಪಕ್ಷಿಗಳನ್ನು ಆಕರ್ಷಿಸಲು ಪ್ರಮುಖ ಕಾರಣಗಳು. ಹೀಗಾಗಿ ಮಾಗಡಿ, ವಿದೇಶಿ ಪಕ್ಷಿಗಳೂ ಸೇರಿದಂತೆ ವಲಸೆ ಪಕ್ಷಿಗಳ ‘ಧಾಮ’ವಾಗಿದೆ.

ಹೀಗೆ ಚಳಿಗಾಲದಲ್ಲಿ ಪಕ್ಷಿಗಳು ಬರುವ ಸೂಚನೆ ಸಿಕ್ಕ ಕೂಡಲೇ, ಕೆರೆ ಏರಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಛಾಯಾಗ್ರಾಹಕರು, ಕೋವಿಯಂತಹ ಉದ್ದುದ್ದ ಲೆನ್ಸ್‌ಗಳ ಕ್ಯಾಮೆರಾ ಹಿಡಿದು ಪಕ್ಷಿಗಳ ಚಿತ್ರ ತೆಗೆಯಲು ಸಾಲಾಗಿ ನಿಲ್ಲುತ್ತಾರೆ. ಕೆರೆಗೆ ಬರುವ ಹಕ್ಕಿಗಳ ಚಲನವಲನಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ. ಡಿಸೆಂಬರ್‌ನಿಂದ ಆರಂಭವಾಗುವ ಪ್ರವಾಸಿ ಛಾಯಾಗ್ರಾಹಕರ ದಂಡು ಫೆಬ್ರುವರಿ ಕೊನೆವರೆಗೂ ಮುಂದುವರಿದಿರುತ್ತದೆ.

ಮಾಗಡಿ ಕೆರೆಯಲ್ಲಿ ಪಕ್ಷಿ ಫೋಟೊಗ್ರಫಿ ಮಾಡಲು ರಾಜ್ಯವಲ್ಲದೇ, ನೆರೆಯ ರಾಜ್ಯಗಳಾದ ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಿಂದಲೂ ಪ್ರವಾಸ ಬರುತ್ತಾರಂತೆ. ‌ಕೆರೆಯ ಏರಿ ಮೇಲೆ ನಿಂತು ಮುಂಜಾನೆಯ ನಿಶ್ಯಬ್ಧದ ವಾತಾವರಣದಲ್ಲಿ ಪಕ್ಷಿಗಳ ಕಲರವ ಸವಿಯುತ್ತಾ, ಫೋಟೊ ಕ್ಲಿಕ್ಕಿಸುತ್ತಾರೆ.

ಹೆಚ್ಚಿದ ಪಕ್ಷಿಗಳ ಸಂಖ್ಯೆ

ಈ ಬಾರಿಯೂ ಹಕ್ಕಿಗಳ ದಂಡು ಕೆರೆಯಲ್ಲಿ ಬೀಡುಬಿಟ್ಟಿವೆ. ಮಂಗೋಲಿಯಾ, ಸೈಬೀರಿಯಾ, ಟಿಬೆಟ್, ಉತ್ತರ ಭಾರತ ಸೇರಿದಂತೆ ಶೀತ ಪ್ರದೇಶಗಳಿಂದ ನೂರಾರು ಸಂಖ್ಯೆಯಲ್ಲಿ ಹಕ್ಕಿಗಳು ವಲಸೆ ಬಂದಿವೆಯಂತೆ. ಸುಮಾರು ಐದಾರು ಸಾವಿರದಷ್ಟು ಪಕ್ಷಿಗಳು ಬಂದಿವೆ ಎಂದು ಅಂದಾಜಿಸಲಾಗುತ್ತಿದೆ.‌

ಈ ವರ್ಷ ಉತ್ತಮ ಮಳೆಯಾದ ಕಾರಣ ಬೃಹತ್‌ ವಿಸ್ತೀರ್ಣವಿರುವ ಮಾಗಡಿ ಕೆರೆ ತುಂಬಿದೆ. ಜತೆಗೆ, ಸುತ್ತ ಹೊಲಗದ್ದೆಗಳಲ್ಲಿ ಫಸಲು ಚೆನ್ನಾಗಿದೆ. ಆವಾಸಕ್ಕೆ ಪೂರಕ ವಾತಾವರಣವಿರುವ ಕಾರಣದಿಂದ ಪಕ್ಷಿಗಳ ಸಂಖ್ಯೆಯೂ ಹೆಚ್ಚಿದೆ ಎಂದು ಅಂದಾಜಿಸಲಾಗುತ್ತಿದೆ.

ಬಾರ್ ಹೆಡೆಡ್ ಗೂಸ್(ಪಟ್ಟೆ ತಲೆ ಬಾತು), ಬ್ರಾಹ್ಮಿಣಿ ಡೆಕ್ (ಪಿನ್ ಟೇಲ್ಡ್ ಡಕ್), ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ್, ಪಾಂಟೆಡ್ ಸ್ಪಾರ್ಕ್ (ಬಣ್ಣದ ಕೊಕ್ಕರೆಗಳು) ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಇಲ್ಲಿಗೆ ಬಂದಿವೆ.

ಇನ್ನೊಂದು ತಿಂಗಳು, ಇಡೀ ಮಾಗಡಿ ಕೆರೆಯ ಸುತ್ತ ಪಕ್ಷಿಗಳದ್ದೇ ಹಬ್ಬ. ನೀವು ಪಕ್ಷಿ ಪ್ರಿಯರಾಗಿದ್ದರೆ, ಪರಿಸರ ಆಸ್ವಾದಿಸುವ ಮನಸ್ಸಿದ್ದರೆ, ವನ್ಯಜೀವಿ ಛಾಯಾಗ್ರಾಹಕರಾಗಿದ್ದರೆ, ಹೆಗಲಿಗೆ ಕ್ಯಾಮೆರಾ ಏರಿಸಿ, ಗದಗದ ಕಡೆಗೆ ಬಸ್ ಹತ್ತಿಬಿಡಿ. ಮಾಗಡಿಗೆ ಹೋಗುವುದರಿಂದ, ಒಂದು ಕಡೆ ಪ್ರವಾಸವೂ ಆಯಿತು, ಇನ್ನೊಂದು ಕಡೆಗೆ ಪಕ್ಷಿ ವೀಕ್ಷಣೆ, ಫೋಟೊಗ್ರಫಿಯನ್ನೂ ಮಾಡಿದಂತಾಗುತ್ತದೆ. ಆದರೆ, ಹೋಗುವ ಮುನ್ನ, ಈ ಲೇಖನದೊಂದಿಗಿರುವ ಕೆಲವೊಂದು ಸೂಚನೆಗಳನ್ನು ಪಾಲಿಸಿ, ಪಕ್ಷಿ – ಪರಿಸರ ಉಳಿಸಿ.

ಹೋಗುವುದು ಹೇಗೆ ?

ಬೆಂಗಳೂರಿನಿಂದ ಹುಬ್ಬಳ್ಳಿಗೆ ರೈಲು, ಬಸ್ ಮತ್ತು ವಿಮಾನ ಸೌಲಭ್ಯವಿದೆ. ಅಲ್ಲಿಂದ ಬಸ್‌ ಮೂಲಕ ಲಕ್ಷ್ಮೇಶ್ವರಕ್ಕೆ ಬರಬೇಕು. ಲಕ್ಷ್ಮೇಶ್ವರ– ಗದಗ ಬಸ್ ಮಾಗಡಿಯಲ್ಲಿ ನಿಲ್ಲುತ್ತದೆ.

ಮೈಸೂರು–ಧಾರವಾಡಕ್ಕೆ ಹೋಗುವ ರೈಲು ಯಲವಗಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲುತ್ತದೆ. ಇಲ್ಲಿಂದ ಲಕ್ಷ್ಮೇಶ್ವರಕ್ಕೆ ಬಂದು, ಅಲ್ಲಿಂದ ಮಾಗಡಿಗೆ ಹೋಗಬಹುದು. ಸಾಕಷ್ಟು ಬಸ್‌ಗಳಿವೆ.

ವಸತಿ ವ್ಯವಸ್ಥೆ ಹೇಗಿದೆ?

ಲಕ್ಷ್ಮೇಶ್ವರದಲ್ಲಿ ವಸತಿಗೃಹವಿದೆ. 25 ಕಿ.ಮೀ ದೂರದಲ್ಲಿರುವ ಗದಗದಲ್ಲೂ ವಾಸ್ತವ್ಯ ಮಾಡಬಹುದು. ಇಲ್ಲಿ ಉತ್ತಮ ಹೋಟೆಲ್‌, ಲಾಡ್ಜ್‌ಗಳಿವೆ. ಓಡಾಡಲು ಬಸ್‌ ವ್ಯವಸ್ಥೆ ಚೆನ್ನಾಗಿದೆ.

ಛಾಯಾಗ್ರಹಣಕ್ಕೆ ಮುನ್ನ...

ಬೆಳಿಗ್ಗೆ 9 ಗಂಟೆಯಿಂದ 11 ಗಂಟೆವರೆಗೆ, ಸಂಜೆ 5 ಗಂಟೆಯಿಂದ 6 ಗಂಟೆವರೆಗೆ‌ ಫೋಟೊಗ್ರಫಿ ಸಮಯ ಕಡ್ಡಾಯವಾಗಿರಲಿ. (ಬೆಳಿಗ್ಗೆ 5.30ರಿಂದ ಸುಮಾರು 9ರವರೆಗೆ‌ ಪಟ್ಟೆತಲೆಯ ಬಾತುಗಳಿಗೆ ಬೆಳಗಿನ ಉಪಾಹಾರದ ಸಮಯ. ಸಂಜೆ 5 ರಿಂದ. 6.30ರ ವರೆಗೆ ಮರಳಿ ಕೆರೆಗೆ ಬರುವ ಸಮಯ). ಆ ವಲಸೆ ಹಕ್ಕಿಗಳ ಜೈವಿಕ ಗಡಿಯಾರಕ್ಕೆ ಯಾವುದೇ ರೀತಿಯ ತೊಂದರೆ ಕೊಡಬೇಡಿ.

ಗುಂಪಾಗಿ ಕೆರೆ ಆವಾರದಲ್ಲಿ‌ ಸಂಚರಿಸಬೇಡಿ. ಸೈಕ್ಸ್ ಪಾಯಿಂಟ್ (ವಾಚ್‌ ಟವರ್‌) ಬಳಸಬಹುದು. ಹಕ್ಕಿಗಳ ಖಾಸಗಿತನಕ್ಕೆ ಧಕ್ಕೆ ಮಾಡಲೇಬೇಡಿ.

ತೆಪ್ಪ, ದೋಣಿ ಬಳಸಿ ಕೆರೆ ನಡುವೆ ಹೋಗಿ ಪಕ್ಷಿಗಳ‌ ಫೋಟೊ ತೆಗೆಯುವ ಬದಲು, ದೂರದಿಂದಲೇ ಚಿತ್ರ ಕಾಣುವಂತಹ ಲೆನ್ಸ್ ಬಳಸಿ.. ಇದ್ದಲ್ಲಿಂದ‌ಲೇ, ಹಕ್ಕಿ ಚಿತ್ರಗಳನ್ನು ತೆಗೆಯಿರಿ.

ಕೆರೆಯ‌ ಆವಾರ ಹೂಳಿನಿಂದ ತುಂಬಿದೆ. ಎಚ್ಚರವಿರಲಿ. ವಸ್ತು, ಉಪಕರಣ, ವ್ಯಕ್ತಿ ಹೂತು ಸಮಸ್ಯೆ ಸೃಷ್ಟಿಯಾಗಬಹುದು.‌

ಕೊಂಡೊಯ್ದ ಯಾವುದೇ ತಿನಿಸು, ಪೊಟ್ಟಣ, ಚೀಲ, ಬಾಟಲಿ ಇತ್ಯಾದಿ‌ಗಳನ್ನು ಕೆರೆ ಆವಾರದಲ್ಲಿ ಬಿಸಾಡಬೇಡಿ. ನಿಗದಿತ ಸ್ಥಳದಲ್ಲಿ ಮಾತ್ರ‌ ಹಾಕಿ.

ಹಕ್ಕಿಗಳಿಗೆ ಆಹಾರದ ಆಮಿಷವೊಡ್ಡಿ, ಆಕರ್ಷಿಸಿ ಫೋಟೊ ತೆಗೆಯುವ ಪ್ರಯತ್ನ ಸರ್ವಥಾ ಬೇಡ.

ಕೆರೆ ಆವಾರದಲ್ಲಿ ಟೆಂಟ್ ಹಾಕಬೇಡಿ. ಆದರೆ, ಮಾಗಡಿಯಲ್ಲಿ ಬಿಸಿಲು ಬಸವಳಿಸುವಷ್ಟಿದೆ. ಹಾಗಾಗಿ, ಇಲ್ಲಿಗೆ ಬರುವವರು ಕ್ಯಾಪ್, ಛತ್ರಿ ಬಳಸಬಹುದು.

ಅನ್ಯ ವಲಸೆ ಹಕ್ಕಿಗಳೂ‌ ಇವೆ. ತರಿ‌ಭೂಮಿ‌ ಅವುಗಳ ಅಡುಗೆ‌ ಮನೆ. ನೀರಿನ‌ ಪಾತಳಿ‌ ಬಿಟ್ಟು.. ಅವುಗಳಿಗೂ ತೊಂದರೆ ಆಗದಂತೆ ನಮ್ಮ ಸಂಚಾರವಿರಲಿ.

ಮಾಗಡಿ ಕೆರೆ ದಂಡೆಯ ಮೇಲೆ ಅಳವಟ್ಟ ಅರಣ್ಯ ಇಲಾಖೆಯ ಫಲಕವನ್ನು ಒಮ್ಮೆ ಗಂಭೀರವಾಗಿ ಓದಿ.‌ ಅಲ್ಲಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.

-ಹರ್ಷವರ್ಧನ ಶೀಲವಂತ,

ಪರಿಸರ ಕಾರ್ಯಕರ್ತ ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT