ಬಿಜೆಪಿ, ಕಾಂಗ್ರೆಸ್‌ ಬೆಂಬಲಿತ 687 ಪೇಜ್‌ಗಳನ್ನು ತೆಗೆದು ಹಾಕಿದ ಫೇಸ್‌ಬುಕ್‌ 

ಬುಧವಾರ, ಏಪ್ರಿಲ್ 24, 2019
29 °C
ರಾಜಕೀಯ ಕಾರಣಕ್ಕೆ ಪಾಕಿಸ್ತಾನ ಕುರಿತ ವಸ್ತು ವಿಷಯಗಳನ್ನು ಬಳಿಸಿಕೊಂಡದ್ದಕ್ಕೆ ಈ ಕ್ರಮ

ಬಿಜೆಪಿ, ಕಾಂಗ್ರೆಸ್‌ ಬೆಂಬಲಿತ 687 ಪೇಜ್‌ಗಳನ್ನು ತೆಗೆದು ಹಾಕಿದ ಫೇಸ್‌ಬುಕ್‌ 

Published:
Updated:

ನವದೆಹಲಿ: ಕಾಂಗ್ರೆಸ್‌ನ ಐಟಿ ವಿಭಾಗದ ಜತೆ ನಂಟು ಹೊಂದಿದೆ ಎನ್ನಲಾದ 687 ಖಾತೆಗಳನ್ನು ಫೇಸ್‌ಬುಕ್ ಸ್ಥಗಿತಗೊಳಿಸಿದೆ. ನಕಲಿ ಖಾತೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆ ಸೋಮವಾರ ಸ್ಪಷ್ಪಪಡಿಸಿದೆ. 

ಫೇಸ್‌ಬುಕ್ ಖಾತೆಗಳಲ್ಲಿ ಪ್ರಕಟವಾಗುವ ಸುಳ್ಳು ಸುದ್ದಿ ಹಾಗೂ ಇತರೆ ಸುದ್ದಿಗಳನ್ನು ಮಾತ್ರ ಪರಿಗಣಿಸಿ ಖಾತೆಗಳನ್ನು ಸ್ಥಗಿತಗೊಳಿಸಲಾಗಿಲ್ಲ. ಸ್ಪ್ಯಾಮ್‌ಗಳ ಪ್ರಸರಣ ಹಾಗೂ ವಿಶ್ವಾಸಾರ್ಹವಲ್ಲದ ನಡವಳಿಕೆ ಕಂಡುಬಂದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಫೇಸ್‌ಬುಕ್‌ನ ಸೈಬರ್ ಭದ್ರತೆ ನೀತಿ ವಿಭಾಗದ ಮುಖ್ಯಸ್ಥ ನಥಾನಿಯಲ್ ಗ್ಲೈಚೆರ್ ತಿಳಿಸಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್ ಲೈವ್‌ ಸ್ಟ್ರೀಮಿಂಗ್ ನಿಯಮ ಬಿಗಿ ಸಾಧ್ಯತೆ​

 

‘ಮುಂಬರುವ ಲೋಕಸಭಾ ಚುನಾವಣೆ, ಅಭ್ಯರ್ಥಿಗಳು, ಕಾಂಗ್ರೆಸ್ ಪಕ್ಷ, ಬಿಜೆಪಿ ವಿರುದ್ಧದ ಟೀಕೆಗಳು ಮೊದಲಾದ ರಾಜಕೀಯ ವಿಚಾರ, ಸ್ಥಳೀಯ ಸುದ್ದಿಗಳನ್ನು ಫೇಸ್‌ಬುಕ್ ಪುಟಗಳ ಅಡ್ಮಿನ್‌ಗಳು ಮತ್ತು ಖಾತೆದಾರರು ಪೋಸ್ಟ್ ಮಾಡುತ್ತಿದ್ದರು. ಇಂತಹ ಚಟುವಟಿಕೆಯಲ್ಲಿ ತೊಡಗಿದ್ದ ವ್ಯಕ್ತಿಗಳು ತಮ್ಮ ಗುರುತನ್ನು ರಹಸ್ಯವಾಗಿಡಲು ಯತ್ನಿಸುತ್ತಿದ್ದರು. ಈ ವೈಯಕ್ತಿಕ ಖಾತೆಗಳು ಕಾಂಗ್ರೆಸ್ ಪಕ್ಷದ ಐಟಿ ವಿಭಾಗಕ್ಕೆ ಸಂಬಂಧಿಸಿವೆ ಎಂಬ ವಿಷಯ ನಮಗೆ ತಿಳಿದುಬಂದಿತು’ ಎಂದಿದ್ದಾರೆ.

ಪ್ರತ್ಯೇಕ ಪ್ರಕರಣದಲ್ಲಿ, ಭಾರತದ ಐಟಿ ಸಂಸ್ಥೆ ಸಿಲ್ವರ್ ಟಚ್‌ಗೆ ಸಂಬಂಧಿಸಿದ 15 ಫೇಸ್‌ಬುಕ್ ಪುಟ ಹಾಗೂ ಗುಂಪುಗಳನ್ನೂ ರದ್ದುಪಡಿಸಲಾಗಿದೆ ಎಂದು ಗ್ಲೈಚೆರ್ ತಿಳಿಸಿದ್ದಾರೆ. 

ಭಾರತದಲ್ಲಿ ಫೇಸ್‌ಬುಕ್ ನಿಯಮಗಳನ್ನು ಉಲ್ಲಂಘಿಸಿದ 227 ಪೇಜ್‌, 94 ಖಾತೆ ಹಾಗೂ ಪಾಕಿಸ್ತಾನದ 103 ಪೇಜ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. 

ಕಾಂಗ್ರೆಸ್‌–ಬಿಜೆಪಿ ವಾಕ್ಸಮರ
ಖಾತೆಗಳನ್ನು ರದ್ದುಪಡಿಸಿದ ಫೇಸ್‌ಬುಕ್‌ ಸಂಸ್ಥೆಯ ಕ್ರಮವು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. 

ಪ್ರಧಾನಿ ಮೋದಿ ಅವರ ಬಗ್ಗೆ ಸುಳ್ಳುಗಳನ್ನು ಹರಡಲು ಕಾಂಗ್ರೆಸ್‌ ಪಕ್ಷವು ನಕಲಿ ಖಾತೆಗಳನ್ನು ಬಳಸಿಕೊಳ್ಳುತ್ತಿತ್ತು ಎಂದು ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌ ಆರೋಪಿಸಿದ್ದಾರೆ. ಬಿಜೆಪಿಗೆ ಸಂಬಂಧಿಸಿದ ಕೆಲವು ಖಾತೆಗಳನ್ನೂ ತೆಗೆದುಹಾಕಲಾಗಿದೆ. ‘ಇಂಡಿಯನ್‌ ಐ’ ಎಂಬ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಖಾತೆಯಲ್ಲಿ 26 ಲಕ್ಷದಷ್ಟು ‘ಫಾಲೋವರ್ಸ್‌’ ಇದ್ದರು ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ. 

‘ಬಿಜೆಪಿಯ ಪರ ಪ್ರಚಾರದ ಖಾತೆಯಾಗಿದ್ದ ‘ಮೈ ನೇಷನ್‌’ ಅನ್ನು ಕೂಡ ಸ್ಥಗಿತಗೊಳಿಸಲಾಗಿದೆ’ ಎಂದು ಕಾಂಗ್ರೆಸ್‌ ಸಂವಹನ ವಿಭಾಗದ ಸಂಯೋಜಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ. 

‘ರಾಹುಲ್‌ ಗಾಂಧಿ ಅವರಂತೆಯೇ ಕಾಂಗ್ರೆಸ್‌ ಪಕ್ಷದ ಡಿಜಿಟಲ್‌ ಹೆಜ್ಜೆಗುರುತುಗಳು ಕೂಡ ಸುಳ್ಳು ಸುದ್ದಿ ಹರಡುವುದರಲ್ಲಿ ನಿರತವಾಗಿತ್ತು... ಬೇಸರದ ಸಂಗತಿ ಎಂದರೆ ಇಷ್ಟೆಲ್ಲ ಸುಳ್ಳಾಟದ ಬಳಿಕವೂ ಅವರು ಚುನಾವಣೆಯಲ್ಲಿ ಸೋಲುತ್ತಲೇ ಇದ್ದಾರೆ ಮತ್ತು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಲೇ ಇದ್ದಾರೆ’ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 16

  Happy
 • 5

  Amused
 • 2

  Sad
 • 0

  Frustrated
 • 4

  Angry

Comments:

0 comments

Write the first review for this !