ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವ ಮುನ್ನ...

Last Updated 6 ಮೇ 2022, 23:00 IST
ಅಕ್ಷರ ಗಾತ್ರ

‘ಅಮ್ಮಾ, ಬೇಸಿಗೆ ರಜೆ ಬಂತು. ಎಲ್ಲಾದ್ರೂ ಟ್ರಿಪ್‌ ಹೋಗೋಣ ನಡಿಯಮ್ಮ...’ ಪರೀಕ್ಷೆ ಮುಗಿಸಿ ಬಂದ ಶಾರ್ವರಿ, ಅಮ್ಮನ ಎದುರು ‘ಪ್ರವಾಸ’ದ ಬೇಡಿಕೆ ಇಟ್ಟಳು. ಸುಧೀರ್‌, ಅಕ್ಕನ ಮಾತಿಗೆ ದನಿಗೂಡಿಸುತ್ತಾ ‘ಎಲ್ಲಾದರೂ ದೂರದ ಊರಿಗೆ ಪ್ರವಾಸ ಹೋಗೋಣ’ ಎಂದು ಅಪ್ಪನ ಎದುರು ಬೇಡಿಕೆ ಇಟ್ಟ.

ಪರೀಕ್ಷೆಗಳು ಮುಗಿದು, ಬೇಸಿಗೆ ರಜೆ ಆರಂಭವಾಗಿದ್ದು, ಬಹುತೇಕ ಎಲ್ಲರ ಮನೆಯಲ್ಲೂ ಮಕ್ಕಳು ಹೀಗೆ ಪೋಷಕರ ಎದುರು ಟ್ರಿಪ್ ಹೋಗುವ ಬೇಡಿಕೆ ಇಡುತ್ತಿದ್ದಾರೆ. ಶಾಲೆ, ಹೋಮ್‌ವರ್ಕ್‌, ಪರೀಕ್ಷೆ, ಎರಡು ವರ್ಷಗಳ ಕೊರೊನಾ – ಲಾಕ್‌ಡೌನ್‌ ಕಾಟದಿಂದ ಬೇಸತ್ತಿರುವ ಮಕ್ಕಳು ಪ್ರವಾಸ ಹೊರಡಲು ತುದಿಗಾಲಲ್ಲಿ ನಿಂತಿದ್ದಾರೆ. ಅಂಥದ್ದೇ ಬೇಸರ ಅನುಭವಿಸಿರುವ ಪೋಷಕರು ಮಕ್ಕಳೊಂದಿಗೆ ಸುತ್ತಾಡಲು ತಯಾರಾಗಿದ್ದಾರೆ.

ಮಕ್ಕಳಿಗೆ ಟ್ರಿಪ್‌ ಹೋಗುವ ಸಂತಸವಾದರೆ, ಅವರನ್ನು ಸಂಭಾಳಿಸಿಕೊಂಡು ಹೋಗುವ ಪೋಷಕರು, ಒಂದಷ್ಟು ಸಿದ್ಧತೆಯೊಂದಿಗೆ ತೆರಳಬೇಕು. ಹೋಗುವ ಜಾಗ, ಮಕ್ಕಳಿಗೆ ಅಗತ್ಯವಾದ ತಿನಿಸು, ಮಕ್ಕಳು ಸಣ್ಣರಾದರೆ ಅಗತ್ಯವಾದ ಔಷಧ ಪರಿಕರಗಳು, ಆಟದ ಸಾಮಾನು, ನೀರಿನ ಬಾಟಲಿ, ಟಿಶ್ಯೂ ಹೀಗೆ... ಅಗತ್ಯವೆನ್ನುವ ಎಲ್ಲ ವಸ್ತುಗಳನ್ನು ಹೊಂದಿಸಿಕೊಂಡೇ ಹೊರಡಬೇಕು. ಇದು ಒಂದು ರೀತಿಯ ಸವಾಲು. ಆದರೆ, ಪ್ರಯಾಣಕ್ಕೂ ಮುನ್ನ, ಸಣ್ಣದೊಂದು ಯೋಜನೆ ಸಿದ್ಧಪಡಿಸಿಕೊಂಡು, ಹೊಂದಾಣಿಕೆಯೊಂದಿಗೆ ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ವಹಿಸಿಕೊಂಡರೆ ಪ್ರಯಾಣ, ಪ್ರವಾಸ ಪ್ರಯಾಸವಿಲ್ಲದೇ ಪೂರ್ಣಗೊಳ್ಳುತ್ತದೆ. ಮಕ್ಕಳೊಂದಿಗೆ ಪೋಷಕರು ಪ್ರವಾಸದ ಸವಿಯನ್ನು ಅನುಭವಿಸಬಹುದು. ಹಾಗಾದರೆ, ಏನೇನು ಸಿದ್ಧತೆ ಬೇಕು?

ಸ್ಥಳ ಆಯ್ಕೆ ಮುಖ್ಯ

ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವಾಗ, ಅವರು ಇಷ್ಟಪಡುವಂತಹ ಕಡಲು, ಜಲಪಾತ, ಪ್ರಾಣಿಸಂಗ್ರಹಾಲಯ ಇಂಥ ಜಾಗಗಳನ್ನು ಆಯ್ಕೆ ಮಾಡಿಕೊಳ್ಳಿ. ನಿಮಗಿಷ್ಟ ಅಂತ ದೇವಾಲಯ, ಮ್ಯೂಸಿಯಂನಂತಹ ಸ್ಥಳಗಳನ್ನು ಆಯ್ಕೆ ಮಾಡಬೇಡಿ. ಅನೇಕ ಮಕ್ಕಳಿಗೆ ಇಂತಹ ಜಾಗಗಳು ಇಷ್ಟವಾಗುವುದಿಲ್ಲ. ಮಕ್ಕಳು ಇಷ್ಟಪಡುವ ಜಾಗಕ್ಕೆ ಕರೆದುಕೊಂಡು ಹೋದಾಗ ಖುಷಿಯಾಗುತ್ತಾರೆ. ಪ್ರವಾಸವೂ ಸುಖವಾಗಿರುತ್ತದೆ. ಪೋಷಕರ ಮೇಲೆ ಹೆಚ್ಚು ಒತ್ತಡವೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸ ಆಯೋಜನೆಗೂ ಮೊದಲು ಮಕ್ಕಳೊಂದಿಗೆ ‘ನಿಮಗೆ ಎಂತಹ ಜಾಗಗಳು ಇಷ್ಟ’ ಎಂದು ಕೇಳಿ ತಿಳಿದುಕೊಳ್ಳಿ.

ಸುರಕ್ಷತೆಗೆ ಆದ್ಯತೆ ನೀಡಿ

ಪ್ರವಾಸದಲ್ಲಿ ನಿಮ್ಮ ಸಂಭ್ರಮಕ್ಕಿಂತ, ಮಕ್ಕಳ ಸಂತಸ ಮತ್ತು ಸುರಕ್ಷತೆ ಎರಡೂ ಮುಖ್ಯ. ಕುಟುಂಬದವರೆಲ್ಲರೂ ಸೇರಿ ಪ್ರವಾಸಕ್ಕೆ ಹೋಗುವಾಗ ಸಂಭ್ರಮ ತುಸು ಹೆಚ್ಚೇ ಇರುತ್ತದೆ. ಅಂತಹ ಸಮಯದಲ್ಲಿ, ಸಂಭ್ರಮಕ್ಕೆ ಕೊಂಚ ಬ್ರೇಕ್ ಹಾಕಿ, ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ. ಪ್ರವಾಸಿತಾಣ, ಹೋಟೆಲ್ ಕೊಠಡಿಗಳು, ದೋಣಿ ಅಥವಾ ತೆಪ‍್ಪದಲ್ಲಿ ಹೋಗುವಾಗ, ಸಮುದ್ರದ ಬಳಿ, ವಾಹನದಲ್ಲಿ ಹೋಗುವಾಗ ಮಕ್ಕಳ ಬಗ್ಗೆಯೇ ಹೆಚ್ಚು ಗಮನವಿರಲಿ. ಸ್ಥಳ, ವಾತಾವರಣ ಬದಲಾದಾಗ ಮಕ್ಕಳಿಗೆ ಆರೋಗ್ಯ ಏರುಪೇರಾಗಬಹುದು. ಅವರಿಗೆ ಬೇರೆ ರೀತಿಯ ಕಿರಿಕಿರಿಗಳೂ ಆಗಬಹುದು. ಅದನ್ನು ಗುರುತಿಸಿ, ತಕ್ಷಣ ಸರಿಪಡಿಸಿ, ಅವರೊಟ್ಟಿಗೆ ಹೆಚ್ಚು ಸಮಯ ಕಳೆಯಿರಿ.

ಮೊದಲೇ ಸ್ಥಳದ ಪರಿಚಯ ಮಾಡಿಕೊಳ್ಳಿ

ಮಕ್ಕಳೊಂದಿಗೆ ಬೇರೆ ಊರಿಗೆ ಪ್ರವಾಸಕ್ಕೆ ಹೋಗುವ ಮೊದಲು ನೀವು ಹೋಗುವ ಸ್ಥಳದ ಬಗ್ಗೆ ಸರಿಯಾದ ವಿವರಗಳನ್ನು ಕಲೆ ಹಾಕಿ. ಅಲ್ಲಿ ನಿಮ್ಮ ಮಗುವಿಗೆ ಬೇಕಾದ ಆಹಾರ ಪದಾರ್ಥಗಳು ಸಿಗುವುದೇ, ಉಳಿದುಕೊಳ್ಳುವ ವ್ಯವಸ್ಥೆ, ತುರ್ತು ಪರಿಸ್ಥಿತಿಯಲ್ಲಿ ಮಗುವಿಗೆ ಆರೋಗ್ಯ ಸಮಸ್ಯೆಯಾದರೆ ಹತ್ತಿರದಲ್ಲೇ ಆಸ್ಪತ್ರೆ ಇದೆಯೇ, ಆ ಜಾಗದ ವಾತಾವರಣ ಮಗುವಿಗೆ ಹೊಂದಿಕೆಯಾಗುತ್ತದೆಯೇ ಹೀಗೆ ಪ್ರತಿಯೊಂದು ಮಾಹಿತಿಯನ್ನು ಮೊದಲೇ ಕಲೆ ಹಾಕಿ ನಂತರ ಪ್ರವಾಸ ಆಯೋಜಿಸಿ.

ರೋಡ್‌ ಟ್ರಿಪ್‌ ಬೆಸ್ಟ್‌

ಮಕ್ಕಳು ಹೆಚ್ಚು ‘ರೋಡ್‌ಟ್ರಿಪ್’ ಅನ್ನು ಎಂಜಾಯ್ ಮಾಡ್ತಾರೆ. ವಾಹನದಲ್ಲಿ ಹೋಗುವಾಗ ಕಿಟಕಿಯಾಚೆ ಮುಖವಿರಿಸಿ ನೋಡುತ್ತಾ ಖುಷಿ ಪಡುತ್ತಾರೆ. ಹಾಗಾಗಿ, ರಸ್ತೆ ಮೇಲೆ ಅದರಲ್ಲೂ ಸಾಧ್ಯವಾದಷ್ಟು ಸ್ವಂತ ವಾಹನದಲ್ಲಿ ಹೋಗಲು ಅನುಕೂಲವಾಗುವಂತಹ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಳ್ಳಿ. ವಿಮಾನ ಅಥವಾ ರೈಲಿನಲ್ಲಿ ದೂರದೂರಿಗೆ ಪ್ರವಾಸಕ್ಕೆ ಹೋಗುವುದಕ್ಕೆ ಆದಷ್ಟು ಕಡಿವಾಣ ಹಾಕಿ. ಇದು ಮಕ್ಕಳ ಕಾಳಜಿಯ ಜೊತೆಗೆ, ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಖರ್ಚು ಉಳಿತಾಯದ ದೃಷ್ಟಿಯಿಂದಲೂ ಉತ್ತಮ.

ತಿನ್ನುವ ಹಾಗೂ ಆಟದ ವಸ್ತುಗಳಿರಲಿ

ಹಲವು ಗಂಟೆಗಳ ಕಾಲ ಪ್ರಯಾಣ ಎಂದರೆ ಮಕ್ಕಳಿಗೆ ವಿಶ್ರಾಂತಿ ಇಲ್ಲದಂತಾಗುತ್ತದೆ. ಅಂತಹ ಸಮಯದಲ್ಲಿ ಅವರನ್ನು ಬ್ಯುಸಿಯಾಗಿಡಲು ಒಂದಿಷ್ಟು ಆಟದ ವಸ್ತುಗಳನ್ನು ಜೊತೆಯಾಗಿ ತೆಗೆದುಕೊಂಡು ಹೋಗಿ. ಭಾರವಿಲ್ಲದ ಹಗುರವಾದ ಆಟದ ಸಾಮಗ್ರಿಗಳನ್ನು ಬ್ಯಾಗ್‌ನಲ್ಲಿ ತುಂಬಿಸಿ ಅದನ್ನು ಹಿಡಿದುಕೊಳ್ಳಲು ಕೊಡಿ. ಇದರೊಂದಿಗೆ ತಿನ್ನಲು ಆರೋಗ್ಯಕ್ಕೆ ಹಿತ ಎನ್ನಿಸುವ ಒಂದಿಷ್ಟು ಸ್ನ್ಯಾಕ್ಸ್ ಕೂಡ ಜೊತೆಯಾಗಲಿ. ಇದರಿಂದ ಮಕ್ಕಳು ದಾರಿ ನಡುವೆ ಹಸಿವು ಎಂದು ಕಿರಿಕಿರಿ ಮಾಡುವುದನ್ನು ತಪ್ಪಿಸಬಹುದು. ಅಲ್ಲಲ್ಲೇ ಇಳಿದು ಹೋಟೆಲ್‌ಗೆ ಹೋಗುವುದು ತಪ್ಪುತ್ತದೆ. ಹಣ, ಸಮಯ ಎರಡೂ ಉಳಿತಾಯವಾಗುತ್ತದೆ.

ಗ್ಯಾಜೆಟ್‌ ಬಳಕೆಗೆ ಕಡಿವಾಣ ಹಾಕಿ

ಸ್ನೇಹಿತರು ಹಾಗೂ ಕುಟುಂಬದವರೆಲ್ಲರೂ ಸೇರಿ ಅಪರೂಪಕ್ಕೆ ಪ್ರವಾಸಕ್ಕೆ ಹೋಗುವಾಗ ನೀವು ಎಂಜಾಯ್ ಮಾಡಬೇಕು ಎಂಬ ಕಾರಣಕ್ಕೆ ಮಕ್ಕಳಿಗೆ ಗ್ಯಾಜೆಟ್‌ ಕೊಟ್ಟು ಕೂರಿಸಬೇಡಿ. ಸಾಧ್ಯವಾದಷ್ಟು ಮಕ್ಕಳನ್ನೂ ನಿಮ್ಮ ಸಂತಸದಲ್ಲಿ ಭಾಗಿಯಾಗಲು ಬಿಡಿ. ಪ್ರವಾಸದ ಮೇಲೆ ಸಾಧ್ಯವಾದಷ್ಟು ಗ್ಯಾಜೆಟ್‌ಗಳಿಂದ ದೂರವಿರುವುದು ಬಹಳ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT