ಗುರುವಾರ , ನವೆಂಬರ್ 21, 2019
23 °C

ರೋಗಿ ಎಚ್ಚರ ತಪ್ಪಿಸದೆ ಮಿದುಳು ಸರ್ಜರಿ

Published:
Updated:

ರೋಗಿ ಸಂಪೂರ್ಣ ಎಚ್ಚರ ಇರುವಾಗಲೇ ಮಿದುಳು ಗಡ್ಡೆಯನ್ನು (ಬ್ರೇನ್‌ ಟ್ಯೂಮರ್‌) ನಗರದ ಸೀತಾ ಭತೇಜ ಆಸ್ಪತ್ರೆಯ ವೈದ್ಯರು  ನಾಲ್ಕು ತಾಸುಗಳ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಹಾಗಂತ ಇದೇ ಇಂತಹ ಮೊದಲ ಸರ್ಜರಿ ಏನಲ್ಲ. ಆದರೆ, ಇದೊಂದು ಅಪರೂಪದ ವಿರಳ ಶಸ್ತ್ರಚಿಕಿತ್ಸೆ. ನಗರದಲ್ಲಿ ಈ ಹಿಂದೆ ಕೂಡ ಇಂತಹ ಸರ್ಜರಿಗಳು ನಡೆದಿವೆ. ಅವುಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಕೆಲವು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ವೇಳೆ ರೋಗಿ ಗಿಟಾರ್‌ ನುಡಿಸಿದ್ದು ದೊಡ್ಡ ಸುದ್ದಿಯಾಗಿತ್ತು. 

ರೋಗಿಯನ್ನು ಎಚ್ಚರ ತಪ‍್ಪಿಸದೆ ನಡೆಸುವ ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ವೈದ್ಯಕೀಯ ಭಾಷೆಯಲ್ಲಿ 'ಅವೇಕ್‌ ಕ್ರಾನಿಯೊಟೊಮಿ’ ಎಂದು ಕರೆಯಲಾಗುತ್ತದೆ. ಈ ಶಸ್ತ್ರ ಚಿಕಿತ್ಸೆಯ ವೇಳೆ ರೋಗಿ ಸಂಪೂರ್ಣ ಎಚ್ಚರವಾಗಿರುತ್ತಾನೆ. ಎಷ್ಟು ಸಮಯ ಶಸ್ತ್ರ ಚಿಕಿತ್ಸೆ ನಡೆಯಿತು ಎಂಬ ಸಂಪೂರ್ಣ ಮಾಹಿತಿ ರೋಗಿಗೂ ತಿಳಿಯುತ್ತದೆ. ರೋಗಿಯ ಜತೆ ಮಾತನಾಡುತ್ತಲೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

ಬಂಗಾಳದ ಮಹಿಳೆ: ಬೆಂಗಳೂರಲ್ಲಿ ಚಿಕಿತ್ಸೆ

ಪದೇ ಪದೇ ಮರುಕಳಿಸುತ್ತಿದ್ದ ಮೂರ್ಛೆರೋಗದಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ 53 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಸೆಪ್ಟೆಂಬರ್‌ನಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಎಂಆರ್‌ಐ ಸ್ಕ್ಯಾನ್‌ ಮಾಡಿದಾಗ ಮಿದುಳಿನಲ್ಲಿ ಕ್ಯಾನ್ಸರ್ ಗಡ್ಡೆ ಪತ್ತೆಯಾಗಿತ್ತು. ಎಡಗಾಲು ಮತ್ತು ಎಡಗೈಗಳನ್ನು ನಿಯಂತ್ರಿಸುವ ಮಿದುಳಿನ ಭಾಗದಲ್ಲಿ ಈ ಗಡ್ಡೆ ಬೆಳೆದಿತ್ತು. 

ರೋಗಿಗೆ ಅಪರೂಪದ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಮನಗಂಡ ಕೋಲ್ಕತ್ತಾದ ವೈದ್ಯರು ರೋಗಿಯನ್ನು ಬೆಂಗಳೂರಿಗೆ ಶಿಫಾರಸು ಮಾಡಿದ್ದರು. ಈ ಹಿಂದೆ ಬೆಂಗಳೂರು ವೈದ್ಯರು ರೋಗಿಯನ್ನು ಪ್ರಜ್ಞೆ ತಪ್ಪಿಸದೆ ಯಶಸ್ವಿಯಾಗಿ ನಡೆಸಿದ ಸರ್ಜರಿಗಳ ಬಗ್ಗೆ ಕೋಲ್ಕತ್ತಾದ ವೈದ್ಯರಿಗೆ ತಿಳಿದಿತ್ತು.

ದೇಹದ ಅತಿ ಸೂಕ್ಮ ಭಾಗವಾದ ಮಿದುಳಿನಲ್ಲಿ ಬೆಳೆಯುವ ಕ್ಯಾನ್ಸರ್‌ಕಾರಕ ಗಡ್ಡೆಯನ್ನು ತೆಗೆಯುವುದೇ ಸವಾಲಿನ ಕೆಲಸ. ಹೀಗಿರುವಾಗಿ ರೋಗಿ ಎಚ್ಚರವಾಗಿ ಇರುವಂತೆ ನೋಡಿಕೊಂಡು, ರೋಗಿಯ ಗಮನಕ್ಕೆ ಬರದಂತೆ ಮಿದುಳಿನಲ್ಲಿ ಬೆಳೆದ ಗಡ್ಡೆ ತೆಗೆಯುವುದು ದೊಡ್ಡ ಸವಾಲಿನ ಕೆಲಸವಾಗಿತ್ತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಅನುಭವ ಹಂಚಿಕೊಂಡಿದ್ದಾರೆ.

ಈ ಸವಾಲನ್ನು ಸೀತಾ ಭತೇಜ ಸ್ಪೇಷಾಲಿಟಿ ಆಸ್ಪತ್ರೆಯ ನ್ಯೂರೋ ಸರ್ಜನ್‌ ಡಾ. ಅರವಿಂದ ಭತೇಜ ಹಾಗೂ ವೈದ್ಯರ ತಂಡ ಯಶಸ್ವಿಯಾಗಿ ನಿರ್ವಹಿಸಿದೆ. ಬಂಗಾಳಿ ಮಹಿಳೆ ಈಗ ಸಂಪೂರ್ಣ ಗುಣಮುಖರಾಗಿದ್ದು,ವಿಕಿರಣ ಚಿಕಿತ್ಸೆ (ಕಿಮೊಥೆರಪಿ) ಪಡೆಯುತ್ತಿದ್ದಾರೆ. 

ಸವಾಲಿನ ಸರ್ಜರಿ: ಡಾ. ಭತೇಜಾ

ಶಸ್ತ್ರಚಿಕಿತ್ಸೆ ವೇಳೆ ಮಿದುಳಿನ ಸೂಕ್ಷ್ಮ ನರಗಳಿಗೆ ಹಾನಿಯಾಗದಂತೆ ಎಚ್ಚರವಹಿಸುವುದು ಸವಾಲಿನ ಕೆಲಸ. ಸ್ವಲ್ಪ ಯಡವಟ್ಟಾದರೂ ರೋಗಿ ಎಡಗೈ ಮತ್ತು ಕಾಲು ಸ್ವಾಧೀನ ಕಳೆದುಕೊಳ್ಳುವ ಅಪಾಯವಿತ್ತು. ಅರಿವಳಿಕೆ ಮದ್ದು ನೀಡಿ ರೋಗಿಯನ್ನು ಎಚ್ಚರ ತಪ್ಪಿಸಿ ಶಸ್ತ್ರಚಿಕಿತ್ಸೆ ಮಾಡಿದ್ದರೆ ಈ ನರಗಳಿಗೆ ಹಾನಿಯಾಗುವುದನ್ನು ಪತ್ತೆ ಹಚ್ಚಲು ಸಾಧ್ಯವಿರಲಿಲ್ಲ. ಹೀಗಾಗಿ ರೋಗಿಯನ್ನು ಎಚ್ಚರ ತಪ್ಪಿಸದೆ ಶಸ್ತ್ರಚಿಕಿತ್ಸೆ ನಡೆಸುವ ತೀರ್ಮಾನ ತೆಗೆದುಕೊಂಡೆವು. ಇದು ಸಾಮಾನ್ಯ ಸರ್ಜರಿ ಅಲ್ಲ. ಮಿದುಳಿನ ಸೂಕ್ಷ್ಮ ಭಾಗದಿಂದ ಗಡ್ಡೆ ಹೊರತೆಗೆಯುವುದು ನಿಜಕ್ಕೂ ಸವಾಲಿನ‌ ಕೆಲಸ. ಇಂತಹ ಶಸ್ತ್ರಚಿಕಿತ್ಸೆ ಇದೇ ಮೊದಲಲ್ಲ. ಐದು ವರ್ಷದಲ್ಲಿ ಇಂತಹ 10 ಅವೇಕ್‌ ಕ್ರಾನಿಯೊಟೊಮಿ ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಎನ್ನುತ್ತಾರೆ ಸೀತಾ ಭತೇಜಾ ಆಸ್ಪತ್ರೆಯ ಡಾ. ಅರವಿಂದ್ ಭತೇಜಾ.

ಗಡ್ಡೆ ಇದ್ದ ಮಿದುಳಿನ ಭಾಗಕ್ಕೆ ಮಾತ್ರ ಅರಿವಳಿಕೆ ಮದ್ದು ನೀಡಲಾಗಿತ್ತು. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಲೋಕಲ್‌ ಅನೆಸ್ತೇಶಿಯಾ ಎನ್ನುತ್ತಾರೆ. ಶಸ್ತ್ರಚಿಕಿತ್ಸೆ ನಡೆಸುವ ಆ ಭಾಗವನ್ನು ಮಾತ್ರ ಪ್ರಜ್ಞೆ ತಪ್ಪಿಸಲಾಗುತ್ತದೆ. ನಾಲ್ಕು ತಾಸು ನಡೆದ ಶಸ್ತ್ರಚಿಕಿತ್ಸೆ ವೇಳೆ ರೋಗಿ ಎಚ್ಚರವಾಗಿದ್ದು, ಕೈ ಮತ್ತು ಕಾಲುಗಳ ಚಲನವಲನ ಮಾಡುತ್ತಿದ್ದರು. ವೈದ್ಯರು ರೋಗಿಯ ಜತೆ ಮಾತನಾಡುತ್ತಲೇ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಿದರು.

ಇದನ್ನೂ ಓದಿ: ಬ್ರೈನ್ ಟ್ಯೂಮರ್‌ಗೆ ನೋವು ರಹಿತ ಚಿಕಿತ್ಸೆ

ಮಿದುಳಿನಲ್ಲಿ ಗಡ್ಡೆ ಇರುವ ಜಾಗವನ್ನು ಎಂಆರ್‌ಐ ಸ್ಕ್ಯಾನ್‌ ಮೂಲಕ ನಿಖರವಾಗಿ ಗುರುತಿಸಿ ಶಸ್ತ್ರಚಿಕಿತ್ಸೆ ವಿಧಾನ ನಿರ್ಧರಿಸಲಾಗುತ್ತದೆ. ಧ್ವನಿಯನ್ನು ನಿಯಂತ್ರಿಸುವ ಭಾಗದಲ್ಲಿದ್ದರೆ ಶಸ್ತ್ರಚಿಕಿತ್ಸೆ ವೇಳೆ ರೋಗಿಯನ್ನು ಪದೇ ಪದೇ ಮಾತನಾಡಿಸಲಾಗುತ್ತದೆ. ಗಾಯಕನಾಗಿದ್ದರೆ ಹಾಡು ಹೇಳುತ್ತಾರೆ. ಕೈಗಳನ್ನು ನಿಯಂತ್ರಿಸುವ ಜಾಗದಲ್ಲಿದ್ದರೆ, ರೋಗಿಗಳು ಸಂಗೀತಗಾರರಾಗಿದ್ದರೆ ಗೀಟಾರ್‌, ಪಿಟೀಲುಗಳಂತಹ ವಾದ್ಯ ನುಡಿಸುತ್ತಾರೆ ಎಂದು ವೈದ್ಯರು ಅನುಭವ ಹಂಚಿಕೊಂಡರು. ಈ  ತಂಡದಲ್ಲಿ ಇಬ್ಬರು ನ್ಯೂರೋ ಸರ್ಜನ್‌ ಮತ್ತು ಒಬ್ಬರು ಅರಿವಳಿಕೆ ತಜ್ಞರಿದ್ದರು.

ಪ್ರತಿಕ್ರಿಯಿಸಿ (+)