ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಭೀಮನ ಹೆಜ್ಜೆ!

Last Updated 13 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ಇಷ್ಟು ಸುಲಭವಾಗಿ ಗುಡ್ಡ ಏರಿ ಈ ಅದ್ಭುತ ಸೌಂದರ್ಯ ಸವಿಯಲು ಸಾಧ್ಯವಿದೆಯೆಂದು ಗೊತ್ತೇ ಇರಲಿಲ್ಲ. ಆಹಾ! ಎಂಥ ನೋಟ. ಎಷ್ಟು ಅಹ್ಲಾದಕರ ವಾತಾವರಣ. ಯಾಕೋ ಇಲ್ಲಿಂದ ವಾಪಸ್ ಹೋಗಲು ಮನಸ್ಸೇ ಬರುತ್ತಿಲ್ಲ. ಆದರೂ, ಇನ್ನೊಂದು ಸ್ವಲ್ಪ ಹೊತ್ತು ಇದ್ದರೆ, ಸೂರ್ಯಾಸ್ತವನ್ನು ನೋಡಿಯೇ ಹೋಗಬಹುದು..’!

ಇವೆಲ್ಲ ಭೀಮನ ಹೆಜ್ಜೆಯೆಂಬ ಪ್ರಕೃತಿ ತಾಣದಲ್ಲಿ ನಿಂತು ಅಲ್ಲಿನ ಸೌಂದರ್ಯ ಸವಿದವರ ಉದ್ಗಾರಗಳು. ಉತ್ತರಕನ್ನಡ ಜಿಲ್ಲೆಯಲ್ಲಿರುವ ಆ ಗುಡ್ಡ ದೊಡ್ಡ ಹೆಜ್ಜೆಯಾಕಾರದಲ್ಲಿ ಇರುವುದರಿಂದ ಈ ಜಾಗಕ್ಕೆ ಭೀಮನ ಹೆಜ್ಜೆ, ಭೀಮನ ಅರೆ ಎಂದು ಹೇಳುತ್ತಾರೆ. ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳಿಂದ ಈ ಜಾಗಕ್ಕೆ ತಲುಪಬಹುದು. ಪ್ರಸಿದ್ಧ ಉಂಚಳ್ಳಿ ಜಲಪಾತದ ಸನಿಹದಲ್ಲಿ ಭೀಮನ ಹೆಜ್ಜೆ ಇದೆ ಎಂದು ಹೇಳಿದರೆ ಸುಲಭದ ಮಾರ್ಗಸೂಚಿಯಾದೀತು.

ಹಸಿರು ಕಣಿವೆಗಳ ನಡುವೆ

ಶಿರಸಿ ಕುಮಟಾ ರಸ್ತೆಯ ಅಮ್ಮಿನ ಹಳ್ಳಿಯಿಂದ ಹೆಗ್ಗರಣಿ ರಸ್ತೆಯಲ್ಲಿ ಹತ್ತು ಕಿಲೋಮೀಟರ್ ದೂರದಲ್ಲಿ ನಿಲ್ಕುಂದ ಸನಿಹ ಮುಳ್ಗುಂದದ ಗುಡ್ಡ ಹತ್ತಿದರೆ ಈ ರಮ್ಯ ತಾಣದ ಕೊನೆಯಲ್ಲಿ ನಿಂತಿರುತ್ತೀರಿ. ಮುಂದೆ ದಿಗಂತದಲ್ಲಿ ನೀಲಿ ಆಕಾಶ ಹಾಗೂ ಹಸಿರು ಕಣಿವೆಗಳ ಸಮಾಗಮದ ದರ್ಶನವಾಗುತ್ತದೆ.

ಕೊಡಚಾದ್ರಿಯಂತೆ ಬೆಟ್ಟಗಳ ಪದರು ನೀಲಿಯಾಗಿ ಗೋಚರಿಸುವ ಈ ಕಣಿವೆಯಲ್ಲಿ ಅಘನಾಶನಿ ನದಿ ಹರಿಯುತ್ತ ಹರಿಯುತ್ತ ಕಾಣೆಯಾಗಿಬಿಡುತ್ತದೆ! ವಾತಾವರಣ ತಿಳಿಯಾಗಿದ್ದರೆ ದೂರದಲ್ಲಿ ಪಶ್ಚಿಮದ ಅರಬ್ಬಿ ಸಮುದ್ರ ಹೊಳೆಯುವುದು ಗೋಚರಿಸುತ್ತದೆ. ದಟ್ಟಡವಿಯ ಹಸಿರು ಕಣಿವೆಯ ಆಹ್ಲಾದಕರ ಗಾಳಿ ಜೋರಾಗಿ ಬೀಸಿ, ಚಳಿ ಹುಟ್ಟಿಸಿ, ಮೈಮರೆತ ನಮ್ಮನ್ನು ಎಚ್ಚರಿಸುತ್ತದೆ. ಈ ದೃಶ್ಯ ಕಾವ್ಯ ಒಂದು ಕಿಲೋಮೀಟರ್ ಗುಡ್ಡ ಹತ್ತಿ ಬಂದ ದಣಿವೆಲ್ಲ ಕ್ಷಣ ಮಾತ್ರದಲ್ಲಿ ಮರೆಸುತ್ತದೆ. ಅಲ್ಲೇ ಸನಿಹದಲ್ಲಿರುವ ವಾಟೆಹಳ್ಳ ಜಲಪಾತ, ದಟ್ಟ ಮರಗಳ ಅಡವಿಯಲ್ಲಿ ಧುಮ್ಮಿಕ್ಕುವ ಕಲರವ ಕೇಳಿಸುತ್ತದೆ. ಆ ಶಬ್ಧ ಆಲಿಸಿದರೆ ಜಲಪಾತದ ಸೊಬಗನ್ನು ಊಹಿಸಿಕೊಳ್ಳಬಹುದು. ಹಸಿರ ಕಣಿವೆಯ ಆಳದಲ್ಲಿ ಮರಗಳಿಲ್ಲದ ಕಂದಕವು ಜಲಪಾತದ ಇರುವಿಕೆಯನ್ನು ಸೂಚಿಸುತ್ತದೆ.

ಭೀಮನ ಹೆಜ್ಜೆಯ ಮೇಲೆ ನಿಂತಾಗ ಕಾಣುವ ಹಸಿರ ರಾಶಿ

ಸೂರ್ಯಾಸ್ತದ ಸೊಬಗು

ಭೀಮನ ಹೆಜ್ಜೆಗೆ ಸಾಯಂಕಾಲ ನಾಲ್ಕು ಗಂಟೆಗೆ ಹೋದರೆ ಸೂರ್ಯಾಸ್ತದ ಸೊಬಗನ್ನು ನೋಡಬಹುದು. ಆ ವೇಳೆಯಲ್ಲಿ ನೀಲಿ ಕಣಿವೆ ಹಲವು ಪದರುಗಳಂತೆ ಕಾಣಿಸುತ್ತದೆ. ಸೂರ್ಯ ಯಾವ ಪದರಿನಲ್ಲಿ ಮುಳುಗಿದ ಎಂದೇ ತಿಳಿಯುವುದಿಲ್ಲ! ನೋಡ ನೋಡುತ್ತಿದ್ದಂತೆ ನದಿ ನೀರೆಲ್ಲ ಕೆಂಪಗಾಗಿ ಇಡೀ ಕಣಿವೆ ದಟ್ಟ ಕೆಂಪು ಕೊಳ್ಳವಾಗಿಬಿಡುತ್ತದೆ. ಅದುವರೆಗೂ ನಮ್ಮ ಗಮನಕ್ಕೇ ಬರದಿರುವ ಜೀರುಂಡೆಗಳ ಆರ್ಕೆಸ್ಟ್ರಾ ಅರಿವಿಗೆ ಬರತೊಡಗುತ್ತದೆ. ಆಗ ಗುಡ್ಡ ಇಳಿಯಲು ಶುರುಮಾಡಬೇಕು. ಇಲ್ಲಿ ಯಾವುದೇ ಪ್ರಾಣಿಗಳ ಭಯವಿಲ್ಲ. ಸೂರ್ಯಾಸ್ತ ನೋಡಿ ಬರುವ ಮನಸಿದ್ದವರು ಬ್ಯಾಗ್‍ನಲ್ಲಿ ಒಂದು ಟಾರ್ಚ್‌ ಇಟ್ಟುಕೊಂಡಿರಬೇಕು.

ಭೀಮನ ಹೆಜ್ಜೆ ಸ್ಥಳದಲ್ಲಿ ಅರಣ್ಯ ಇಲಾಖೆಯವರು ಪ್ರವಾಸಿಗರು ವಿಶ್ರಮಿಸಲು ಕುಟೀರವನ್ನು ನಿರ್ಮಿಸಿದ್ದಾರೆ. ರಸ್ತೆಯನ್ನು ಅಭಿವೃದ್ಧಿಪಡಿಸಿದ್ದು ಬೈಕ್ ಮಾತ್ರ ಕುಟೀರದವರೆಗೆ ಬರುತ್ತದೆ. ನಾಲ್ಕು ಚಕ್ರದ ವಾಹನಗಳನ್ನು ಘಟ್ಟದ ಬುಡದಲ್ಲೇ ನಿಲ್ಲಿಸಬೇಕು. ಪುಟ್ಟ ಮಕ್ಕಳಿಗೆ ಚಾರಣದ ಮೊದಲ ಹೆಜ್ಜೆ ಕಲಿಸಲು ಭೀಮನ ಹೆಜ್ಜೆ ಅತ್ಯುತ್ತಮ ತಾಣ. ಹೆಜ್ಜೆಯ ಕೊನೆಯಲ್ಲಿ ನಿಂತಾಗ ಮಾತ್ರ ಮಕ್ಕಳ ಕೈ ಹಿಡಿದುಕೊಂಡೇ ಇರಬೇಕು..!

ಕಣಿವೆ ಮೇಲೆ ಮುತ್ತಿಕ್ಕುತ್ತಿರುವ ಮಂಜಿನ ಹನಿಗಳು
ಕಣಿವೆ ಮೇಲೆ ಮುತ್ತಿಕ್ಕುತ್ತಿರುವ ಮಂಜಿನ ಹನಿಗಳು

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT