ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಹದಗೆಡಿಸುವ ಆಹಾರ

ಕಲಬೆರಕೆ – ಇರಲಿ ಎಚ್ಚರ
Last Updated 11 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಆಹಾರ ಕಲಬೆರಕೆ ಸಿಟಿಜನರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ನಾವಿಂದು ಸೇವಿಸುವ ಆಹಾರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಡ್ಡ ಪರಿಣಾಮಗಳನ್ನು ಹೊಂದಿದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಈ ಬಗ್ಗೆ ಒಂದು ವಿಶೇಷ ವರದಿ.

ನಾವಿಂದು ಸೇವಿಸುತ್ತಿರುವ ಆಹಾರದಲ್ಲಿ ರುಚಿ ಇಲ್ಲ, ಆರೋಗ್ಯಕ್ಕೆ ಅಗತ್ಯವಿರುವ ಸತ್ವವೂ ಅದರಲ್ಲಿಲ್ಲ ಎಂಬ ಮಾತು ಬಹುತೇಕ ನಗರವಾಸಿಗಳದ್ದು. ಆಹಾರ ಕಲಬೆರಕೆಯೇ ಇದಕ್ಕೆಲ್ಲಾ ಕಾರಣ. ನಗರದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿ ಬೆಳೆದಿದೆ.

ಸಾವಯವ ಮತ್ತು ಸತ್ವಯುತ ಆಹಾರಕ್ಕೆ ಬೇಡಿಕೆಯಿದ್ದರೂ, ಅದೂ ಕೂಡ ಕಲಬೆರಕೆಯಿಂದ ಹೊರತಾಗಿಲ್ಲ.ನಾವಿಂದು ಸೇವಿಸುವ ಹೆಚ್ಚಿನ ಆಹಾರ ಪದಾರ್ಥಗಳು ಅಡ್ಡ ಪರಿಣಾಮಗಳನ್ನು ಹೊಂದಿವೆ. ದೀರ್ಘಕಾಲದವರೆಗೆ ಇವುಗಳ ಸೇವನೆಯಿಂದ ಕ್ಯಾನ್ಸರ್, ಬಂಜೆತನ, ಮೆದುಳಿಗೆ ಹಾನಿ ಮುಂತಾದ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು ಎನ್ನುತ್ತಾರೆ ತಜ್ಞರು.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‍ಎಸ್‍ಎಸ್‍ಎಐ) 2014-15ರ ವರದಿಯ ಪ್ರಕಾರ, ಆಹಾರದ ಐದನೇ ಒಂದು ಭಾಗ ಕಲಬೆರಕೆಗೆ ಒಳಗಾಗಿರುವುದು ಕಂಡುಬಂದಿದೆ ಎನ್ನುತ್ತಾರೆಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆಯಸರ್ಜಿಕಲ್ ಆಂಕೋಲಾಜಿಸ್ಟ್ಡಾ. ರಾಜಶೇಖರ್ ಸಿ. ಜಕಾ. ‌

ಖಾದ್ಯ ತೈಲ್ಯದ ಜತೆಗೆ ಖನಿಜ ತೈಲ ಸೇರಿಸುವುದರಿಂದ ಕ್ಯಾನ್ಸರ್ ಅಪಾಯ ಇರುತ್ತದೆ.ಸೀಸದ ಕ್ರೋಮೇಟ್‌ಅನ್ನು ಅರಿಶಿಣಪುಡಿ ಮತ್ತು ಮಸಾಲೆ ಪದಾರ್ಥಗಳಿಗೆ ಸೇರಿಸಲಾಗುತ್ತದೆ. ಇದು ರಕ್ತಹೀನತೆ, ಪಾರ್ಶ್ವವಾಯು, ಮೆದುಳಿನ ಹಾನಿ, ಗರ್ಭಪಾತಕ್ಕೆ ಕಾರಣವಾಗಬಹುದು. ನೀರಿಗೆ ಸೀಸ ಸೇರಿಸಿದರೆ ನಿದ್ರಾಹೀನತೆ, ಮಲಬದ್ಧತೆ, ರಕ್ತಹೀನತೆ ಮತ್ತು ಮಾನಸಿಕ ಸಮಸ್ಯೆ ತಲೆದೋರಬಹುದು.ನೀರು ಮತ್ತು ಮದ್ಯಸಾರಕ್ಕೆ ಕೋಬಾಲ್ಟ್ ಸೇರಿಸಿದರೆ ಹೃದಯ ಸಂಬಂಧಿ ಸಮಸ್ಯೆಕಾಣಿಸಿಕೊಳ್ಳಬಹುದು.ಪಾದರಸದಿಂದ ಪಾರ್ಶ್ವವಾಯು ಜತೆಗೆಮೆದುಳಿಗೆ ಹಾನಿ ಉಂಟಾಗಬಹುದು ಎನ್ನುತ್ತಾರೆ ವೈದ್ಯರು.

ನಿತ್ಯ ಬಳಸುವ ವಸ್ತುಗಳಲ್ಲಿ ಮೋಸ

ನಾವು ನಿತ್ಯವೂ ಬಳಸುವ ಹಾಲಿಗೆ ನೀರು ಬೆರೆಸುವುದು ಸಾಮಾನ್ಯ. ಇದರ ಜೊತೆಗೆ ಚಾಕ್ ಪೌಡರ್, ಡಿಟರ್ಜಂಟ್ ಮತ್ತು ಯೂರಿಯಾ ಸೇರಿಸಲಾಗುತ್ತದೆ. ಇಂತಹ ಹಾಲು ಸೇವಿಸುವುದರಿಂದ ತೀವ್ರ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಗೋಧಿಯನ್ನು ಎರ್ಗೋಟ್‍ನೊಂದಿಗೆ ಸಾಮಾನ್ಯವಾಗಿ ಕಲಬೆರಕೆ ಮಾಡಲಾಗುತ್ತದೆ. ಇದು ವಿಷಕಾರಿ ಪದಾರ್ಥಗಳನ್ನು ಹೊಂದಿರುವ ಶಿಲೀಂಧ್ರ. ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದುಬಂದಿದೆ. ಹೊಳೆಯುವ ತರಕಾರಿಗಳು ಯಾವಾಗಲೂ ನಮ್ಮನ್ನು ಆಕರ್ಷಿಸುತ್ತವೆ ಮತ್ತು ಮಾರುಕಟ್ಟೆಯಲ್ಲಿ ಅವುಗಳನ್ನು ತಾಜಾ ಎಂಬಂತೆ ಮಾರಾಟ ಮಾಡಲಾಗುತ್ತದೆ. ರಾಸಾಯನಿಕ ಬಣ್ಣಗಳನ್ನು ಬಳಸಿ, ತರಕಾರಿ ಮತ್ತು ಹಣ್ಣುಗಳಿಗೆ ಹೊಳಪನ್ನು ನೀಡಲಾಗುತ್ತದೆ. ಕಡಿಮೆ ಬೆಲೆಯಲ್ಲಿ ಸಿಗುವ ಮೇಣವನ್ನು ಇದಕ್ಕೆ ಬಳಸಲಾಗುತ್ತದೆ.ಜೇನುತುಪ್ಪಕ್ಕೆ ಹೆಚ್ಚಿನ ಬೆಲೆ ಇರುವುದರಿಂದ ದುಡ್ಡಿನ ಆಸೆಗೆ ಬೀಳುವ ವ್ಯಾಪಾರಿಗಳು, ಮೊಲಾಸಸ್ ಸಕ್ಕರೆಯೊಂದಿಗೆ ಕಲಬೆರಕೆ ಮಾಡುತ್ತಾರೆ.

ನೈಸರ್ಗಿಕ ಮಸಾಲೆ ಪದಾರ್ಥಗಳಿಗೆ ಕೃತಕ ಬಣ್ಣಗಳನ್ನು ಸೇರಿಸಲಾಗುತ್ತದೆ. ಉದಾಹರಣೆಗೆ ಮೆಣಸಿನ ಬೀಜಗಳ ಜತೆ ಪಪ್ಪಾಯಿ ಬೀಜಗಳನ್ನು, ಮೆಣಸಿನ ಪುಡಿಯನ್ನು ಇಟ್ಟಿಗೆ ಪುಡಿಯೊಂದಿಗೆ ಮಿಶ್ರ ಮಾಡಲಾಗುತ್ತದೆ.ಸಿಹಿ ತಿಂಡಿಯನ್ನು ಅಲಂಕರಿಸಲು ಅವುಗಳ ಮೇಲೆ ಬೆಳ್ಳಿಯಂತೆ ಹೊಳೆಯುವ ಹಾಳೆಯ ಅಂಟಿಸಲಾಗುತ್ತದೆ. ಅಲ್ಯುಮಿನಿಯಂ ಹೊಂದಿರುವ ಇದು ಆರೋಗ್ಯಕ್ಕೆ ಹಾನಿಕರ. ಬೇಳೆಕಾಳುಗಳನ್ನು ಸಾಮಾನ್ಯವಾಗಿ ಮೆಟನಿಲ್ ಹಳದಿ ಬಣ್ಣದಿಂದ ಕಲಬೆರಕೆ ಮಾಡಲಾಗುತ್ತದೆ.

ಪರಿಹಾರ ಏನು?

ಖರೀದಿಸುವ ಮೊದಲು ಉತ್ಪನ್ನದ ಲೇಬಲ್‍ ಮತ್ತು ಪದಾರ್ಥಗಳನ್ನು ಪರಿಶೀಲಿಸುವುದು ಮುಖ್ಯ. ಸಾವಯವ ಉತ್ಪನ್ನಗಳನ್ನು ಬಳಸುವುದು ಉತ್ತಮ. ಕೀಟನಾಶಕಯುಕ್ತ ತರಕಾರಿಗಳಿಂದ ದೂರವಿರಲು ಟೆರೆಸ್ ಉದ್ಯಾನ ಆರಂಭಿಸುವುದು ಸೂಕ್ತ. ನೀವು ಸೇವಿಸುವ ಆಹಾರದಲ್ಲಿ ತಾಜಾತನ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಬೆರಕೆ ಪದಾರ್ಥಗಳ ಬಗ್ಗೆ ಎಚ್ಚರವಿರಲಿ. ಇಂತಹ ಪ್ರಜ್ಞಾಪೂರ್ವಕ ಕ್ರಮಗಳಿಂದ ನಾವು ಆಹಾರದ ಕಲಬೆರಕೆ ತುತ್ತಾಗುವುದನ್ನು ತಡೆಯಬಹುದು.

ಕಲಬೆರಕೆ ಪತ್ತೆಗೆ ಸರಳ ಉಪಾಯಗಳು

ಉಪ್ಪು: ಶುದ್ಧ ಉಪ್ಪು ನೀರಿನಲ್ಲಿ ಕರಗುತ್ತದೆ.ನೀರಿನಲ್ಲಿ ಉಪ್ಪು ಕರಗದೇ ಬಿಳಿಯ ಬಣ್ಣ ಉಳಿದುಕೊಂಡರೆ ಅಥವಾ ತಳದಲ್ಲಿ ಪುಡಿಯ ರೂಪದಲ್ಲಿ ಶೇಖರಣೆಯಾದರೆ ಅದು ಕಲಬೆರಕೆಯಾಗಿದೆ ಎಂದು ಅರ್ಥ.

ಹಾಲು: ಹತ್ತು ಎಂ.ಎಲ್.ಹಾಲಿಗೆ ಅಷ್ಟೇ ಪ್ರಮಾಣದ ನೀರು ಸೇರಿಸಿ ಅಲ್ಲಾಡಿಸಿದಾಗ ಹೆಚ್ಚಿನ ನೊರೆ ಬಂದಲ್ಲಿ ಅದರಲ್ಲಿ ಡಿಟರ್ಜಂಟ್ ಬೆರೆಸಿದ್ದಾರೆಂದೇ ಅರ್ಥ.

ತುಪ್ಪ/ಎಣ್ಣೆ: ತುಪ್ಪವನ್ನು ಕರಗಿಸಿ, ಗಾಜಿನ ಪಾತ್ರೆಯಲ್ಲಿ ಹಾಕಿ ಫ್ರಿಜ್‌ನಲ್ಲಿಡಬೇಕು. ತುಪ್ಪದಲ್ಲಿ ವಿವಿಧ ಪದರಗಳು ಕಾಣಿಸಿಕೊಂಡಲ್ಲಿ ಅದರಲ್ಲಿ ಬೇರೆ ರೀತಿಯ ತೈಲ ಬೆರೆತಿವೆ ಎಂದು ತಿಳಿಯಬೇಕು. ತೆಂಗಿನೆಣ್ಣೆ‌ ಹಾಗೂ ಅಡುಗೆ ಎಣ್ಣೆಗೂ ಇದೇ ಮಾದರಿ ಅನುಸರಿಸಬಹುದು.

ಆಹಾರ ಧಾನ್ಯ: ಆಹಾರ ಧಾನ್ಯಗಳನ್ನು ನೀರಿನಲ್ಲಿ ತೊಳೆದಾಗ ಅವು ಶುದ್ಧವಾಗಿದ್ದಲ್ಲಿ ಯಾವುದೇ ಬಣ್ಣ ಬರುವುದಿಲ್ಲ. ಕೃತಕ ಬಣ್ಣ ಲೇಪಿಸಿದ್ದರೆ ನೀರು ಬಣ್ಣದಿಂದ ಕೂಡಿರುತ್ತದೆ.

ಕಾಳುಮೆಣಸು: ನೀರಿರುವ ಲೋಟಕ್ಕೆ ಕಾಳುಮೆಣಸು ಹಾಕಿದಾಗ, ಶುದ್ಧ ಕಾಳುಮೆಣಸು ಮುಳುಗುತ್ತವೆ. ಪಪ್ಪಾಯ ಬೀಜಗಳು ತೇಲುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT