ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಅಸ್ಸಾಂನ ಜೋನ್‌ಬೀಲ್‌ ಮೇಳ.. ಇಲ್ಲಿ ದುಡ್ಡು ಬೇಕಿಲ್ಲ!– ಕೆ.ಎಸ್.ಚೈತ್ರಾ ಲೇಖನ

Last Updated 7 ಮೇ 2022, 20:45 IST
ಅಕ್ಷರ ಗಾತ್ರ

‘ಇಲ್ಲಿ ನಡೆಯುವ ಮೇಳ ಬಹಳ ಪ್ರಸಿದ್ಧ’ ಎಂದ ನಮ್ಮ ಜತೆಗಿದ್ದ ತರುಣ್. ಮೇಳ ಎಂದರೆ ಜಾತ್ರೆ; ನಮ್ಮಲ್ಲೇನು ಜಾತ್ರೆಗೆ ಬರವೇ ಎಂದುಕೊಂಡು ಅಷ್ಟು ಆಸಕ್ತಿ ತೋರಲಿಲ್ಲ. ‘ಈ ಮೇಳಕ್ಕೆ ರಾಜರು ಬರುತ್ತಾರೆ; ದರ್ಬಾರ್ ಕೂಡಾ ನಡೆಯುತ್ತದೆ. ಅಷ್ಟೇ ಅಲ್ಲ, ಇಲ್ಲಿ ಖರೀದಿಗೆ ದುಡ್ಡು, ಕಾರ್ಡ್, ಚೆಕ್ ಯಾವುದೂ ಬೇಕಿಲ್ಲ’ ಎಂದಾಗ ವಿಚಿತ್ರವೆನ್ನಿಸಿ, ‘ಮತ್ತೆ ವ್ಯಾಪಾರ ಹೇಗೆ?’ ಎಂದು ಪ್ರಶ್ನಿಸಿದೆ. ಇದು ಭಾರತದಲ್ಲಿ ಇಂದಿಗೂ ನಡೆಯುತ್ತಿರುವ ಬುಡಕಟ್ಟು ಜನಾಂಗದವರ ವಿನಿಮಯ ವ್ಯವಸ್ಥೆ (ಬಾರ್ಟರ್) ಜಾರಿಯಲ್ಲಿರುವ ಮೇಳ ಎಂಬ ವಿವರಣೆ ಸಿಕ್ಕಿತು.

ಜೋನ್‌ಬೀಲ್‌ ಮೇಳ

ಅಸ್ಸಾಮಿನ ರಾಜಧಾನಿ ದಿಸ್‌ಪುರದಿಂದ (ಗುವಾಹಟಿ) ಮೂವತ್ತೆರಡು ಕಿ.ಮೀ ದೂರದಲ್ಲಿರುವ ಮೋರಿಗಾಂವ್ ಜಿಲ್ಲೆಯ ದಯಾಂಗ್ ಬೆಲ್ಗುರಿ ಎಂಬ ಸ್ಥಳದಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ಈ ಮೇಳ ನಡೆಯುತ್ತದೆ. ಅರ್ಧಚಂದ್ರಾಕೃತಿಯ ಕೊಳದ ಪಕ್ಕದ ದೊಡ್ಡ ಮೈದಾನದಲ್ಲಿ ಈ ಮೇಳ ನಡೆಯುವುದರಿಂದ ಇದಕ್ಕೆ ಜುನ್ (ಅರ್ಧಚಂದ್ರ) ಬೀಲ್ (ತೇವಭೂಮಿ) ಎಂದು ಹೆಸರು. ಇದನ್ನು ಜನವರಿ-ಫೆಬ್ರುವರಿಯಲ್ಲಿ ಆಚರಿಸಲಾಗುವ ಅಸ್ಸಾಮಿನ ಸುಗ್ಗಿ ಹಬ್ಬ ಮಾಘಬಿಹುವಿನ ವಾರಾಂತ್ಯದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಮೂರು ದಿನ ನಡೆಯುವ ಈ ಮೇಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿ ವ್ಯಾಪಾರ- ವಹಿವಾಟು ನಡೆಸುತ್ತಾರೆ.

ರಾಜ ಕಾರಣ!

ಹದಿನೈದು ಅಥವಾ ಹದಿನೇಳನೇ ಶತಮಾನದಿಂದ ಈ ಮೇಳ ಜಾರಿಯಲ್ಲಿದೆ ಎನ್ನಲಾಗುತ್ತದೆ. ಅಂದಿನ ಅರಸರು ಇದನ್ನು ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸಲು ಆಯೋಜಿಸುತ್ತಿದ್ದರು ಎನ್ನುವುದರ ಜತೆ ಅಸ್ಸಾಂ ಮತ್ತು ಸುತ್ತಲಿನ ಬುಡಕಟ್ಟು ಜನಾಂಗದವರ ಒಗ್ಗೂಡುವಿಕೆಯ ಉದ್ದೇಶವೂ ಇದರಲ್ಲಿತ್ತು ಎನ್ನಲಾಗುತ್ತದೆ. ಅಸ್ಸಾಮಿನಲ್ಲಿರುವ ತಿವಾ ಬುಡಕಟ್ಟು ಜನಾಂಗದವರು ಟಿಬೆಟ್-ಬರ್ಮಾ ಮೂಲದವರು. ಅವರಲ್ಲಿಯೇ ಬೆಟ್ಟದ ತಿವಾಗಳು ಮತ್ತು ಬಯಲಿನ ತಿವಾಗಳು ಎಂದು ವಾಸಸ್ಥಾನದ ಮೇಲೆ ಭಿನ್ನ ಗುಂಪುಗಳಿವೆ. ಇರುವ ಪ್ರದೇಶಕ್ಕೆ ಅನುಗುಣವಾಗಿ ಭಾಷೆ, ಪದ್ಧತಿ, ಬೆಳೆಯುವ ಬೆಳೆ ಎಲ್ಲದರಲ್ಲಿಯೂ ವ್ಯತ್ಯಾಸ. ಹೀಗಾಗಿ ಸಂಘರ್ಷಗಳು ಸಾಮಾನ್ಯವಾಗಿದ್ದವು. ಇದನ್ನು ತಡೆಯಲು ಪರಸ್ಪರರೊಂದಿಗೆ ಬೆರೆಯಲು, ಸಮಸ್ಯೆಗಳನ್ನು ಚರ್ಚಿಸಲು, ಬೆಳೆದ ವಸ್ತುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಈ ಮೇಳ ಆರಂಭವಾಗಿದ್ದು ಅದು ಇಂದಿಗೂ ಮುಂದುವರಿದಿದೆ.

ಅಸ್ಸಾಮಿನ ಗಡಿಪ್ರದೇಶ ಮತ್ತು ಮೇಘಾಲಯದಲ್ಲಿ ವಾಸಿಸುವ ಇತರ ಬುಡಕಟ್ಟು ಜನಾಂಗಗಳಾದ ಖಾಸಿ, ಕಾರ್ಬಿ, ಜೈಂಟಿಯಾಗಳ ಜನರೂ ಇದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಮೇಳಕ್ಕೆಂದೇ ವಿಶಾಲವಾದ ಮೈದಾನದಲ್ಲಿ ಟೆಂಟ್ ಕಟ್ಟಿ ತಾತ್ಕಾಲಿಕ ಬಿಡಾರಗಳನ್ನು ನಿರ್ಮಿಸಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ವಾಹನ ವ್ಯವಸ್ಥೆ ಇಲ್ಲದಿದ್ದ ಕಾಲದಲ್ಲಿ ವಾರಗಟ್ಟಲೇ ನಡೆದು ಈ ಮೇಳಕ್ಕೆ ಜನ ಬರುತ್ತಿದ್ದರು. ಈಗ ಟೆಂಪೊಗಳಲ್ಲಿ ತಂಡತಂಡವಾಗಿ ಬರುತ್ತಾರೆ. ದೂರ, ಕಿರಿದಾದ ದಾರಿ, ರಸ್ತೆಗಳ ಅವ್ಯವಸ್ಥೆ ಮತ್ತು ವಾಹನ ದಟ್ಟಣೆ ಕಾರಣ ಗಂಟೆಗಟ್ಟಲೇ ಪಯಣಿಸಬೇಕಾದರೂ ಜನರಿಗೆ ವ್ಯಾಪಾರದ ಜತೆ ತಮ್ಮವರನ್ನು ಒಂದೆಡೆ ಭೇಟಿ ಮಾಡುವ ಸಂತಸ ಎದ್ದು ಕಾಣುತ್ತದೆ.

ವಿನಿಮಯ

ಮೂರು ದಿನ ನಡೆಯುವ ಈ ಮೇಳದ ಮೊದಲು ಅಗ್ನಿಪೂಜೆ ಸಲ್ಲಿಸಿ ವಿಶ್ವಶಾಂತಿ- ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮೊದಲ ದಿನ ತಿವಾ ಜನರೆಲ್ಲರೂ ಬಲೆ ಮತ್ತು ಬುಟ್ಟಿ ಹಿಡಿದು ಕೊಳದಲ್ಲಿ ಸಾಮೂಹಿಕವಾಗಿ ಮೀನು ಹಿಡಿಯುತ್ತಾರೆ. ಎರಡನೇ ದಿನ ಪರಸ್ಪರ ವಿನಿಮಯದ ಮೂಲಕ ವ್ಯಾಪಾರ ನಡೆಯುತ್ತದೆ. ಬಯಲು ಪ್ರದೇಶದ ಜನ ಅಕ್ಕಿ ಬೆಳೆಯುವುದು ಹೆಚ್ಚು. ಹೀಗಾಗಿ ಸ್ಥಳೀಯ ಅಕ್ಕಿ, ಅವಲಕ್ಕಿ, ಪಿತಾ (ಅಂಟಾದ ಅಕ್ಕಿ ಬಳಸಿ ತಯಾರಿಸುವ ನಮ್ಮ ಕಡುಬಿನಂಥ ಖಾದ್ಯ), ಕುಂಬಳಕಾಯಿ, ಒಣಗಿಸಿದ ಮೀನು, ಬಿದಿರಿನ ಬುಟ್ಟಿ ಇವುಗಳನ್ನು ತರುತ್ತಾರೆ.

ಬೆಟ್ಟದ ಜನರು ಮರಗಳನ್ನು ಕಡಿದು ಭೂಮಿ ಸುಟ್ಟು ವ್ಯವಸಾಯ ಮಾಡುವ ಝಂ ವ್ಯವಸಾಯ ಪದ್ಧತಿ ಅನುಸರಿಸಿ ಬೆಳೆದ ಕಾಳು ಮೆಣಸು, ಶುಂಠಿ, ಗಿಡಮೂಲಿಕೆ, ಎಳೆಬಿದಿರು, ಅಪರೂಪದ ಹಣ್ಣು-ತರಕಾರಿ, ಅರಿಸಿನ, ಮೇಣ, ಸಂಬಾರ ಪದಾರ್ಥ ತರುತ್ತಾರೆ. ಸುಮಾರು ಮುನ್ನೂರಕ್ಕೂ ಹೆಚ್ಚು ಟೆಂಟ್‌ಗಳಲ್ಲಿ ಮತ್ತು ತೆರೆದ ಮೈದಾನದಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. ತೂಕಮಾಪನ ಯಾವುದೂ ಇಲ್ಲ. ಸಣ್ಣ ಪಾತ್ರೆಯಲ್ಲಿ ತುಂಬಿ ಅಥವಾ ಭಾಗಗಳಾಗಿ ಮಾಡಿ ಪರಸ್ಪರ ಒಪ್ಪಿಗೆಯಾಗುವ ತನಕ ಚೌಕಾಸಿ ನಡೆಯುತ್ತದೆ (ನಾಲ್ಕು ಪಿತಾಕ್ಕೆ ಐದು ಅರಿಸಿನದ ತುಂಡು, ಐದು ಮೀನಿಗೆ ಎರಡು ಸೋರೆಕಾಯಿ ಹೀಗೆ). ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಅರಿಸಿನದ ಭರ್ಜರಿ ವ್ಯಾಪಾರ ನಡೆದಿತ್ತು! ಬೆಳಿಗ್ಗೆ ಐದು ಗಂಟೆಗೇ ಶುರುವಾಗುವ ವ್ಯಾಪಾರ ಮಧ್ಯಾಹ್ನದವರೆಗೆ ನಡೆಯುತ್ತದೆ. ಮೂರೂ ದಿನಗಳು ಸಂಜೆ ಹೊತ್ತಿನಲ್ಲಿ ಕೋಳಿಅಂಕ, ಹಾಡು-ಕುಣಿತ ಹೀಗೆ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತವೆ. ರಾಜದರ್ಬಾರಿನ ನಂತರ ಮೇಳ ಕೊನೆಗೊಳ್ಳುತ್ತದೆ.

ರಾಜ ದರ್ಬಾರ್

ಮಧ್ಯಯುಗದಲ್ಲಿ ಅಸ್ಸಾಮಿನ ಈ ಪ್ರದೇಶ ಚಿಕ್ಕ ಚಿಕ್ಕ ಪ್ರಾಂತ್ಯಗಳಾಗಿ ವಿವಿಧ ಬುಡಕಟ್ಟು ದೊರೆಗಳ ಅಧೀನದಲ್ಲಿತ್ತು. ಈಗ ಅಧಿಕಾರ, ಆಸ್ತಿ ಯಾವುದೂ ಇಲ್ಲದಿದ್ದರೂ ಪ್ರತೀ ಬುಡಕಟ್ಟಿಗೂ ದೊರೆ ಇದ್ದು ಅವರಿಗೆ ಗೌರವ ನೀಡಲಾಗುತ್ತದೆ. ತಿವಾ ಬುಡಕಟ್ಟಿನ ಗೋಬಾ ದೊರೆ ಆರಂಭಿಸಿದ್ದ ಮೇಳವಿದು. ಈಗ ಪರಿಸ್ಥಿತಿ ಬದಲಾಗಿದೆ ನಿಜ; ಹಿಂದೆ ಆನೆಯೇರಿ ಈ ಮೇಳಕ್ಕೆ ಬರುತ್ತಿದ್ದ ತಿವಾ ದೊರೆ ಈಗ ಕಾರಿನಲ್ಲಿ ಬರುವಂತಾಗಿದೆ. ಆದರೂ ಆಚರಣೆಯನ್ನು ಉಳಿಸಿಕೊಳ್ಳಲಾಗಿದೆ.

ಈಗಿನ ಗೋಬಾ ರಾಜ ಮೂರನೇ ದಿನ ತನ್ನ ಅಧಿಕಾರಿಗಳೊಂದಿಗೆ ಇಲ್ಲಿಗೆ ಭೇಟಿ ನೀಡಿ ಪ್ರಜೆಗಳಿಂದ ಸಾಂಕೇತಿಕವಾಗಿ ಕರ ವಸೂಲಾತಿ ನಡೆಸುತ್ತಾನೆ. ತದನಂತರ ದರ್ಬಾರ್ ನಡೆದು ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗುತ್ತದೆ. ತಿವಾ ದೊರೆ ನಡೆಸುವ ಮೇಳ ಇದಾದರೂ ಸುತ್ತಲಿನ ಹದಿನೆಂಟು ಬುಡಕಟ್ಟು ಜನಾಂಗದ ದೊರೆಗಳು ಇಲ್ಲಿಗೆ ಬಂದು ಸಮಾಲೋಚನೆ ನಡೆಸುತ್ತಾರೆ. ಅರಸೊತ್ತಿಗೆಯ ಕಾಲ ಇದಲ್ಲವಾದರೂ ತಂತಮ್ಮ ಬುಡಕಟ್ಟಿನ ದೊರೆಯ ಬಗ್ಗೆ ಜನರಿಗೆ ಈಗಲೂ ಅಭಿಮಾನ ಇರುವುದು ಸತ್ಯ. ಹೀಗಾಗಿಯೇ ರಾಜಕೀಯವಾಗಿಯೂ ಈ ದೊರೆಗಳನ್ನು ಒಲಿಸುವ ಪ್ರಯತ್ನ ಜಾರಿಯಲ್ಲಿದೆ!

ಮಹಿಳಾ ಪ್ರಾಬಲ್ಯ

ಮೇಳ ನಡೆಯುವಲ್ಲಿ ಸುಮ್ಮನೆ ಕಣ್ಣು ಹಾಯಿಸಿದರೆಕೊಡು-ಕೊಳ್ಳುವಿಕೆಯಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಇದಕ್ಕೆ ಮುಖ್ಯ ಕಾರಣಗಳು ಮೂರು. ಒಂದು, ಈ ಮೇಳವನ್ನು ಬರೀ ವ್ಯವಹಾರವನ್ನಾಗಿ ಅಲ್ಲ, ಬದಲಿಗೆ ಒಂದು ಸಂಪ್ರದಾಯವನ್ನಾಗಿ ನಡೆಸಿಕೊಂಡು ಬರಲಾಗಿದೆ. ಸಂಪ್ರದಾಯ ಯಾರೇ ರೂಪಿಸಿರಲಿ ಅದನ್ನು ತಲೆತಲಾಂತರವಾಗಿ ಮಕ್ಕಳಿಗೆ ಕಲಿಸಿ ಪಾಲಿಸುವವರು ಮಹಿಳೆಯರು. ಹೀಗಾಗಿ ಇದನ್ನು ಮಹಿಳೆಯರು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಎರಡು, ಇಲ್ಲಿ ಮಾರುವ ಉತ್ಪನ್ನಗಳಲ್ಲಿ ಬಹುಪಾಲು ಮಹಿಳೆಯರ ಪರಿಶ್ರಮದ ಫಲ.

ಹೆಚ್ಚಿದ್ದನ್ನು ಕೊಟ್ಟು, ಸಂಸಾರ ನಿರ್ವಹಣೆಗೆ ಬೇಕಾದ್ದನ್ನು ಪಡೆಯಲು ಈ ಮೇಳ ಅವರಿಗೆ ಒಳ್ಳೆಯ ಅವಕಾಶ ಒದಗಿಸುತ್ತದೆ. ಮೂರನೆಯದ್ದು ಜನರೊಂದಿಗೆ ಬೆರೆಯುವ ಅವಕಾಶ. ಸದಾ ಮನೆ-ಮಕ್ಕಳು-ಕೆಲಸ ಎಂದು ದುಡಿಯುತ್ತಾ, ಮನರಂಜನೆಯಿಂದ ವಂಚಿತರಾದ ಮಹಿಳೆಯರಿಗೆ ಮೂರು ದಿನಗಳ ಕಾಲ ಸಿಗುವ ಸ್ವಾತಂತ್ರ್ಯ ಅಮೂಲ್ಯವಾದದ್ದು. ಆದ್ದರಿಂದ ವ್ಯಾಪಾರವಷ್ಟೇ ಅಲ್ಲ, ಜನಪದ ನೃತ್ಯ, ಸಂಗೀತ ಎಲ್ಲದರಲ್ಲಿಯೂ ಸಂಭ್ರಮದಿಂದ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಹೀಗಾಗಿ ಈ ಮೇಳ ಅವರ ಪಾಲಿಗೆ ಎಲ್ಲಾ ಅರ್ಥದಲ್ಲಿಯೂ ಹಬ್ಬವೇ!

ಈ ವರ್ಷ ಕೋವಿಡ್ ಕಾರಣ ಈ ಮೇಳವನ್ನು ಸಾಂಕೇತಿಕವಾಗಿ ಕೇವಲ ನೂರೈವತ್ತು ಜನ ಸೇರಿ ನಡೆಸಿದರು. ಕ್ಯಾಶ್‌ಲೆಸ್ ವ್ಯವಹಾರದತ್ತ ಇಡೀ ಜಗತ್ತು ಹೊರಳುತ್ತಿರುವಾಗ ಈ ರೀತಿ ಕಾಸಿಲ್ಲದೆ ಪರಸ್ಪರ ಕೊಡುಕೊಳ್ಳುವಿಕೆಯ ಐದುನೂರು ವರ್ಷಗಳಷ್ಟು ಹಳೆಯದಾದ ಈ ಮೇಳ ಅಚ್ಚರಿ ಮೂಡಿಸುತ್ತದೆ. ಜತೆಗೆ ಬುಡಕಟ್ಟು ಜನಾಂಗದವರು ಒಗ್ಗೂಡಿ, ತಮ್ಮ ವಿಶಿಷ್ಟ ಆಚರಣೆ-ಪದ್ಧತಿಗಳನ್ನು ಇತರರಿಗೆ ತಿಳಿಸುವ ಪ್ರಮುಖ ಸಂದರ್ಭವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT