ಫೇಸ್‌ಬುಕ್‌ ಶುದ್ಧೀಕರಣ: ಬಿಜೆಪಿ ಪರವಾಗಿದ್ದ 200 ಫೇಸ್‌ಬುಕ್‌ ಪೇಜ್‌ಗಳು ರದ್ದು

ಶನಿವಾರ, ಏಪ್ರಿಲ್ 20, 2019
31 °C

ಫೇಸ್‌ಬುಕ್‌ ಶುದ್ಧೀಕರಣ: ಬಿಜೆಪಿ ಪರವಾಗಿದ್ದ 200 ಫೇಸ್‌ಬುಕ್‌ ಪೇಜ್‌ಗಳು ರದ್ದು

Published:
Updated:

ನವದೆಹಲಿ:  ಜಗತ್ತಿನ ಪ್ರಮುಖ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಸೋಮವಾರ ಬಿಜೆಪಿ ಬೆಂಬಲಿತ ಮತ್ತು ಹಿಂದುತ್ವವಾದಿ ವಿಚಾರಧಾರೆಗಳನ್ನು ಪ್ರಸರಣ ಮಾಡುತ್ತಿದ್ದ 200 ಪೇಜ್‌ಗಳನ್ನೂ ರದ್ದು ಮಾಡಿದೆ. ವಿಶ್ವಾಸಾರ್ಹವಲ್ಲದ ನಡವಳಿಕೆ ಮತ್ತು ಅಂಕೆ ಮೀರಿದ ವರ್ತನೆಗಳಿಗೆ ಕಡಿವಾಣ ಹಾಕುವ ಕ್ರಮವಾಗಿ ಫೇಸ್‌ಬುಕ್‌ ಈ 200 ಪೇಜ್‌ಗಳ ಅಸ್ತಿತ್ವವನ್ನೇ ಇಲ್ಲವಾಗಿಸಿದೆ.

ಫೇಸ್‌ಬುಕ್‌ ಸೋಮವಾರ ತಾನು ಕೆಲವು ಸಂಸ್ಥೆಗಳು ನಿರ್ವಹಿಸುತ್ತಿದ್ದ ಹಲವು ರಾಜಕೀಯದ ಪೇಜ್‌ಗಳನ್ನು ರದ್ದು ಮಾಡಿರುವುದಾಗಿ ಹೇಳಿದೆ. ಅದರಲ್ಲಿ ಪ್ರಮುಖವಾದವು ಗುಜರಾತ್‌ ಮೂಲದ ಡಿಜಿಟಲ್‌ ಮಾರ್ಕೆಂಟಿಂಗ್‌ ಸಂಸ್ಥೆಯಾದ ’ಸಿಲ್ವರ್‌ ಟಚ್‌ ಟೆಕ್ನಾಲಜೀಸ್‌’, ಗುಜರಾತ್‌ ಕಾಂಗ್ರೆಸ್‌ನ ಐಟಿ ವಿಭಾಗ ಮತ್ತು ಪಾಕಿಸ್ತಾನದ ಸೇನಾ ಸಾರ್ವಜನಿಕ ಸಂಪರ್ಕ ಸಂಸ್ಥೆಯಾದ ಐಎಸ್‌ಪಿಆರ್‌ ನಿರ್ವಹಿಸುತ್ತಿದ್ದ ಪೇಜ್‌ಗಳು. ಇದರ ಜತೆಗೆ ಕೆಲ ವ್ಯಕ್ತಿಗಳು ನಿರ್ವಹಿಸುತ್ತಿದ್ದ ಪುಟಗಳನ್ನೂ ರದ್ದು ಮಾಡಿರುವುದಾಗಿ ಫೇಸ್‌ಬುಕ್‌ ಹೇಳಿದೆ. ಆದರೆ, ಆ ವೈಯಕ್ತಿಕ ಖಾತೆಗಳು ಹಾಗೂ ಪೇಜ್‌ಗಳ ವಿವರವನ್ನು ಫೇಸ್‌ಬುಕ್‌ ಪ್ರಕಟಿಸಿಲ್ಲ. 

ಇದನ್ನೂ ಓದಿಬಿಜೆಪಿ, ಕಾಂಗ್ರೆಸ್‌ ಬೆಂಬಲಿತ 687 ಪೇಜ್‌ಗಳನ್ನು ತೆಗೆದು ಹಾಕಿದ ಫೇಸ್‌ಬುಕ್‌ 

ಮೇಲೆ ಉಲ್ಲೇಖಿಸಿದ ಮೂರು ಸಂಸ್ಥೆಗಳ ಹೆಸರನ್ನು ಬಹಿರಂಗಗೊಳಿಸಿದ್ದರ ಹಿಂದೆಯೂ ಕಾರಣವಿದೆ. ಈ ಮೂರು ಸಂಸ್ಥೆಗಳು ಸಂಘಟಿತವಾದ ವಿಶ್ವಾಸಾರ್ಹವಲ್ಲದ ಅನಧಿಕೃತ ಚಟುವಟಿಕೆಯಲ್ಲಿ ನಿರತವಾಗಿದ್ದವು.  ಈ ಮೂರು ಕಂಪನಿಗಳ ಪೈಕಿ ಸಿಲ್ವರ್‌ ಟಚ್‌ ಟೆಕ್ನಾಲಜೀಸ್‌ ಸಂಸ್ಥೆಯು ಬಿಜೆಪಿ ಪರವಾದ ಸಾಮಾಜಿಕ ಜಾಲತಾಣ ಚಟವಟಿಕೆಯಲ್ಲಿ ನಿರತವಾಗಿರುವುದು ಬಹಿರಂಗ ಸತ್ಯ. ಈ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ 15 ಗ್ರೂಪ್‌ ಅಥವಾ ಪೇಜ್‌ಗಳನ್ನು ಫೇಸ್‌ಬುಕ್‌ ರದ್ದು ಮಾಡಿದೆ. ಇದರಲ್ಲಿ ಪ್ರಮುಖವಾದದ್ದು “The Indian Eye”.  ಇದೊಂದರಲ್ಲೇ ಸರಿಸುಮಾರು 26 ಲಕ್ಷ ಫಾಲೋವರ್‌ಗಳಿದ್ದರು ಎಂದು ಹೇಳಲಾಗಿದೆ. 

ಆದರೆ, “The Indian Eye” ಪೇಜ್‌ ಅನ್ನು ತಾನು ನಿರ್ವಹಿಸುತ್ತಿಲ್ಲ ಎಂದು ಸಿಲ್ವರ್ ಟಚ್‌ ಹೇಳಿಕೊಂಡಿದೆಯಾದರೂ, ಫೇಸ್‌ಬುಕ್‌ ಅದನ್ನು ನಿರಾಕರಿಸಿದೆ. ಸಿಲ್ವರ್‌ ಟಚ್‌ನಲ್ಲಿನ ಕೆಲ ವ್ಯಕ್ತಿಗಳೇ “The Indian Eye” ಪೇಜ್‌ ಅನ್ನು ನಿರ್ವಹಿಸುತ್ತಿದ್ದರು. ಅಲ್ಲದೆ, ದೇಶದಲ್ಲಿ ಸುಳ್ಳು ಸುದ್ದಿಗಳ ಪ್ರಸರಣೆ ಮಾಡುವ ಪ್ರಮುಖ ಪೇಜ್‌ ಇದಾಗಿತ್ತು ಎಂದೂ ಹೇಳಲಾಗಿದೆ. 

'ನಮೋ ಆ್ಯಪ್‌' ನಿರ್ಹಿಸುತ್ತಿರುವುದು ಇದೇ ಸಿಲ್ವರ್‌ ಟಚ್‌ 

ಸುಳ್ಳು ಸುದ್ದಿಗಳ ಪ್ರಸರಣೆಯಲ್ಲಿ ತೊಡಗಿದ್ದ “The Indian Eye” ಪೇಜ್‌ ಅನ್ನು ನಿರ್ವಹಿಸುತ್ತಿದ್ದ ಇದೇ ಸಿಲ್ವರ್‌ ಟಚ್‌ ಸಂಸ್ಥೆ ಮೋದಿ ಅವರ ವೈಯಕ್ತಿಕ ಆ್ಯಪ್‌ ಆಗಿರುವ ನಮೋ ಆ್ಯಪ್‌ ಅನ್ನೂ ನಿರ್ವಹಣೆ ಮಾಡುತ್ತಿದೆ!

ಸಿಲ್ವರ್‌ ಟಚ್‌ ಸಂಸ್ಥೆ ಫೇಸ್‌ಬುಕ್‌ನ ವೇದಿಕೆಯನ್ನು ಬಳಸಿಕೊಂಡು ನಿಂದನಾ ತಂತ್ರದ ಮೂಲಕ ಸಂಘ ಸಂಸ್ಥೆಗಳನ್ನು ಅಪಮಾನ ಮಾಡುತ್ತಿತ್ತು. ಇದೇ ನಡವಳಿಕೆಯನ್ನು ಫೇಸ್‌ಬುಕ್‌  ಅಸಮಂಜಸ, ವಿಶ್ವಾಸಾರ್ಹವಲ್ಲದ ನಡವಳಿಕೆ ಅಥವಾ ವರ್ತನೆ (ಸಿಐಬಿ– coordinated inauthentic behaviour) ಎಂದು ಹೇಳುತ್ತದೆ.  ಇದರ ಜತೆಗೇ ಇತರ ವೈಯಕ್ತಿಕ ಪೇಜ್‌ಗಳು ಮತ್ತು ಗ್ರೂಪ್‌ಗಳನ್ನು ರದ್ದು ಮಾಡಲಾಗಿದೆ. ಅವುಗಳು ವ್ಯಕ್ತಿಗತ ಟೀಕೆ, ಸಿವಿಕ್‌ ಸ್ಪ್ಯಾಮ್‌ ಮಾಡುತ್ತಿದ್ದವು ಎನ್ನಲಾಗಿದೆ. 

ಸಿಐಬಿ ಎಂಬುದು ಸಂಘಟಿತ ಆಪರಾಧವಾದರೆ, ಸಿವಿಕ್‌ ಸ್ಪ್ಯಾಮ್‌ಗಳನ್ನು ಕ್ಷುಲ್ಲಕ ಅಥವಾ ಸಣ್ಣಪುಟ್ಟ ಅಸಮಂಜಸ ಕೃತ್ಯಗಳು ಎಂದು ಪರಿಗಣಿಸಲಾಗುತ್ತದೆ.  

ಇನ್ನು ಸೋಮವಾರ ರದ್ದುಗೊಂಡಿರುವ 200 ಪೇಜ್‌ಗಳ ಪೈಕಿ ಬಹುತೇಕ ಪೇಜ್‌ಗಳು ಬಲಪಂಥೀಯ ವಿಚಾರಧಾರೆಗಳನ್ನು ಒಳಗೊಂಡಿದ್ದವು ಎಂದು ಮೂಲಗಳನ್ನು ಉಲ್ಲೇಖಿಸಿ ’ದ ಪ್ರಿಂಟ್‌’ ಎಂಬ ಆಂಗ್ಲ ವೆಬ್‌ಸೈಟ್‌  ವರದಿ ಮಾಡಿದೆ. 

ಸಿವಿಕ್‌ ಸ್ಪ್ಯಾಮ್‌ ಅಂದರೇನು? 

ಬಳಕೆದಾರನೊಬ್ಬ ತನ್ನ ಜಾಗದ ಬಗೆಗಿನ ಮಾಹಿತಿ ಮರೆಮಾಚಿದರೆ, ವೈರಸ್‌- ಮಾಲ್‌ವೇರ್‌ಗಳಂಥ ಲಿಂಕ್‌ಗಳನ್ನು ಇತರರಿಗೆ ಹಂಚಿದರೆ, ಹಲವು ನಕಲಿ ಖಾತೆಗಳನ್ನು ಹೊಂದಿದ್ದರೆ,  ಹಣ ಸಂಗ್ರಹಿಸುವ ದೃಷ್ಟಿಯಿಂದ ಜಾಹಿರಾತುಗಳನ್ನು ಪ್ರಕಟಿಸಿದರೆ ಅವುಗಳನ್ನು ಸಿವಿಕ್‌ ಸ್ಪ್ಯಾಮ್‌ ಎಂದು ಕರೆಯಲಾಗುತ್ತದೆ. ಹಲವು ಸ್ಪ್ಯಾಮ್‌ಗಳು ಹಣ ಸಂಪಾದನೆಯ ಉದ್ದೇಶವನ್ನೇ ಪ್ರಧಾನವಾಗಿ ಹೊಂದಿದ್ದು, ಜಾಹಿರಾತುಗಳ ಮೂಲಕ ತಮ್ಮ ವೆಬ್‌ಸೈಟ್‌ಗೆ ಟ್ರಾಫಿಕ್‌ ಹೆಚ್ಚಿಸಿಕೊಳ್ಳುತ್ತಿವೆ (ವೆಬ್‌ಸೈಟ್‌ಗೆ ಹೆಚ್ಚಿನ ಜನರನ್ನು ಆಕರ್ಷಿಸುವುದು) ಎಂಬುದು ಫೇಸ್‌ಬುಕ್‌ನ ವಿಚಾರಣೆ ವೇಳೆ ಬಯಲಾಗಿದೆ. 

ಬಲಪಂಥೀಯ ಪೇಜ್‌ಗಳಿಗೆ ಮರ್ಮಾಘಾತ 

ಫೇಸ್‌ಬುಕ್‌ ಸೋಮವಾರ 680 ಪೇಜ್‌ಗಳನ್ನು ರದ್ದು ಮಾಡುತ್ತಲೇ, ಇದರಿಂದ ಸಮಸ್ಯೆಗೆ ಒಳಗಾದವರನ್ನು 'ದಿ ಪ್ರಿಂಟ್‌' ಮಾತಿಗೆಳೆದಿದೆ.  ಬಲಪಂಥೀಯ, ಬಿಜೆಪಿ ಪರ, ಹಿಂದುತ್ವವಾದಿ ಈ ಮೂರು ವಿಚಾರಧಾರೆಗಳುಳ್ಳ ಫೇಸ್‌ಬುಕ್‌ ಪೇಜ್‌ಗಳನ್ನು ನಿಭಾಯಿಸುತ್ತಿದ್ದವರಿಂದ  ಹಲವು ಮಾಹಿತಿಗಳನ್ನು ದಿ ಪ್ರಿಂಟ್‌ ಸಂಗ್ರಹಿಸಿದೆ. ಈ ಮೂರು ಬಗೆಯ ಪೇಜ್‌ಗಳನ್ನು ನಿಭಾಯಿಸುತ್ತಿರುವ ಪ್ರತಿಯೊಬ್ಬರು ತಾವು ನೇರವಾಗಿ ಬಿಜೆಪಿಯೊಂದಿಗೆ ಅಥವಾ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಎರಡು ಗುಂಪುಗಳು ಮತ್ತೊಂದು ಅಂಶವನ್ನು ಬಹಿರಂಗಪಡಿಸಿವೆ. ಅದೇನೆಂದರೆ, ಫೇಸ್‌ಬುಕ್‌ ಕೈಗೊಂಡಿರುವ ಈ ಕ್ರಮದಿಂದಾಗಿ ಬಿಜೆಪಿ ಬೆಂಬಲಿತ ಪೇಜ್‌ಗಳ ರೀಚ್‌... ಅಂದರೆ, ತಲುಪುವಿಕೆಯು ಭಾರಿ ಸಂಖ್ಯೆಯ ಗ್ರಾಹರಿಂದ  20 ಕೋಟಿ ಬಳಕೆದಾರರಿಗೆ ಕುಸಿತವಾಗಿದೆ ಎಂಬುದು. ಇಲ್ಲೊಂದು ಗಮನಿಸಬೇಕಾದ ವಿಚಾರವೆಂದರೆ, ಗುಜರಾತ್‌  ಕಾಂಗ್ರೆಸ್‌ನ ಐಟಿ ವಿಭಾಗದೊಂದಿಗೆ ನಂಟು ಹೊಂದಿದ್ದ  ಪೇಜ್‌ಗಳ ಬಳಕೆದಾರರ ಸಂಖ್ಯೆ ಕೇವಲ 2 ಲಕ್ಷ ಮಾತ್ರವೇ ಆಗಿತ್ತು. ಇಲ್ಲಿ ಬಳಕೆದಾರರ ಸಂಖ್ಯೆಯ ಬಗ್ಗೆ ನಾವು ಮಾತನಾಡುತ್ತಿಲ್ಲವಾದರೂ, ಬಲಪಂಥೀಯ ಅಥವಾ ಬಿಜೆಪಿ ಬೆಂಬಲಿತ ಗ್ರೂಪ್‌ಗಳು ಮತ್ತು ಪೇಜ್‌ಗಳು ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿರುವುದಂತೂ ಸತ್ಯ. 

ಇನ್ನು ಪಕ್ಷವೊಂದರ ಹೆಸರಲ್ಲಿ ಫೇಸ್‌ಬುಕ್‌ ಪೇಜ್‌ ನಿರ್ವಹಿಸುತ್ತಿದ್ದ ಚಂಡಿಗಢ ಮೂಲದ ವ್ಯಕ್ತಿಯೊಬ್ಬರು ಮಾತನಾಡಿ ಹೀಗೆ ಹೇಳಿದ್ದಾರೆ... ‘ ನಾವು ಬಿಜೆಪಿ ಐಟಿ ಸೆಲ್‌ನೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಆದರೆ, ನಮ್ಮ ವಸ್ತು ವಿಷಯಗಳೆಲ್ಲವೂ ರಾಷ್ಟ್ರವಾದ ಮತ್ತು ಬಲ ಪಂಥೀಯ ವಿಚಾರಧಾರೆಗಳಾಗಿದ್ದವು. ನಮಗೆ ತೀರ ಬೇಸರವಾಗುವುದೇನೆಂದರೆ ಕಾಂಗ್ರೆಸ್ ನಂಟಿನ ಪೇಜ್‌ಗಳು ರದ್ದಾದವು ಎಂದ ಕೂಡಲೇ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಲವಿಯಾ ಸಂಭ್ರಮಿಸಿದರು. ಆದರೆ, ನಾವು ಕಾಂಗ್ರೆಸ್‌ಗಿಂತಲೂ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂಬುದು ಅವರ ಗಮನಕ್ಕೆ ಬಂದೇ ಇಲ್ಲ. ಕಾಂಗ್ರೆಸ್‌ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದವರಂತೆ ಅವರು ಕುಣಿದಾಡುತ್ತಿದ್ದಾರೆ. ಆದರೆ, ನಿಜಕ್ಕೂ ಸಮಸ್ಯೆಯಾಗಿರುವುದು ನಮಗೆ (ಬಿಜೆಪಿಗೆ)’ ಎಂದು ಅವರು ಅಲವತ್ತುಕೊಂಡರು. 

ಬಿಜೆಪಿ ಪರವಾದ ಪೇಜ್‌ಗಳು ಹಿಂದುತ್ವ ಕುರಿತ ವಿಚಾರಧಾರೆಗಳನ್ನು ಪ್ರಸರಣ ಮಾಡುವ ಜತೆ ಜತೆಗೇ ಜಾಹಿರಾತುಗಳ ಮೂಲಕ ಹಣವನ್ನೂ ಸಂಪಾದನೆ ಮಾಡುತ್ತಿದ್ದವು. ಪೇಜ್‌ಗಳು ರದ್ದಾಗಿರುವುದಿರಂದ ಜಿಂದಾಲ್‌ ಇನ್ಫೋ ಮೀಡಿಯಾ ಎಂಬ ಸಂಸ್ಥೆಗೆ ಶೇ. 30ರಷ್ಟು ಆದಾಯ ಕುಸಿತವಾಗಿದೆ ಎಂದು ಅದರ ಮಾಲೀಕ ಜಿಂದಾಲ್‌ ಎಂಬುವವರು ಹೇಳಿಕೊಂಡಿದ್ದಾರೆ. “Thank You Akshay Kumar”, “Anmol Vichar”, “Indian Force Fans” ಪೇಜ್‌ಗಳೂ ಈಗ ರದ್ದಾಗಿವೆ. ಇನ್ನೊಂದೆಡೆ, ಜಿಂದಾಲ್‌ ಇನ್ಫೋ ಮೀಡಿಯಾದ  “hindutva.info”ಗೆ ಯಾವುದೇ ಸಮಸ್ಯೆಯಾಗಿಲ್ಲ. 

ಫೇಸ್‌ಬುಕ್‌ನ ಈ ನಡೆಯಿಂದಾಗಿ ನಮಗೆ ಕೋಟ್ಯಂತರ ರೂಪಾಯಿಗಳ ನಷ್ಟವಾಗಿದೆ ಎಂದು ಮತ್ತೊಬ್ಬ ಹೆಸರು ಹೇಳದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ನಮ್ಮ ಪೇಜ್‌ಗೆ ಒಂದು ಲಕ್ಷ ಲೈಕ್‌ಗಳನ್ನು ಪಡೆಯಲು ನಾವು 20–50 ಲಕ್ಷ ಹಣ ಖರ್ಚು ಮಾಡಿದ್ದೆವು. ಈ ಹಿಂದಿನ ಫಾಲೋವರ್‌ಗಳನ್ನು ನಾವು ಮತ್ತೆ ಪಡೆಯಬೇಕಿದ್ದರೆ 2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. 

ಇಲ್ಲೊಬ್ಬ ವ್ಯಕ್ತಿ “Atal Modi”, “Great Narendra Modi” ಮತ್ತು “Ek Naam Narendra Modi” ಎಂಬ ಪೇಜ್‌ಗಳನ್ನು ಹೊಂದಿದ್ದಾರಂತೆ. ಇದೆಲ್ಲದರಿಂದ 15 ಲಕ್ಷ ಫಾಲೋವರ್‌ಗಳನ್ನು ಅವರು ಹೊಂದಿದ್ದರು. ಆದರೆ, ಈಗ ಅ ಪೇಜ್‌ಗಳೆಲ್ಲವೂ ರದ್ದಾಗಿವೆ. ಹೀಗಾಗಿ 15 ಲಕ್ಷ ಫಾಲೋವರ್‌ಗಳೂ ಕೈತಪ್ಪಿ ಹೋಗಿದ್ದಾರೆ. ಇನ್ನೊಂದೆಡೆ 50 ಲಕ್ಷದಷ್ಟು ಫೋಲವರ್‌ಗಳಿರುವ ಪೇಜ್‌ಗಳು ಇನ್ನೂ ಅಸ್ತಿತ್ವದಲ್ಲಿವೆ ಎಂದು ಹೇಳಿದ ಆ ವ್ಯಕ್ತಿ ಅವುಗಳ ಹೆಸರು ಹೇಳಲು ಹಿಂಜರಿದರು. 

ಬಿಜೆಪಿಯ ಸಂಸದ ರಾಜೀವ್‌ ಚಂದ್ರಶೇಖರ್‌ ಅವರ ಮಾಲೀಕತ್ವದ ಅಬಿಜಿತ್‌ ಮಜುಂಮ್‌ದಾರ್‌ ಅವರ ಸಂಪಾದಕತ್ವದ 'ಮೈ ನೇಷನ್‌' ಎಂಬ ವೆಬ್‌ಸೈಟ್‌ನ ಪೇಜ್‌ ಕೂಡ ಫೇಸ್‌ಬುಕ್‌ನ ಈ ಸ್ಟ್ರೈಕ್‌ನಿಂದಾಗಿ ಅಸ್ತಿತ್ವ ಕಳೆದುಕೊಂಡಿದೆ. 

ಇನ್ನು ಸುಳ್ಳು ಸುದ್ದಿಗಳ ಅಸಲಿಯತ್ತನ್ನು ಬಯಲಿಗೆಳೆಯುವ  AltNews.in ಸಂಪಾದಕರಾದ ಪ್ರತೀಕ್‌ ಸಿನ್ಹಾ ಹಾಗೂ ಮೊಹಮದ್‌ ಜುಬೈರ್‌ ಅವರು ಟ್ವಿಟರ್‌ನಲ್ಲಿರುವ ಇಂಥ ಹಲವು ಖಾತೆಗಳನ್ನು ಪತ್ತೆ ಮಾಡಿದ್ದಾರೆ. 18 ಲಕ್ಷ ಫಾಲೋವರ್‌ಗಳಿದ್ದ  'Support4Modi', 13 ಲಕ್ಷ ಫಾಲೋವರ್‌ಗಳಿದ್ದ 'Postcard Fans'  ಅದರಲ್ಲಿ ಪ್ರಮುಖವಾದವು.  ಇನ್ನುಳಿದಂತೆ “Dainik Bharat”, “India Report Card”, “Nation Wants NaMo”, ಹೈದರಾಬಾದ್‌ನ ಬಿಜೆಪಿ ಶಾಸಕ ರಾಜಾಸಿಂಗ್‌ ಅವರ ಪೇಜ್‌ಗಳನ್ನೂ ಆಲ್ಟ್‌ನ್ಯೂಸ್‌ ಪತ್ತೆ ಮಾಡಿದೆ.

ಬರಹ ಇಷ್ಟವಾಯಿತೆ?

 • 23

  Happy
 • 4

  Amused
 • 1

  Sad
 • 0

  Frustrated
 • 8

  Angry

Comments:

0 comments

Write the first review for this !