ಮಂಗಳವಾರ, ಡಿಸೆಂಬರ್ 10, 2019
19 °C

ಚಳಿಗಾಲಕ್ಕಿರಲಿ ಬೆಚ್ಚಗಿನುಡುಪು

Published:
Updated:

ಚಳಿಗಾಲ! ಇದೊಂದು ರೋಮ್ಯಾಂಟಿಕ್‌ ಸೀಸನ್‌ ಕೂಡ. ಬೆಚ್ಚನೆಯ ಭಾವಕ್ಕೆ ಹಾತೊರೆವ ಕಾಲ. ಕೋಮಲ ಸ್ಪರ್ಶಕ್ಕೆ ಮೈಮನಗಳ ಸುಳಿಯಲ್ಲಿ ಗರಂ ಹವಾ. ಮೈ ಕೊರೆಯುವ ಚಳಿ ಎಂದು ಮನೆಯಲ್ಲೇ ಕಂಬಳಿ ಹೊದ್ದು ಮಲಗಿದರೇನು ಬಂತು? ಚಳಿಗಾಳಿ ಮೈ ಸೋಕಬೇಕು. ತೊಗಲಿನ ಹೊದಿಕೆ ಥಂಡಿ ಸವಿಯಬೇಕು. ಆಹಾ! ಚಳಿಗಾಳಿ, ಹೊಸ ಆಸೆಗಳ ಚಿಗುರಿಗೆ, ಬಿಸಿಯುಸಿರಿನ ಘಮಲಿಗೆ ಮತ್ತೆ ಮತ್ತೆ ಕಾಯುವ ಋತು. ಇಗೋ ಬಂದೇ ಬಿಟ್ಟಿದೆ.

ಮುಂದೆ ಬೇಸಿಗೆ! ಅದಕ್ಕಿನ್ನೂ ಏಪ್ರಿಲ್‌ ತಿಂಗಳವರೆಗೆ ಸಮಯವಿದೆ. ಅಲ್ಲಿಯತನಕ ಕಮ್ಮಿ ಎಂದರೂ ನಾಲ್ಕು ತಿಂಗಳು ಚಳಿಗಾಲ. ಚಳಿಗೆ ಹಸಿರೆಲೆಗಳು ಉದುರಿ ಮರವೆಲ್ಲ ಬೋಳಾಗಿ ನಿಲ್ಲುವುದು. ನಮ್ಮೊಳಗೂ ಅದೆಷ್ಟೊ ಸಮಯದಿಂದ ಒಳಗೇ ಉಳಿದುಕೊಂಡ ಬೇಸರ, ನಿರುತ್ಸಾಹ ಒಂದೊಂದಾಗಿ ಕಳಚಿಕೊಳ್ಳುವ ಕಾಲ. ಎಂಥದೋ ಒಂದು ಹೊಸತು ಭಾವ ಎದೆಯೊಳಕ್ಕೆ. ನೋಡ ನೋಡುತ್ತಿದ್ದಂತೆ ಮತ್ತೆ ವಸಂತ ಬರುವನು. ಹೊಸ ಚಿಗುರು ಎಲ್ಲೆಲ್ಲೂ. ನಮ್ಮೊಳಗೂ.. ನಿಸರ್ಗದ ಈ ಪ್ರಕ್ರಿಯೆ ನಮ್ಮೊಳ ಹೊರಗನ್ನು ಹೊಚ್ಚ ಹೊಸದಾಗಿಸುವುದು ಒಂದು ವಿಸ್ಮಯ.

ಚಳಿಗಾಲವನ್ನು ಆನಂದಿಸೋಣ. ಯುರೋಪ್‌ನಲ್ಲಿ ಚಳಿಗಾಲವನ್ನು ಆನಂದಿಸುತ್ತಾರೆ. ‘ಅಯ್ಯೋ ಕೆಟ್ಟ ಚಳಿ’ ಎಂದು ಅಲ್ಲಿ ಯಾರಾದರೂ ಗೊಣಗಿದರೆ, ‘ಚಳಿಗಾಲ ಕೆಟ್ಟದ್ದಲ್ಲಪ್ಪಾ, ನೀವು ಹಾಕಿಕೊಂಡಿರೊ ಉಡುಪು ಸರಿಯಾಗಿಲ್ಲ, ಬ್ಯಾಡ್‌ ಕ್ಲಾತಿಂಗ್‌’ ಎಂದು ಮುಖಕ್ಕೆ ಹೊಡೆಯುವ ಹಾಗೆ ಹೇಳುತ್ತಾರೆ. ಈ ಚಳಿಗಾಲಕ್ಕೆ ಒಂದಷ್ಟು ಬೆಚ್ಚಗಿನ ಬಟ್ಟೆ, ಹೊದಿಕೆಗಳನ್ನು ವ್ಯವಸ್ಥೆ ಮಾಡಿ ಕೊಳ್ಳೋಣ.

ಬೆಳಿಗ್ಗೆ ತುಸು ಚಳಿ ಹೆಚ್ಚು. ಬೆಚ್ಚಗಿನ ಸ್ವೆಟರ್‌, ಕೈಗವಸು ಮತ್ತೆ ತಲೆಗೊಂದು ಉಲನ್‌ ಟೋಪಿ ಸಿಕ್ಕಿಸಿಕೊಂಡು ಬೆಳಗಿನ ವಾಕ್‌ ಮಾಡಿದರೆ ಸಾಕು. ಮೈಮನಗಳಲ್ಲಿ ಹೊಸ ಚೈತನ್ಯ. ಬೆಚ್ಚಗಿನ ಹಬೆಯಾಡುವ ಕಾಫಿ, ಗ್ರೀನ್‌ ಟೀ ಹೀರಿದರಂತೂ ಸ್ವರ್ಗ ಸುಖ!

ಮಧ್ಯಾಹ್ನ ಪರವಾಗಿಲ್ಲ. ಆದರೆ ಸಂಜೆ ಆಗುತ್ತಿದ್ದಂತೆ ತಂಪು ಗಾಳಿ ಸುಳಿಯಲಾರಂಭಿಸುತ್ತದೆ. ಯಾವುದಕ್ಕೂ ಒಂದು ಬೆಚ್ಚನೆಯ ಸ್ವೆಟರ್‌ ಇರಲಿ. ಕೊರಳಿಗೊಂದು ಮಫ್ಲರ್‌ ಸಿಕ್ಕಿಸಿಕೊಂಡರೆ ಸದಾ ಬೆಚ್ಚಗಿನ ಅನುಭವ. ಕತ್ತಿನ ಸುತ್ತ ಇರುವ ಅಸಂಖ್ಯ ನರನಾಡಿಗಳಿಗೆ ಒಂದಷ್ಟು ಬೆಚ್ಚಗಿನ ಹಿತಾನುಭವ ಬೇಕು. ರಕ್ತಪರಿಚಲನೆ ಸರಾಗವಾಗಲು. ದೇಹದ ಲವ ಲವಿಕೆಯನ್ನು ಕಾಪಿಡಲು..

ಲಿವೈಸ್‌, ಫ್ಯೈಯಿಂಗ್‌ ಮಶಿನ್‌, ಮಾಂಟೊ ಕಾರ್ಲೊ, ಜಾರಾ... ಇಂಥ ಅನೇಕ ಶೋರೂಂಗಳಲ್ಲಿ ಬೇಕಾದಷ್ಟು ವೆರೈಟಿ ಮಫ್ಲರ್‌ಗಳು ಸಿಗುತ್ತವೆ. ನಿಮ್ಮ ಸ್ಟೈಲ್‌ಗೆ ಹೊಂದುವ, ದೇಹದ ಬಣ್ಣಕ್ಕೆ ಒಪ್ಪುವ ಹಲವು ವಿನ್ಯಾಸಗಳ ಮಫ್ಲರ್‌ಗಳು ಲಭ್ಯ. ಅದಕ್ಕೆ ಹೊಂದುವ ಕೈಗವಸು ಕೂಡ ಆಯ್ದುಕೊಳ್ಳಿ.

ಸ್ವೆಟರ್‌ ಬೋರು ಎನಿಸಿದರೆ ಒಂದು ಉಲನ್‌ ಓವರ್‌ ಕೋಟ್‌ ಆಯ್ದುಕೊಳ್ಳುವುದು ಉತ್ತಮ. ಮೊಣಕಾಲುದ್ದಕ್ಕೆ ಕಪ್ಪು, ನೇವಿಬ್ಲೂ ಬಣ್ಣದ ಓವರ್‌ಕೋಟ್‌ ನೋಡಲು ಸ್ಟೈಲಿಶ್‌. ಮೇಲೊಂದು ಒಪ್ಪುವ ಹ್ಯಾಟ್‌ ಇದ್ದರಂತೂ ಡ್ಯಾಶಿಂಗ್‌ ಲುಕ್‌.

ಶೂ ಕೂಡ ತುಂಬ ಮುಖ್ಯ. ಆದಷ್ಟು ದಪ್ಪನೆಯ ಶೂ ಇರಲಿ. ಚರ್ಮದ ಶೂ ಉತ್ತಮ. ವುಡ್‌ಲ್ಯಾಂಡ್ಸ್‌, ಲೀಕೂಪರ್‌, ನೈಕೆ.. ಇತ್ಯಾದಿ ಹಲವು ಬಗೆಯ ಬ್ರಾಂಡೆಡ್‌ ಶೂಗಳು ಲಭ್ಯ. ಲೋಕಲ್‌ ಶೂ ಮೇಕರ್ಸ್‌ ಕೂಡ ಅದ್ಭುತ ವಿನ್ಯಾಸದ ಶೂಗಳನ್ನು ತಯಾರಿಸುವುದಿದೆ. ಶಿವಾಜಿನಗರ, ಕಮರ್ಷಿಯಲ್‌ ಸ್ಟ್ರೀಟ್‌, ಫ್ರೇಜರ್‌ಟೌನ್‌ನಲ್ಲಿ ಹಲವಾರು ಲೋಕಲ್‌ ಶೂ ಮೇಕರ್ಸ್‌ ಇದ್ದಾರೆ. ಇವರ ಬಳಿ ಕಮ್ಮಿ ದರದಲ್ಲಿ ಉತ್ತಮ ಶೂಗಳು ದೊರೆಯುತ್ತವೆ. ಚೈನ್‌ ಇರುವ ಹೈಆ್ಯಂಕಲ್‌ ಶೂ ತುಂಬ ಸ್ಟೈಲಿಶ್‌ ಆಗಿರುತ್ತದೆ. ಆದರೆ ಸಾಕ್ಸ್‌ ಮಾತ್ರ ಉಲನ್‌ ಇರಲಿ. ಕಾಟನ್‌ಗಿಂತ ಚಳಿಗಾಲದಲ್ಲಿ ಉಲನ್‌ ಸಾಕ್ಸ್‌ ಉತ್ತಮ. ಅಡಿಡಾಸ್‌, ಪೊಲೊ, ಐಕೆ, ಫಿಲಾ, ಬಾಟಾ... ಹಲವು ಬಗೆಯ ಬ್ರಾಂಡೆಡ್‌ ಉಲನ್‌ ಸಾಕ್ಸ್‌ಗಳು ಸಿಗುತ್ತವೆ. ಚಳಿಗಾಲಕ್ಕೆ ಒಳ್ಳೆಯ ಆಫರ್‌ಗಳು ಕೂಡ ಇರುತ್ತವೆ.

ಇದನ್ನೂ ಓದಿ: ಚಳಿಗಾಲದ ವ್ಯಾಯಾಮ; ಇರಲಿ ಸಿದ್ಧತೆ

ನೀವು ಬಳಸುವ ಬಣ್ಣಗಳು ನಿಮ್ಮದೇ ವ್ಯಕ್ತಿತ್ವದ ಪ್ರತೀಕ ಕೂಡ. ಚಳಿಗಾಲದಲ್ಲಿ ಆದಷ್ಟು ಗಾಢ ಬಣ್ಣಗಳನ್ನು ಬಳಸಿ. ಇಳಿಸಂಜೆಯ ಹೊಂಬಣ್ಣದ ಸೂರ್ಯ ನಿಮ್ಮ ವಾರ್ಮ್‌ ಕಲರ್‌ ಉಡುಪುಗಳ ಮೇಲೆ ಲಾಸ್ಯವಾಡುವುದನ್ನು ಇತರರು ನೋಡಿ ಆನಂದಿಸಲಿ. ನಿಮ್ಮ ವ್ಯಕ್ತಿತ್ವಕ್ಕೊಂದಷ್ಟು ಹೊಸ ಸ್ಮೈಲ್‌ಗಳು ದಕ್ಕಿದರೆ ಎಂಥ ಬೆಚ್ಚಗಿನ ಭಾವ!

ಎಂಜಾಯ್‌ ಯುವರ್‌ ವಿಂಟರ್‌.

ಪ್ರತಿಕ್ರಿಯಿಸಿ (+)