ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ... ಹಂಗಂದ್ರೆ ಏನ್‌ ಸ್ವಾಮಿ? ದುಡಿಯುವ ಕೈಗಳಿಗಿಲ್ಲ ಕೋವಿಡ್‌ ಭೀತಿ

Last Updated 20 ಮಾರ್ಚ್ 2020, 2:58 IST
ಅಕ್ಷರ ಗಾತ್ರ
ADVERTISEMENT
""
""

ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕು, ಜಾಗೃತಿ ಕುರಿತು ಮಾತನಾಡಿಕೊಂಡು ಹೊರಟೆ. ಎದುರಿಗೆ ಸಾಲು ಸಾಲು ಮಾಸ್ಕ್ ಮುಖದವರು ಕಂಡರು. ಕೆಲವರು ಕರವಸ್ತ್ರವನ್ನು, ಇನ್ನೂ ಕೆಲವು ಮಹಿಳೆಯರು ವೇಲ್ ಅನ್ನೇ ಮುಖಕ್ಕೆ ಮಾಸ್ಕ್ ಮಾಡಿಕೊಂಡಿದ್ದರು. ಮಾಸ್ಕ್ ಮರೆಯಲ್ಲೂ ಕೊರೊನಾ ಸೋಂಕಿನ ಭೀತಿ ಕಾಣುತ್ತಿತ್ತು...

ಈ ದೃಶ್ಯ ನೋಡಿಕೊಂಡು ನಾಲ್ಕು ಹೆಜ್ಜೆ ಹಾಕಿದರೆ, ರಸ್ತೆ ಬದಿಯಲ್ಲಿ ಹೂವು, ಹಣ್ಣು, ತರಕಾರಿ ಮಾರುತ್ತಿದ್ದವರು ಕಂಡರು. ಅವರ‍್ಯಾರೂ ಹೀಗೆ ಮುಖ ಮುಚ್ಚಿಕೊಂಡಿರಲಿಲ್ಲ. ಅವರ ಮುಖದಲ್ಲಿ ಕೊರೊನಾ ಭಯದ ಗೆರೆಗಳೂ ಕಾಣಲಿಲ್ಲ. ಹತ್ತಿರ ಹೋಗಿ,‘ಕೊರೊನಾ ಬಗ್ಗೆ ಗೊತ್ತಾ?’ ಎಂದು ಕೇಳಿದೆ.

‘ಅದೇನೋ ನಾ ಕಾಣೆ ಸ್ವಾಮಿ... ಅದೆಂಥದ್ದೋ ಜ್ವರ ಬಂದೈತಂತಲ್ಲ. ಜನಾ ಮಾತೋಡದ್ನ ಕೇಳಿವ್ನಿ. ದುಡುಕೊಂಡು ತಿನ್ನೋ ಜನ ನಾವು. ನಮಗೇನೂ ಗೊತ್ತಾಗಲ್ಲ’ಅಂದರು ಶಾರದಮ್ಮ. ಮಾತು ಮುಂದುವರಿಸಿ,‘ನಾವು ಮಕಕ್ಕೆ ಅದೆಂಥದ್ದೋ ಪಟ್ಟಿ ಹಾಕ್ಕಬೇಕಂತೆ... ಅದ್ನ ಹಾಕ್ಕೊಂಡ್ರೆ ಜ್ವರಾ ಬರಲ್ವಾ?’ ಎಂದು ಅಮಾಯಕರಂತೆ ಪ್ರಶ್ನಿಸಿದರು.

ಬೆಳಗಿನಿಂದ ಸುಲಿದ ಅವರೆಕಾಳು ಗುಡ್ಡೆ ಹಾಕಿಕೊಂಡು ಕುಳಿತಿದ್ದ 60 ವರ್ಷದ ಶಾರದಮ್ಮನಿಗೆ ಗ್ರಾಹಕರಿಲ್ಲದೆ ನಿರಾಸೆಯಾಗಿತ್ತು. ಆ ನಿರಾಸೆ ಅವರ ಮಾತಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಮನೇಲಿ ಕುಳಿತ್ರೆ ಜೀವನ ಸಾಗುತ್ತಾ?
‘ಏನಣ್ಣ ಅದು ಕೊರೊನಾ ಅಂದ್ರೆ... ಜ್ವರನಾ. ನಮಗೂ ಬರುತ್ತಾ? ಕೆಮ್ಮು, ನೆಗಡಿ ಬಂದ್ರೆ ಔಷಧಿ ತೆಗೊಂಡ್ರೆ ಸಾಕಲ್ವ...ಅದೇಕೆ ಎಲ್ರೂ ಅಷ್ಟು ಹೆದ್ರಕೊಂಡು ಮನೆಲ್ಲೇ ಕೂತವ್ರೆ? ಈಜ್ವರಕ್ಕೆ ಔಷಧ ಇಲ್ಲ ಅಂತಾವ್ರಲ್ಲಣ್ಣ. ನಿಜ್ವಾ’ ಎಂದು ಶಾರದಮ್ಮನ ಪಕ್ಕ ಕುಳಿತಿದ್ದ ಉಷಾ ಧ್ವನಿಗೂಡಿಸಿದರು.

‘ಹೆದರಿ ಮನೆಯಲ್ಲಿ ಕುಳಿತ್ರೆ ಜೀವನ ಮಾಡೋಕೆ ಆಗ್ತದಾ? ಮನೆ ಬಾಡಿಗೆ, ಮಕ್ಕಳ ಫೀಸು, ಪಿಗ್ಮಿ ಹಣ ಹೊಂದಿಸೋದು ಬೇಡ್ವಾ? ಬರ್ಲಿ ಬಿಡಿ ಸ್ವಾಮಿ. ಕೊರೊನಾನೋ, ಗಿರೋನಾನೋ ಬಂದ್ ಮೇಲೆ ನೋಡ್ಕಾಳಾಣ’ ಎಂದು ಸೆಲ್ವಿಹೇಳುತ್ತಿದ್ದಾಗ, ಅಕ್ಷರಶಃ ಇವರಿಗೆ ಆ ರೋಗ ಹರಡುವ ಬಗ್ಗೆ ಅರಿವಿಲ್ಲ ಎನ್ನಿಸಿತು.

ಅಂದು ಮಲ್ಲೇಶ್ವರದ8ನೇ ಕ್ರಾಸ್‌ನಿಂದ 13ನೇ ಕ್ರಾಸ್‌ವರೆಗೆ ರಸ್ತೆಯ ಅಂಚಿನಲ್ಲಿರುವ ಒಬ್ಬೊಬ್ಬರನ್ನೇ ಮಾತಾಡಿಸುತ್ತಾ ಹೊರಟೆ.ಅವರೆಲ್ಲರದ್ದೂ ಇಂಥದ್ದೇ ಪ್ರತಿಕ್ರಿಯೆ. ಯಾರಿಗೂ ಕೋವಿಡ್‌ ವೈರಸ್ ಸೋಂಕು, ಹರಡುವ ಬಗೆ, ರೋಗ ಲಕ್ಷಣ, ಮುನ್ನೆಚ್ಚರಿಕೆ ಕ್ರಮ..ಇವ್ಯಾವುಗಳ ಬಗ್ಗೆಯೂ ಅರಿವಿದ್ದಂತೆ ಕಾಣಲಿಲ್ಲ.ತಿಳಿದುಕೊಳ್ಳುವ ಕುತೂಹಲವೂ ಇಲ್ಲ. ಅಂದೇ ದುಡಿದು, ಅಂದೇ ತಿನ್ನುವ ಅವರಿಗೆ ಕೊರೊನಾ ವೈರಸ್‌ಗಿಂತ ಜೀವನ ಹೇಗೆ ಸಾಗಿಸಬೇಕು ಎನ್ನುವ ಪ್ರಶ್ನೆಯೇ ದೊಡ್ಡದಾಗಿ ಕಾಣುತ್ತದೆ.

‘ತಲೆ ಚಿಟ್ಟು ಹಿಡಿದು ಹೋಗಿದೆ’
‘ಮಾಸ್ಕ್‌ ಹಾಕಿಲ್ಲವಲ್ಲ. ಕೊರೊನಾ ಬಗ್ಗೆ ಹೆದರಿಕೆ ಆಗೋಲ್ವಾ’ ಎಂಬ ಪ್ರಶ್ನೆಗೆ ತರಕಾರಿ ಮಾರುತ್ತಿದ್ದ ಮಹಿಳೆಯೊಬ್ಬರು ನೀಡಿದ ಉತ್ತರ ಒಳ್ಳೆ ತಮಾಷೆಯಾಗಿತ್ತು.

‘ವಾರದಿಂದ ಟೀವಿಯಲ್ಲಿ ಕೊರೊನಾ ಸುದ್ದಿ ನೋಡಿ ತಲೆ ಚಿಟ್ಟು ಹಿಡಿದು ಹೋಗಿದೆ. ಯಾವ ಚಾನೆಲ್‌ ಹಚ್ಚಿದರೂ ಇದೇ ಸುದ್ದಿ. ಈ ಟೀವಿ ನೋಡಿ ಜನಾ ಮಾರ್ಕೆಟ್‌ಗೆ ಬರ್ತಾ ಇಲ್ಲ. ಬೆಳಿಗ್ಗೆಯಿಂದ ಒಂದು ಪೈಸೆ ಬೋಣಿಯಾಗಿಲ್ಲ. ಉಪವಾಸ ಸಾಯೋದಕ್ಕಿಂತ ಆ ರೋಗ ಬಂದುಸಾಯೋದು ವಾಸಿ’ ಎಂದು ಬೇಸರ ವ್ಯಕ್ತಪಡಿಸಿದರು.

ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಗ್ರಾಹಕರಿಗಾಗಿ ಕಾದು ಕುಳಿತಿರುವ ಬೀದಿಬದಿ ವ್ಯಾಪಾರಿಗಳು

*
ಮನೆ ಬಿಟ್ಟು ಜನಾನೇ ಬರ್ತಿಲ್ಲ, ಇನ್ನು ಆ ಕ್ರಿಮಿ ಮಲ್ಲೇಶ್ವರದವರೆಗೂ ಬರುತ್ತಾ?
-ಭೈರವಿ

*
ಈ ಸಮಯದಲ್ಲಿ ಮಲ್ಲೇಶ್ವರ ಮಾರ್ಕೆಟ್‌ ಒಳ್ಳೆ ಜಾತ್ರೆ ಥರಾ ಇರಬೇಕಿತ್ತು. ಈಗ ನೋಡಿ ಹೇಗಾಗಿದೆ. ಎಲ್ಲ ಖಾಲಿ, ಖಾಲಿ. ಜನರೇ ಇಲ್ಲ. ವಾರದಿಂದ ಹೊಟ್ಟೆಪಾಡು ಕಷ್ಟವಾಗಿದೆ.
-ಮಂಜುಳಾ

*
ಇಲ್ಲಿಗೆ ಬರುವ ನೂರಾರು ಜನರಲ್ಲಿ ಯಾರಿಗೆ ಈ ರೋಗ ಇದೆ ಅಂತ ಗೊತ್ತಾಗುತ್ತೆ ಹೇಳಿ. ನಾವು ಮಾಸ್ಕ್‌ಹಾಕ್ಕೊಂಡು, ಸ್ಯಾನಿಟೈಸರ್‌ ಇಟ್ಕೊಂಡು ಕುಳಿತರೆ, ನಮಗೂ ರೋಗ ಇರಬಹುದುಅಂತ ಹೆದರಿ, ಬರುವ ನಾಲ್ಕು ಜನರೂ ಬರಾಕ್ಕಿಲ್ಲ. -ಭಾಗ್ಯಮ್ಮ

*
ಮನೆಯಲ್ಲೇ ಕುಳಿತ್ರೆ ಜೀವನ ನಡಿಬೇಕಲ್ಲ. ತಾಸಿಗೊಮ್ಮೆ ಕೈ ತೊಳೆಯುತ್ತಾ, ಮಾಸ್ಕ್‌ ಹಾಕ್ಕೊಂಡು ಕುಳಿತ್ರೆ ವ್ಯಾಪಾರ ನಡೆಯುತ್ತಾ? ಬಡ್ಡಿ ಮಗಂದು ಎಲ್ಲಿಂದ ಬಂತೋ ಈ ರೋಗ..ನಮ್ಮ ಪ್ರಾಣ ತಿನ್ನೋಕೆ.
-ನೀಲಮ್ಮ

*
ಬೆಳಿಗ್ಗೆಯಿಂದ ಕುಳಿತರೂ ಇನ್ನೂ ಬೋಣಿ ಆಗಿಲ್ಲ. ಒಂದು ಗಿರಾಕಿಯೂ ಇತ್ತ ಸುಳಿದಿಲ್ಲ. ಒಬ್ರೋ, ಇಬ್ರೋ ಬರ್ತಿದ್ದಾರೆ.ದಿನವಿಡಿ ನೂರು ರೂಪಾಯಿ ವ್ಯಾಪಾರ ಆಗಕ್ಕಿಲ್ಲ.
-ಸೆಲ್ವಿ

ರೇಸ್ ಕೋರ್ಸ್ ರಸ್ತೆಯಲ್ಲಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು - ಪ್ರಜಾವಾಣಿ ಚಿತ್ರ/ ಎಂ.ಎಸ್ಮಂಜುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT