ಬುಧವಾರ, ನವೆಂಬರ್ 13, 2019
23 °C

ಮಲೇಷ್ಯಾ ಪರ್ವತ ಏರಿದ ಸಿಲಿಕಾನ್‌ ಸಿಟಿ ಮಕ್ಕಳು

Published:
Updated:
Prajavani

ಮಲೇಷ್ಯಾಕ್ಕೆ ಈಚೆಗೆ ಪರ್ವತಾರೋಹಣ ಸಾಹಸಯಾತ್ರೆ ಕೈಗೊಂಡಿದ್ದ ನಗರದ ಇಂಡಸ್‌ ಇಂಟರ್‌ ನ್ಯಾಷನಲ್‌ ಶಾಲೆಯ ವಿದ್ಯಾರ್ಥಿಗಳ ತಂಡ ಅಲ್ಲಿಯ ಅತಿ ಎತ್ತರದ ಪರ್ವತ ಮೌಂಟ್‌ ಕಿನಬಲು ತುದಿ ತಲುಪಿ ಬಂದಿದೆ. ಪೋಷಕರು ಮತ್ತು ತರಬೇತುದಾರರ ಜತೆ ಸಾಹಸ ಯಾತ್ರೆ ಕೈಗೊಂಡಿದ್ದ ಶಾಲೆಯ 7ರಿಂದ 10ನೇ ತರಗತಿಯ 14 ಪರ್ವತಾರೋಹಿ ವಿದ್ಯಾರ್ಥಿಗಳ ತಂಡ ಮೌಂಟ್‌ ಕಿನಬಲು ತುದಿಯಲ್ಲಿ ತ್ರಿವರ್ಣ ಧ್ವಜ ಹಾರಾಡಿಸಿ ಸಂಭ್ರಮಿಸಿದೆ.

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ರೂಪಿಸಲಾದ ‘ಪೀಕ್‌ ಟು ಲೀಡ್‌’ ಕಾರ್ಯಕ್ರಮದ ಅಡಿ ಈ ಸಾಹಸಯಾತ್ರೆ ಕೈಗೊಳ್ಳಲಾಗಿತ್ತು. ಪ್ರತಿ ಖಂಡದ ಏಳು ಗಿರಿಶೃಂಗ ಹಾಗೂ 8000 ಮೀಟರ್‌ಗಿಂತ ಎತ್ತರದ ಹದಿನಾಲ್ಕು ಪರ್ವತ ತುದಿಗಳನ್ನು ಏರುವ ಗುರಿಯನ್ನು ಕಾರ್ಯಕ್ರಮ ಹೊಂದಿದೆ. ಯಾತ್ರೆಗೂ ಮುನ್ನ ವಿದ್ಯಾರ್ಥಿಗಳಿಗೆ ತಿಂಗಳ ಕಾಲ ಪರ್ವತಾರೋಹಣಕ್ಕೆ ಅಗತ್ಯವಾದ ದೈಹಿಕ ಮತ್ತು ಮಾನಸಿಕ ಕಸರತ್ತಿನ ಕಠಿಣ ತರಬೇತಿ ನೀಡಿ ಸಜ್ಜುಗೊಳಿಸಲಾಗಿತ್ತು. ಕೋಟ ಕಿನಬಲು ನಗರಿಂದ ಆರಂಭವಾದ ಯಾತ್ರೆ ತಿಂಪೋಹನ್‌ ಗೇಟ್‌, ಪನಲಬನ್‌ ಮುಂತಾದ ಸ್ಥಳಗಳ ಮೂಲಕ ಸಾಗಿ ಕೊನೆಗೆ ಮೌಂಟ್‌ ಕಿನಬಲು ಪರ್ವತದ ತುದಿ ತಲುಪಿತು. 

ಪರ್ವತ ತುದಿ ತಲುಪಿದಾಗ ಗೆದ್ದ ಭಾವನೆ

ಪರ್ವತಗಳ ತುದಿ ತಲುಪಿದಾಗ ಗೆದ್ದ ಭಾವನೆ ಮೂಡುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ನೈಜ ಶಕ್ತಿ ಅರಿವಾಗಿದೆ. ಸವಾಲು ಎದುರಿಸುವ ಸಾಮರ್ಥ್ಯ ಮೂಡಿದೆ ಎನ್ನುತ್ತಾರೆ ಶಾಲೆಯ ನಿರ್ದೇಶಕ ಕರ್ನಲ್‌ ಸತ್ಯರಾವ್‌.

ಪರ್ವತಾರೋಹಣ ಅಂತರಂಗದ ಪಯಣ. ಇಂತಹ ಸಾಹಸಮಯ ಪ್ರಯತ್ನಗಳಲ್ಲಿ ತೊಡಗುವ ಮೂಲಕ ವಿದ್ಯಾರ್ಥಿಗಳು ಮಾನಸಿಕ ಸಹಿಷ್ಣುತೆ, ದೈಹಿಕ ಸ್ಥಿತಿ, ಭಾವನೆಗಳ ಸ್ಥಿರತೆ, ಸ್ಥಿತಿಸ್ಥಾಪಕ ಗುಣಗಳನ್ನು ಕಲಿಸುತ್ತದೆ. ಜೀವನದಲ್ಲಿ ಎದುರಾಗುವ ನಾನಾ ಸ್ವರೂಪದ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿ ನಿಂತು ನಿಭಾಯಿಸುವ ಕಲೆಯನ್ನು ಕಲಿಸುತ್ತದೆ ಎನ್ನುತ್ತಾರೆ ತೊಮರ್‌ ನಾಯಕತ್ವ ತರಬೇತುದಾರ ಕ್ಯಾಪ್ಟನ್‌ ಮೋಹಿತ್‌.

ಇದೊಂದು ವಿಶಿಷ್ಟ ಅನುಭವ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಾಂತರಕ್ಕೆ ನಾಂದಿ ಹಾಡಿದೆ. ಮಕ್ಕಳಿಗೆ ಅವರ ನೈಜ ಶಕ್ತಿ, ಸಾಮರ್ಥ್ಯಗಳ ಅರಿವು ಮೂಡಿಸುವ ಜತೆಗೆ ಜೀವನದಲ್ಲಿ ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂಬುವುದು ಮನವರಿಕೆಯಾಯಿತು ಪಾಲಕ ಎಟಿಯನ್‌ ವಿನ್ಸೆಂಟ್‌ ಜಾಕ್ವಿಸ್‌ ಹ್ಯೂರೆಟ್‌.

ಪರ್ವತಾರೋಹಣ ನಮ್ಮನ್ನು ನಾವು ಹೊಸತಾಗಿ ಕಂಡುಕೊಳ್ಳಲು ನೆರವಾಯಿತು. ಮೌಂಟ್ ಕಿನಬಲು ಹತ್ತಿದ ಅಭೂತಪೂರ್ವ ಅನುಭವದ ನಂತರ ನನ್ನನ್ನು ನಾನು ಅವಲೋಕನ ಮಾಡಿಕೊಂಡೆ. ಪರಿಸರದ ಮಡಿಲಿನಲ್ಲಿ ನಿಜವಾದ ಪ್ರತ್ಯಕ್ಷ್ಯ ಕಲಿಕೆಯ ಅನುಭವ ದೊರೆಯಿತು. ಈಗ ನನ್ನೊಳಗೆ ನಾನು ಒಬ್ಬ ಶಿಸ್ತಿನ ಹಾಗೂ ಸಕಾರಾತ್ಮಕ ವ್ಯಕ್ತಿಯನ್ನು ಗುರುತಿಸಿಕೊಂಡಿದ್ದೇನೆ ಶಾಲೆಯ ವಿದ್ಯಾರ್ಥಿ ಅಗಸ್ತ್ಯ ಸಿಂಗ್‌.

20 ಅತಿ ಮುಖ್ಯ ಪರ್ವತಗಳಲ್ಲಿ ಒಂದಾಗಿರುವ ಮೌಂಟ್‌ ಕಿನಬಲು ಪರ್ವತಾರೋಹಿಗಳಿಗೆ ಅಗಾಧ ಸವಾಲು ಒಡ್ಡುತ್ತದೆ. ಹವಾಮಾನ ವೈಪರೀತ್ಯ, ಗುಡ್ಡಗಾಡಿನ ಕಡಿದಾದ ಹಾದಿ ವಿದ್ಯಾರ್ಥಿಗಳ ಮನೋಬಲ ಮತ್ತು ದೈಹಿಕ ಸಾಮರ್ಥ್ಯಕ್ಕೆ ಸವಾಲು ಒಡ್ಡಿದವು. ಪರ್ವತಾರೋಹಣ ನಮ್ಮ ಸಹನೆಯನ್ನು ಪರೀಕ್ಷಿಸಿತು ಎಂದು ಪರ್ವತಾರೋಹಿಗಳು ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕರಾಟೆ; ಟೈಕೊಂಡೊ ವಿದ್ಯಾರ್ಥಿಗಳ ಸಾಧನೆ

ಪ್ರತಿಕ್ರಿಯಿಸಿ (+)