ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಟ್ಟುಪೆಟ್ಟಿ' ಹಸಿರು ಕೋಟೆಯ ನಡುವಿನ ಚೆಲುವೆ

Last Updated 13 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಮುನ್ನಾರ್‌ ಎಂದರೆ ಅದು ಮಧುಚಂದ್ರದ ತಾಣ ಎಂದೇ ಪ್ರಸಿದ್ಧಿ. ಆದರೆ, ಈ ಭೂಲೋಕದ ಸ್ವರ್ಗಕ್ಕೆ ಯಾವ ವಯಸ್ಸಿನಲ್ಲಿ ಹೋದರೂ ಅದೊಂದು ಮಧುರ ಅನುಭವವೇ ಆದೀತು.ಅಲ್ಲಿಗೆ ಹೋಗುವ ಹಾದಿಯೇ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಪುಟ್ಟ ಮಗುವಿನ ರೀತಿ ಅಚ್ಚರಿಗೊಳ್ಳುತ್ತಾ ಸಾಗುವಾಗ ಇಹದ ಪರಿವೆಯೇ ಇರದು.

ಮುನ್ನಾರ್‌ ಪ್ರವಾಸ ಎಂದರೆ ಚಹಾ ತೋಟ, ಜಲಪಾತ, ಮ್ಯೂಸಿಯಂ, ಪುಷ್ಪೋದ್ಯಾನ, ಆನೆ ಸವಾರಿಯನ್ನಷ್ಟೇ ನೆನಪಿಸಿಕೊಳ್ಳುತ್ತೇವೆ. ಆದರೆ, ಪ್ರವಾಸಿಗರು ನೋಡಬೇಕಾದ ಪ್ರಮುಖವಾದ ತಾಣ ಅಲ್ಲಿದೆ. ಅದೇ ಮಟ್ಟುಪಟ್ಟಿ ಅಣೆಕಟ್ಟು.

ಮುನ್ನಾರ್‌ ನಗರದಿಂದ 13 ಕಿ.ಮೀ ದೂರದ ವರೆಗೆ ಹಸಿರು ಕಣಿವೆಯ ಹಾದಿಯಲ್ಲಿ ಟೀ ತೋಟಗಳ ನಡುವೆ ಸಾಗಿದರೆ ಮಟ್ಟುಪೆಟ್ಟಿ ಸಿಗುತ್ತದೆ. ಹಸಿರು ಕೋಟೆಯಂತಹ ಸುತ್ತುವರಿದಿರುವ ಬೆಟ್ಟಗಳ ನಡುವೆ ಅನಮುಡಿ ಉತ್ತುಂಗದಲ್ಲಿ ಈ ಜಲಾಶಯವಿದೆ. ಅಲ್ಲಿ ನಿಂತರೆ ವಿದೇಶದ ರುದ್ರ ರಮಣೀಯ ಜಾಗವೊಂದರಲ್ಲಿದ್ದೇವೆ ಎಂಬ ಅನುಭವವಾಗುತ್ತದೆ.

ಈ ಅಣೆಕಟ್ಟು ಮತ್ತು ಅದರಾಚೆಯ ಸರೋವರದ ಬಳಿ ಹೋದರೆ ವಾಪಸ್ ಬರಲು ಮನಸಾಗದು. ಅಷ್ಟು ದೂರ ಪ್ರಯಾಣ ಮಾಡಿದ ಆಯಾಸ ಒಂದು ಕ್ಷಣದಲ್ಲಿ ಮರೆಯಾಗಿ ಉಲ್ಲಾಸ ಮೈತುಂಬುತ್ತದೆ. ಅಲ್ಲಿ ಕ್ಯಾಮೆರಾಗೆ ಕೆಲಸವೇ ಇಲ್ಲ. ಹೇಗೆ ಕ್ಲಿಕ್ಕಿಸಿದರೂ ಅದ್ಭುತ ದೃಶ್ಯವೇ ಸೆರೆಯಾಗುತ್ತದೆ. ಡ್ಯಾಂನ ಸುತ್ತಲೂ ಪರ್ವತ ಶ್ರೇಣಿ, ದಟ್ಟ ಹಸಿರಿನ ಆವರಣವನ್ನೇ ನಿರ್ಮಿಸಿದಂತಿದೆ.

ಆಣೆಕಟ್ಟೆಯ ಮೇಲಿಂದ ಆಚೆ ದಾಟಿ ಕಾಡು ನಡುವಿನ ರಸ್ತೆಯಲ್ಲಿ 2 ಕಿ.ಮೀ ಸಾಗಿದರೆ ಅಲ್ಲೊಂದು ಸುಂದರವಾದ ಸರೋವರವಿದೆ. ಜಗತ್ತಿನ ಇಡೀ ಸೌಂದರ್ಯವೇ ಕಾಲು ಮುರಿದು ಕೂತಿರುವಂತೆ ಕಾಣುತ್ತದೆ ಆ ತಾಣ. ಅಲ್ಲಿಗೆ ಇಕೊ ಪಾಯಿಂಟ್‌ ಎಂದೂ ಕರೆಯುತ್ತಾರೆ. ಅಲ್ಲಿ ನಿಂತು ಕೂಗಿದರೆ ಆ ಕಡೆಯಿಂದ ಪ್ರತಿಧ್ವನಿ ಕೇಳಿಸುತ್ತದೆ. ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ (ಡಿಟಿಪಿಸಿ) ದೋಣಿ ವಿಹಾರದ ಸೌಕರ್ಯ ಒದಗಿಸಿದೆ. ಸರೋವರದ ದಡದಲ್ಲಿ ನಡೆಯುವುದೇ ಒಂದು ಆಹ್ಲಾದಕರ ಅನುಭವ. ಕಣ್ಣು ಹಾಯುವಷ್ಟು ದೂರದವರೆಗೂ ಬರೀ ಹಸಿರು.

ಸೆಪ್ಟೆಂಬರ್‌ನಿಂದ ಮೇ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತಕಾಲ. ಅದೆಷ್ಟು ಗಂಟೆಗಳಪ್ರಯಾಣವಾದರೂ ಸರಿ, ಸ್ವಂತ ವಾಹನವಿರಲಿ, ಬಸ್‌ ಪ್ರಯಾಣವೇ ಇರಲಿ ಹಗಲು ಪ್ರಯಾಣವೇ ಚೆನ್ನ. ಹಸಿರು ಸೌಂದರ್ಯ, ಪ್ರಪಾತಗಳ ನಡುವೆ ಸಾಗುವಾಗ ಸಿಗುವ ಆನಂದವೇ ಬೇರೆ.

ಮುನ್ನಾರ್‌ಗೆ ಹೋಗುವ ಹಾದಿಯಲ್ಲಿಯೇ ಹಲವು ಹೋಂಸ್ಟೇಗಳು ಸಿಗುತ್ತವೆ. ಅಲ್ಲಿ ಉತ್ತಮ ವಸತಿ ಮತ್ತು ಸೈಟ್ ಸೀಯಿಂಗ್ ವ್ಯವಸ್ಥೆ ಇದೆ. ಮುನ್ನಾರ್‌ ನಗರಕ್ಕೆ ಹೋದರೆ ವಸತಿ ವ್ಯವಸ್ಥೆ ನೀಡುವ ಅನೇಕ ಹೋಟೆಲುಗಳಿವೆ. ಅಲ್ಲಿ ತಂಗಿದರೆ ಇಳಿಸಂಜೆ ಮತ್ತು ಮುಂಜಾನೆಯ ಅದ್ಭುತ ಘಳಿಗೆಯನ್ನು ಅನುಭವಿಸಬಹುದು.

ಚಿತ್ರಗಳು: ಲೇಖಕರವು

**

ಚೇತರಿಸಿಕೊಳ್ಳುತ್ತಿದೆ ಮುನ್ನಾರ್‌

ಕಳೆದ ಆಗಸ್ಟ್‌ನಲ್ಲಿ ಉಂಟಾದ ಪ್ರಕೃತಿ ವಿಕೋಪ, ಮುನ್ನಾರ್‌ನನ್ನೇ ಅಲುಗಾಡಿಸಿತ್ತು. ಡಿಸೆಂಬರ್‌ನಲ್ಲಿ ಭೇಟಿ ನೀಡಿದಾಗ ರಸ್ತೆಯ ಬದಿಗಳಲ್ಲಿ ಮಣ್ಣು ಕುಸಿದ ಕುರುಹಾಗಿ ಗಾಯಗೊಂಡಂತಿರುವ ಬೆಟ್ಟಗಳು ಕಂಡವು.

ಮುನ್ನಾರ್ ಪೇಟೆಯಲ್ಲಿ ಬಸ್‌ನಿಂದ ಇಳಿಯುತ್ತಿದ್ದಂತೆ ಪ್ರವಾಸಿ ತಾಣಗಳ ಪಟ್ಟಿ ಹಿಡಿದು ಬರುವ ಯುವಕರು ಆಟೊ, ಜೀಪುಗಳಲ್ಲಿ ಕರೆದೊಯ್ಯಲು ಮುಂದಾಗುತ್ತಾರೆ. ಐದಾರು ಕಿ.ಮೀ ವ್ಯಾಪ್ತಿಯ ಹತ್ತಾರು ಸ್ಥಳಗಳಿಗೆ ಕೇವಲ ಐನೂರು ರೂಪಾಯಿ.

ಹೋಗುವುದು ಹೇಗೆ?

ಬೆಂಗಳೂರಿನಿಂದ ಮುನ್ನಾರ್‌ಗೆ ನೇರ ಬಸ್‌ ವ್ಯವಸ್ಥೆ ಇದೆ. ಸಾಕಷ್ಟು ಬಸ್‌ಗಳು ಇವೆ. ಈ ಬಸ್‌ ಮೈಸೂರಿನಿಂದ ತ್ರಿಶೂರ್ ಮಾರ್ಗವಾಗಿ ಮುನ್ನಾರ್‌ಗೆ ತಲುಪುತ್ತದೆ. ಸುಮಾರು ಹತ್ತರಿಂದ ಹನ್ನೊಂದು ಗಂಟೆಗಳ ಪ್ರಯಾಣ. ರಾಜ್ಯದ ಬೇರೆ ಬೇರೆ ಊರುಗಳಿಂದಲೂ ಟ್ರಾವೆಲ್ಸ್‌ ಕಂಪನಿಗಳ ಬಸ್‌ಗಳಿವೆ.

ರೈಲಿನಲ್ಲಿ ಹೋಗುವವರು

ರೈಲಿನಲ್ಲಿ ಹೋಗುವವರು ಬೆಂಗಳೂರಿನಿಂದ ಅಂಗಮಲಿ ರೈಲ್ವೆ ನಿಲ್ದಾಣ ತಲುಪಬೇಕು. ಇದು ಅಲುವಾ - ಮುನ್ನಾರ್ ಹಾದಿಯಲ್ಲಿದೆ. ಇಲ್ಲಿಂದ ಮುನ್ನಾರ್‌ ನಗರಕ್ಕೆ109 ಕಿ.ಮೀ. ಎರ್ನಾಕುಲಂ ಮೂಲಕವೂ ಈ ಜಲಾಶಯವನ್ನು ತಲುಪಬಹುದು.

ವಿಮಾನ ಸೌಲಭ್ಯ

ಬೆಂಗಳೂರಿನಿಂದ ಕೊಚ್ಚಿನ್‌ಗೆ ವಿಮಾನ ಸೌಲಭ್ಯವಿದೆ. ಕೊಚ್ಚಿನ್‌ನಿಂದ – ಮುನ್ನಾರ್‌ಗೆ 108 ಕಿ.ಮೀ. ಬಸ್‌ ಅಥವಾ ರೈಲಿನಲ್ಲಿ ಪ್ರಯಾಣಿಸಬಹುದು.

ಏನೇನು ನೋಡಬಹುದು?

ಮುನ್ನಾರ್‌ ನಗರದಿಂದ 15 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಹಲವು ಪ್ರವಾಸಿ ತಾಣಗಳನ್ನು ನೋಡಬಹುದು. ಅವುಗಳಲ್ಲಿ ಒಂದಿಷ್ಟು ತಾಣಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಕುಂಡಾಲಾ ಲೇಕ್ ‌

ಇದು ಬೋಟಿಂಗ್‌ ಸುಖ ಅನುಭವಿಸುವ ತಾಣ. ಸ್ಟೀಡ್ ಬೋಟ್, ಫ್ಯಾಮಿಲಿ ಬೋಟ್‌ಗಳಲ್ಲಿ ವಿಶಾಲವಾದ ಕೊಳದಲ್ಲಿ ಬೆಟ್ಟ ಗುಡ್ಡಗಳ ತಪ್ಪಲನ್ನು ಸುತ್ತಬಹುದು.

ಆನೆ ಸವಾರಿ

ಕುಂಡಾಲ ಲೇಕ್‌ ಪಕ್ಕದಲ್ಲೇ ಆನೆ ಸವಾರಿಗೂ ಅವಕಾಶವಿದೆ. ಇದು ಆನೆಗಳು ಕಾಡಿನಿಂದ ಇಳಿದು ಬರುವ ಜಾಗವೂ ಹೌದು.

ಟಾಟಾ ಟೀ ಮ್ಯೂಸಿಯಂ

ಮುನ್ನಾರ್‌ನಲ್ಲಿ ಬ್ರಿಟಿಷ್ ವಸಾಹತು ಶಾಹಿ ಕಾಲದ ಅತ್ಯಮೂಲ್ಯ ವಸ್ತುಗಳ ಸಂಗ್ರಹವೆಂದರೆ ಅಲ್ಲಿನ ಟಾಟಾ ಟೀ ಮ್ಯೂಸಿಯಂ. ಹಸಿ ಎಲೆಗಳಿಂದ ಚಹಾ ಪುಡಿ ತಯಾರಿಸುವ ಪ್ರಕ್ರಿಯೆಯನ್ನು ಟೀ ಪರಿಮಳದೊಂದಿಗೆ ಸವಿಯಬಹುದು. ಕಣ್ಣನ್‌ ದೇವನ್‌ ಟೀ ಎಸ್ಟೇಟ್‌ಗಳನ್ನೂ ನೋಡಬಹುದು.

ರಾಜಾಮಲೈ ನ್ಯಾಷನಲ್ ಪಾರ್ಕ್

ಬೆಳಿಗ್ಗೆ 7.30ರಿಂದ ಸಂಜೆ 4ರವರೆಗೆ ತೆರೆದಿರುತ್ತದೆ. ಅದ್ಭುತ ಪ್ರಕೃತಿ ಸೌಂದರ್ಯದ ರಾಶಿ ನೋಡಲು ರಾಜಾಮಲೈ ಪಾರ್ಕ್‌ಗೆ ಹೋಗಬೇಕು.97 ಚದರ ಕಿ.ಮೀನಷ್ಟು ವಿಸ್ತಾರದಲ್ಲಿ ಹರಡಿಕೊಂಡಿರುವ ಉದ್ಯಾನದಲ್ಲಿ ವಿಶಿಷ್ಟ ಸಸ್ಯ, ಜೀವಿ ಸಂಕುಲವಿದೆ. ಹುಲ್ಲುಗಾವಲು, ಶೋಲಾ ಅರಣ್ಯದಲ್ಲಿ ನೀಲಗಿರಿ ಥಾರ್ (ಆಡು) ಅಲ್ಲಿನ ವಿಶೇಷ. ಕಳೆದ ವರ್ಷಾಂತ್ಯ ಇಲ್ಲಿ ನೀಲ ಕುರಿಂಜಿ ಹೂ ಅರಳಿತ್ತು.

ಆನೆಮುಡಿ

ಸುಮಾರು 2,695 ಅಡಿ ಎತ್ತರದ ಈ ಪ್ರದೇಶಚಾರಣಿಗರ ಸ್ವರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT