ಶುಕ್ರವಾರ, ಜನವರಿ 17, 2020
22 °C

ಮಾನವ ಹಕ್ಕುಗಳ ದಮನ ಯಾರ ಅಧಿಕಾರವೂ ಅಲ್ಲ

ಸುಬ್ರಮಣ್ಯ ಎಚ್.ಎಂ Updated:

ಅಕ್ಷರ ಗಾತ್ರ : | |

ಸದ್ಯ ದೇಶದಲ್ಲಿ ಮಾನವ ಹಕ್ಕುಗಳ ದಮನ ಬಹು ಚರ್ಚಿತ ವಿಷಯ. ಅತ್ಯಾಚಾರ, ಜಾತಿ ದೌರ್ಜನ್ಯ, ಅಧಿಕಾರಿಗಳನ್ನು ಜೀವಂತ ಸುಡುವ ಅವಮಾನೀಯ ಪ್ರಕರಣಗಳಿಗೆ ಕೊನೆಯೇ ಇಲ್ಲವಾಗಿದೆ. ಬೆಂಗಳೂರಿನಲ್ಲೂ ಪ್ರತಿದಿನ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಕಾನೂನು ಕುಣಿಕೆಯಿಂದ ತಪ್ಪಿತಸ್ಥರು ಸುಲಭವಾಗಿ ಪಾರಾಗುತ್ತಿದ್ದಾರೆ. ಇದು ವ್ಯವಸ್ಥೆಯ ಲೋಪ ಎಂಬ ಆರೋಪವೂ ಕೇಳಿ ಬಂದಿದೆ.

ಘಟನೆ 1: ನಗರದಲ್ಲಿ ಕಳೆದ ಜುಲೈನಲ್ಲಿ ತಂದೆ ಮತ್ತು ಮಗನನ್ನು ಪೊಲೀಸರು ನಿರ್ದಯವಾಗಿ ಥಳಿಸಿದ್ದರು. ಹೊಯ್ಸಳ ವಾಹನ ಗಸ್ತುಪಡೆಯ ಪೊಲೀಸರು, ದ್ವಿಚಕ್ರವಾಹನದ ದಾಖಲೆ ನೀಡಲಿಲ್ಲ ಎಂಬ ಕಾರಣಕ್ಕೆ ಅವರಿಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ) ₹50ಸಾವಿರ ಪರಿಹಾರ ನೀಡಿತ್ತು. 

ಘಟನೆ 2: ನೆಲಮಂಗಲ ಸಮೀಪದ ಹಳ್ಳಿಯೊಂದರಲ್ಲಿ ಈಚೆಗೆ ದಲಿತರ ಮೇಲೆ ಹಲ್ಲೆ ನಡೆಯಿತು. ಆ ಊರಿನಲ್ಲಿ ಸತ್ತ ‍ಪ್ರಾಣಿಗಳನ್ನು ಸಾಗಿಸುವುದಿಲ್ಲ. ಯಾರಾದರೂ ಸತ್ತಾಗ ಗುಂಡಿ ತೋಡುವುದಿಲ್ಲ ಎಂದು ಸ್ವಾಭಿಮಾನದ ಮಾತುಗಳನ್ನಾಡಿದ ದಲಿತರ ವಿರುದ್ಧ ಸವರ್ಣೀಯರು ದೌರ್ಜನ್ಯ ನಡೆಸಿದ್ದರು. 

ಘಟನೆ 3: ನಗರದಲ್ಲಿ ಲೈಂಗಿಕ ವೃತ್ತಿ ನಡೆಸುವ ಕೆಲ ಮಹಿಳೆಯರನ್ನು ಪೊಲೀಸರು ಘೋರ ಹಿಂಸೆಗೆ ಒಳಪಡಿಸಿದ್ದರು. ಹೃದಯ ವಿದ್ರಾವಕ ಘಟನೆ ಆ ಮಹಿಳೆಯರ ಘನತೆಗೆ ಘಾಸಿ ಮಾಡಿತ್ತು. ಇಂತಹ ಪ್ರಕರಣಗಳು ಆಗಾಗ ನಡೆದರೂ ಅಸಹಾಯಕರ ಸೊಲ್ಲು ಅಡಗಿಸುವ ಪ್ರಯತ್ನ ನಿರಂತರ ಸಾಗಿದೆ.

ಎಲ್ಲ ಬಿಡಿ ಘಟನೆಗಳಿಗೂ ಮಾನವ ಹಕ್ಕುಗಳ ಉಲ್ಲಂಘನೆಗೂ ಸಂಬಂಧವಿದೆ. ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಮತ್ತು ಇತರ ರಾಜ್ಯಗಳಿಂದ ವಲಸೆ ಬಂದಿರುವ ಎಷ್ಟೋ ಮಂದಿ ಖಾಸಗಿ ಜಮೀನಿನಲ್ಲಿ ಟೆಂಟ್‌ ಹಾಕಿಕೊಂಡು ವಾಸವಾಗಿದ್ದಾರೆ. ಕನಿಷ್ಠ ಮೂಲ ಸೌಲಭ್ಯವಿಲ್ಲದೆ ಪರಿತಪಿಸುತ್ತಿದ್ದಾರೆ. ಸಂವಿಧಾನದ 21ನೇ ಅನುಚ್ಛೇದದಡಿ ಉತ್ತಮವಾದ ಮನೆ, ವಾಸಿಸುವ ವಾತಾವರಣ ಇರಬೇಕು. ಆದರೆ, 8ರಿಂದ 10ಲಕ್ಷ ಜನ ಸ್ಲಂಗಳಲ್ಲಿ ವಾಸವಾಗಿದ್ದಾರೆ. 1ಲಕ್ಷ ಮಂದಿ ಫುಟ್‌ಪಾತ್‌ ಮೇಲೆ ಮಲಗುವ ಸ್ಥಿತಿ ಇದೆ. ಇವರೆಲ್ಲ ನಗರದ ನಿರಾಶ್ರಿತರು. ಇದು ಕೂಡ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಬೊಟ್ಟು ಮಾಡುತ್ತಾರೆ ಸಾಮಾಜಿಕ ಹೋರಾಟಗಾರರು. 

ನಗರದಲ್ಲಿ ಇಂದಿಗೂ ಅಸ್ಪೃಶ್ಯತೆ ಇದೆ. ಪೌರಕಾರ್ಮಿಕರು ಹತ್ತಿರ ಬಂದಾಗ ದೂರ ನಿಲ್ಲುವ ಜನರಿದ್ದಾರೆ. ಕುಡಿಯಲು ನೀರು ಕೇಳಿದರೆ ಪ್ಲಾಸ್ಟಿಕ್ ಮಗ್‌ನಲ್ಲಿ ಕೊಡುವ ಮಂದಿ ಇದ್ದಾರೆ. ಇದು ಕೂಡ ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವೇ ? ಸಂವಿಧಾನದಲ್ಲಿ ಆಹಾರದ ಹಕ್ಕು ಇದೆ. ಆದರೆ, ನಗರದಲ್ಲಿ ಅಪೌಷ್ಟಿಕತೆಯಿಂದ ಎಷ್ಟೋ ಮಕ್ಕಳು ನರಳುತ್ತಿದ್ದಾರೆ. ಕೊಳೆಗೇರಿಗಳಿಗೆ ಹೋದಾಗ ಇದರ ವಿರಾಟ್‌ ದರ್ಶನವಾಗಲಿದೆ ಎನ್ನುತ್ತಾರೆ ಪರ್ಯಾಯ ಕಾನೂನು ವೇದಿಕೆ ಸದಸ್ಯ ವಿನಯ್‌ ಶ್ರೀನಿವಾಸ.

ಸಂವಿಧಾನದ ಪ್ರಕಾರ ಕನಿಷ್ಠ ವೇತನ ಎಲ್ಲರ ಹಕ್ಕು. ನಗರ ಪ್ರದೇಶದ ಸಾವಿರಾರು ಭದ್ರತಾ ಸಿಬ್ಬಂದಿ, ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಗುತ್ತಿಗೆ ನೌಕರರಿಗೆ ಸರಿಯಾದ ವೇತನ ಸಿಗುತ್ತಿಲ್ಲ. ಗಾರ್ಮೆಂಟ್ಸ್‌ ಕಾರ್ಮಿಕರ ಮೇಲೆ ನಿತ್ಯವೂ ಕಿರುಕುಳ ನಡೆಯುತ್ತಿದೆ. ಮಹಿಳೆಯರು ಭದ್ರತೆ, ಘನತೆಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವೂ ಇದೆ.

ನಗರದಲ್ಲಿ ಬಾಂಗ್ಲಾ ದೇಶದ ವಲಸಿಗರನ್ನು ಪೊಲೀಸರು ಬಂಧಿಸುವ ನೆಪದಲ್ಲಿ ಎಷ್ಟೋ ಮಂದಿ ಉತ್ತರ ಭಾರತದ ಕಟ್ಟಡ ಕಾರ್ಮಿಕರಿಗೂ ಬೆದರಿಕೆವೊಡ್ಡಿದ್ದಾರೆ. ಶ್ರೀಮಂತರ ಬಡಾವಣೆಗಳಲ್ಲಿ ಬೀದಿ ವ್ಯಾಪಾರಿಗಳಿಗೆ ತೊಂದರೆ ಆಗುತ್ತಿದೆ. ಲೈಂಗಿಕ ಅಲ್ಪಸಂಖ್ಯಾತರು ಸಮಾಜದ ತಾರತಮ್ಯಕ್ಕೆ ಒಳಗಾಗಿದ್ದಾರೆ. ಜೈಲಿನಲ್ಲಿ ಕೈದಿಗಳಿಗೆ ಉತ್ತಮ ಆರೋಗ್ಯ ಸಿಗುತ್ತಿಲ್ಲ. ಎಷ್ಟೋ ಪ್ರಕರಣಗಳು ಬೆಳಕಿಗೆ ಬಾರದೆ ಅಮಾಯಕರ ಬದುಕು ಕತ್ತಲಿನಲ್ಲೇ ಕಮರಿ ಹೋಗುತ್ತಿದೆ ಎನ್ನುತ್ತಾರೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ತಳ ಸಮುದಾಯಗಳ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಆರ್.ವಿ ಚಂದ್ರಶೇಖರ್.

ಇದನ್ನೂ ಓದಿ: ಮಾನವ ಹಕ್ಕುಗಳ ರಕ್ಷಣೆಗೆ ಬದ್ಧರಾಗಿ: ಜಿಲ್ಲಾ ನ್ಯಾಯಾಧೀಶ ಅನಿಲ್ ಕಟ್ಟಿ

ರಾಜ್ಯದಲ್ಲಿ ಮಹಿಳಾ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡದ ಆಯೋಗಗಳಿಗೆ ಅಧ್ಯಕ್ಷರೇ ಇಲ್ಲ. ಇಲ್ಲಿ ದಾಖಲಾಗುವ ದೂರುಗಳನ್ನು ಕೇಳುವವರೇ ಇಲ್ಲ. ನಗರದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾರು ಕೂಡ ಚಕಾರ ಎತ್ತುತ್ತಿಲ್ಲ. ಮಾನವ ಹಕ್ಕುಗಳ ಅರಿವು ಇಲ್ಲದಿರುವುದೇ ಸಮಸ್ಯೆಗಳ ಉಲ್ಬಣಕ್ಕೆ ಕಾರಣ ಎಂದು ವಿಶ್ಲೇಷಿಸುತ್ತಾರೆ ಸಾಮಾಜಿಕ ಹೋರಾಟಗಾರ ಹಾಗೂ ಕಾನೂನು ತಜ್ಞ ಡಾ.ಸಿ.ಎಸ್‌ ದ್ವಾರಕನಾಥ್‌.


ಕಾನೂನು ತಜ್ಞ ದ್ವಾರಕಾನಾಥ್

ಡಿ.10 ಮಾನವ ಹಕ್ಕುಗಳ ದಿನಾಚರಣೆ

ಪ್ರಪಂಚದ ಎಲ್ಲ ನಾಗರಿಕರಿಗೆ ಮಾನವ ಹಕ್ಕು ಖಾತ್ರಿಪಡಿಸುವ ಹೊಣೆ ವಿಶ್ವಸಂಸ್ಥೆಯದು. 1948 ಡಿಸೆಂಬರ್ 10 ರಂದು ವಿಶ್ವಸಂಸ್ಥೆ ಮಾನವ ಹಕ್ಕುಗಳಿಗೆ ಮನ್ನಣೆ ನೀಡಿತು. ಇದನ್ನು ಎಲ್ಲ ಸದಸ್ಯ ದೇಶಗಳಿಗೆ ಕಡ್ಡಾಯಗೊಳಿಸಿತು. ಈ ಹಕ್ಕುಗಳ ಬಗ್ಗೆ ಸದಸ್ಯ ರಾಷ್ಟ್ರಗಳಲ್ಲಿ ವಿದ್ಯಾರ್ಥಿ ಸಮುದಾಯ, ಯುವಜನರಿಗೆ ತಿಳಿವಳಿಕೆ ನೀಡಬೇಕೆಂದು ನಿಯಮ ರೂಪಿಸಿತು.

ಮೂಲಸೌಲಭ್ಯ, ನ್ಯಾಯ, ಶಾಂತಿ ಪಡೆಯಲು ಮನುಷ್ಯರು ಹುಟ್ಟಿದಾಗಿನಿಂದಲೇ ಹಕ್ಕು ಪಡೆದಿರುತ್ತಾರೆ. ಈ ಹಕ್ಕುಗಳನ್ನು ಹೊಸಕಿ ಹಾಕುವ ಅಧಿಕಾರ ಪ್ರಪಂಚದ ಯಾವ ಶಕ್ತಿಗೂ ಇಲ್ಲ ಎಂದು ವಿಶ್ವಸಂಸ್ಥೆ ಸ್ಪಷ್ಟ ನುಡಿಗಳಲ್ಲಿ ಘೋಷಣೆ ಮಾಡಿದೆ.

ಕೆಲವು ಮಹತ್ವದ ಮಾನವ ಹಕ್ಕುಗಳ ಸ್ಥಿತಿಗತಿ

ಎಲ್‌ಜಿಬಿಟಿ ಹಕ್ಕುಗಳು: ಬ್ರಿಟಿಷರು ಜಾರಿಗೆ ತಂದಿದ್ದ ಭಾರತೀಯ ದಂಡ ಸಂಹಿತೆ (IPC) ಅನ್ವಯ ಸಲಿಂಗ‌ಕಾಮ ಅಪರಾಧ ಎಂದು ಪರಿಗಣಿಸಲಾಗಿತ್ತು. ದೆಹಲಿ ಹೈಕೋರ್ಟ್‌ ‘ಅದು ಶಿಕ್ಷಾರ್ಹ ಅಪರಾಧ ಅಲ್ಲ’ವೆಂದು ಪರಿಗಣಿಸಿ 2ನೇ ಜೂನ್, 2009 ರಂದು ಆದೇಶ ಹೊರಡಿಸಿತು.

ಲೈಂಗಿಕ ಕಾರ್ಯಕರ್ತೆಯರ ಶೋಷಣೆ: ದೇಶದಲ್ಲಿ ಮನುಷ್ಯರ ಲೈಂಗಿಕ ವ್ಯಾಪಾರ ಕಾನೂನು ಬಾಹಿರ. ಆದರೂ, ನೇಪಾಳ ಮತ್ತು ಬಾಂಗ್ಲಾದೇಶದಿಂದ ಲೈಂಗಿಕ ಕಾರ್ಯಕರ್ತೆಯರನ್ನು ಭಾರತಕ್ಕೆ ಕರೆತಂದು ಶೋಷಣೆಗೆ ಒಳಪಡಿಸಲಾಗುತ್ತಿದೆ ಎನ್ನುವ ಆಪಾದನೆಗಳಿವೆ.

ಮಾನವ ಹಕ್ಕುಗಳ ಕಾವಲುಪಡೆ ವರದಿ: ‘ದೇಶದ ದಲಿತರ (ಪರಿಶಿಷ್ಟ ಜಾತಿ ಮತ್ತು ಆದಿವಾಸಿಗಳ) ತಾರತಮ್ಯ, ಬಹಿಷ್ಕಾರ, ಕೋಮು ಹಿಂಸಾಚಾರ ತಡೆಗೆ ಕೇಂದ್ರ ಸರ್ಕಾರ ಕಾಯ್ದೆ ರೂಪಿಸಿದೆ. ಸೂಕ್ತ ಪಾಲನೆಯಲ್ಲಿ ಸ್ಥಳೀಯ ಆಡಳಿತಗಳ ವಿಫಲತೆ ಎದ್ದು ಕಾಣುತ್ತಿದೆ’.

‘ಸರ್ಕಾರ ಜವಾಬ್ದಾರಿಯಿಂದ, ವಿವೇಚನೆಯಿಂದ ನ್ಯಾಯಾಂಗದ ಸದ್ಬಳಕೆ ಪ್ರಯೋಗ ಮಾಡಬೇಕು’ ಎಂದು ಅಮ್ನೆಸ್ಟಿ ಅಂತರರಾಷ್ಟ್ರೀಯ ವೇದಿಕೆ ಹೇಳಿದ ಮಾತು ಇಲ್ಲಿ ಸ್ಮರಣೀಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು