ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಮನ ಸೆಳೆಯುತ್ತಿದೆ ಮೈಸೂರಿನ ಮರಳು ಶಿಲ್ಪಗಳ ಮ್ಯೂಸಿಯಂ

Last Updated 9 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

‘ಮೈಸೂರು ದಸರಾ, ಎಷ್ಟೊಂದು ಸುಂದರ’ ಎಂಬ ಹಾಡು ದಸರಾ ಜಂಬೂಸವಾರಿಯಷ್ಟೇ ಜನಪ್ರಿಯ. ಆದರೆ, ದಸರಾ ಮುಗಿಯಿತಲ್ಲ. ಈಗೇಕೆ ಈ ಮಾತು ? ಎಂದು ಕೇಳ್ತಿದ್ದೀರಲ್ಲವಾ.
ಹೌದು, ‘ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ…’ ಎಂಬ ಹಾಡು ಕೇಳಿದ್ದೀರಲ್ಲವಾ. ಹಾಗೆಯೇ, ದಸರಾ ಮುಗಿದ ಮೇಲೂ, ಬೃಹತ್ ವಸ್ತು ಪ್ರದರ್ಶನ ವೀಕ್ಷಿಸಬಹುದು. ಇವಲ್ಲದೇ, ಮೈಸೂರು ನಗರದಲ್ಲೇ ನೋಡುವುದಕ್ಕೆ ಅನೇಕ ವಿಶಿಷ್ಟ ಸ್ಥಳಗಳಿವೆ. ಅಂಥ ತಾಣಗಳಲ್ಲಿ ಮೈಸೂರು ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂ ಅರ್ಥಾತ್ ಮರಳು ಮ್ಯೂಸಿಯಂ ಕೂಡ ಒಂದು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮ್ಯೂಸಿಯಂಗಳಿಗೇನೂ ಕಡಿಮೆ ಇಲ್ಲ. ಆದರೆ, ‘ಮರಳು ಮ್ಯೂಸಿಯಂ’ ಹೆಚ್ಚು ಗಮನ ಸೆಳೆಯುತ್ತದೆ. ಹತ್ತರಿಂದ ಹದಿಮೂರು ಚದರಡಿ ವಿಸ್ತೀರ್ಣದಲ್ಲಿರುವ ಈ ಮ್ಯೂಸಿಯಂನಲ್ಲಿ ವೈವಿಧ್ಯಮಯ ಮರಳಿನ ಕಲಾಕೃತಿಗಳಿವೆ. ಸಾಮಾನ್ಯವಾಗಿ ಇಂಥ ಮರಳು ಶಿಲ್ಪಗಳ ಮ್ಯೂಸಿಯಂ ಕಡಲ ತಡಿಯಲ್ಲಿ ಇರುತ್ತದೆ. ಆದರೆ, ಇದು ಮೈಸೂರಿನಲ್ಲಿರುವುದು ಅಚ್ಚರಿಯ ಸಂಗತಿ.

ಮ್ಯೂಸಿಯಂನಲ್ಲಿ ಏನೇನಿದೆ ?

ಮ್ಯೂಸಿಯಂ ಒಳಗೆ ಪ್ರವೇಶಿಸುತ್ತಲೇ ಭವ್ಯವಾದ ಗಣೇಶನ ಪ್ರತಿಕೃತಿ ಸ್ವಾಗತಿಸುತ್ತದೆ. ಸುಮಾರು 15 ಅಡಿ ಎತ್ತರವಿರಬಹುದು. ಗಣೇಶ ಮೂರ್ತಿ ಅಷ್ಟೇ ಅಲ್ಲ, ಮ್ಯೂಸಿಯಂ ಪೂರ್ತಿ ಮರಳು ಗುಡ್ಡೆಯಲ್ಲೇ 150ಕ್ಕೂ ಹೆಚ್ಚು ಕಲಾಕೃತಿಗಳನ್ನು ಕೆತ್ತಲಾಗಿದೆ. ಈ ಎಲ್ಲ ಕಲಾ ಕೃತಿಗಳಲ್ಲಿ ಅಸಾಮಾನ್ಯವಾದ್ದು(ಯೂನಿಕ್) ಈ ಗಣಪತಿ ಶಿಲ್ಪ. ಸುಮಾರು 115 ಲಾರಿ ಲೋಡ್ ಮರಳು ಬಳಸಿ, ಈ ಕಲಾಕೃತಿಗಳನ್ನು ರಚಿಸಿದ್ದಾರೆ. ಒಟ್ಟು ಹದಿನಾರು ವಿಷಯಾಧಾರಿತ ವಿಭಿನ್ನ ಚಿತ್ರಗಳು ಇಲ್ಲಿವೆ. ಇದು 2014ರಲ್ಲಿ ಆರಂಭವಾಗಿದೆ.

ಜಗನ್ಮಾತೆ ಚಾಮುಂಡೇಶ್ವರಿ, ದಸರಾ ಮೆರವಣಿಗೆ, ವನ್ಯ ಮೃಗಗಳು, ಡಿಸ್ನಿ ಲ್ಯಾಂಡ್ ಹಾಗೂ ಕೃಷ್ಣಾರ್ಜುನ ಗೀತೋಪದೇಶದ ಕಲಾಕೃತಿ ಮನ ಸೆಳೆಯುವಂತಿವೆ. ಪುರಾತನ ನಾಗರಿಕತೆಗಳಾದ ಗ್ರೀಕ್, ರೋಮನ್, ರೆಡ್ ಇಂಡಿಯನ್ಸ್, ಈಜಿಪ್ಟಿಯನ್ , ಆಫ್ರಿಕ ಮತ್ತು ಕಾಂಬೋಡಿಯ ಬುಡಕಟ್ಟು ಸಮುದಾಯದ ಚಿತ್ರಗಳಿವೆ. ಹಲವು ಕಲಾಕೃತಿಗಳು ಮರೆತಿರುವ ಚರಿತ್ರೆಗಳನ್ನು ಕಣ್ಣೆದುರಿಗೇ ತೆರೆದುಕೊಳ್ಳುವಂತೆ ಮಾಡುತ್ತವೆ.

ಜೂಲಿಯಸ್ ಸೀಸರ್, ಸ್ಟಾರ್ ಫಿಶ್, ಮೆರಿಮೇಯ್ಡ್, ಜೆಲ್ಲಿಫಿಶ್, ಶಂಖ, ಡಾಲ್ಫಿನ್, ಚಿಪ್ಪಿನೊಳಗಿರುವ ಮುತ್ತುಗಳು, ಕ್ರಿಸ್‌ಮಸ್ ಹಬ್ಬದ ಕುರುಹಾಗಿ ಸಾಂತಾಕ್ಲಾಸ್, ಕ್ರಿಸ್ಮಸ್ ಟ್ರೀ, ವಿಂಟೇಜ್ ಕಾರ್, ಮೈಸೂರು ಪ್ರಾಣಿ ಸಂಗ್ರಹಾಲಯ.... ಹೀಗೆ, ನೋಡಿದಷ್ಟೂ ಕಣ್ಮನ ತಣಿಸುವ ಕಲಾ ಕೃತಿಗಳು ಇಲ್ಲಿವೆ.

ಮ್ಯೂಸಿಯಂ ಕರ್ತೃ

ಈ ಸುಂದರ ಮರಳು ಮ್ಯೂಸಿಯಂ ಕರ್ತೃ ಮರಳು ಶಿಲ್ಪ ಕಲಾವಿದೆ ಎಂ.ಎನ್. ಗೌರಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಇನ್ ಫೈನ್ ಆರ್ಟ್ಸ್ ಡಿಗ್ರಿ ಪಡೆದಿರುವ ಇವರು, ಹತ್ತಾರು ವರ್ಷಗಳಿಂದ ಮರಳಿನ ಕಲಾಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸುತ್ತೂರಿನ ಅಖಿಲ ಭಾರತ ವೀರಶೈವ ಮಹಾ ಸಭಾದಲ್ಲಿ ಮರಳಿನಿಂದ ಮಾಡಿದ ಪರಮೇಶ್ವರ, ಲಿಂಗ ಹಾಗೂ ಹಾವಿನ ಕೃತಿಗಳು, ಮಡಿಕೇರಿಯ ದಸರದಲ್ಲಿ ಮಾಡಿದ ‘ಎ ಟ್ರಿಬ್ಯೂಟ್ ಟು ಅಬ್ದುಲ್ ಕಲಾಂ’, ಬೆಂಗಳೂರು ಲಾಲ್ ಬಾಗ್ ನಲ್ಲಿನ ಪ್ರದರ್ಶನ ಮೆಚ್ಚುಗೆ ಪಡೆದ ಹಲವಾರು ಪ್ರದರ್ಶನಗಳಲ್ಲಿ ಕೆಲವು ಮಾತ್ರ. ಗೌರಿಯವರು, ಆಹ್ವಾನದ ಮೇರೆಗೆ ಮರಳಿನ ಕೃತಿಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡುತ್ತಾರೆ.ತಿರುಚ್ಚಿಯಲ್ಲಿ ಮಾಡಿದ 12 ಅಡಿ ಎತ್ತರ, 20 ಅಡಿ ಉದ್ದ ಹಾಗೂ 60 ಅಡಿ ಅಗಲದ ಕಲಾಕೃತಿ ಇಲ್ಲಿವರೆಗೂ ಗೌರಿ ಅವರು ರಚಿಸಿರುವ ಅತಿ ದೊಡ್ಡ ಮರಳಿನ ಶಿಲ್ಪ. ಸೂಕ್ತವಾದ ಅಂಟು ಬಳಸಿ ಶ್ರದ್ಧೆಯಿಂದ ಮಾಡಿದ ಮರಳಿನ ಕಲಾಕೃತಿ ಒಂದು ವರ್ಷಕಾಲ ಚೆನ್ನಾಗಿರುತ್ತದೆಂದು ಹೇಳುತ್ತಾರೆ.

ದಸರೆ ನಂತರವೂ ಮೈಸೂರಿಗೆ ಪ್ರವಾಸಿ ತಾಣಗಳ ಭೇಟಿಗಾಗಿ ಹೋಗುವವರು ಅಪರೂಪದ ಈ ಮರಳಿನ ಮ್ಯೂಸಿಯಂ ನೋಡಿಬನ್ನಿ.
ಕೇವಲ ಮರಳಿನಿಂದ ತಯಾರಿಸಿರುವ ಕಲಾಕೃತಿಗಳ ಪ್ರದರ್ಶನಕ್ಕಾಗಿಯೇ ಮೀಸಲಿಟ್ಟಿರುವ ಈ ಮ್ಯೂಸಿಯಂಗೆ ಭೇಟಿ ಕೊಡಿ.

ಅಂದ ಹಾಗೆ, ತೀವ್ರ ಮಳೆಗಾಲ ಹೊರತುಪಡಿಸಿ, ಉಳಿದೆಲ್ಲ ದಿನಗಳಲ್ಲೂ ಬೆಳಗ್ಗೆ 8-30 ರಿಂದ ಸಾಯಂಕಾಲ 6-30ರವರೆಗೆ ಮ್ಯೂಸಿಯಂ ತೆರೆದಿರುತ್ತದೆ. ಮ್ಯೂಸಿಯಂ ವೀಕ್ಷಣೆಗೆ ಪ್ರವೇಶ ಶುಲ್ಕವಿದೆ.

ಹೋಗುವುದು ಹೇಗೆ ?

ಬೆಂಗಳೂರಿನಿಂದ ಮೈಸೂರು 140 ಕಿ.ಮೀ ದೂರ. ವಿಮಾನ, ರೈಲು, ಬಸ್ ಸೇವೆ ಸಾಕಷ್ಟಿದೆ.
ಮೈಸೂರು ಸಿಟಿ ಬಸ್ ನಿಲ್ದಾಣದಲ್ಲಿಳಿದು, ಚಾಮುಂಡಿ ಬೆಟ್ಟದ ಕಡೆಗೆ ಹೋಗುವ ಎಲ್ಲಾ ಬಸ್‌ಗಳು ಮರಳು ಮ್ಯೂಸಿಯಂ ಬಳಿ ಸ್ಟಾಪ್ ಕೊಡುತ್ತವೆ. ಸಾಕಷ್ಟು ಬಸ್‌ಗಳಿವೆ. ಅನುಕೂಲ, ಅಗತ್ಯವೆನ್ನಿಸಿದವರು ಆಟೊ, ಟ್ಯಾಕ್ಸಿಯನ್ನೂ ಬಾಡಿಗೆಗೆ ಪಡೆದು ಹೋಗಬಹುದು.
ಮ್ಯೂಸಿಯಂ ವಿಳಾಸ : ಮೈಸೂರು ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂ, ಚಾಮುಂಡಿ ಹಿಲ್ಸ್ ರೋಡ್, ಕೆ ಸಿ ಲೇ ಔಟ್, ಮೈಸೂರು, ಕರ್ನಾಟಕ 570010.

ಚಿತ್ರಗಳು: ಮಹುವ ಸುಧೀರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT