ಬುಧವಾರ, ಜನವರಿ 22, 2020
20 °C

‘ಹೇರ್‌ ಕಲರಿಂಗ್ ಸಿಟಿಜನರ ಟ್ರೆಂಡ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಳಿಗಾಲದ ಇಳಿಸಂಜೆಯಲ್ಲಿ ಪಂಚತಾರಾ ಹೋಟೆಲ್‌ನ ಎರಡನೇ ಮಹಡಿಯಲ್ಲಿ ಅಂದದ ಲಲನೆಯರು ಅತ್ತಿಂದಿತ್ತ ಹೆಜ್ಜೆ ಹಾಕುತ್ತಿದ್ದರು. ವಿವಿಧ ನಮೂನೆಯ ಕೇಶ ವಿನ್ಯಾಸ ಅವರ ಅಂದವನ್ನು ಹೆಚ್ಚಿಸಿತ್ತು. ಕರ್ಲಿ ಹೇರ್, ಸಿಲ್ಕಿ ಹೇರ್, ಸಾಫ್ಟ್‌ ಹೇರ್ ಹೀಗೆ ವಿವಿಧ ರೀತಿಯ ಕೂದಲನ್ನು ಹೊಂದಿರುವ ಹೆಂಗೆಳೆಯರು ತಮ್ಮ ಕೇಶ ಪ್ರದರ್ಶನ ಮಾಡುತ್ತಾ ಫೋಟೊಗೆ ಪೋಸ್‌ ನೀಡುತ್ತಿದ್ದರು.  

ಇದು ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ವೈಎಲ್‌ಜಿ ಸಲೂನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ. ತನ್ನ ಹತ್ತನೇ ವರ್ಷದ ಸಂಭ್ರಮಾಚರಣೆಗಾಗಿ ಲೋರೆಲ್ ಪ್ರೊಫೆಶನಲ್ ಸಹಯೋಗದೊಂದಿಗೆ ವೈಎಲ್‌ಜಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. 

ಕಾರ್ಯಕ್ರಮದಲ್ಲಿ ವೈಎಲ್‌ಜಿ ಗ್ರಾಹಕರು, ಲೋರೆಲ್ ಪ್ರೊಫೆಶನಲ್‌ ಇಂಡಿಯಾದ ಜನರಲ್ ಮ್ಯಾನೇಜರ್‌ ಬಿನೈಫರ್ ಪರ್‌ಡಿವಾಲಾ, ಆರೋಮಾ ಮ್ಯಾಜಿಕ್‌ನ ಸಂಸ್ಥಾಪಕಿ ಡಾ. ಬ್ಲಾಸಮ್‌ ಕೊಚ್ಚರ್ ಹಾಗೂ ವೈಎಲ್‌ಜಿ ಸಲೂನ್‌ನ ಸಹ ಸಂಸ್ಥಾಪಕಿ ವೈಜಯಂತಿ ಬಾಲಚಂದ್ರ ಭಾಗವಹಿಸಿದ್ದರು. 

‘ಮೆಟ್ರೊ’ದೊಂದಿಗೆ ಮಾತನಾಡಿದ ವೈಜಯಂತಿ ಬಾಲಚಂದ್ರ ಕೇಶ ವಿನ್ಯಾಸ, ರಕ್ಷಣೆ ಹಾಗೂ ಚರ್ಮದ ಆರೋಗ್ಯದ ಕುರಿತು ಕೆಲವು ಸಲಹೆ ನೀಡಿದರು.  

‘ಕೇಶ ವಿನ್ಯಾಸ ಅಥವಾ ಹೇರ್ ಡ್ರೆಸ್ಸಿಂಗ್ ಎಂಬುದು ನಮ್ಮ ನೋಟವನ್ನು ತಕ್ಷಣಕ್ಕೆ ಬದಲಿಸುವ ಒಂದು ವಿಧಾನ. ಕೇವಲ ಕೇಶ ವಿನ್ಯಾಸದಿಂದ ನಮ್ಮ ವ್ಯಕ್ತಿತ್ವ ಹಾಗೂ ನೋಟವನ್ನು ಬದಲಿಸಬಹುದು’ ಎನ್ನುವುದು ಅವರ ಅಭಿಪ್ರಾಯ. ನಗರದ ಕೇಶವಿನ್ಯಾಸ ಪ್ರಿಯರಿಗೆಂದೇ ಅವರು ಕೆಲವು ಟಿಪ್ಸ್‌ ನೀಡಿದ್ದಾರೆ.

ಸದ್ಯದ ಕೇಶ ವಿನ್ಯಾಸ ಟ್ರೆಂಡ್‌

ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಅಥವಾ ಕಲರಿಂಗ್ ಮಾಡುವುದು ಇಂದಿನ ಲೇಟೆಸ್ಟ್ ಟ್ರೆಂಡ್‌. ಭಾರತೀಯರು ಕಂದು ಬಣ್ಣವನ್ನು ಹೆಚ್ಚು ಮೆಚ್ಚುತ್ತಾರೆ. ಆ ಕಾರಣಕ್ಕೆ ವೈಎಲ್‌ಜಿ ‘ಇಂಡಿಯನ್ ಬ್ರೌನ್‌’ ಬಣ್ಣವನ್ನು ಪರಿಚಯಿಸಿದೆ. ಹೆಂಗಳೆಯರು ಕಂದು ಬಣ್ಣದಲ್ಲೇ ಬೇರೆ ಬೇರೆ ಛಾಯೆ ಇರುವ ಬಣ್ಣವನ್ನು ಕೂದಲಿಗೆ ಹಚ್ಚಲು ಇಷ್ಟಪಡುತ್ತಾರೆ.

ಕೂದಲಿಗೆ ಬಣ್ಣ ಹಾನಿಯಲ್ಲ

ಕೂದಲಿಗೆ ಹೊಸ ಟ್ರೆಂಡಿ ನೋಟ ನೀಡುವ ಕಲರಿಂಗ್ ಕೂದಲಿಗೆ ಹಾನಿಯಲ್ಲ. ಆದರೆ ಕಲರ್‌ ಮಾಡುವ ಮುನ್ನ ಅದರ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಮುಖ್ಯ. ಜೊತೆಗೆ ನಾವು ಬಣ್ಣ ಹಚ್ಚಿಕೊಂಡ ಮೇಲೆ ಕೂದಲನ್ನು ಹೇಗೆ ಪೋಷಿಸುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ.

ಚಳಿಗಾಲದಲ್ಲಿ ಚರ್ಮ ಹಾಗೂ ಕೂದಲ ರಕ್ಷಣೆ

ಚಳಿಗಾಲದಲ್ಲಿ ಕೂದಲು ಹಾಗೂ ಚರ್ಮ ಎರಡೂ ಒಣಗುತ್ತದೆ. ಆ ಕಾರಣಕ್ಕೆ ನಾವು ಚರ್ಮಕ್ಕೆ ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚುತ್ತೇವೆ. ಚಳಿಗಾಲದಲ್ಲಿ ಮಾಯಿಶ್ಚರೈಸಿಂಗ್ ಕ್ರೀಮ್ ಜೊತೆಗೆ ಸನ್ ಸ್ಕ್ರೀನ್‌ ಲೋಷನ್ ಹಚ್ಚಿಕೊಳ್ಳುವುದು ಕೂಡ ತುಂಬಾ ಮುಖ್ಯ. ಇದರಿಂದ ಚರ್ಮವನ್ನು ತೇವಾಂಶದಿಂದ ಇರಿಸುವ ಜೊತೆಗೆ ಬಿಸಿಲಿನಿಂದಲೂ ಕಾಪಾಡಿಕೊಳ್ಳಬಹುದು.
ಕೂದಲಿನ ವಿಷಯಕ್ಕೆ ಬರುವುದಾದರೆ ತಿಂಗಳಿಗೆ ಒಂದು ಬಾರಿ ಹೇರ್ ಸ್ಪಾ ಮಾಡಿಸಬೇಕು. ಇದರಿಂದ ನೆತ್ತಿಯ ಭಾಗ ತೇವಾಂಶದಿಂದ ಕೂಡಿರುತ್ತದೆ. ಜೊತೆಗೆ ವಾರಕ್ಕೊಮ್ಮೆ ಎಣ್ಣೆ ಮಸಾಜ್ ಮಾಡಿಕೊಳ್ಳುವುದು ಅಷ್ಟೇ ಮುಖ್ಯ.

ಕೂದಲ ಉದುರುವಿಕೆ, ತಲೆಹೊಟ್ಟು

ಕೂದಲ ಉದುರದಂತೆ ತಡೆಯುವ ಪ್ರಮುಖ ದಾರಿ ಸರಿಯಾದ ಕ್ರಮದಲ್ಲಿ ಡಯೆಟ್ ಅನ್ನು ಪಾಲಿಸುವುದು. ವಿಟಮಿನ್ ಹಾಗೂ ಪ್ರೋಟಿನ್‌ಯುಕ್ತ ಆಹಾರ ಸೇವಿಸುವುದು ಕೂದಲಿಗೆ ತುಂಬಾ ಮುಖ್ಯ.

ಬೆಂಗಳೂರಿನಲ್ಲಿ ಕೂದಲು ಹಾಗೂ ಚರ್ಮದ ರಕ್ಷಣೆ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಸಾಮಾನ್ಯ. ಆ ಕಾರಣಕ್ಕೆ ಆದಷ್ಟು ಕುಡಿಯುವ ನೀರನ್ನು ಬಳಸಿ ಸ್ನಾನ ಮಾಡುವುದು ಉತ್ತಮ. ಇದು ಚರ್ಮ ಹಾಗೂ ಕೂದಲು ಎರಡಕ್ಕೂ ಒಳ್ಳೆಯದು. ಸಂಪೂರ್ಣ ಸ್ನಾನಕ್ಕೆ ಕುಡಿಯುವ ನೀರನ್ನು ಬಳಸಲು ಸಾಧ್ಯವಾಗದಿದ್ದರೆ ಸ್ನಾನದ ಕೊನೆಗೆ ಕುಡಿಯುವ ನೀರನ್ನು ಬಳಸಿ ಚರ್ಮ ಹಾಗೂ ಕೂದಲನ್ನು ತೊಳೆದುಕೊಳ್ಳಬೇಕು. ಆಗ ದೇಹ ಹಾಗೂ ಕೂದಲಿನಲ್ಲಿ ಉಪ್ಪಿನಂಶ ಇರುವುದಿಲ್ಲ. ಹೀಗೆ ಚರ್ಮ ಹಾಗೂ ಕೂದಲನ್ನು ಕಾಪಾಡಿಕೊಳ್ಳಬಹುದು.

ಕಾರ್ಯಕ್ರಮದ ಕೊನೆಯಲ್ಲಿ ವೈಎಲ್‌ಜಿ ಹೊಸದಾಗಿ ಬಿಡುಗಡೆ ಮಾಡಿರುವ ‘ಇಂಡಿಯನ್ ಬ್ರೌನ್‌’ ಕೇಶ ವಿನ್ಯಾಸದ ವಿವಿಧ ಶೈಲಿಗಳನ್ನು ಮಾಡೆಲ್‌ಗಳು ರ‍್ಯಾಂಪ್‌ ಮೇಲೆ ಪ್ರದರ್ಶಿಸಿದರು.

ಪ್ರತಿಕ್ರಿಯಿಸಿ (+)