ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀಪ್‌ ಅಂಡ್‌ ಬೆಸ್ಟ್ ಕಮರ್ಷಿಯಲ್ ಸ್ಟ್ರೀಟ್

Last Updated 26 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಚೌಕಾಶಿ (ಬಾರ್ಗೇನಿಂಗ್‌) ಚೆನ್ನಾಗಿ ಗೊತ್ತಿರೋರು ಕಡಿಮೆ ದುಡ್ಡಿನಲ್ಲೂ ಭಾರಿ ಶಾಪಿಂಗ್‌ ಮಾಡಬಹುದು. ಇಲ್ಲಿ ನಿತ್ಯ ಒಂದು ಮಿನಿ ಜಾತ್ರೆಯೇ ನೆರೆದಿರುತ್ತದೆ. ಒಂದು ಬಾರಿ ಒಳಹೊಕ್ಕರೆ ಬೇಕೆನಿಸಿದ್ದನ್ನೆಲ್ಲ ಸುಮ್ಮನೇ ಖರೀದಿಸುವ ಮನಸ್ಸಾಗುತ್ತದೆ. ಇದು ಕಮರ್ಷಿಯಲ್ ಸ್ಟ್ರೀಟ್!

ಈ ಸ್ಟ್ರೀಟ್‌ಗೆ ಬೆಳಿಗ್ಗೆ ಹೊಕ್ಕರೆ ಹೊರಬರಲು ಸಂಜೆಯೇ ಆಗಬಹುದು. ಒಂದು ಸ್ಯಾಂಪಲ್‌ಗೆ ಹೇಳುವುದಾದರೆ, ಸಾಮಾನ್ಯವಾಗಿ ಜೊತೆ ಚಪ್ಪಲಿಗೆ ₹200 ಕ್ಕಿಂತ ಕಡಿಮೆ ಬೆಲೆಗೆ ಸಿಗಲು ಸಾಧ್ಯವಿಲ್ಲ. ಆದರೆ, ಇಲ್ಲಿ ಅದು ₹150ಗೂ ಲಭ್ಯ. ತುಂಬಾ ಬಾರ್ಗೇನಿಂಗ್ ಮಾಡಿದರೆ ₹100ಗೂ ಸಿಗಬಹುದು. ಜುಮ್ಮಾ ಮಸೀದಿ ರಸ್ತೆಗುಂಟ ಕೆಳಕ್ಕಿಳಿದು ಮೀನಾಕ್ಷಿ ಕೊವಿಲ್‌ ಸ್ಟ್ರೀಟ್‌ ಅಲ್ಲಿಂದ ಮುಂದಕ್ಕೆ ಅತ್ಯಂತ ಹೆಸರಾಂತ ಬೃಹತ್‌ ನ್ಯೂ ಗುಲ್ಶನ್‌ ಫ್ಯಾಮಿಲಿ ಸ್ಟೋರ್‌ ತನಕ ವಿಭಿನ್ನ ಬಣ್ಣ, ವೈವಿದ್ಯಮಯ ವಿನ್ಯಾಸದ ಶೂ, ಚಪ್ಪಲಿಗಳು ಮತ್ತಿತರ ಅಗತ್ಯ ವಸ್ತುಗಳ ದರ್ಶನವಾಗುತ್ತದೆ. ಶಾಪಿಂಗ್‌ ಮಾಡದೇಇಲ್ಲಿಂದ ಕಾಲು ಕೀಳುವ ಮನಸಾಗುವುದಿಲ್ಲ.

ಬಟ್ಟೆ ಅಂಗಡಿಗಳಿಗಂತೂ ಲೆಕ್ಕವಿಲ್ಲ. ಆಫ್‌ರ್‌ಗಳ ಮೇಲೆ ಆಫರ್‌ ನೀಡುವ ಈ ಮಳಿಗೆಗಳು ಗಮನ ಸೆಳೆಯುತ್ತವೆ. ಬೇಕೆಂದರೆ ಇಲ್ಲಿ ₹100ಗೂ ಟಾಪ್‌ಗಳು ಲಭ್ಯ. ದೇಶದ ವಿವಿಧ ರಾಜ್ಯಗಳ ಬಟ್ಟೆಗಳ ವಿನ್ಯಾಸ, ಜಾಕೇಟ್‌, ಸ್ಕಾರ್ಫ್‌, ಕುರ್ತಾ, ದುಪ್ಪಟ್ಟಾ.. ಎಲ್ಲವನ್ನು ಒಂದೇ ಸೂರಿನಡಿ ಪಡೆದುಕೊಳ್ಳಬಹುದು. ಇಬ್ರಾಹಿಂ ಸಾಹಿಬ್‌ ಸ್ಟ್ರೀಟ್‌ನಲ್ಲಿ ಅತ್ಯಂತ ಕಮ್ಮಿ ಬೆಲೆಯ ಅತ್ಯುತ್ತಮ ಗುಣಮಟ್ಟದಡ್ರೆಸ್‌ ಮೆಟಿರಿಯಲ್‌ ಸಿಗುತ್ತವೆ. ಇಲ್ಲಿ ಲೇಡೀಸ್‌ ಟೈಲರ್‌ಗಳೂ ಇದ್ದಾರೆ. ಇದಕ್ಕೆ ಹೊಂದಿಕೊಂಡಂತೆ ಇರುವ ಲಬ್ಬೇ ಮಸೀದಿ ಸ್ಟ್ರೀಟ್‌ನಲ್ಲಿಯೂ ಒಳ್ಳೆಯ ಟೈಲರ್‌ ಅಂಗಡಿಗಳಿವೆ. ಅಲ್ಲಲ್ಲಿ ಚಾಟ್ಸ್‌ ಅಂಗಡಿಗಳು, ಪಾನೀ ಪುರಿ ಆ ಕ್ಷಣದ ಹಸಿವು ನೀಗಿಸುತ್ತವೆ. ಬಾಯಿ ರುಚಿಗೆ ಅತ್ಯಂತ ಸೂಕ್ತ ಖಾದ್ಯಗಳು ಇಲ್ಲಿ ಲಭ್ಯ. ವುಡ್ಡೀಸ್‌, ಶಿವಸಾಗರ, ಆನಂದ್‌ ಸ್ವೀಟ್ಸ್‌, ಜುಮ್ಮಾ ಮಸೀದಿ ರಸ್ತೆಯಲ್ಲಿನ ಕೊಹಿನೂರ್‌, ತಾಜ್‌ ಇತ್ಯಾದಿ ರೆಸ್ಟೊರೆಂಟ್‌ಗಳಿವೆ. ಲಸ್ಸೀ ಬಾರ್‌ ಮತ್ತು ಜ್ಯೂಸ್‌ ಅಂಗಡಿಗಳಿವೆ.

ಹೆಂಗಳೆಯರಿಗೆ ಆಭರಣಗಳೆಂದರೇ ಅಚ್ಚು ಮೆಚ್ಚು. ಊಹೆಗೂ ಮೀರಿದ ನೂರಾರು ಬಗೆಯ ಕಿವಿಯೋಲೆ, ಬ್ರಾಸ್ಲೇಟ್, ಸರಗಳು ಸಿಗುತ್ತವೆ. ಆಭರಣಗಳ ಬೆಲೆ ₹50ರಿಂದ ಆರಂಭ. ಇಲ್ಲಿನ ಜ್ಯುವೆಲರ್ಸ್‌ ಸ್ಟ್ರೀಟ್‌ ಉದ್ದಕ್ಕೂ ಆಭರಣಗಳ ಅಂಗಡಿಗಳಿವೆ. ಚಿನ್ನ, ಬೆಳ್ಳಿ, ಕಾಲುಂಗುರ ಮತ್ತಿತರ ಸಿದ್ಧ ಆಭರಣಗಳು ಅಥವಾ ಆರ್ಡರ್‌ ಮಾಡಿಯೂ ಬೇಕೆನಿಸಿದ ವಿನ್ಯಾಸಗಳನ್ನು ಪಡೆಯಬಹುದು.

ಮನೆಯ ಅಂದ ಹೆಚ್ಚಿಸುವ ಗೃಹಾಲಂಕಾರಿಕ ವಸ್ತುಗಳಿಗೂ ಇದು ಒಳ್ಳೆಯ ಶಾಪಿಂಗ್‌ ಏರಿಯಾ. ಹೂಜಿಗಳು, ಕೃತಕ ಹೂಗಳು, ಜುಮ್ಮರ್‌ಗಳು, ವಾಲ್‌ ಹ್ಯಾಂಗಿಂಗ್‌ಗಳು.. ಎಲ್ಲಾ ವೆರೈಟಿಗಳನ್ನು ಬಜೆಟ್‌ಗೆ ಅನುಗುಣವಾಗಿ ಖರೀದಿಸಬಹುದು.

ಸಂಜೆ ಹೊತ್ತು ಜಗಮಗಿಸುವ ಬೆಳಕಿನಿಂದ ಕಂಗೊಳಿಸುವ ಈ ಕಮರ್ಷಿಯಲ್ ಸ್ಟ್ರೀಟ್ ಅತ್ಯಂತ ರಂಗೀನ್‌ ಶಾಪಿಂಗ್‌ ತಾಣ. ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಮತ್ತೆ ಮತ್ತೆ ಹೋಗುವ ಮನಸ್ಸಾಗುತ್ತದೆ. ದೇಶಿಯರಷ್ಟೇ ಅಲ್ಲ ವಿದೇಶಿಯರಿಗೂ ಇದು ಮೆಚ್ಚಿನ ಶಾಪಿಂಗ್‌ ಏರಿಯಾ. ವೀಕೆಂಡ್‌ನಲ್ಲೋ ಅಥವಾ ಬಿಡುವು ಸಿಕ್ಕಾಗಲೋ ಒಮ್ಮೆ ಕಮರ್ಷಿಯಲ್‌ ಸ್ಟ್ರೀಟ್‌ ಸುತ್ತಿ. ಮಜಾ ಬರದಿದ್ದರೆ ಕೇಳಿ.

ಐಶ್ವರ್ಯ ಚಿಮ್ಮಲಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT