ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಧ್‌ಪುರದ ಅರಮನೆಯೊಳಗೆ

Last Updated 22 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ರಾಜಸ್ಥಾನದಲ್ಲಿ ಜೈಪುರ ಪಿಂಕ್‌ ಸಿಟಿಯಾದರೆ, ಕೋಟೆಗಳ ನಗರಿ ಜೋಧ್‌ಪುರ ‘ಬ್ಲ್ಯೂ ಸಿಟಿ’, ‘ಸನ್‌ ಸಿಟಿ’ ಎಂದೇ ಖ್ಯಾತಿ ಪಡೆದಿದೆ. ಇಲ್ಲಿನ ಮೆಹರಾಂಗಡ್ ಕೋಟೆ ವಿಶಿಷ್ಟ ಪ್ರವಾಸಿ ತಾಣ.

ಭೂಮಟ್ಟದಿಂದ 400ಅಡಿ ಎತ್ತರದಲ್ಲಿರುವ ಈ ಕೋಟೆಯೊಳಗೆ ವಿಶಾಲವಾದ ಹೊರಾಂಗಣವಿದೆ ಜತೆಗೆ ಹಲವು ಮಹಲುಗಳಿವೆ. 160 ಅಡಿ ಎತ್ತರವಿರುವ ಈ ಕೋಟೆ 1459ರಲ್ಲಿ ನಿರ್ಮಾಣವಾಗಿತ್ತು. ಈ ಕೋಟೆಯು ಏಳು ಗೇಟ್‌ಗಳನ್ನು ಒಳಗೊಂಡಿದೆ.

ಇದೊಂದು ಐತಿಹಾಸಿಕ ನಗರ. 15ನೇ ಶತಮಾನದಲ್ಲಿ ಈ ನಗರವನ್ನು ರಾವ್‌ಜೋಧಾ ಆಳುತ್ತಿದ್ದರಂತೆ. ಇಲ್ಲಿನ ಕೋಟೆಯ ಒಳಗೆ ಭವ್ಯವಾದ ಅರಮನೆ ಇದೆ. ಇಲ್ಲಿನ ಮಹಲುಗಳನ್ನು ಏರಲು ಎಲಿವೇಟರ್‌ ವ್ಯವಸ್ಥೆ ಇದೆ.

ಬೆಟ್ಟದ ಮೇಲೆ ನಿರ್ಮಿಸಿರುವ ಕೋಟೆ ಈಗಲೂ ಸುಭದ್ರ. ಅಷ್ಟೇ ಅಲ್ಲ, ಅರಮನೆಯ ಒಳಗಡೆ ತಂಪಾದ ವಾತಾವರಣವಿರುತ್ತದೆ. ಒಮ್ಮೆ ಒಳ ಹೊಕ್ಕರೆ, ಎಷ್ಟು ಹೊತ್ತಾದರೂ ಈಚೆಗೆ ಬರಲು ಮನಸು ಒಲ್ಲೇ ಎನ್ನುತ್ತದೆ.

ಇಲ್ಲಿ ಮೋತಿ ಮಹಲ್, ಹೂವಿನ ಅರಮನೆ, ಶೀಶ ಮಹಲ್ (ಕನ್ನಡಿ ಅರಮನೆ)ಗಳಿವೆ. ಇಲ್ಲಿ ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳು ಚಿತ್ರೀಕರಣಗೊಂಡಿವೆ. ಮೊದಲು ಅರಮನೆಯಾಗಿದ್ದ ಕೋಟೆ ಈಗ ಮ್ಯೂಸಿಯಂ ಆಗಿದೆ.

ಮ್ಯೂಸಿಯಂನಲ್ಲಿ ವೈವಿಧ್ಯಮಯ ಅಂಬಾರಿಗಳಿವೆ. ಕತ್ತಿಗಳು, ನಾಣ್ಯಗಳು ಕಲ್ಲಿನ ಗುಡಾಣಗಳು, ಸೂಕ್ಷ್ಮವಾಗಿ ಕೆತ್ತನೆ ಮಾಡಿರುವ ಪಡಸಾಲೆಗಳಿವೆ. ಪಲ್ಲಕ್ಕಿ, ಆ ಕಾಲದ ತೊಟ್ಟಿಲು, ಚಿತ್ರಕಲೆಗಳು, ಸಂಗೀತ ಉಪಕರಣಗಳು, ಪೀಠೋಪಕರಣಗಳಿವೆ. ಹಳೆಯ ಕಾಲದ ಫಿರಂಗಿಗಳಿವೆ. ಅಲ್ಲಿಂದ ನಿಂತು ನಗರದ ಸುಂದರ ದೃಶ್ಯವನ್ನು ನೋಡಬಹುದು.

ಅರಮನೆಯ ಒಳಗಡೆ ಕರಕುಶಲ ವಸ್ತುಗಳನ್ನು ಮಾರುವ ಅಂಗಡಿಗಳಿವೆ. ಬಹಳ ವಿಶಿಷ್ಟ ಎನ್ನುವಂತಹ ಕುಸುರಿ ಕೆತ್ತನೆಗಳು, ಅಲಂಕಾರಿಕ ವಸ್ತುಗಳು ಸಿಗುತ್ತವೆ. ರಾಜಸ್ಥಾನದ ಒಂಟೆಯ ಚಪ್ಪಲಿಗಳು ನೋಡಲು ಸುಂದರ, ಧರಿಸಿದರೆ ಆರಾಮದಾಯಕ.

ಚಳಿಗಾಲದಲ್ಲಿ ಇಲ್ಲಿ ಸಿಗುವ ಎಳ್ಳಿನ ಸಿಹಿ ತಿನಿಸು ಭಾರಿ ಪ್ರಸಿದ್ಧಿ ಪಡೆದಿದೆ. ಇವೆಲ್ಲವನ್ನೂ ನೋಡುತ್ತಿದ್ದರೆ, ಜೋಧ್‌ಪುರಕ್ಕೂ ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೂ ಏನೋ ನಂಟಿರಬೇಕು ಎನ್ನಿಸುತ್ತದೆ.

ಜೋಧ್‌ಪುರದಲ್ಲಿ ನೋಡಲು ಇನ್ನು ಹತ್ತಾರು ಸ್ಥಳಗಳಿದ್ದರೂ ನಾವು ಮಂಡೋರ್ ಉದ್ಯಾನವನ ಮತ್ತು ಉಮೈದ್ ಭವನ ಅರಮನೆ ನೋಡಿ ಬಂದೆವು. ಮಂಡೋರ್ ಉದ್ಯಾನ ರಾವಣನ ಪತ್ನಿ ಮಂಡೋದರಿಯದು ಎಂಬುದು ಸ್ಥಳೀಯರ ನಂಬಿಕೆ. ಇದು ಮಂಡೋದರಿಯ ತವರು ಮನೆಯಂತೆ. ಇಲ್ಲಿ ಶಿಥಿಲವಾದ ಕೋಟೆ, ಪಾಳು ಬಿದ್ದ ಹಳೆಯ ದೇವಾಲಯಗಳಿವೆ. ಜತೆಗೆ, ಅದ್ಭುತವಾದ ಶಿಲ್ಪಗಳನ್ನೊಳಗೊಂಡ ದೇವಾಲಯಗಳು, ಉದ್ಯಾನವನ, ಮ್ಯೂಸಿಯಂಗಳೂ ಇವೆ.

ನಾವು ಇಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟೆವು. ಉಮೈದ್ ಭವನ ಅರಮನೆಗೂ ಹೋಗಿಬಂದೆವು. ಅಲ್ಲಿಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇಲ್ಲಿ ಮಹಾರಾಜರು ಉಪಯೋಗಿಸುತ್ತಿದ್ದ ಐಷಾರಾಮಿ, ಆಧುನಿಕ ಕಾರುಗಳನ್ನು ನೋಡಬಹುದು.

ಹೋಗುವುದು ಹೇಗೆ ?

ಬೆಂಗಳೂರಿನಿಂದ ಜೋಧ್‌ಪುರಕ್ಕೆ ರೈಲು ಮತ್ತು ವಿಮಾನದಲ್ಲಿ ತಲುಪಬಹುದು. ನಗರದಿಂದ 5 ಕಿ.ಮೀ ದೂರದಲ್ಲಿ ವಿಮಾನ ನಿಲ್ದಾಣವಿದೆ. ಅಲ್ಲಿಂದ ಟ್ಯಾಕ್ಸಿ ಸಿಗುತ್ತದೆ.

ದೆಹಲಿ, ಜೈಪುರದ ಮೂಲಕ ರೈಲಿನಲ್ಲಿ ಜೋಧ್‌ಪುರ ತಲುಪಬಹುದು. ಚೆನ್ನೈ ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಕಡೆಯಿಂದ ರೈಲು ಸಂಪರ್ಕವಿದೆ. ಬಿಕನೇರ್, ಜೈಪುರ, ಜೈಸಲ್ಮೇರ್‌ನಿಂದ ಖಾಸಗಿ ಬಸ್ ಮೂಲಕವೂ ಪ್ರಯಾಣಿಸಬಹುದು.

ವಸತಿ ವ್ಯವಸ್ಥೆ
ಜೋಧಪುರದಲ್ಲಿ ರೆಸಾರ್ಟ್, ವಸತಿಗೃಹಗಳಿವೆ. ಮೆಹರಾಂಗಡ್ ಕೋಟೆಯ ಮೇಲೆ ರೆಸ್ಟೋರೆಂಟ್‌ ಇದೆ. ಇಲ್ಲಿ ಸಾಂಪ್ರದಾಯಿಕ ರಾಜಸ್ಥಾನಿ ತಾಲಿ ಸಿಗುತ್ತದೆ. ಜತೆಗೆ ಬೇರೆ ದೇಶಗಳ ವೈವಿಧ್ಯಮಯ ಆಹಾರವೂ ಲಭ್ಯ. ಜತೆಗೆ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಬಹುದು.

ಪ್ರವೇಶದ ಸಮಯ :

ಕೋಟೆ ವರ್ಷಪೂರ್ತಿ ತೆರೆದಿರುತ್ತದೆ. ನಿತ್ಯ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಪ್ರವಾಸಿಗರ ಭೇಟಿಗೆ ಅವಕಾಶ. ಪ್ರತಿವರ್ಷ ಮೇ 12ರಂದು (ಕೋಟೆಗೆ ಫೌಂಡೇಷನ್ ಹಾಕಿದ ದಿನ, ಮೇ 12, 1459) ಪ್ರವಾಸಿಗರಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತದೆ. ಚಳಿಗಾಲದಲ್ಲಿ (ಸೆಪ್ಟೆಂಬರ್‌ನಿಂದ ಫೆಬ್ರುವರಿ ಒಳಗೆ) ಇಲ್ಲಿಗೆ ಭೇಟಿ ನೀಡಬಹುದು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT