ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಪ್ರವಾಸ ನೆನಪಿನ ಖಜಾನೆಯಾಗಲಿ

Last Updated 20 ನವೆಂಬರ್ 2022, 22:30 IST
ಅಕ್ಷರ ಗಾತ್ರ

ಪ್ರವಾಸ ಎಂಬುದು ನಮ್ಮ ನಮ್ಮ ಉತ್ಸಾಹವನ್ನು ನವೀಕರಿಸಿಕೊಳ್ಳುವ ಒಂದು ಉತ್ತಮ ವಿಧಾನ. ಹೊಸ ಜಾಗ, ಹೊಸ ಜನ, ಹೊಸ ತಿಳುವಳಿಕೆ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹವನ್ನು ತಂದುಕೊಡಬಲ್ಲವು. ಪ್ರವಾಸ ಎಂಬುದು ಉದ್ದೇಶವೇ ಇಲ್ಲದ ಸುತ್ತಾಟವಾಗದೆ ಬದುಕಿಡೀ ಹಸಿರಾಗಿ ಉಳಿಯುವಂಥ ಕ್ಷಣಗಳ, ಅರ್ಥಪೂರ್ಣ ಸಂಗತಿಗಳು, ಸಂಭ್ರಮದ ಬೆರಗಿನ ಘಟನೆಗಳ ಸಂಗ್ರಹದ ದಾರಿಯಾದರೆ ಅದಕ್ಕಿಂತ ಸಾರ್ಥಕತೆ ಬೇರೊಂದೇನಿದೆ ಅಲ್ಲವೆ. ಹಾಗಾದರೆ ನಮ್ಮ ಮಕ್ಕಳ ‘ಶೈಕ್ಷಣಿಕ ಪ್ರವಾಸ ಅದೊಂದು ಸಾಂದರ್ಭಿಕ ಪ್ರಯಾಸವಾಗದೆ ನಿಜ ಅರ್ಥದಲ್ಲಿ ಅರ್ಥಪೂರ್ಣ ಶೈಕ್ಷಣಿಕ ಪ್ರವಾಸವಾಗಿಸಿಕೊಳ್ಳುವ ಬಗ್ಗೆ ನಾವು ಕೆಲವು
ಸಂಗತಿಗಳನ್ನು ಪರಿಗಣಿಸಬಹುದು.

ನಾವು ಕೈಗೊಳ್ಳುತ್ತಿರುವುದು ಮಕ್ಕಳ ಶೈಕ್ಷಣಿಕ ಪ್ರವಾಸವಾದ್ದರಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ಆದೇಶದಲ್ಲಿನ ಮಾರ್ಗದರ್ಶಿ ಅಂಶಗಳನ್ನ ಗಂಭೀರವಾಗಿ ಪರಿಗಣಿಸಿ ಅದರಂತೆ ನಡೆದುಕೊಳ್ಳುವುದು. ನಾಡು ಸುತ್ತಿ ಅನುಭವ ಇರುವ ಶಿಕ್ಷಕರು ಅಥವಾ ಅಥವಾ ಇತರರು ಸೇರಿ ಪ್ರವಾಸಕ್ಕೆ ಯೋಗ್ಯ ಸ್ಥಳಗಳನ್ನ ಆಯ್ಕೆ ಮಾಡಿ ಅಗತ್ಯ ನೀಲನಕ್ಷೆಯನ್ನು ತಯಾರಿಸಿಕೊಳ್ಳುವುದು. ಪ್ರವಾಸಕ್ಕೆ ಹೊರಡುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆಯೂ
ಇರುವಂತೆ ನೋಡಿಕೊಳ್ಳುವುದು. ಮುಖ್ಯವಾಗಿ ವಿದ್ಯಾರ್ಥಿನಿಯರ ಕಾಳಜಿ, ಸುರಕ್ಷತೆ ಮತ್ತು ಮಾರ್ಗದರ್ಶನಕ್ಕಾಗಿ ಗುರುಮಾತೆಯರೂ ಇರುವುದು ಅಪೇಕ್ಷಣೀಯ ಮತ್ತು ಸೂಕ್ತ.

ಪ್ರವಾಸಕ್ಕೆ ಹೊರಡುವ ಮಕ್ಕಳ ಆರೋಗ್ಯದ ಕಾಳಜಿ ಅತಿಮುಖ್ಯ. ಚಳಿಗಾಲವಾದ್ದರಿಂದ ಮಕ್ಕಳಿಗೆ ಬೆಚ್ಚಗಿನ ಬಟ್ಟೆ ಹೊದಿಕೆ, ಅಗತ್ಯ ಔಷಧಿ ಜೊತೆಗಿರುವಂತೆ ನೋಡಿಕೊಳ್ಳುವುದು. ಪ್ರವಾಸಕ್ಕೆ ಹೊರಡುವ ಪ್ರತಿ ಮಗುವಿಗೂ ಕ್ಯಾಪ್ ಅಥವಾ ಬ್ಯಾಡ್ಜ್ ನೀಡುವುದು. ಇದರಿಂದ ಮಕ್ಕಳನ್ನ ಗುಂಪಿನಲ್ಲಿರುವಾಗ ಸಹಜವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಪ್ರವಾಸದ ಸ್ಥಳಗಳನ್ನು ಆಯ್ಕೆ ಮಾಡುವಾಗ ಮಕ್ಕಳ ಮನೋವಿಕಾಸಕ್ಕೆ ಅನುಕೂಲವಾಗುವಂಥ, ಅವರ ಕುತೂಹಲ ತಣಿಸುವಂಥ ಬೆರಗು ಹೆಚ್ಚಿಸುವಂಥ ಸ್ಥಳಗಳಿಗೆ ಆದ್ಯತೆಯಿರಲಿ. ಮಕ್ಕಳ ವಯೋಮಾನ ಮತ್ತು ಆಸಕ್ತಿಗಳಿಗನುಗುಣವಾಗಿ ಸ್ಥಳಗಳ ಆಯ್ಕೆಯಿದ್ದರೆ ಒಳ್ಳೆಯದು.

ಮುಖ್ಯವಾಗಿ ಮಕ್ಕಳಿಗೆ ಹೂವು ಹಸಿರು, ಪ್ರಾಣಿ, ಪಕ್ಷಿ, ಚಿಟ್ಟೆ, ಮೀನುಗಳಿರುವಂಥ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳು, ಚಿಟ್ಟೆ ಪಾರ್ಕ್, ಅಕ್ವೇರಿಯಂಗಳಿಗೆ ನೈಜ ಮತ್ತು ಉಲ್ಲಾಸದ ಅನುಭವಗಳನ್ನು ನೀಡುವುದರಿಂದ ಇವುಗಳಿಗೆ ಆದ್ಯತೆಯನ್ನ ನೀಡಬಹುದು.

ಹೊಸ ಜನ, ವಿಭಿನ್ನ ವಿಶಿಷ್ಟ ಜೀವನ ಶಿಕ್ಷಣ ಸಂಸ್ಕೃತಿ ಕೇಂದ್ರಗಳಾದಂಥ ಮುಂಡಗೋಡ ಮತ್ತು ಬೈಲುಕುಪ್ಪೆ ಯಾವುದು ಹತ್ತಿರವೋ ಆ ಸ್ಥಳವನ್ನ ಆಯ್ಕೆ ಮಾಡಿ ಅಲ್ಲಿಗೂ ಭೇಟಿನೀಡಬಹುದು. ಮಕ್ಕಳ ಮನೋಲೋಕದಲ್ಲಿ ಈ ಸ್ಥಳಗಳ ಭೇಟಿ ಆನಂದದಾಯಕ ಅನುಭವಗಳಾಗಿ
ಉಳಿಯಬಲ್ಲವು.

ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡಂಥ ಸ್ಥಳಗಳಲ್ಲಿ ಇರಬಹುದಾದ ವಿಭಿನ್ನ ಕ್ಷೇತ್ರಗಳ ವಿಭಿನ್ನ ವಯೋಮಾನದ ಸಾಧಕರನ್ನ ಗುರುತಿಸಿಕೊಂಡು ಮಕ್ಕಳಿಗೆ ಅವರನ್ನ ಭೇಟಿ ಮಾಡಿಸಿ ಅವರೊಂದಿಗೆ ಸಂವಾದವನ್ನ ಏರ್ಪಡಿಸಬಹುದು. ಇದು ಪ್ರವಾಸಕ್ಕೆ ನಿಜವಾದ ಅರ್ಥಪೂರ್ಣತೆಯನ್ನು ತರಬಲ್ಲದು. ಮಕ್ಕಳ ಪಠ್ಯದಲ್ಲಿ ನಮೂದಿಸಲಾದ ಅಥವಾ ಪಠ್ಯದ ಅಂಶಗಳಿಗೆ ಹತ್ತಿರವಾದ ಸ್ಥಳಗಳಿಗೆ ಭೇಟಿ ನೀಡಿ ಕಲಿಕೆಯನ್ನ ಸಾಕ್ಷಾತ್ಕರಿಸಿಕೊಳ್ಳುವುದು ನಿಜಕ್ಕೂ ಅಮೋಘವಾದದ್ದು. ಆ ಸ್ಥಳಗಳ ವಿಶಿಷ್ಟತೆ, ಐತಿಹ್ಯಗಳು, ಐತಿಹಾಸಿಕ ಮಹತ್ವ, ಅಲ್ಲಿನ ಜೀವನಕ್ರಮ ಮುಂತಾದ ಅಂಶಗಳನ್ನ ಅಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ವ್ಯಕ್ತಿಗಳು ಅಥವಾ ಗೈಡ್ ಗಳ ಸಹಾಯದಿಂದ ಮಕ್ಕಳ ಜ್ಞಾನವಿಕಾಸಕ್ಕೆ ಅವಕಾಶ ಮಾಡಿಕೊಡಬಹುದು.

ಪ್ರವಾಸಕ್ಕೆ ಹೊರಡುವ ಪ್ರತಿಮಗುವಿನ ಕೈಯಲ್ಲೊಂದು ನೋಟ್ ಪುಸ್ತಕ ಅಥವಾ ಡೈರಿ ಇರಲಿ. ಇದರಲ್ಲಿ ಮಗು ತನಗೆ ದಕ್ಕಿದ ವಿಶಿಷ್ಟ ಅನುಭವಗಳನ್ನ, ತಿಳಿದುಕೊಂಡ ವಿಷಯಗಳನ್ನ ತನ್ನದೇ ಭಾಷೆಯಲ್ಲಿ ಟಿಪ್ಪಣಿ ಮಾಡಿಕೊಳ್ಳಲಿ. ಮಾರ್ಗಮಧ್ಯ ಈ ಟಿಪ್ಪಣಿಗಳ ಸಹಾಯದಿಂದ ಮಕ್ಕಳು ಒಬ್ಬೊಬ್ಬರಾಗಿ ತಮ್ಮ ತಮ್ಮ ತಿಳುವಳಿಕೆಯನ್ನ ಇತರ ಮಕ್ಕಳೊಂದಿಗೆ ಹಂಚಿಕೊಳ್ಳಲು ಅವಕಾಶ ಕೊಟ್ಟರೆ ಉಳಿದ ಮಕ್ಕಳೂ ಸಹ ಒಂದು ಮಹ್ತವದ ಸ್ಥಳವನ್ನ ಅಥವಾ ವಾತಾವರಣವನ್ನ ಹೇಗೆ ಗ್ರಹಿಸಬೇಕು ಅನುಭವಕ್ಕೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿ ಮುಂದಿನ ಸ್ಥಳಗಳನ್ನ ಮತ್ತಷ್ಟು ಆಸಕ್ತಿ ಮತ್ತು ಕುತೂಹಲದಿಂದ ನೋಡಲು ಸಾಧ್ಯವಾಗುತ್ತದೆ.

ಈಗೀಗ ಪುಟ್ಟ ಮಕ್ಕಳೂ ಸಹ ಮೊಬೈಲ್ ತರುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಇದನ್ನ ನಿರಾಕರಿಸಬೇಕು. ಮಕ್ಕಳು ಮೊಬೈಲ್ ನಲ್ಲಿ ಸೆಲ್ಫಿ, ಫೋಟೊ ಅಥವಾ ವಿಡಿಯೋ ತೆಗೆಯುವದರಲ್ಲಿ ಮುಳುಗಿ ಪ್ರವಾಸದ ನಿಜ ಅನುಭವ ದಕ್ಕದೆ ಬರೀ ದೃಶ್ಯಗಳಲ್ಲಿ ಸೆರೆಯಾಗಿ ಅಮೂಲ್ಯ ಘಟನೆಗಳನ್ನ ಆಸ್ವಾದಿಸದೆ ಹೋಗಬಹುದು. ಬದಲಾಗಿ ಶಾಲೆ ವತಿಯಿಂದಲೇ ಬಾಡಿಗೆಗಾದರೂ ಸರಿ ಒಂದು ಒಳ್ಳೆಯ ಕ್ಯಾಮೆರಾ ತೆಗೆದುಕೊಂಡು ಹೋಗುವುದು ಸೂಕ್ತ. ಪ್ರವಾಸದಲ್ಲಿ ಸಿಕ್ಕಿದ ದಕ್ಕಿದ ವಿಶಿಷ್ಟ ಅನುಭವಗಳ ಮಕ್ಕಳ ನೆನಪಿನ ಕೋಶದ ಖಜಾನೆಯಲ್ಲಿ ಶಾಶ್ವತವಾಗಿ ಉಳಿದು ಜೀವನಪೂರ್ತಿ ನೆನಪಿಡುವಂತಾಗಬೇಕು. ಕೇವಲ ಸಾಂದರ್ಭಿಕ ಕ್ರಿಯೆಯಾಗಿ
ಅನಿವಾರ್ಯತೆಗಾಗಿ ಅಥವಾ ಸಮಯಕಳೆಯುವುದಕ್ಕಾಗಿ ಎಂಬ ಭಾವನೆ ಮೂಡದೆ ಪ್ರವಾಸ ಎಂಬುದು ಒಂದು ಜೀವನಪೂರ್ತಿ ನಾವು ಬೆಳೆಸಿಕೊಳ್ಳಲೇಬೇಕಾದ ಒಂದು ಮೌಲ್ಯಯುತ ಹವ್ಯಾಸವಾಗಿ ಮಕ್ಕಳಲ್ಲಿ ಬೆಳೆಸಲು ಸಾಧ್ಯವಾದರೆ ಪ್ರವಾಸದ ಪರಿಕಲ್ಪನೆ ಸಾರ್ತಕತೆಯನ್ನು ಪಡೆಯುತ್ತದೆ, ನಿಜ ಉದ್ದೇಶಗಳು ಸಫಲವಾಗುತ್ತವೆ.

ಪ್ರವಾಸ ಹಲವು ನೆನಪುಗಳ ನೆನಪುಗಳ ಖಜಾನೆ. ಪ್ರವಾಸ ಹೋಗಿ ಬಂದ ಮಕ್ಕಳಿಗೆ ಸ್ವಲ್ಪ ಸಮಯಾವಕಾಶ ಕೊಟ್ಟು ಆ ಮಕ್ಕಳು ತಮ್ಮ ಅನುಭವ ನೆನಪುಗಳನ್ನ ತಮ್ಮದೇ ಆದ ಭಾಷೆಯಲ್ಲಿ ದಾಖಲಿಸಲು ಪ್ರೇರಣೆ ನೀಡಬೇಕು. ಬರವಣಿಗೆ ರೂಪದಲ್ಲೂ ಮಕ್ಕಳ ಅನುಭವ ದಾಖಲಿಸಿ, ನಿಯತಕಾಲಿಕೆಗಳು ಕಳಿಸಲು ಪ್ರೋತ್ಸಾಹ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT