ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಲಂಡನ್ ಈ ಕೋಲ್ಕತ್ತ

Last Updated 28 ಮೇ 2022, 19:30 IST
ಅಕ್ಷರ ಗಾತ್ರ

ಬಂಗಾಳದವರ ಇತಿಹಾಸ ಪ್ರಜ್ಞೆಯ ಪ್ರತೀಕವಾಗಿ ಹಲವು ಸ್ಮಾರಕಗಳು, ವಸ್ತುಸಂಗ್ರಹಾಲಗಳು ಕಣ್ಮುಂದೆ ನಿಲ್ಲುತ್ತವೆ. ಇವು ಕನ್ನಡದ ಅಸ್ಮಿತೆಗೆ ಮಾದರಿಯಾಗಬೇಕಿವೆ...

ಬ್ರಿಟಿಷರು ನಮ್ಮನ್ನು ಆಳುವಾಗ ಬಂದರು ಸೌಲಭ್ಯ ಹೊಂದಿದ ನಗರಗಳನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ‌ಇದೇ ಕಾರಣದಿಂದ ಮದ್ರಾಸ್, ಕೋಲ್ಕತ್ತ ಮತ್ತು ಮುಂಬೈ ಕೇಂದ್ರಿತ ಆಡಳಿತ ಅವರದಾಗಿತ್ತು.

ಈ ಪೈಕಿ ಕೋಲ್ಕತ್ತ ಅತ್ಯಂತ ಪ್ರಾಚೀನ ಐತಿಹಾಸಿಕ ನಗರ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ, ಸ್ವಾತಂತ್ರ್ಯ ಹೋರಾಟ ಹೀಗೆ ಎಲ್ಲಾ ರಂಗಗಳಲ್ಲಿ ಈ ನಗರ ತನ್ನ ಹಿರಿಮೆ ಮೆರೆದಿದೆ. ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟ್ಯಾಗೋರ್ ಅವರ ಕಾರಣದಿಂದ ಕೋಲ್ಕತ್ತ ಜಾಗತಿಕ ಮನ್ನಣೆ ಪಡೆಯಿತು. ಅವರು ಆರಂಭಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯ, ಶಾಂತಿನಿಕೇತನ ಜಾಗತಿಕ ಪ್ರವಾಸಿ ತಾಣವಾಗಿದೆ. ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಸಾಂಸ್ಕೃತಿಕ ಗಟ್ಟಿತನ ಭಾರತಕ್ಕೆ ಲಭಿಸಲು ಮಹರ್ಷಿ ರವೀಂದ್ರನಾಥರು ಕಾರಣರಾದರು.

ಇದರ ಜೊತೆಗೆ ಸುಭಾಶ್ಚಂದ್ರ ಬೋಸ್ ಅವರ ಸ್ವಾತಂತ್ರ್ಯ ಚಳವಳಿಯ ಸ್ವರೂಪದಿಂದ ಪಶ್ಚಿಮ ಬಂಗಾಳ ತನ್ನ‌ ಚಳವಳಿಯ ಆಳವನ್ನು ವಿಸ್ತರಿಸಿಕೊಂಡಿತು. ಸಿನಿಮಾ ರಂಗದ ಭೀಷ್ಮ ಸತ್ಯಜಿತ್‌ ರೇ, ವೈದ್ಯಕೀಯ ಕ್ಷೇತ್ರದಲ್ಲಿ ಮದರ್‌ ತೆರೇಸಾರಂತಹ ಮಹನೀಯರ ಜೊತೆಗೆ ಈ ಊರನ್ನೇ ಕರ್ಮಭೂಮಿ ಮಾಡಿಕೊಂಡ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಸಾಧನೆ ಮೂಲಕ ಲೋಕದ ಗಮನ ಸೆಳೆದರು. ‘ವಿಶ್ವದ ಎಲ್ಲ ಹಾದಿಗಳು ಬಂಗಾಲದೆಡೆಗೆ’ ಎಂಬ ಮಾತು ಜನಜನಿತವಾಯಿತು.

ಈ ಹಿಂದೆ 2006ರಲ್ಲಿ ಸಂಶೋಧನಾ ಅಧ್ಯಯನ ಕಾರಣದಿಂದ ಒಬ್ಬನೇ ಕೋಲ್ಕತ್ತಕ್ಕೆ ಹೋಗಿ ಬಂದಿದ್ದೆ, ಈಗ ಮತ್ತೊಮ್ಮೆ ವೃತ್ತಿಯ ಮಿತ್ರರು ಹಾಗೂ ಅವರ ಪರಿವಾರದ ಜೊತೆಗೆ ಶಾಂತಿನಿಕೇತನ ಮತ್ತು ಕೋಲ್ಕತ್ತ ಪ್ರವಾಸವನ್ನು ಮುಗಿಸಿಬಂದೆ.

ಶಾಂತಿನಿಕೇತನ ಮತ್ತು ಟ್ಯಾಗೋರ್ ಅವರ ಕೋಲ್ಕತ್ತ ಮನೆಯ ಭೇಟಿ ಅವಿಸ್ಮರಣೀಯ. ಇದರ ಜೊತೆಗೆ ಬೇಲೂರು ರಾಮಕೃಷ್ಣ ಮಠದ ಭೇಟಿ ಬಹುದಿನಗಳ ಕನಸಾಗಿತ್ತು. ಗದುಗಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೂಜ್ಯ ನಿರ್ಭಯಾನಂದರು ಬೇಲೂರು ಮಠದ ಕುರಿತು ಪ್ರಸ್ತಾಪ ಮಾಡಿದ್ದ ನೆನಪು ಮಾಸುವ ಮೊದಲು ಅಲ್ಲಿಗೆ ಹೋಗಿ ದರ್ಶನ ಪಡೆದೆ.

ಶತಮಾನದ ಇತಿಹಾಸ ಹೊಂದಿರುವ ಕೇಂದ್ರೀಯ ವಿಶ್ವವಿದ್ಯಾಲಯ ಶಾಂತಿನಿಕೇತನ ಈಗಲೂ ತನ್ನ ಗುಣಮಟ್ಟ ಕಾಪಾಡಿಕೊಂಡಿದೆ.‌ ವಿಶೇಷವಾಗಿ ಸಂಗೀತ ಮತ್ತು ಲಲಿತಕಲಾ ವಿಭಾಗಗಳಿಗೆ ಜಾಗತಿಕ ಮನ್ನಣೆ ಇದೆ. ಸಾವಿರ ಎಕರೆ ವಿಶಾಲವಾದ ಸುಂದರ ಪರಿಸರದಲ್ಲಿ ನಿರ್ಮಾಣವಾದ ಗುರುಕುಲವಿದು. ಆಧ್ಯಾತ್ಮಿಕ ಹಿನ್ನೆಲೆಯ ಮಹರ್ಷಿ ರವೀಂದ್ರರು ದೇಶವಿದೇಶಗಳಲ್ಲಿ ನೆಲೆಸಿದ್ದ ಪ್ರತಿಭಾವಂತ ಪ್ರಾಧ್ಯಾಪಕರನ್ನು ಕರೆತಂದು ವಿಶ್ವವಿದ್ಯಾಲಯದ ಘನತೆ ಹೆಚ್ಚಿಸಿದರು.

ಮಹಾತ್ಮ ಗಾಂಧಿ, ಆಲ್ಬರ್ಟ್ ಐನ್‍ಸ್ಟೈನ್, ನೆಹರೂ, ಅಮೆರಿಕ ಮತ್ತು ಯುರೋಪಿಯನ್ ಬರಹಗಾರರು ರವೀಂದ್ರನಾಥರ ಪ್ರಭಾವಕ್ಕೆ ಒಳಗಾಗಿದ್ದರು. ಗೀತಾಂಜಲಿ ಮತ್ತು ಇತರ ಕೃತಿಗಳನ್ನು ರಚಿಸಿದ ಶಾಂತಿನಿಕೇತನದಲ್ಲಿ ಅದೇನೋ ವೈಬ್ರೇಶನ್ ಅನುಭವಕ್ಕೆ ದಕ್ಕುತ್ತದೆ.‌ ಅಮರ್ತ್ಯ ಸೇನ್ ಅವರ ತಂದೆ ಎ.ಟಿ.ಸೇನ್ ಇಲ್ಲಿ ಪ್ರಾಧ್ಯಾಪಕರಾಗಿದ್ದರು. ಇಲ್ಲಿನ ಹೆಮ್ಮೆಯ ವಿದ್ಯಾರ್ಥಿ ಅಮರ್ತ್ಯ ಸೇನ್ ಈಗ
ಜಗದ್ವಿಖ್ಯಾತ, ನೋಬೆಲ್ ಪುರಸ್ಕೃತ ಅರ್ಥಶಾಸ್ತೃಜ್ಞರು. ಹೀಗೆಯೇ ಪ್ರತಿಭಾನ್ವಿತರ ಪಡೆಯನ್ನು ನಿರ್ಮಾಣ ಮಾಡಿದ ಶೈಕ್ಷಣಿಕ ಮಂದಿರವಿದು.

ಕೋಲ್ಕತ್ತ ಈಗ ತುಂಬಾ ಬದಲಾದರೂ ತನ್ನ ಐತಿಹಾಸಿಕ ಮೌಲ್ಯ ಉಳಿಸಿಕೊಂಡಿದೆ. ಇಲ್ಲಿನವರ ಇತಿಹಾಸ ಪ್ರಜ್ಞೆ ಅನುಕರಣೀಯ. ಟ್ಯಾಗೋರ್ ಅವರ ಮನೆ ನೋಡುವಾಗ ಅವರ ಬದುಕಿನ ಪುಟಗಳು ಮೆರವಣಿಗೆ ಹೊರಟವು. ಎಷ್ಟೇ ಸಾಧನೆ ಮಾಡಿದ್ದರೂ, ಜನ ಬೇಗ ಮರೆತು ಬಿಡುತ್ತಾರೆ. ಆದರೆ ಸ್ಮಾರಕಗಳು ಮತ್ತು ಮ್ಯೂಸಿಯಂಗಳು ಇತಿಹಾಸವನ್ನು ಕಟ್ಟಿಕೊಡಲು ಯಶಸ್ವಿಯಾಗುತ್ತವೆ.

ಬೇಲೂರು ಮಠದ ಮ್ಯೂಸಿಯಂ ಮೂಲಕ ರಾಮಕೃಷ್ಣ ಪರಮಹಂಸ, ಮಾತೆ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಅಪರೂಪದ ಇತಿಹಾಸವನ್ನು ಪುನರ್ ನಿರ್ಮಾಣ ಮಾಡಿದ್ದಾರೆ. ಇದು ಬಂಗಾಳದವರ ಇತಿಹಾಸ ಪ್ರಜ್ಞೆಯ ಪ್ರತೀಕ. ವಿಕ್ಟೋರಿಯಾ ಮ್ಯೂಸಿಯಂ ಈಗ ಹೊಸ ಸ್ವರೂಪ ಪಡೆದಿದೆ. ಆಂಗ್ಲರ ಭಾರತದ ಮೇಲಿನ ವ್ಯಾಮೋಹಕ್ಕೆ ಅವರು ನಿರ್ಮಿಸಿದ ಅನೇಕ ಭವ್ಯ ಕಟ್ಟಡಗಳೇ ಸಾಕ್ಷಿ. ಹಾಗೆನೇ ಹೌರಾ ಸೇತುವೆ ಮತ್ತು ವಿಕ್ಟೋರಿಯಾ ಮ್ಯೂಸಿಯಂ ಸಾಂಕೇತಿಕ ಉದಾಹರಣೆಗಳು.

ನಮ್ಮ ರಾಜ್ಯದ ಸಾಂಸ್ಕೃತಿಕ ಹಿರಿಮೆಯನ್ನು ಕಾಪಾಡಲು ನಾವು ವಿಫಲರಾಗಿದ್ದೇವೆ ಎಂಬ ನೋವು ಕಾಡಿದ್ದು ಸಹಜ. ಕನ್ನಡದ ಬರಹಗಾರರು ಮತ್ತು ಸಾಹಿತ್ಯಾಸಕ್ತರು ಕೋಲ್ಕತ್ತಕ್ಕೆ ಭೇಟಿ ನೀಡಿ ಕನ್ನಡದ ಅಸ್ಮಿತೆಗೊಂದು ಆಯಾಮ ನೀಡುವುದನ್ನು ಕಲಿಯಬೇಕು. ವಿಶ್ವವಿದ್ಯಾಲಯಗಳೆಂದರೆ ಕೇವಲ ಭವ್ಯ ಕಟ್ಟಡಗಳಲ್ಲ ಎಂಬುದನ್ನು ನಮ್ಮ ಕುಲಪತಿಗಳು, ಶಿಕ್ಷಣ ತಜ್ಞರು ಅರಿಯುವ ಅಗತ್ಯ ತುಂಬಾ ಇದೆ.‌

ಸಾಹಿತ್ಯ, ಶಿಕ್ಷಣ ಮತ್ತು ಸಂಸ್ಕೃತಿಯ ಮರು ವ್ಯಾಖ್ಯಾನವಾದಾಗ ಬದಲಾವಣೆ ಸಾಧ್ಯ. ಹೊಸ ಹೊಸ ಶೈಕ್ಷಣಿಕ ನೀತಿಗಳು ಯುವಕರ ಜ್ಞಾನ ಹೆಚ್ಚಿಸಿ, ಉದ್ಯೋಗಾವಕಾಶಗಳನ್ನು ಕಲ್ಪಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂಬ ಭಾವನೆ ಸ್ಥಾಯಿ ರೂಪ ಪಡೆಯಿತು. ಮೈ ಬೆವರು, ಉರಿಬಿಸಿಲು ಮತ್ತು ಆಹಾರದ ರುಚಿಯನ್ನು ಲೆಕ್ಕಿಸದೆ ನಾಲ್ಕಾರು ದಿನ ಸುತ್ತಾಡಿ ಜ್ಞಾನದ ಹಸಿವನ್ನು ನೀಗಿಸಿಕೊಂಡ ಸಾರ್ಥಕ ಭಾವ. ಇಲ್ಲಿ ಸುತ್ತಾಡುವ ಹೊತ್ತಿನಲ್ಲಿ ಅನೇಕ ‘ಸಾಹಿತ್ಯ ಸಂಗಾತಿಗಳು’ ನೆನಪಾದದ್ದು ಸಹಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT