ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಕಲೆಯಾದ ರಾಕ್ ಗಾರ್ಡನ್

Last Updated 25 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

`ರಾಕ್ ಗಾರ್ಡನ್~- ಹೆಸರು ಕಿವಿ ಮೇಲೆ ಬಿದ್ದೊಡನೆ ಕಲ್ಲಿನ ಬಂಡೆಗಳು, ವಿವಿಧ ಆಕಾರದ ಶಿಲ್ಪಗಳ ಚಿತ್ರಣ ಮನದೊಳಗೆ ಮೂಡಬಹುದು. ಆದರೆ ಈ `ಕಲ್ಲಿನ ಉದ್ಯಾನ~ದೊಳಗೆ ಹೊಕ್ಕರೆ ನೀವು ಅದುವರೆಗೆ ನೋಡಿರದ ಭವ್ಯ ಲೋಕವೊಂದು ತೆರೆದುಕೊಳ್ಳುತ್ತದೆ.

ರಾಕ್ ಗಾರ್ಡನ್ ಕಲಾಕೃತಿಗಳ ಗಣಿ. ಬಗೆ ಬಗೆಯ ಆಕಾರದ ಪ್ರಾಣಿ, ಮನುಷ್ಯ, ಪಕ್ಷಿ ಮುಂತಾದವುಗಳ ಆಕರ್ಷಕ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ. ಒಂದೇ ಕಲಾಕೃತಿಯನ್ನು ನಕಲು ಮಾಡಿ ಜೋಡಿಸಿಟ್ಟಂತೆ ಅದೇ ಆಕಾರದ, ಗಾತ್ರದ ಹತ್ತಾರು ಕಲಾಕೃತಿಗಳ ಸಾಲು ಅಚ್ಚರಿ ಮೂಡಿಸುತ್ತದೆ. ವಿಶೇಷವೆಂದರೆ ಈ ಕಲಾಕೃತಿಗಳು ಜೀವತಳೆದಿರುವುದು ನಿರುಪಯೋಗವೆನಿಸಿದ ವಸ್ತುಗಳಿಂದ.

ಕಲ್ಲಿನ ಚೂರು, ತುಂಡಾದ ಟೈಲ್ಸ್, ಬಳೆ, ಗಾಜು, ಮರ, ಕಪ್ಪೆ ಚಿಪ್ಪು, ಹಾಳಾದ ಬಲ್ಬ್, ತಲೆಗೂದಲು, ಹೀಗೆ ನಾವು ಅನುಪಯುಕ್ತ ಎಂದು ಬಿಸಾಡುವ ಸಾಮಗ್ರಿಗಳೆಲ್ಲವೂ ಕಲಾಕೃತಿಗೆ ರೂಪ ನೀಡುವ ಕ್ರಿಯೆಯಲ್ಲಿ ಭಾಗಿಯಾಗಿವೆ. ಕಿನ್ನರ ಲೋಕದ ಆವರಣಕ್ಕೆ ಕಾಲಿಟ್ಟ ಅನುಭವ ಮೂಡಿಸುವ ಈ ರಾಕ್ ಗಾರ್ಡನ್ ಇರುವುದು ಚಂಡೀಗಡದಲ್ಲಿ. 20 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನದ ಸೃಷ್ಟಿಕರ್ತ ನೆಕ್ ಚಂದ್. ಚಂಡೀಗಡ ರೈಲು ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿದೆ ಈ ಗಾರ್ಡನ್.

ಕೃತಕ ಜಲಪಾತಗಳು, ಬಣ್ಣ ಬಣ್ಣದ ಮೀನುಗಳ ಕೊಠಡಿ, ಗುಹೆಗಳು, ಒಣ ಮರದಲ್ಲಿ ಮೂಡಿದ ಕಲಾತ್ಮಕ ಕೆತ್ತನೆಗಳು, ಮಕ್ಕಳ ಆಟಕ್ಕೆಂದೇ ಮೀಸಲಾದ ಪ್ರದೇಶಗಳು `ರಾಕ್ ಗಾರ್ಡನ್~ನಲ್ಲಿವೆ. ಇಲ್ಲೊಂದು ದುಡ್ಡಿನ ಬಾವಿ ಇದೆ. ಈ ಬಾವಿಯಲ್ಲಿ ಹಣ ಹಾಕಿ ಪ್ರಾರ್ಥಿಸಿಕೊಂಡರೆ ಅವರು ಬಯಸಿದ್ದು ಈಡೇರುತ್ತದೆ ಎಂಬುದು ಜನರ ನಂಬಿಕೆ.

ರೋಡ್ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನೆಕ್ ಚಂದ್ ಈ ಉದ್ಯಾನದ ರೂವಾರಿ. ಜನ ಬೇಡವೆಂದು ಎಸೆದಿದ್ದ ಸಾಮಗ್ರಿಗಳನ್ನು ಬಳಸಿಕೊಂಡೇ ಅವರು ಸುಮಾರು 20 ಸಾವಿರಕ್ಕೂ ಅಧಿಕ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಪ್ರಕೃತಿ ಸಹಜವಾಗಿ ಈ ಗಾರ್ಡನ್ ಜನಿಸಿದ ಭಾವ ಮೂಡುತ್ತದೆ. ಮಾನವ ಸೃಷ್ಟಿಯಲ್ಲಿನ ಕೃತಕತೆಯ ಛಾಯೆ ಇಲ್ಲಿನ ನಯನ ಮನೋಹರ ಪರಿಸರದಲ್ಲಿ ಭಾಸವಾಗುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT