ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ | ಸಮನಾರ್ & ಜಿಗರ್‌ಥಂಡಾ!

Last Updated 4 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಬೆಳಿಗ್ಗೆ ಬೇಗನೆದ್ದು ಮದುರೈ ಮೀನಾಕ್ಷಿಯ ದರ್ಶನ ಪಡೆದು ಪರಿಮಳ ಬೀರುವ ಮಲ್ಲಿಪೂ ತಲೆಗೇರಿಸಿದ್ದಾಗಿತ್ತು. ದೇಗುಲದಲ್ಲೇ ಸಿಗುವ ಬಿಸಿಬಿಸಿ ಪೊಂಗಲ್ ಮತ್ತು ಕೀರೈವಡೆ ತಿಂದು ಕಾರಲ್ಲಿ ಕುಳಿತಿದ್ದಷ್ಟೆ. ‘ಸಮನಾರ್ ಮಲೈ ಪೋಲಾಮ್ ವಾಂಗೋ... ( ಸಮನಾರ್ ಬೆಟ್ಟಕ್ಕೆ ಹೋಗೋಣ ಬನ್ನಿ)’ ಎಂದು ದೊರೈ ಕರೆದಾಗ ಹೊಟ್ಟೆ ಭಾರವಾಗಿ ಕಣ್ಣು ಎಳೆಯುತ್ತಿತ್ತು. ಸಮನಾರ್ ಹೆಸರು ಕೇಳಿ ಬಹುಶಃ ಕಡಿದಾದ ಬೆಟ್ಟ ಮಾನವರಿಗೆ ‘ಎನ್ನ ಸಮನಾರ್’ ಎಂದು ಸವಾಲು ಹಾಕಿ ನಿಂತಿದೆ ಎಂದು ನಾನು ಊಹಿಸಿದೆ. ಹೆಸರೇ ಹೀಗಿದೆ. ಇನ್ನು ಬಿಸಿಲೇರಿದರೆ ಬೆಟ್ಟ ಹತ್ತುವುದು ಕಷ್ಟ ಎಂದು ಕೂಡಲೇ ಹೊರಟಿದ್ದಾಯ್ತು.

ಜಿಗರ್ ಥಂಡಾ
ಜನಜಂಗುಳಿ ದಟ್ಟವಾಗಿದ್ದ ಕಿರಿದಾದ ದಾರಿಯಲ್ಲಿ ಚಲಿಸುತ್ತಿದ್ದ ಕಾರು ಪುಟ್ಟ ಅಂಗಡಿ ಬಳಿ ನಿಂತಿತು. ಅಂಗಡಿಯ ಹೆಸರೇ ಫೇಮಸ್! ದಪ್ಪ ಅಕ್ಷರಗಳಲ್ಲಿ ಜಿಗರ್ ಥಂಡಾ ಎಂಬ ಹೆಸರು ಕಾಣುತ್ತಿತ್ತು. ದೊರೈ, ಮದುರೈ ಸ್ಪೆಷಲ್ ‘ಜಿಲ್ ಜಿಲ್ ಜಿಗರ್ ಥಂಡಾ’ ತರುತ್ತೇನೆ ಎಂದಾಗ ಆಶ್ಚರ್ಯವಾಗಿತ್ತು. ಕಡೆಗೆ ಸಿಕ್ಕಿದ್ದು ಬಿಸಿಲಿಗೆ ಅಮೃತವೇ ಎನಿಸಿದ ನಮ್ಮ ಫಲೂದಾಕ್ಕೆ ಹತ್ತಿರವೆನಿಸಿದ ವಿಶಿಷ್ಟ ರುಚಿಯ ತಂಪುಪಾನೀಯ!

ಜಿಗರ್ ಥಂಡಾ
ಜಿಗರ್ ಥಂಡಾ

ಎಲ್ಲೆಲ್ಲೂ ತಮಿಳು ಭಾಷೆಯೇ ಕಿವಿಗೆ, ಕಣ್ಣಿಗೆ ಬೀಳುವ ಈ ಊರಲ್ಲಿ ಹೀಗೆ ಜಿಗರ್‌ ಥಂಡಾ (ಜಿಗರ್ -ಹೃದಯ, ಥಂಡಾ-ತಣ್ಣಗೆ, ಜಿಲ್ ಎಂಬುದು ಚಿಲ್ ಎಂಬುದರ ಅಪಭ್ರಂಶ!) ಎಂಬ ಹೆಸರಿನ ಪಾನೀಯ ಬಂದದ್ದರ ಬಗ್ಗೆ ಅನೇಕ ವಾದಗಳಿವೆ. ಹದಿನೇಳನೇ ಶತಮಾನದಲ್ಲಿ ಮೊಘಲ್ ದೊರೆಗಳ ಕಾಲದಲ್ಲಿ ಆವಿಷ್ಕಾರಗೊಂಡಿದ್ದು ಎಂಬುದು ಅನೇಕರ ವಾದ. ಇನ್ನು ಕೆಲವರು ಇದಕ್ಕೆ ಆರಂಭದಲ್ಲಿ ಕಡಲ್‍ಪಾಸಿ (ಚೈನಾ ಗ್ರಾಸ್) ಸೇರಿಸುತ್ತಿದ್ದರು. ತಮಿಳುನಾಡಿನಲ್ಲಿ ಸಮುದ್ರದ ಮಾರ್ಗದ ಮೂಲಕ ಸಾಕಷ್ಟು ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಹಾಗೆ ಬಹುದಿನ ಪ್ರಯಾಣ ಮಾಡುವ ವ್ಯಾಪಾರಿಗಳಿಗೆ ಶಕ್ತಿ ನೀಡುವ (ಪ್ರೋಟೀನ್ ಅಂಶ ಹೊಂದಿದ) ಪಾನೀಯ ಇದಾಗಿತ್ತು ಎನ್ನುತ್ತಾರೆ.

ಬಹುಜನರ ಅಭಿಪ್ರಾಯದಲ್ಲಿ ಈ ಪಾನೀಯ ಹತ್ತೊಂಬತ್ತನೇ ಶತಮಾನದಲ್ಲಿ ಮದುರೈಯಲ್ಲಿ ಬಂದು ನೆಲೆಸಿದ ಮುಸ್ಲಿಂ ಸಮುದಾಯದ ಕೊಡುಗೆ. ಜಿಗರ್ ಥಂಡಾದಲ್ಲಿ ನನ್ನಾರಿ ಎಂಬ ಬೇರಿನ ಶರಬತ್, ಬಾದಾಮಿಯ ಅಂಟು, ಹಾಲು, ಸಕ್ಕರೆ, ಕೆನೆ ಮತ್ತು ಐಸ್‍ಕ್ರೀಂ ಇರುತ್ತದೆ. ಆಗಷ್ಟೇ ಕರೆದ ಹಸುವಿನ ಹಾಲನ್ನು ಕಾಯಿಸಿ ತಣಿಸಿ, ಕೆನೆ ತೆಗೆಯಲಾಗುತ್ತದೆ. ಐಸ್‍ಕ್ರೀಂ ಅನ್ನು ಮಶೀನ್ ಬಳಸಿಯಲ್ಲ ಕೈಯಿಂದ ತಯಾರಿಸುವುದು ಪದ್ಧತಿ. ಬಾದಾಮಿಯ ಅಂಟನ್ನು ರಾತ್ರಿಯೇ ನೆನೆಸಿ ಮೆತ್ತಗೆ ಮಾಡಲಾಗುತ್ತದೆ. ನನ್ನಾರಿಯ ಬೇರನ್ನು ಕುದಿಸಿ, ಸಕ್ಕರೆಯೊಂದಿಗೆ ಸೇರಿಸಿ ಶರಬತ್ ತಯಾರಿಸಲಾಗುತ್ತದೆ. ಕಡೆಯಲ್ಲಿ ಎಲ್ಲವನ್ನೂ ಬೆರೆಸಿ ಮೇಲೆ ಸ್ವಲ್ಪ ವೆನಿಲಾ ಐಸ್‍ಕ್ರೀಂ ಸೇರಿಸಿದರೆ ಜಿಲ್ ಜಿಲ್ ಜಿಗರ್ ಥಂಡಾ ರೆಡಿ. ದೇಹವನ್ನು ತಣಿಸುವ ಶಕ್ತಿ ಇರುವ ಈ ಪೇಯದ ಬಗ್ಗೆ ಮದುರೈ ಜನರಿಗೆ ಎಲ್ಲಿಲ್ಲದ ಹೆಮ್ಮೆ! ಅಂತೂ ಶಕ್ತಿ ಹೆಚ್ಚಿಸಿಕೊಂಡು ಸಮನಾರ್ ಮಲೈಗೆ ಪಯಣ ಮುಂದುವರಿಯಿತು.

ತಮಿಳುನಾಡಿನಲ್ಲಿ ಜೈನಧರ್ಮ
ಸಮನಾರ್ ಬೆಟ್ಟಕ್ಕೆ ಹೆಸರು ಬರಲು ಕಾರಣ ಶ್ರಮಣರು-ಸಮಣರು ಅಂದರೆ ಈ ಬೆಟ್ಟ, ಜೈನ ಮುನಿಗಳು ಇದ್ದ ಸ್ಥಳ! ಮದುರೈಯಿಂದ ಹದಿನೈದು ಕಿ.ಮೀ. ದೂರದಲ್ಲಿರುವ ಕೀಲಕುಯಿಲ್ಕುಡಿ ಹಳ್ಳಿಯ ಹತ್ತಿರದಲ್ಲಿದೆ. ಇತಿಹಾಸವನ್ನು ಅವಲೋಕಿಸಿದರೆ ದಕ್ಷಿಣ ಭಾರತದಲ್ಲಿ ಜೈನಧರ್ಮ ಮೌರ್ಯರ ಕಾಲದಲ್ಲಿ ನೆಲೆ ಕಂಡುಕೊಂಡಿತು. ಚಾಣಕ್ಯನ ಸಹಾಯದಿಂದ ಮೌರ್ಯ ಸಾಮ್ರಾಜ್ಯ ಸ್ಥಾಪಿಸಿದ ಚಂದ್ರಗುಪ್ತಮೌರ್ಯ ಅನೇಕ ವರ್ಷಗಳ ಯಶಸ್ವಿ ಆಳ್ವಿಕೆ ನಡೆಸಿದ. ತದನಂತರ ಕಾಣಿಸಿಕೊಂಡ ಹನ್ನೆರಡು ವರ್ಷಗಳ ಭೀಕರ ಬರದ ನಂತರ ಈ ಲೌಕಿಕ ವ್ಯವಹಾರಗಳಲ್ಲಿ ಭ್ರಮನಿರಸನಗೊಂಡ. ಮಗ ಬಿಂದುಸಾರನಿಗೆ ರಾಜ್ಯಭಾರ ವಹಿಸಿ ಆಚಾರ್ಯ ಭದ್ರಬಾಹುವಿನಲ್ಲಿ ದೀಕ್ಷೆ ಪಡೆದು ಜೈನಸನ್ಯಾಸಿಯಾದ. ಅಲ್ಲಿಂದ ಕರ್ನಾಟಕದ ಶ್ರವಣಬೆಳಗೊಳಕ್ಕೆ ಪಯಣಿಸಿದ. ಭದ್ರಬಾಹುವಿನ ಅನುಯಾಯಿಗಳು ತಮಿಳುನಾಡಿನಲ್ಲಿ ಜೈನಧರ್ಮ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎನ್ನಲಾಗುತ್ತದೆ.

ಸಾವಿದೈನೂರು ವರ್ಷಗಳ ಹಿಂದೆ ರಚಿತವಾದ ತಮಿಳಿನ ಪ್ರಾಚೀನ ಕಾವ್ಯ ಶಿಲಪ್ಪದಿಕಾರಂ ಬರೆದವರು ಇಳಂಗೋ ಅಡಿಗಳ್ ಎಂಬ ಜೈನ ಕವಿ. ಕೋವಲನ್, ಆತನ ಪತ್ನಿ ಕನ್ನಗಿ ಮತ್ತು ಮಾಧವಿ ಎಂಬ ನರ್ತಕಿ ಇವರನ್ನು ಒಳಗೊಂಡ ಕಾಲ್ಬಳೆಯ ಸುತ್ತ ಹೆಣೆದ ಪ್ರೇಮ ಕಥೆ ಇದು. ಇದರಲ್ಲಿ ಮದುರೈನ ಶ್ರೀಮಂತ ವರ್ತಕರ ಬಗ್ಗೆಯೂ ಉಲ್ಲೇಖಗಳಿವೆ. ಬಹುಶಃ ಈ ವರ್ತಕರು ಜೈನ ಶ್ರಾವಕರಿರಬಹುದು (ಮುನಿಗಳ ಸೇವೆಮಾಡಿ, ಪುಣ್ಯ ಗಳಿಸುವ ಸಂಸಾರಸ್ಥರು). ಇದೆಲ್ಲರಿಂದ ತಮಿಳುನಾಡಿನಲ್ಲಿ ವಿಶೇಷವಾಗಿ ಮದುರೈ ಸುತ್ತಮುತ್ತ ಜೈನಧರ್ಮ ಸಾಕಷ್ಟು ಪ್ರಬಲವಾಗಿತ್ತು ಎಂದು ಊಹಿಸಬಹುದಾಗಿದೆ. ಅದಕ್ಕೆ ಸಾಕ್ಷಿಯಾಗಿ ಪುರಾತತ್ವಶಾಸ್ತ್ರಜ್ಞರು ಈ ಸಮನಾರ್ ಬೆಟ್ಟವೂ ಸೇರಿದಂತೆ ಮದುರೈ ಸುತ್ತಮುತ್ತ ಜೈನಮುನಿಗಳು ಧ್ಯಾನಕ್ಕೆ ಬಳಸುವ ಇಪ್ಪತ್ತಕ್ಕೂ ಹೆಚ್ಚು ಗುಹೆ, ಸಲ್ಲೇಖನಕ್ಕೆ ಇನ್ನೂರು ಕಲ್ಲಿನ ಮಂಚ, ಐವತ್ತು ಶಾಸನಗಳು ಹಾಗೂ ನೂರು ಜೈನ ಶಿಲ್ಪಗಳನ್ನು ಈವರೆಗೆ ಪತ್ತೆಹಚ್ಚಿದ್ದಾರೆ.

ಮದುರೈ ಮತ್ತು ಸಮನಾರ್ ಬೆಟ್ಟದಲ್ಲಿ ಈಗ ಕಾಣುತ್ತಿರುವ ಜೈನ ಬಸದಿಗಳನ್ನು ಎಂಟನೇ ಶತಮಾನದಲ್ಲಿ ಜೈನ ವಿದ್ವಾಂಸ ಅಕಲಂಕ ನಿರ್ಮಿಸಿದ ಎನ್ನಲಾಗುತ್ತದೆ. ಈ ಬೆಟ್ಟದಲ್ಲಿ ನೋಡಬೇಕಾದ ಎರಡು ಮುಖ್ಯ ತಾಣಗಳು ಸೆಟ್ಟಿಪೊಡವು ಮತ್ತು ಪೆಚ್ಚಿಪೆಳ್ಳಂ. ಇವುಗಳಲ್ಲಿ ಜೈನ ಮುನಿಗಳು ಕೆತ್ತಿದ ಶಿಲ್ಪಗಳನ್ನು ಕಾಣಬಹುದು. ಸಮನಾರ್ ಬೆಟ್ಟದ ತಪ್ಪಲಲ್ಲಿ ಆಧುನಿಕವಾಗಿ ಕಟ್ಟಿಸಲಾದ ಸ್ಥಳೀಯ ದೈವ ಕರುಪ್ಪುಸಾಮಿಯ ಕೋಯಿಲ್ ಇದೆ. ಶಾಸನಗಳ ಪ್ರಕಾರ ಇಲ್ಲಿ ಮಾದೇವಿಪೆರುಪಲ್ಲಿ ಎಂಬ ಜೈನಮಠವಿತ್ತು. ಪಾಂಡ್ಯ ದೊರೆ ಪರಾಂತಕ ವೀರ ನಾರಾಯಣ ಒಂಬತ್ತನೇ ಶತಮಾನದಲ್ಲಿ ಈ ಜಾಗವನ್ನು ಜೈನಮಠಕ್ಕೆ ದಾನವಾಗಿ ನೀಡಿದ್ದ. ಆತನ ಪತ್ನಿ ಮಾದೇವಿಯ ಹೆಸರಿನಿಂದ ಈ ಮಠ ಪ್ರಸಿದ್ಧವಾಗಿತ್ತು. ಇಲ್ಲಿ ಜೈನ ಸನ್ಯಾಸಿ/ ಸನ್ಯಾಸಿನಿಯರು ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದರು.

ನಮ್ಮ ಕರ್ನಾಟಕದ ಶ್ರವಣಬೆಳಗೊಳದ ಅನೇಕ ಕನ್ನಡ ವಿದ್ಯಾರ್ಥಿಗಳು, ಹಿರಿಯ ಆಚಾರ್ಯರೂ ಇಲ್ಲಿ ವಾಸವಾಗಿದ್ದರಂತೆ! ಮದುರೈ ಆಳುತ್ತಿದ್ದ ಪಾಂಡ್ಯ ದೊರೆಗಳು ಇಲ್ಲಿ ಭೇಟಿ ನೀಡುತ್ತಿದ್ದುದು ಅದರ ಮಹತ್ವಕ್ಕೆ ಸಾಕ್ಷಿ. ಈಗ ಈ ದೇಗುಲದಲ್ಲಿ ಕರುಪ್ಪುಸಾಮಿಯ ವಿಗ್ರಹದ ಜತೆ ಜೈನಮುನಿಗಳು ಕೆತ್ತಿದ ಅನೇಕ ಪ್ರಾಚೀನ ವಿಗ್ರಹಗಳನ್ನೂ ಇಡಲಾಗಿದೆ. ಇಲ್ಲೇ ಸಮೀಪದಲ್ಲಿರುವ ಕೊಳ ತಾವರೆಗಿಡಗಳಿಂದ ತುಂಬಿದ್ದು ಹೂಗಳು ಅರಳಿ ನಿಂತಾಗ ಇಡೀ ಕೊಳಕ್ಕೆ ಗುಲಾಬಿ ಹಚ್ಚಡ ಹೊದೆಸಿದಂತಾಗಿ ಬಹಳ ಆಕರ್ಷಣೀಯವಾಗಿದೆ.

ಪೆಚ್ಚಿಪೆಳ್ಳಂನಲ್ಲಿ ಕಾಣಸಿಗುವ ಕೆತ್ತನೆಗಳು
ಪೆಚ್ಚಿಪೆಳ್ಳಂನಲ್ಲಿ ಕಾಣಸಿಗುವ ಕೆತ್ತನೆಗಳು

ಸೆಟ್ಟಿಪೊಡವು: ಬೆಟ್ಟದ ಇಳಿಜಾರಿನಲ್ಲಿರುವ ಸುಲಭವಾಗಿ ಹತ್ತಬಹುದಾದ ಪುಟ್ಟ ಗುಹೆ ಇಲ್ಲಿದೆ. ಈ ಗುಹೆಯನ್ನು ಪ್ರವೇಶಿಸುವಾಗಲೇ ಹೊರಭಾಗದಲ್ಲಿ ತೀರ್ಥಂಕರನ ಕೆತ್ತನೆ ಮತ್ತು ಶಾಸನ ಕಾಣುತ್ತದೆ. ಗುಹೆಯೊಳಗೆ ಮೂವರು ತೀರ್ಥಂಕರರು ಮತ್ತು ಎಡ, ಬಲ ಭಾಗಗಳಲ್ಲಿ ಜೈನ ದೇವತೆಯರ ಕೆತ್ತನೆ ಇದೆ. ಕೆಳಗೆ ಗುಂಡಗಿನ ಅಕ್ಷರಗಳಲ್ಲಿ ಕೆತ್ತಿದ ಶಾಸನಗಳಿವೆ. ಇವು ವಟ್ಟೆಲುಟ್ಟು ಲಿಪಿಯಲ್ಲಿವೆ (ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಪ್ರಚಲಿತವಾಗಿದ್ದ ತಮಿಳು/ ಮಲೆಯಾಳಂ ಭಾಷೆಗಳ ಲಿಪಿ ಇದು, ತಮಿಳುಬ್ರಾಹ್ಮಿಯಿಂದ ಹುಟ್ಟಿದ ಈ ಲಿಪಿ ಸುಮಾರು ನಾಲ್ಕರಿಂದ ಹನ್ನೊಂದನೇ ಶತಮಾನದಲ್ಲಿ ಬಳಕೆಯಲ್ಲಿತ್ತು ಎನ್ನಲಾಗುತ್ತದೆ).

ಪೆಚ್ಚಿಪೆಳ್ಳಂ: ನೂರೈವತ್ತಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹೊಂದಿರುವ ಬೆಟ್ಟದ ಮೇಲಿನ ಈ ತಾಣಕ್ಕೆ ಬಿಸಿಲಲ್ಲಿ ಹತ್ತುವುದು ಕಷ್ಟವೇ. ಆಧಾರಕ್ಕಾಗಿ ಬದಿಕಂಬಿಗಳನ್ನು ಹಾಕಿದ್ದರೂ ಕಿರಿದಾದ ಮೆಟ್ಟಿಲುಗಳನ್ನು ಏರುವಾಗ ಜಾಗರೂಕರಾಗಿರಬೇಕು. ಅಲ್ಲಲ್ಲಿ ಮಂಗಗಳ ಹಾವಳಿಯೂ ಸಾಮಾನ್ಯ. ಮೇಲೇರಿದಂತೆ ಪುಟ್ಟ ಕೊಳ ಮತ್ತು ಅದರ ಎದುರಿನಲ್ಲಿ ಎಂಟು ಜೈನ ಶಿಲ್ಪಗಳು ಕಣ್ಣಿಗೆ ಬೀಳುತ್ತವೆ. ಅವುಗಳಲ್ಲಿ ನಾಲ್ಕು ಸರ್ಪದ ಹೆಡೆಯಿರುವ ಪಾರ್ಶ್ವನಾಥರು, ಬಾಹುಬಲಿ ಮೂರ್ತಿಗಳು ಮತ್ತು ಉಳಿದ ಮೂರು ತೀರ್ಥಂಕರರದ್ದೆಂದು ಊಹಿಸಲಾಗಿದೆ. ಇವುಗಳ ಕೆಳಗೆ ದಾನಿಗಳು ಬರೆಸಿರುವ ಶಾಸನಗಳಿವೆ.

ಸಮನಾರ್‌ ಮಲೈ ತುತ್ತತುದಿಯಲ್ಲಿ ಕಲ್ಲಿನ ದೀಪಸ್ತಂಭವಿದೆ. ಇದರ ಸಮೀಪದಲ್ಲೇ ಹನ್ನೊಂದು ಹನ್ನೆರಡನೆಯ ಶತಮಾನದ್ದೆಂದು ಹೇಳಲಾಗುವ ಬಹುಪಾಲು ಕನ್ನಡದಲ್ಲಿ ಇರುವ ಶಾಸನವಿದೆ. ಆದರೆ ಕಾಲನ ಪ್ರಭಾವಕ್ಕೆ ಸಿಲುಕಿ ಓದಲು ಸ್ಪಷ್ಟವಾಗಿಲ್ಲ. ಇರುವಷ್ಟರಿಂದಲೇ ಅದನ್ನು ಅರ್ಥೈಸಿರುವ ಶಾಸನತಜ್ಞರ ಪ್ರಕಾರ ಜೈನಮುನಿಯೊಬ್ಬನ ಸಾವಿನ ಸ್ಥಳ ಎಂದು ಸೂಚಿಸುತ್ತದೆ. ಹಾಗೆಯೇ ಇಲ್ಲಿದ್ದ ಸುಮಾರು ಹನ್ನೆರಡು ಸಮತಟ್ಟಾದ ಬಂಡೆಗಳನ್ನು ಕಲ್ಲಿನ ಹಾಸಿಗೆ ಎಂದು ಗುರುತಿಸಲಾಗಿದ್ದು ಅವುಗಳನ್ನು ಸಲ್ಲೇಖನವ್ರತ ಕೈಗೊಂಡಿದ್ದ ಜೈನ ಮುನಿಗಳು ವಿಶ್ರಾಂತಿಗಾಗಿ ಬಳಸುತ್ತಿದ್ದರು ಎನ್ನಲಾಗಿದೆ.

ಸಮನಾರ್ ಬೆಟ್ಟದ ಮೇಲೆ ನಿಂತು ದೃಷ್ಟಿ ಹಾಯಿಸಿದರೆ ಬಟಾಬಯಲಲ್ಲಿ ನಿಂತ ಈ ಜೈನ ಶಿಲ್ಪಗಳು, ಕೆಳಗಿರುವ ಕರುಪಸಾಮಿಯ ಬಣ್ಣಬಣ್ಣದ ಅಲಂಕಾರಿಕ ವಿನ್ಯಾಸಗಳ ಕೋಯಿಲ್, ದೂರದಲ್ಲಿರುವ ಭವ್ಯ ಮದುರೈ ಮೀನಾಕ್ಷಿ ದೇವಸ್ಥಾನ... ಹೀಗೆ ದೇವರೆಂಬ ನಂಬಿಕೆಯ ವಿವಿಧ ರೂಪಗಳ ದರ್ಶನವಾಗುತ್ತದೆ. ಜತೆಗೇ ತಮಿಳುನಾಡು ಕರ್ನಾಟಕದ ನಡುವಿನ ಆಧ್ಯಾತ್ಮಿಕ ಜ್ಞಾನದ ವಿನಿಮಯವನ್ನು ನೆನಪಿಸುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT