ಬುಧವಾರ, ಜುಲೈ 6, 2022
21 °C
ಮತದಾನ ಮಾಡದಿರುವುದಕ್ಕೆ ಇರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ

ಅರ್ಹತೆ ಇದ್ದೂ ಹಕ್ಕು ಚಲಾಯಿಸಲಾಗದವರು

ಚೇತನಾ ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ತಿಂಗಳಷ್ಟೆ ಬಾಕಿಯಿದೆ. ಈ ಬಾರಿಯ ಚುನಾವಣೆ ಹಲವು ಕಾರಣಗಳಿಗಾಗಿ ಕುತೂಹಲ ಹುಟ್ಟಿಸಿದೆ. ಈ ಬಾರಿ ಮತ ಚಲಾಯಿಸುವವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಆದರೂ ಸುಮಾರು 2.10 ಕೋಟಿ ಮಹಿಳೆಯರು ಈ ಬಾರಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಪ್ರಣಯ್ ರಾಯ್‌, ಪ್ರಕಟಣೆಗೆ ಸಿದ್ಧವಾಗಿರುವ ತಮ್ಮ ಕೃತಿ ‘ದ ವರ್ಡಿಕ್ಟ್’ನಲ್ಲಿ ಹೇಳಿದ್ದಾರೆ (‘ದ ವರ್ಡಿಕ್ಟ್’ - ಪ್ರಣಯ್ ರಾಯ್ ಮತ್ತು ದೋರಬ್ ಸುಪಾರಿವಾಲಾ ಜಂಟಿಯಾಗಿ ರಚಿಸಿದ ಚುನಾವಣಾ ವಿಶ್ಲೇಷಣೆ ಕೃತಿ).

‘ದ ವರ್ಡಿಕ್ಟ್’ನ ಆಯ್ದ ಭಾಗಗಳನ್ನು ಪ್ರಕಟಿಸಿರುವ ‘ಔಟ್‌ಲುಕ್’, ಮಹಿಳಾ ಮತದಾರರ ಕುರಿತು ಪ್ರಣಯ್ ರಾಯ್ ಮಾಡಿರುವ ಟಿಪ್ಪಣಿಗಳಿಗೆ ವಿಶೇಷ ಆದ್ಯತೆ ನೀಡಿದೆ. ‘18 ವರ್ಷ ಮೇಲ್ಪಟ್ಟ; ಭಾರತೀಯರಾಗಿದ್ದು, ಭಾರತದಲ್ಲೇ ನೆಲೆಸಿರುವ ಸುಮಾರು 2.10 ಕೋಟಿ ಮಹಿಳೆಯರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಅವರ ಹೆಸರು ನೋಂದಣಿಯಾಗದಿರುವುದು, ಮತದಾನದ ಅವರ ಮೂಲಭೂತ ಹಕ್ಕನ್ನೇ ನಿರಾಕರಿಸುತ್ತಿದೆ. ಇದು, ನಿಜಕ್ಕೂ ಆಘಾತಕಾರಿ’ ಎಂದು ಸತೀಶ್ ಪದ್ಮನಾಭನ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಪ್ರಣಯ್ ರಾಯ್‌ ಹೇಳಿದ್ದಾರೆ.

ಈ ಕೃತಿ ನೀಡುವ ಅಂಕಿಅಂಶಗಳ ಪ್ರಕಾರ, ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದ ಮಹಿಳೆಯರಲ್ಲಿ ಉತ್ತರ ಭಾರತದವರ ಸಂಖ್ಯೆ ಹೆಚ್ಚು. ಅದರಲ್ಲೂ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ವಂಚಿತರಾಗಿದ್ದಾರೆ. ಈ ರಾಜ್ಯಗಳಲ್ಲಿ ಮಹಿಳೆಯರ ಶಿಕ್ಷಣ ಪ್ರಮಾಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅವರ ಪಾಲುದಾರಿಕೆಯನ್ನು ತಾಳೆ ಹಾಕಿದರೆ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗದಿರುವುದಕ್ಕೆ ಮೊದಲ ಕಾರಣ ಸಿಕ್ಕಿಬಿಡುತ್ತದೆ. ಪುರುಷಪ್ರಾಧಾನ್ಯ ವ್ಯವಸ್ಥೆ ಢಾಳಾಗಿರುವ ಪ್ರಾಂತ್ಯಗಳಲ್ಲಿ ತಮ್ಮ ಕುಟುಂಬದ ಮಹಿಳೆಯರು ಮತದಾನ ಮಾಡಬೇಕೇ ಬೇಡವೇ ಎಂಬುದನ್ನೂ ಪುರುಷರೇ ನಿರ್ಧರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ತಾವಾಗಿಯೇ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಅವಕಾಶ ವಿರಳ (ಒಮ್ಮೆ ಗುರುತಿನ ಚೀಟಿ ಕೈಗೆ ಬಂದರೆ, ಈ ಮಹಿಳೆಯರು ಗಂಡನ ಸೂಚನೆಗೆ ಹ್ಞೂಂಗುಟ್ಟಿದರೂ ತಮ್ಮದೇ ಆಯ್ಕೆಯ ಅಭ್ಯರ್ಥಿಗೇ ಮತ ಚಲಾಯಿಸುತ್ತಾರೆ ಎಂಬ ಅಂಶವೂ ಈ ಪುಸ್ತಕದಲ್ಲಿದೆ).

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದರೆ ಈ ಮಹಿಳೆಯರು ಮತ ಚಲಾಯಿಸುವರೇ ಇಲ್ಲವೇ ಅನ್ನುವುದು ಬೇರೆ ಚರ್ಚೆ. ಆದರೆ, ಹಾಗೆ ಆಯ್ಕೆ ಮಾಡಿಕೊಳ್ಳುವ ಅವಕಾಶವೇ ಇಲ್ಲವಾಗುವುದು ಅವರ ಹಕ್ಕುಚ್ಯುತಿಯಾಗುತ್ತದೆ. ಇದು ಕೇವಲ ಮಹಿಳೆಯರ ಸಮಸ್ಯೆಯಲ್ಲ. ಕೋಟ್ಯಂತರ ಭಾರತೀಯರು ನೆಲೆ ಬದಲಿಸುತ್ತಿದ್ದಂತೆ ಮತವನ್ನೂ ಕಳೆದುಕೊಳ್ಳುತ್ತಿದ್ದಾರೆ. ದುಡಿಮೆಯ ಬೆನ್ನುಹತ್ತಿ ಹೊರಟವರು ಮೂಲಭೂತ ಹಕ್ಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿದ್ದವರಲ್ಲಿ 28.10 ಕೋಟಿ ಮಂದಿ ಮತದಾನ ಮಾಡಿರಲಿಲ್ಲ. ಇಂತಹ ಅಂಕಿಅಂಶಗಳು ಹೊರಬಿದ್ದಾಗ ಸಾಮಾನ್ಯವಾಗಿ ಬೇಜವಾಬ್ದಾರಿತನ ಅಂದುಬಿಡಲಾಗುತ್ತದೆ. ಆದರೆ, ಇದು ನಿಜವೇ? ಸಂಪೂರ್ಣ ನಿಜವಲ್ಲ. ಮತದಾನ ಮಾಡದಿರುವುದಕ್ಕೆ ನಿರಾಸಕ್ತಿಯಷ್ಟೇ ಅಥವಾ ಅದಕ್ಕಿಂತ ಹೆಚ್ಚು ಗುರುತಿನ ಚೀಟಿ ದೋಷಗಳು ಮತ್ತು ವಲಸೆ ಅಡ್ಡಿಯಾಗಿರುತ್ತವೆ.

ಈ ಕುರಿತು ನೆಸ್ಟ್ ಅವೇ ರೆಂಟಲ್ ಹೌಸಿಂಗ್ ಪೋರ್ಟಲ್ ಒಂದು ಸಮೀಕ್ಷೆ ನಡೆಸಿದ್ದು, ಅದರ ಪ್ರಕಾರ ದೇಶದಾದ್ಯಂತ ವಿವಿಧ ನಗರಗಳಿಗೆ ವಲಸೆ ಬಂದ ಶೇ 91ರಷ್ಟು ಮಂದಿ ತಾವು ವಾಸಿಸುತ್ತಿರುವ ಸ್ಥಳದಲ್ಲಿ ಮತದಾನ ಮಾಡಲು ಅರ್ಹರಾಗಿಲ್ಲ. ನೆಲೆ ನಿಂತ ಸ್ಥಳದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಸಾಧ್ಯವಾಗದಿರುವುದು ಮತ್ತು ಸಂಬಂಧಿತ ಮಾಹಿತಿ ಕೊರತೆಯೇ ಇದಕ್ಕೆ ಕಾರಣ ಎಂದು ಸಮೀಕ್ಷೆ ಹೇಳುತ್ತದೆ.

ಹೆಸರು ಸೇರ್ಪಡೆ, ಗುರುತಿನ ಚೀಟಿ ವರ್ಗಾವಣೆಗೆ ಸಂಬಂಧಿಸಿದಂತೆ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಚಿಕ್ಕದಿರಬಹುದು; ‘ಉಳಿದವರಿಗೆ ಸಾಧ್ಯವಾಗುವುದು ನಿಮಗೇಕೆ ಸಾಧ್ಯವಾಗಿಲ್ಲ’ ಎಂಬ ಪ್ರಶ್ನೆಯೂ ಎದುರಾಗಬಹುದು. ಆದರೆ ಪ್ರತಿಯೊಂದು ಮತಕ್ಕೂ ಸಮಾನ ಮೌಲ್ಯ ಇರುವುದರಿಂದ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ. ಕೆಲವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಸುಲಭ ಎನ್ನುತ್ತಾರೆ. ಆದರೆ ನಮ್ಮ ತಂತ್ರಜ್ಞಾನದ ಸಮಸ್ಯೆಯೋ ನಿರ್ವಾಹಕ ಸಿಬ್ಬಂದಿಯ ಜಾಣತನವೋ, ಹೀಗೆ ಸಲ್ಲಿಸಿದ ಕನಿಷ್ಠ ಶೇ 20ರಷ್ಟು ಅರ್ಜಿಗಳು ಯಾವ ಸೂಕ್ತ ಕಾರಣವೂ ಇಲ್ಲದೆ ತಿರಸ್ಕೃತಗೊಳ್ಳುತ್ತವೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ನಡೆದ ಇಂಥದ್ದೊಂದು ಅಧ್ವಾನ ದೊಡ್ಡ ಸುದ್ದಿಯಾಗಿತ್ತು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿದ್ದ ಸುಮಾರು 9,000 ಅರ್ಜಿಗಳನ್ನು ಯಾವ ಸಮರ್ಪಕ ಕಾರಣವೂ ಇಲ್ಲದೆ ತಿರಸ್ಕರಿಸಲಾಗಿತ್ತು. ಇದು ಒಟ್ಟು ಸಲ್ಲಿಕೆಯಾಗಿದ್ದ ಅರ್ಜಿಗಳ ಶೇ 66ರಷ್ಟು! ಇದೇ ಸಂದರ್ಭದಲ್ಲಿ ಶೇ 24ರಷ್ಟು ಮ್ಯಾನುವಲ್ ಅರ್ಜಿಗಳೂ ತಿರಸ್ಕೃತಗೊಂಡಿದ್ದವು. ಈ ಸಂಬಂಧ ವಿಚಾರಣೆ ನಡೆಸಿದಾಗ ಬಂದ ಉತ್ತರ, ‘ತಾಂತ್ರಿಕ ದೋಷ’.

ನೆರೆಯ ತೆಲಂಗಾಣದಲ್ಲಿ ಸಾವಿರಕ್ಕೂ ಹೆಚ್ಚು ಮತದಾರರು ವಿಚಿತ್ರ ಸಮಸ್ಯೆಯೊಂದನ್ನು ಎದುರಿಸಿದ್ದರು. ಚುನಾವಣೆ ದಿನ ಮತ ಚಲಾಯಿಸಲು ಹೋದರೆ, ಪಟ್ಟಿಯಲ್ಲಿ ಅವರ ಹೆಸರಿನ ಮುಂದೆ ‘ತೆಗೆದುಹಾಕಲಾಗಿದೆ’ ಎಂಬ ಒಕ್ಕಣೆಯಿತ್ತು. ಆಗಲೂ ಸಂಬಂಧಿತ ಅಧಿಕಾರಿಗಳು ನೀಡಿದ ಉತ್ತರ ‘ತಾಂತ್ರಿಕ ದೋಷ’ವೇ ಆಗಿತ್ತು!

ಹೀಗೆ ಪಟ್ಟಿಯಲ್ಲಿ ಹೆಸರು ಸೇರಿಸಲು ಸ್ಥಳೀಯರು ಪರದಾಡಿದರೆ, ವಲಸಿಗರು ಗುರುತಿನ ಚೀಟಿ ವರ್ಗಾವಣೆಗೆ ಹರಸಾಹಸ ಪಡುತ್ತಾರೆ. ಬದಲಾದ ಕಾನೂನು, ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಪ್ರಾಕ್ಸಿ ವೋಟ್ ಮೂಲಕ ಮತ ಚಲಾಯಿಸುವ ಅವಕಾಶ ಕಲ್ಪಿಸಿದೆ. ಆದರೆ ದೇಶದೊಳಗಿನ ವಲಸಿಗರಿಗೆ ಈ ಸೌಲಭ್ಯವಿಲ್ಲ. ಇವರಿಗೆ ನಿಮ್ಮ ಗುರುತಿನ ಚೀಟಿ ವರ್ಗಾವಣೆ ಮಾಡಿಕೊಳ್ಳಿ
ಎನ್ನಲಾಗುತ್ತದೆ.

ಇಲ್ಲಿ ಸಮಸ್ಯೆ ಗುರುತಿನ ಚೀಟಿ ವರ್ಗಾವಣೆ ಮಾತ್ರವಲ್ಲ. ಅಲ್ಪಕಾಲಿಕ ವಲಸೆ, ಶಿಕ್ಷಣ, ಉದ್ಯೋಗ ಸಂಬಂಧ ತಾತ್ಕಾಲಿಕ ಸ್ಥಳ ಬದಲಾವಣೆ ಮೊದಲಾದವು ವರ್ಗಾವಣೆಯನ್ನು ಪ್ರೋತ್ಸಾಹಿಸುವುದೂ ಇಲ್ಲ. ಚುನಾವಣೆ ದಿನ ಸ್ವಕ್ಷೇತ್ರಕ್ಕೆ ತೆರಳಲು ಕಾಲೇಜು– ಕಚೇರಿಗೆ ರಜೆ ಇಲ್ಲದಿರುವುದೂ ಮತದಾನ ಮಾಡಲಾಗದ ಕಾರಣಗಳಲ್ಲೊಂದು. ಹಾಗೊಮ್ಮೆ ರಜೆ ನೀಡಿದರೂ, ಹಲವು ಹಂತಗಳಲ್ಲಿ ಚುನಾವಣೆ ನಡೆಯುವುದರಿಂದ ದಿನಾಂಕಗಳು ತಾಳೆಯಾಗದೆ ರಜೆ ನಿರುಪಯುಕ್ತವಾಗುವುದೂ ಉಂಟು. ಈ ಅಂಶಗಳನ್ನು ಮುಂದಿಟ್ಟು, ದೇಶದೊಳಗಿನ ವಲಸಿಗರಿಗೂ ಎನ್‌ಆರ್‌ಐಗಳಂತೆಯೇ ಪ್ರಾಕ್ಸಿ ವೋಟಿಂಗ್ ಸೌಲಭ್ಯ ಕಲ್ಪಿಸಬೇಕೆಂಬ ಕೂಗು ಕೇಳಿಬರುತ್ತಿದ್ದು, ಈ ನಿಟ್ಟಿನಲ್ಲಿ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಹೋರಾಟ ರೂಪಿಸಿವೆ. ‘ದೇಶದೊಳಗಿನ ವಲಸಿಗರಿಗೂ ಎನ್‌ಆರ್‌ಐಗಳಂತೆಯೇ ಸೌಲಭ್ಯ ಒದಗಿಸಿದರೆ, ಮತದಾನದ ಗುರುತಿನ ಚೀಟಿ ಮೂಲಕ ದೇಶದ ಯಾವ ಮೂಲೆಯಿಂದಲಾದರೂ ವೋಟ್ ಮಾಡಲು ಅನುಕೂಲವಾಗುತ್ತದೆ’ ಎಂದು ಪೊಲಿಟಿಕಲ್ ಶಕ್ತಿ ಎನ್‌ಜಿಒದ ತಾರಾ ಕೃಷ್ಣಸ್ವಾಮಿ ವಾದ ಮಂಡಿಸುತ್ತಾರೆ.

ಇಂಥದೊಂದು ನೀತಿ ಜಾರಿಗೊಳಿಸುವುದು ಪ್ರಾಯೋಗಿಕವಾಗಿ ಸಾಧ್ಯವೇ? ಇದರಿಂದ ಮತ ಚಲಾಯಿಸುವವರ ಪ್ರಮಾಣ ಹೆಚ್ಚಬಹುದೇ? ಈ ಕುರಿತು ಜನಾಭಿಪ್ರಾಯ ಸಂಗ್ರಹಿಸಿ ದೊಡ್ಡ ಮಟ್ಟದ ಚರ್ಚೆ ನಡೆಸುವ ಅಗತ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.