ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸೋಲೊ ಪ್ರವಾಸದ ಒಳಹೊರಗೆ: ಏಕಾಂಗಿ ಸಂಚಾರಿ

Last Updated 15 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮಹಿಳೆಯರಲ್ಲಿ ‘ಏಕಾಂಗಿ ಪ್ರವಾಸ (ಸೋಲೊ ಟ್ರಿಪ್‌)’ ಎನ್ನುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಒಬ್ಬರಿಂದ ಒಬ್ಬರು ಸ್ಫೂರ್ತಿ ಪಡೆದು ಒಂಟಿ ಪ್ರವಾಸಕ್ಕೆ ಹೊರಡಲು ಅಣಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರವಾಸದ ವೇಳೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಇಲ್ಲಿ ಮಾಹಿತಿ ಇಲ್ಲಿದೆ.

***

ಒಂದು ಕಾಲ ಇತ್ತು. ಆಗೆಲ್ಲ ವರ್ಷಕ್ಕೊಂದು ಬೇಸಿಗೆ ರಜೆಯಲ್ಲೋ, ಅರ್ಧವಾರ್ಷಿಕ ರಜೆಯಲ್ಲೋ ಕುಟುಂಬ ಸಹಿತ ಯಾವುದಾದರೊಂದು ಪ್ರವಾಸಿತಾಣಕ್ಕೆ ಹೋಗಿ, ಒಂದೆರಡು ದಿನ ತಿರುಗಾಡಿ ಗ್ರೂಪ್ ಫೋಟೊಗೆ ಪೋಸ್ ಕೊಟ್ಟು, ಸಂತೋಷದಿಂದ ವಾಪಾಸು ಬರುವುದು. ಆಮೇಲೆ ಆ ಫೋಟೊಗಳನ್ನು ಮನೆಗೆ ಬರುವ ಗೆಳೆಯರು, ನೆಂಟರಿಷ್ಟರ ಜೊತೆಗೆ ಕೂತು ನೋಡಿ ಸಂತಸ ಪಡುವುದು. ಇದು ನಮ್ಮ ದೇಶದ ಮಧ್ಯಮ, ಕೆಳಮಧ್ಯಮ ವರ್ಗದ ಮನೆಮನೆ ಕಥೆಯಾಗಿತ್ತು.

ಈಗ ಕಾಲ ಬದಲಾಗಿದೆ. ಕಳೆದೆರಡು ದಶಕಗಳಿಂದ ಪ್ರವಾಸದ ಪರಿಕಲ್ಪನೆಯೂ ಬದಲಾಗಿದೆ. ಏಕಾಂಗಿ ಪ್ರವಾಸ (ಸೋಲೊ ಟ್ರಾವೆಲ್) ಕೂಡಾ ಸಾಕಷ್ಟು ಅರ್ಥಗಳನ್ನು ಪಡೆದುಕೊಂಡಿದೆ. ಪ್ರವಾಸಿ ಪ್ರಿಯರು ವಿಶೇಷವಾಗಿ ಯುವಸಮೂಹ ತಮ್ಮ ತಿರುಗಾಟಕ್ಕೊದು ಹೊಸ ಅರ್ಥ, ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿದ್ದಾರೆ. ಮಹಿಳೆಯರು ತಮ್ಮ ಮಿತಿಗಳಿಂದ ಹೊರ ಬಂದು ‘ಏಕಾಂಗಿ ಪ್ರವಾಸ’ದ ರುಚಿ ಸವಿಯುತ್ತಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಾದ ಗಮನಾರ್ಹ ಬೆಳವಣಿಗೆ.

ಎಂಥದ್ದೇ ಬದಲಾವಣೆಯಾದರೂ ಮಹಿಳೆಯೊಬ್ಬಳು ಒಂಟಿಯಾಗಿ ಪ್ರವಾಸ ಮಾಡುವಾಗ, ಅಷ್ಟೇ ‘ತಯಾರಿ’ ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಆಗಾಗ ಪತ್ರಿಕೆಗಳಲ್ಲಿ ಕಾಣುತ್ತಿರುವ ‘ಹೆಡ್‌ಲೈನ್‌’ಗಳು ಇಂತಹ ಕನಸು ಕಾಣುವ, ಧೀರ ಮಹಿಳೆಯರನ್ನೂ ಕೆಲವೊಮ್ಮೆ ಅಧೀರರನ್ನಾಗಿಸುತ್ತವೆ.

ಹಾಗಾದರೆ, ಮಹಿಳೆ ಏಕಾಂಗಿಯಾಗಿ ಪ್ರವಾಸ ಹೊರಟಾಗ ಏನೇನು ಸವಾಲುಗಳು ಎದುರಾಗುತ್ತವೆ? ತನ್ನ ಎಲ್ಲ ಜವಾಬ್ದಾರಿಗಳನ್ನು ತಾನೇ ಹೊತ್ತುಕೊಂಡು ಪ್ರಪಂಚ ಸುತ್ತಿ ಸುರಕ್ಷಿತವಾಗಿ ಮರಳಿ ಬರುವುದು ಹೇಗೆ? ರಾತ್ರಿ ಒಬ್ಬರೇ ಹೋಟೆಲ್‌ನಲ್ಲಿ ಉಳಿದುಕೊಳ್ಳೋದು ಎಷ್ಟು ಸುರಕ್ಷಿತ? ಕಡಿಮೆ ವೆಚ್ಚದಲ್ಲಿ, ಸುರಕ್ಷಿತವೆನಿಸುವ ವಸತಿ ತಾಣಗಳಿವೆಯಾ? ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಸಾಮಾನ್ಯ. ಇಂಥ ಹಲವು ಪ್ರಶ್ನೆಗಳಿಗೆ ಇಲ್ಲಿ ಸಲಹೆಗಳ ಮೂಲಕ ಉತ್ತರ ಹೇಳುವ ಪ್ರಯತ್ನ ಮಾಡಿದ್ದೇನೆ.

ಆತ್ಮವಿಶ್ವಾಸ ಮುಖ್ಯ
ಏಕಾಂಗಿಯಾಗಿ ಪ್ರವಾಸ ಹೊರಟ ಮಹಿಳೆಗೆ ಬಹುಮುಖ್ಯವಾಗಿ ಬೇಕಾದದ್ದು ಆತ್ಮವಿಶ್ವಾಸ. ಹೀಗೆ ಪ್ರವಾಸ ಹೊರಟಾಗ ‘ಯಾರೋ ಏನೆಂದುಕೊಳ್ಳುತ್ತಾರೋ’ ಎನ್ನುವುದಕ್ಕಿಂತ, ತಾನು ‘ಒಂಟಿಯಾಗಿ ಓಡಾಡಬಲ್ಲೇ’ ಎಂಬ ಧೈರ್ಯವಷ್ಟೇ ಇಲ್ಲಿ ಕೆಲಸ ಮಾಡುತ್ತದೆ. ಹೋಗುವ ನಿಮಗೆ ಹೊಸ ಊರು, ಹೊಸ ಪರಿಸರ, ಹೊಸ ಮುಖಗಳ ನಡುವೆ ತಾನು ತನ್ನನ್ನು ಸಂಭಾಳಿಸಿಕೊಂಡು, ಒಬ್ಬಳೇ ಇರುವುದನ್ನು ಖುಷಿಪಡಬಲ್ಲೆ ಎಂಬ ಆತ್ಮವಿಶ್ವಾಸ, ನಂಬಿಕೆ ಇದ್ದರೆ ಸಾಕು.

ಜನಪ್ರಿಯ ತಾಣಗಳು ಸುರಕ್ಷಿತ
ಮೊದಲ ಬಾರಿಗೆ ಪ್ರವಾಸ ಹೊರಟಿದ್ದರೆ, ಹೆಚ್ಚು ಜನಪ್ರಿಯ ತಾಣಗಳನ್ನು ಆಯ್ಕೆ ಮಾಡಿಕೊಳ್ಳಿ. ಅವು ಯಾವತ್ತೂ ಸುರಕ್ಷಿತ. ಜನಪ್ರಿಯ ತಾಣಗಳಲ್ಲಿ ವಸತಿಗಾಗಿ ಉತ್ತಮ ಆಯ್ಕೆಗಳು ಇದ್ದೇ ಇರುತ್ತವೆ. ಹೋಟೆಲ್‌ಗಳ ಆಯ್ಕೆ ಕಷ್ಟವೆನಿಸಿದರೆ, ಯೂತ್‌ ಹಾಸ್ಟೆಲ್‌ಗಳು, ಮಹಿಳಾ ಹಾಸ್ಟೆಲ್‌ಗಳು, ಹೋಂಸ್ಟೇಗಳು ಕೂಡ ನಮ್ಮ ಬಜೆಟ್‌ಗೆ ಅನುಕೂಲಕರವಾಗಿ, ಸುರಕ್ಷತೆಯ ದೃಷ್ಟಿಯಿಂದಲೂ ನೆಮ್ಮದಿ ಎನಿಸುತ್ತವೆ. ಮಾತ್ರವಲ್ಲ, ಧಾರಾಳವಾಗಿ ಸಿಗುತ್ತವೆ. ಕೆಲವು ‘ಹಾಸ್ಟೆಲ್‌ಗಳಿಗೆ’ ಮೊದಲೇ ಸದಸ್ಯತ್ವ ಪಡೆದಿರಬೇಕಾಗುತ್ತದೆ. ಅಂತರ್ಜಾಲದಲ್ಲಿ ಕೊಂಚ ಹುಡುಕಾಡಿ, ರಿವ್ಯೂಗಳು, ಕಾಮೆಂಟುಗಳನ್ನು ಓದಿಕೊಂಡು, ಸರಿಯಾದ ವಿವರಗಳನ್ನು ಕೇಳಿ ಪಡೆದುಕೊಂಡು, ಮುಂಗಡ ಕಾಯ್ದಿರಿಸಿಕೊಂಡರೆ ನೆಮ್ಮದಿಯಾಗಿ ಪ್ರಯಾಣ ಮಾಡಬಹುದು.

ಟಿಕೆಟ್‌ ಬುಕಿಂಗ್‌ ಸಂದರ್ಭದಲ್ಲಿ, ಆದಷ್ಟು ತಡರಾತ್ರಿ ತಲುಪುವಂಥ ವಿಮಾನ, ರೈಲುಗಳನ್ನು ಕಾಯ್ದಿರಿಸದಿರುವುದು ಒಳ್ಳೆಯ ನಿರ್ಧಾರ. ಜನಸಂಚಾರವಿರುವ ಸಮಯದಲ್ಲೇ ತಲುಪುವಂತೆ ನೋಡಿಕೊಂಡರೆ ಸುರಕ್ಷಿತವಾಗಿ ಕಾಯ್ದಿರಿಸಿದ ರೂಮಿಗೆ ತಲುಪಬಹುದು.

ಸರಳತೆ, ಸಭ್ಯತೆ, ಶಿಸ್ತು..
ಸರಳತೆ, ಶಿಸ್ತು, ಸಭ್ಯತೆ, ಏಕಾಂಗಿ ಪ್ರವಾಸಿಗೆ ಇರಲೇಬೇಕಾದ ಮುಖ್ಯ ಗುಣಗಳು. ಇವು ಇಡೀ ಪ್ರಯಾಣದ ಶಕ್ತಿ. ನಾವು ತೊಡುವ ಬಟ್ಟೆಯಿಂದ ನಡತೆಯವರೆಗೆ ಸಭ್ಯವಾಗಿದ್ದರೆ, ಆಯಾ ಊರಿನ ಸಂಸ್ಕೃತಿಗೆ ಹೊಂದುವಂತಿದ್ದರೆ, ಎಂಥ ಜಾಗದಲ್ಲೂ ಸುರಕ್ಷಿತವಾಗಿರಬಹುದು. ಇವು ಎದುರಿಗಿರುವವರು ನಮ್ಮನ್ನು ನೋಡಬಹುದಾದ ದೃಷ್ಟಿಕೋನವನ್ನೂ ಬದಲಾಯಿಸುತ್ತದೆ. ಸ್ಥಳೀಯರಿಗೆ ನಾವು ತೋರಿಸುವ ಗೌರವ, ಮುಖದಲ್ಲೊಂದು ಸುಂದರ ನಗು ಎಂಥ ಜಾಗದಲ್ಲೂ ನಮಗೆ ಒಳ್ಳೆಯದನ್ನೇ ಮಾಡುತ್ತದೆ. ದೇಶ, ಭಾಷೆ, ಗಡಿಗಳ ಹಂಗನ್ನು ಮೀರಿ ಮಾನವ ಸಂಬಂಧವನ್ನು ಬೆಸೆಯುವ ಕೊಂಡಿ ಇದು.

ಅಂದಹಾಗೆ, ಒಬ್ಬರೇ ಇದ್ದೇವೆಂದು ಯಾರೇನು ಹೇಳಿದರೂ ತಲೆಯಾಡಿಸುವುದು ಮೂರ್ಖತನದ ಪರಮಾವಧಿ. ಪ್ರಶ್ನೆ ಮಾಡುವುದೂ ಆತ್ಮವಿಶ್ವಾಸವನ್ನಷ್ಟೇ ತೋರಿಸುತ್ತದೆ. ಜೊತೆಗೆ ಸುಲಭವಾಗಿ ಮೋಸ ಹೋಗುವುದನ್ನೂ ತಪ್ಪಿಸುತ್ತದೆ. ಪರಿಸ್ಥಿತಿ ಸಂದರ್ಭಗಳನ್ನು ಅರಿತು ನಡೆಯುವ ಜಾಣತನ ಇದ್ದರೆ ಸಾಕು.

ಮಾಹಿತಿ ಸಂಗ್ರಹ ಮುಖ್ಯ
ಹೋಗುವ ಮೊದಲು ಆ ಪ್ರದೇಶದ ಬಗೆಗಿನ ಸರಿಯಾದ ಮಾಹಿತಿ, ಓದು ಕೂಡಾ ಮುಖ್ಯ. ಯಾವತ್ತೂ ಪ್ರವಾಸ ಮಾಡುವವರು ಪರ್ಯಾಯ ಯೋಜನೆಗಳನ್ನು (ಪ್ಲಾನ್ ಎ, ಪ್ಲಾನ್‌ ಬಿ ತರಹ) ಮಾಡಿಕೊಂಡಿರಬೇಕು. ಮೊದಲನೆಯದಕ್ಕೆ ಅಡಚಣೆಯಾದರೆ, ಮತ್ತೊಂದು ಯೋಜನೆಯಂತೆ ಪ್ರಯಾಣಿಸಬಹುದು. ಆದಷ್ಟು ಕಡಿಮೆ ಲಗೇಜು ಕೊಂಡೊಯ್ದರೆ ಪ್ರಯಾಣ ಸುಖಕರವಾಗಿರುತ್ತದೆ. ಅಂದ ಹಾಗೆ ಪ್ರವಾಸದ ವೇಳೆ ಪರ್ಸ್‌, ಫೋನ್‌, ಐಡಿ ಕಾರ್ಡ್‌ ಇತ್ಯಾದಿಗಳ ಮೇಲೆ ನಿಗಾ ಇರಲಿ. ಕಾಲಕಾಲಕ್ಕೆ ಆಪ್ತರಿಗೆ ತಾನೆಲ್ಲಿರುವೆ ಎಂಬ ಮಾಹಿತಿ, ತಾನು ಪ್ರಯಾಣಿಸುವ ವಾಹನದ ಮಾಹಿತಿಯನ್ನು ಅಪ್‌ಡೇಟ್‌ ಮಾಡುತ್ತಿದ್ದರೆ ಒಳ್ಳೆಯದು. ದುಬಾರಿ ಗ್ಯಾಜೆಟ್‌ಗಳು, ಆಭರಣಗಳ ಪ್ರದರ್ಶನ ಮಾಡುವುದರಿಂದ ವೃಥಾ ತೊಂದರೆಯನ್ನು ಆಹ್ವಾನಿಸಿಕೊಂಡಂತೆ ಎಂಬುದೂ ನೆನಪಿರಲಿ.

‘ಪ್ರಪಂಚ ತುಂಬ ಕೆಟ್ಟುಹೋಗಿದೆ. ಇಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲ’ ಎಂಬ ನಕಾರಾತ್ಮಕ ಚಿಂತನೆಗಳನ್ನು ಮೊದಲು ಬಿಸಾಕಿ, ಧೈರ್ಯದಿಂದ ಹೆಜ್ಜೆ ಇಡಿ. ಹೊಸತನ್ನು ಆಸ್ವಾದಿಸುವ, ಗುಣವಿದ್ದರೆ ಈ ಏಕಾಂಗಿ ಪ್ರವಾಸ, ನಮ್ಮ ಮುಂದೆ ಚಂದನೆಯ ಜಗತ್ತೊಂದನ್ನು ತೆರೆದಿಡುತ್ತದೆ.

ಶೇರಿಂಗ್ ‘ವಾಹನ’ ಉತ್ತಮ
ಒಬ್ಬರೇ ನಗರ ಸುತ್ತುವಾಗ ಅಥವಾ ಬೇರೆ ಜಾಗಗಳನ್ನು ನೋಡಿಕೊಂಡು ಬರಲು ಹೊರಟಾಗ ಸಹ ಪ್ರಯಾಣಿಕರಿರುವ ಶೇರಿಂಗ್‌ ಟ್ಯಾಕ್ಸಿಗಳು, ಸಾರ್ವಜನಿಕ ಸಾರಿಗೆಗಳನ್ನು ಆಯ್ಕೆ ಮಾಡಿಕೊಳ್ಳುವುದೂ ಉತ್ತಮ ಉಪಾಯ. ಇದಲ್ಲದೆ, ಬಹಳಷ್ಟು ಸಲ ಸಾಮಾಜಿಕ ಜಾಲತಾಣಗಳಲ್ಲಿ ಸಮಾನ ಮನಸ್ಕ ಟ್ರಾವೆಲ್‌ ಗುಂಪುಗಳನ್ನು ಗಮನಿಸುತ್ತಿದ್ದರೆ, ಸಹ ಪಯಣಿಗರಾಗಿ ಉತ್ತಮ ಸೋಲೊ ಟ್ರಾವೆಲರ್‌ಗಳು ಅಲ್ಲಿ ಸಿಗುವ ಸಾಧ್ಯತೆಗಳೂ ಇರುತ್ತವೆ. ಕೆಲವೊಮ್ಮೆ ಇಂತಹ ಅಚಾನಕ್‌ ಭೇಟಿಗಳು, ಬದುಕಿನಲ್ಲಿ ಮರೆಯಲಾಗದ ಸಂಬಂಧಗಳನ್ನೂ ತರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT