ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಸ್ಟನ್‌ಸ್ಟೇನ್ ದೇಶ ಬಾಡಿಗೆಗೆ ಬೇಕೆ?

Last Updated 12 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬಾಡಿಗೆ ಮನೆ, ಬಾಡಿಗೆಗೆ ಸೈಕಲ್, ಬಾಡಿಗೆಗೆ ಕಾರು, ಬಾಡಿಗೆಗೆ ಪುಸ್ತಕ-– ಹೀಗೆ ಬಾಡಿಗೆ ವ್ಯವಹಾರದಲ್ಲಿ ಎಲ್ಲಾ ಸೌಲಭ್ಯಗಳೂ ಸಿಗುವ ನಮಗೆ ಈಚೆಗೆ ಬಾಡಿಗೆ ತಾಯಿಯೂ ಸಹ ಸಿಗುತ್ತಿದ್ದಾಳೆ. ಆದರೆ ದೇಶವನ್ನು ಬಾಡಿಗೆಗೆ ಪಡೆಯಬಹುದು ಎನ್ನುವುದನ್ನು ಕೇಳಿದ್ದೀರಾ? ಹೌದು! ಲಿಸ್ಟನ್‌ಸ್ಟೇನ್ ಎಂಬ ಸುಂದರ ದೇಶವನ್ನು ಬಾಡಿಗೆಗೆ ಪಡೆಯಬಹುದು. ದೇಶವನ್ನೇ ಬಾಡಿಗೆಗೆ ನೀಡುತ್ತಾರೆ ಎಂದರೆ ಅದು ದಿವಾಳಿಯಾಗಿದೆ ಎಂದುಕೊಂಡರೆ ತಪ್ಪು. ಹಣವನ್ನು ಸದ್ವಿನಿಯೋಗ ಮಾಡಬೇಕೆಂಬ ಸಂದೇಶವನ್ನು ಅನುಸರಿಸಲು ಮತ್ತು ಇತರರಿಗೂ ಸಾರಲು ಈ ಲಿಸ್ಟನ್‌ಸ್ಟೇನ್ ಎಂಬ ಪುಟಾಣಿ ದೇಶ ತನ್ನನ್ನೇ ಬಾಡಿಗೆಗೆ ಕೊಡಮಾಡಿಕೊಳ್ಳುತ್ತಿದೆ.

ಈ ದೇಶದ ಜನ ಶ್ರೀಮಂತರು. ಆದರೂ ತಮ್ಮ ಮನೆಗಳಲ್ಲಿ ಆಚರಿಸಬಹುದಾದ ಹುಟ್ಟುಹಬ್ಬ, ಸಂತೋಷ ಕೂಟ, ವಿವಾಹ ವಾರ್ಷಿಕೋತ್ಸವಗಳಂತಹ ಖಾಸಗಿ ಸಮಾರಂಭಗಳ ಆಚರಣೆಯ ಸಂದರ್ಭಗಳಲ್ಲಿ ದುಂದುವೆಚ್ಚ ಮಾಡಬಾರದೆಂಬ ಸದುದ್ದೇಶ ಅವರದು. ಈ ಕಾರ್ಯಕ್ರಮಗಳಿಗೆ ವಿನಿಯೋಗಿಸಬಹುದಾದ ಹಣವನ್ನು ನೀಡಿ ದೇಶವನ್ನು ಸಾಂಕೇತಿಕವಾಗಿ ಬಾಡಿಗೆಗೆ ಪಡೆದು, ಆ ದಿನದ ಮಟ್ಟಿಗೆ ಅವರು ದೇಶದಲ್ಲಿ ವಿಶೇಷ ಸ್ಥಾನಮಾನ ಹೊಂದುತ್ತಾರೆ. ದೇಶವೆಲ್ಲಾ ಅವರಿಗೆ ಶುಭಾಶಯ ಕೋರುತ್ತದೆ. ಅಂದಿನ ಮಟ್ಟಿಗೆ ಬಾಡಿಗೆಗೆ ಪಡೆದ ಅವರೇ ಮಂತ್ರಿ, ಜಿಲ್ಲಾಧಿಕಾರಿ, ಪೌರಾಯುಕ್ತರು. ಅವರು ಯಾವುದೇ ಕಚೇರಿಯ ಉನ್ನತ ಹುದ್ದೆಯ ಕುರ್ಚಿಯಲ್ಲಿ ಕೂತು ಖುಷಿ ಪಡೆಯಬಹುದು. ಅಂದು ಅವರು ನೀಡುವ ಸಲಹೆ ಸೂಚನೆಗಳಿಗೆ ಪರಿಶೀಲನೆಯ ಮಾನ್ಯತೆ ನೀಡಲಾಗುತ್ತದೆ.

ಇಂತಹ ವ್ಯವಸ್ಥೆಯಿಂದ ಲಭ್ಯವಾದ ಹಣವನ್ನು ದೇಶದ ಪರಿಸರ ವೃದ್ಧಿ, ನಿರ್ವಹಣೆ ಮತ್ತು ಅದರ ಸೌಂದರ್ಯವರ್ಧನೆಗೆ ಖರ್ಚು ಮಾಡಲಾಗುತ್ತದೆ.

ಯುರೋಪ್ ದೇಶಗಳಿಗೆ ಪ್ರವಾಸ ಹೋದವರನ್ನು ಹೊರತುಪಡಿಸಿದರೆ ಈ ಪುಟ್ಟ ದೇಶದ ಹೆಸರನ್ನು ಕೇಳಿದವರು ಬಹುಮಂದಿ ಇಲ್ಲ.  ಜೊತೆಗೆ ಈ ದೇಶದ ಹೆಸರನ್ನು ಹೇಗೆ ಉಚ್ಚರಿಸಬೇಕೆಂಬ ಸಮಸ್ಯೆಯೂ ಉಂಟು. ಈ ಚಿಕ್ಕ ದೇಶದ ಬಗೆಗಿನ ಪ್ರತಿಯೊಂದು ಅಂಶವೂ ಕುತೂಹಲಕಾರಿಯೇ! ಪ್ರಪಂಚದ ೬ನೇ ಅತಿ ಚಿಕ್ಕ ದೇಶ, ಯುರೋಪ್ ಸಮೂಹದಲ್ಲಿ ೪ನೇ ಅತಿ ಸಣ್ಣ ದೇಶ! ಇಲ್ಲಿನ ಭಾಷೆ ಜರ್ಮನ್ ಆದರೂ ಮೂಲ ಜರ್ಮನ್ ಭಾಷೆಗಿಂತ ಇದು ಭಿನ್ನ. ಇಲ್ಲಿ ಚಲಾವಣೆಯ ಹಣ  ಸ್ವಿಸ್ ಫ್ರಾಂಕ್, ಲಿಸ್ಟನ್‌ಸ್ಟೇನ್‌ನ ರಾಜಧಾನಿಯ ಹೆಸರು ವಡೂಜ್‌. ದೇಶದ ಒಟ್ಟು ಜನಸಂಖ್ಯೆ ೩೬,೦೦೦. ಇವರಲ್ಲಿ ಶೇಕಡಾ ೮9 ಮಂದಿ ಕ್ರಿಶ್ಚಿಯನ್ನರು, ಶೇ ೫ ಜನ ಇಸ್ಲಾಂ ಧರ್ಮೀಯರು.

ಈ ದೇಶಕ್ಕೆ ತನ್ನದೇ ಆದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಇಲ್ಲ. ಈ ದೇಶದಲ್ಲಿ ಹಾದು ಹೋಗುವ ರೈಲು ಹಳಿ ಕೇವಲ ೧೦ ಕಿ.ಮೀ ಮಾತ್ರ. ಖಾಸಗಿ ಹೆಲಿಕಾಪ್ಟರ್‌ಗಳಿಗಾಗಿ ಸುಸಜ್ಜಿತ ಹೆಲಿಪ್ಯಾಡ್ ಇದೆ. ರಾಜಧಾನಿಯ ಜನಸಂಖ್ಯೆ ಸುಮಾರು ೫೦೦೦ .

ರಮ್ಯ ಪ್ರವಾಸಿ ತಾಣವಾದ ಲಿಸ್ಟನ್‌ಸ್ಟೇನ್ ದೇಶವು ಚಳಿಗಾಲದಲ್ಲಿ ಮಂಜು ಮತ್ತು ಹಿಮಗಳಲ್ಲಿ ಆಡುವ ಆಟೋಟಗಳಿಗೆ, ಸ್ಪರ್ಧೆಗಳಿಗೆ, ಮನೋರಂಜನೆಗೆ ಹೆಸರುವಾಸಿ. ಈ ಸಮಯದಲ್ಲಿ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸಿ ಪ್ರವಾಸೋದ್ಯಮದಿಂದ ಹಣಗಳಿಸುತ್ತದೆ.
ದೇಶದ ಜನಸಾಂದ್ರತೆ ಕಡಿಮೆ ಇದ್ದರೂ ಇವರಿಗೆ ನಿರುದ್ಯೋಗದ ಆತಂಕ ಕಾಡುತ್ತಿದೆ. ಈ ದೇಶ, ಪ್ರಜಾ ಸರ್ಕಾರವನ್ನು ಹೊಂದಿದ್ದರೂ ರಾಜವಂಶದ ಆಳ್ವಿಕೆಗೆ ಒಳಪಟ್ಟಿದೆ.  ಬ್ರಿಟನ್‌ನಂತೆ ರಾಜವಂಶಕ್ಕೆ ಪ್ರಜೆಗಳು ಬಹಳ ಗೌರವ ಸಲ್ಲಿಸುತ್ತಾರೆ. ಅರಸರ ಅರಮನೆ ವಡೂಜ್‌ನ ಸಣ್ಣ ಬೆಟ್ಟದ ಮೇಲೆ ಇದೆ. ಈತ ಪ್ರಪಂಚದ ೬ನೇ ದೊಡ್ಡ ಕುಬೇರ. ೬೫ ವರ್ಷದ ಈ ಯುವರಾಜ ಇನ್ನೂ ಮದುವೆಯಾಗಿಲ್ಲ!

ಇಲ್ಲಿನ ಮುಖ್ಯ ಬೆಳೆ ಮೆಕ್ಕೆ ಜೋಳ, ಆಲೂಗಡ್ಡೆ. ದಕ್ಷಿಣ ಕರ್ನಾಟಕದಲ್ಲಿ ಕೋಲು ನೆಟ್ಟು ವಿಧ ವಿಧ ತಳಿಯ ಟೊಮ್ಯಾಟೋ ಬೆಳೆಯುವಂತೆ ಇಲ್ಲಿ ಕೋಲು ನೆಟ್ಟು ಗೊಂಚಲು ಗೊಂಚಲು ದ್ರಾಕ್ಷಿ ಬೆಳೆದು ರೆಡ್ ವೈನ್ ತಯಾರಿಸುತ್ತಾರೆ. ಹೈನುಗಾರಿಕೆಯೂ ಇದೆ.

ಇತರೆ ಯುರೋಪಿಯನ್ನರಂತೆ ಇವರೂ ಸಹ ಸೈಕಲ್ ಪ್ರಿಯರು. ದೇಶದ ಒಟ್ಟು ವಿಸ್ತೀರ್ಣ ೧೬೦ ಚ.ಕೀ. ಪ್ರದೇಶದಲ್ಲಿ ೨೫೦ ಕಿ.ಮೀ. ರಸ್ತೆ ಇದ್ದರೆ, ೯೦ ಕಿ.ಮೀ ಸೈಕಲ್ ರಸ್ತೆ ಇದೆ. ಸ್ವಿಟ್ಸರ್ಲೆಂಡ್‌ ಈ ದೇಶದ ಆಮದು ಮತ್ತು ರಫ್ತು ವ್ಯವಹಾರವನ್ನು ನಿಯಂತ್ರಿಸುವ ಜೊತೆಗೆ ಇದರ ಗಡಿ ಕಾಯುವ ಕೆಲಸ ನಿರ್ವಹಿಸುತ್ತಿದೆ.

ಅಂಚೆಚೀಟಿಗಳ ಸಂಗ್ರಹಕಾರರಿಗೆ ಇದು ಸ್ವರ್ಗ. ವಡೂಜ್‌ ನಗರದಲ್ಲಿ ಸ್ಟಾಂಪ್ ಮಾರುವ ಅಂಗಡಿಯೇ ಇದೆ. ಇದರ ಪಕ್ಕಕ್ಕೆ ಪ್ರವಾಸೋದ್ಯಮ ಇಲಾಖೆ ಕಚೇರಿ ಇದೆ. ಅಲ್ಲಿಂದ ಹೊರಟು ಸುಮಾರು ಒಂದು ಗಂಟೆ ಕಾಲ ಈ ಪುಟ್ಟ ದೇಶದ ಮುಖ್ಯ ಸ್ಥಳಗಳ ಪರ್ಯಟನೆ  ಮಾಡಿಸಲು ಒಮ್ಮೆಗೆ ೧೦೦ ಜನರನ್ನು ಕೊಂಡೊಯ್ಯುವ ಟ್ರಾಂ ವಾಹನವಿದೆ. ಇದರ ಚಾಲಕ ವಾಹನವನ್ನು ಅಲ್ಲಲ್ಲಿ ನಿಲ್ಲಿಸಿ ಜಾಗದ ವಿವರಣೆ ನೀಡುತ್ತಾನೆ. ಆತನ ಮಂದಸ್ಮಿತ ಮುಖವನ್ನು ನೋಡುವುದೇ ಚಂದದ ಸಂಗತಿ. ತನ್ನ ದೇಶದ  ಮೇಲಿನ ಪ್ರೀತಿಯೋ? ನಮ್ಮ ಬಾಲಿವುಡ್ ಬಗ್ಗೆ ಮೋಹವೋ?– ಬಾಲಿವುಡ್ ಜನಕ್ಕೆ ಅವರ ದೇಶದಲ್ಲಿ ಚಿತ್ರೀಕರಣ ಮಾಡುವಂತೆ ಶಿಫಾರಸು ಮಾಡಲು ಪ್ರವಾಸಿಗರನ್ನು ಕೋರುತ್ತಾನೆ. ಈ ವಿಷಯವನ್ನು ನನ್ನೊಡನೆಯೂ ಪ್ರಸ್ತಾಪಿಸಿದ. ಅಮಿತಾಭ್, ಶಾರೂಖ್, ಸಲ್ಮಾನ್ , ಐಶ್ವರ್ಯ ರೈ , ರಜನೀಕಾಂತ್ ನನ್ನ ಖಾಸಾ ದೋಸ್ತುಗಳೆಂದು ರೈಲು ಬಿಡಬೇಕೆಂದಿನಿಸಿತು. ಸುಳ್ಳಿನ ಗಂಧವನ್ನೇ  ಅರಿಯದ ಆ ವ್ಯಕ್ತಿ ನನ್ನ ಮಾತನ್ನು ನಂಬಿ ಬಿಟ್ಟಾನು ಎನ್ನಿಸಿ ಮೌನವಹಿಸಿದೆ.

೨೦೦ ವರ್ಷಗಳಷ್ಟು ಇತಿಹಾಸವಿರುವ ಈ ದೇಶ ಎರಡನೇ ಮಹಾಯುದ್ಧದಲ್ಲಿ ತಟಸ್ಥ ನೀತಿ ಹೊಂದಿತ್ತಂತೆ.  ನಮ್ಮ ಭಾರತಕ್ಕೂ ಈ ಚಿಕ್ಕ ದೇಶಕ್ಕೂ ಇರುವ ಸಾಮ್ಯತೆ ಎಂದರೆ, ಆಗಸ್ಟ್ ೧೫ ಇವರಿಗೂ ರಾಷ್ಟ್ರೀಯ ರಜಾ ದಿನ, ಆದರೆ ಅಂದು ಸ್ವಾತಂತ್ರೋತ್ಸವ ಅಲ್ಲ. ನಾವು ದೇಶವನ್ನು ತಾಯಿನಾಡು ಎಂದರೆ ಇವರು ತಂದೆನಾಡು ಎನ್ನುತ್ತಾರೆ.

ಈ ದೇಶದ ಆರ್ಥಿಕ ಉತ್ಪನ್ನದ ಮೂರನೇ ಒಂದು ಭಾಗ ಬ್ಯಾಂಕಿಂಗ್ ಉದ್ಯಮದಿಂದ ಬರುತ್ತಿದೆ. ಶೇಕಡಾ ೧೬ರಷ್ಟು ಜನ ಬ್ಯಾಂಕಿಂಗ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಮೊದಲಿನಿಂದಲೂ ಈ ದೇಶದ ಬ್ಯಾಂಕುಗಳಲ್ಲಿ ರಷ್ಯನ್ನರು, ಜರ್ಮನ್ನರು, ಯು.ಕೆ. ದೇಶದವರು ತಮ್ಮ ಕಪ್ಪುಹಣವನ್ನು ಇರಿಸಲು ಅನುವು ಮಾಡಿಕೊಡಲಾಗುತ್ತಿದೆ ಎನ್ನುವ ಆರೋಪವಿದೆ. ಇದು  ತೆರಿಗೆ ವಂಚಕರ ಸ್ವರ್ಗ ಎಂಬ ಬಿರುದನ್ನೂ ಹೊಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT