ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೇಕಪ್‌ಗೂ ಈಗ ಸಂಭ್ರಮದ ಪಾರ್ಟಿ!

Last Updated 25 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಪ್ರೇಮಿಗಳು ಸಂಬಂಧ ಕಡಿದುಕೊಂಡು ವಿದಾಯ ಹೇಳುವುದು ಮೊದಲಿನಂತೆ ಈಗ ಶೋಕಾಚರಣೆಯಾಗಿ ಉಳಿದಿಲ್ಲ. ವಾಲೆಂಟೈನ್ಸ್‌ ಡೇ ದಿನದಷ್ಟೇಬ್ರೇಕಪ್‌ ಸಹ ಸಂಭ್ರಮದ ಆಚರಣೆಯಾಗಿ ಬದಲಾಗಿದೆ!

ಕಾಲದ ಜತೆ ಪ್ರೇಮಿಗಳು ಕೂಡ ಬದಲಾಗಿದ್ದಾರೆ.ಬಟ್ಟೆ ಬದಲಿಸಿದಷ್ಟೇ ಸುಲಭವಾಗಿ ಪ್ರೇಮಿಗಳು ಸಂಬಂಧ ತುಂಡರಿಸಿಕೊಂಡು ಹೊಸ ಪ್ರೇಮಿಯನ್ನು ಹುಡುಕಿಕೊಳ್ಳುತ್ತಾರೆ.ಪ್ರೀತಿ ನಿವೇದಿಸಿಕೊಳ್ಳುವ ದಿನವಾದ ವಾಲೆಂಟೈನ್ಸ್‌ ಡೇ ದಿನದಷ್ಟೇ ಸಂಬಂಧ ಕಡಿದುಕೊಳ್ಳುವ ಬ್ರೇಕಪ್‌ ಪಾರ್ಟಿಗಳು ಸಹ ಸಂಭ್ರಮದಿಂದ ನಡೆಯುತ್ತಿವೆ.

ಹಳೆಯ ಪ್ರೇಮಿಗಳು ಸಂಬಂಧ ಕಡಿದುಕೊಂಡು, ಪರಸ್ಪರ ಗೌರವದಿಂದ ವಿದಾಯ ಹೇಳಿಕೊಳ್ಳಲು ಕೊನೆಯ ಬಾರಿಗೆ ನಡೆಸುವ ಔತಣಕೂಟಗಳೇ ಬ್ರೇಕಪ್‌ ಪಾರ್ಟಿಗಳು. ಇಂತಹ ಪಾರ್ಟಿಗಳು ಈಗ ನಗರದಲ್ಲೂ ನಡೆಯುತ್ತಿವೆ.

ಪ್ರೇಮಿಗಳ ದಿನಾಚರಣೆಯಂತೆ ನಗರದಲ್ಲಿ ಅನೇಕ ರೆಸ್ಟೋರೆಂಟ್‌, ಪಬ್‌, ಬಾರ್‌ ಮತ್ತು ರೆಸಾರ್ಟ್‌ಗಳು ಬ್ರೇಕಪ್‌ ಪಾರ್ಟಿಗಳನ್ನು ಆಯೋಜಿಸುತ್ತಿರುವ ಹೊಸ ಟ್ರೆಂಡ್‌ ಶುರುವಾಗಿದೆ. ನಡೆದಿರುವುದು ವರದಿಯಾಗಿದೆ. ಹಳೆಯ ಪ್ರೇಮಿಯ ಸಮ್ಮುಖದಲ್ಲಿಯೇ ಹೊಸ ಪ್ರೇಮಿಯನ್ನು ಅಪ್ಪಿಕೊಂಡು ಹೊಸ ಪಯಣ ಆರಂಭಿಸಿರುವ ಎಷ್ಟೋ ಕುತೂಹಲಕಾರಿ ಪ್ರಸಂಗಗಳೂ ನಡೆದಿವೆ.

‘ನಮ್ಮ ಅನೇಕ ವಿಚಾರ, ನಡವಳಿಕೆಗಳು ಪರಸ್ಪರ ತಾಳೆಯಾಗುತ್ತಿರಲಿಲ್ಲ. ಹೊಂದಾಣಿಕೆಯ ಕೊರತೆ ದೊಡ್ಡ ಅಡ್ಡಗೋಡೆಯಾಗಿತ್ತು. ಪರಸ್ಪರ ಚರ್ಚಿಸಿ, ಗೌರವದಿಂದ ದೂರವಾಗುವ ನಿರ್ಧಾರಕ್ಕೆ ಬಂದೆವು. ಬ್ರೇಕಪ್‌ ಪಾರ್ಟಿ ಮಾಡಿ ಸಂತೋಷದಿಂದ ವಿದಾಯ ಹೇಳಿಕೊಂಡಿದ್ದೇವೆ. ಮುಂದೆಯೂ ಇಬ್ಬರೂ ಒಳ್ಳೆಯ ಸ್ನೇಹಿತರಾಗಿ ಉಳಿಯುವ ನಿರ್ಧಾರ ಮಾಡಿದ್ದೇವೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ 24 ವರ್ಷದ ಸಾಫ್ಟವೇರ್‌ ಉದ್ಯೋಗಿ.

ಮುರಿದ ಬಿದ್ದ ಹಳೆಯ ಪ್ರೇಮ ಕಥೆಯನ್ನು ಹೊಸ ಪ್ರೇಮಿಗಳ ಜತೆ ಮುಕ್ತವಾಗಿ ಹಂಚಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸುತ್ತಾರೆ.‘ನನ್ನ ಗುಣ, ಸ್ವಭಾವಗಳಿಗೆ ಹೊಂದಾಣಿಕೆಯಾಗುವ ಹೊಸ ಪ್ರೇಮಿ ಸಿಕ್ಕಿದ್ದಾಳೆ. ನಾನು ಮೊದಲು ಪ್ರೀತಿಸುತ್ತಿದ್ದ ಸಹೋದ್ಯೋಗಿಗೆ ವಿದಾಯ ಹೇಳಿ ಹೊಸ ಪಯಣ ಆರಂಭಿಸಲು ಸಜ್ಜಾಗಿದ್ದೇನೆ. ಇದರಲ್ಲಿ ತಪ್ಪೇನಿಲ್ಲ’ ಎಂದು ಬಿಂದಾಸ್‌ ಆಗಿ ಹೇಳಿಕೊಂಡರು.

ಜೀವನ ನಿಂತ ನೀರಲ್ಲ

‘ಒಂದು ಪ್ರೇಮ ವಿಫಲವಾದರೆ ಏನಾಯಿತು? ಜೀವನ ಮತ್ತು ಪ್ರೀತಿ ನಿಂತ ನೀರಲ್ಲ, ನಿರಂತರವಾಗಿ ಹರಿಯುತ್ತಿರಬೇಕು. ಒಂದು ಕಡೆ ಕಮರಿದ ಪ್ರೀತಿ ಮತ್ತೆಲ್ಲೋ ಹೊಸದಾಗಿ ಚಿಗುರೊಡೆಯುತ್ತದೆ’ ಎನ್ನುವುದು ವಸಂತ ನಗರದ ಪ್ರಸಿದ್ಧ ಕಾಲೇಜೊಂದರ ವಿದ್ಯಾರ್ಥಿನಿಯರ ಗುಂಪಿನ ವಾದ.

‘ಪ್ರೀತಿ, ಪ್ರೇಮ ವಿಫಲವಾದರೆ ಜೀವನ ಕಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಪ್ರೀತಿಗಿಂತ ಜೀವನ ಮತ್ತು ಭವಿಷ್ಯ ದೊಡ್ಡದು. ಪೊಳ್ಳು ಪ್ರೀತಿಗಿಂತ ನೈಜ ಪ್ರೀತಿ ಸಿಗುವುದು ಮುಖ್ಯ. ಕೆಲವೊಮ್ಮೆ ನಮ್ಮ ಆಯ್ಕೆ ತಪ್ಪಾಗಿರುತ್ತದೆ. ಅದನ್ನು ಸರಿಪಡಿಸಿಕೊಳ್ಳುವುದು ಕೂಡ ನಮ್ಮ ಕೈಯಲ್ಲಿಯೇ ಇದೆ’ ಎನ್ನುತ್ತಾರೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಪಾಯಲ್‌ ಮಲ್ಹೋತ್ರಾ.

‘ಮೊದಲಾದರೆ ಪ್ರೀತಿ ತುಂಡರಿಸಿಕೊಳ್ಳುವುದು ಎಂದರೆ ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡ ಶೂನ್ಯ ಭಾವ ಆವರಿಸಿಕೊಳ್ಳುತ್ತಿತ್ತು. ಪ್ರೀತಿಯ ಬಲೆಯಿಂದ ಬಿಡಸಿಕೊಂಡು ಹೊರ ಬರಲು ಅನೇಕ ವರ್ಷಗಳ ಕಾಲ ಪರಿತಪಿಸಬೇಕಾಗಿತ್ತು. ಈಗಿನ ಯುವಕ–ಯುವತಿಯರು ಹಾಗಲ್ಲ. ನಮ್ಮ ರೆಸ್ಟೋರೆಂಟ್‌ಗೆ ಬರುವ ಯುವ ಜೋಡಿಗಳು ಎಷ್ಟೋ ಬಾರಿ ಬದಲಾಗಿವೆ. ಅದಕ್ಕೆ ಲೆಕ್ಕ ಇಲ್ಲ’ ಎನ್ನುತ್ತಾರೆ ಕಾಲೇಜ್‌ ಎದುರಿನ ರಸ್ತೆಯಲ್ಲಿರುವ ಇಟಾಲಿಯನ್‌ ಕೆಫೆ ಮಾಲೀಕ ಗೌರವ್‌.

‘ಮೊದಲಾದರೆ ಭಗ್ನಪ್ರೇಮಿಯನ್ನು ಸುಲಭವಾಗಿ ಗುರುತಿಸಬಹುದಿತ್ತು. ನಮ್ಮ ಕಾಲದಲ್ಲಿ ಭಗ್ನಪ್ರೇಮಿಗಳು ದೇವದಾಸನಂತೆ ಕುಡಿತಕ್ಕೆ ಶರಣಾಗಿ ಶೂನ್ಯ ದಿಟ್ಟಿಸುತ್ತಕೂಡುತ್ತಿದ್ದರು.ಕುರುಚಲು ಗಡ್ಡ, ಮೀಸೆ ಮತ್ತು ಎಣ್ಣೆ ಕಾಣದ ಕೆದರಿದ ಕೂದಲಿನ ಆತನನ್ನು ಯಾರು ಬೇಕಾದರೂ ಸುಲಭವಾಗಿ ಭಗ್ನಪ್ರೇಮಿ ಎಂದು ಗುರುತಿಸಬಹುದಾಗಿತ್ತು. ಇಂದಿನ ಯುವ ಸಮೂಹ ಹಾಗಲ್ಲ ಬಿಂದಾಸ್‌ ಆಗಿರುತ್ತಾರೆ’ ಎನ್ನುತ್ತಾರೆ ಅನೇಕ ಬ್ರೇಕಪ್‌ ಪಾರ್ಟಿಗಳಿಗೆ ಸಾಕ್ಷಿಯಾಗಿರುವ ಗೌರವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT