ಸೋಮವಾರ, ಸೆಪ್ಟೆಂಬರ್ 23, 2019
27 °C

ಅಂಗಾಂಗ ದಾನ.. ಜೀವಕ್ಕೆ ಜೀವ..

Published:
Updated:
Prajavani

ಮಿದುಳು ನಿಷ್ಕ್ರಿಯಗೊಂಡು ತನ್ನ ಜೀವವೇ ಕೊನೆಯಾಗುವ ಹಂತದಲ್ಲಿರುವ ವ್ಯಕ್ತಿ ಅಂಗಾಂಗ ದಾನ ಪ್ರಕ್ರಿಯೆಗೆ ಒಳಗಾದರೆ ಕನಿಷ್ಟ ಐದು ಜೀವಗಳನ್ನು ಉಳಿಸಬಹುದು. ಆರೋಗ್ಯವಂತ ಮನುಷ್ಯರ ಮೂತ್ರಪಿಂಡ, ಪಿತ್ತಜನಕಾಂಗ, ಹೃದಯ, ಕಣ್ಣು, ಶ್ವಾಸಕೋಶ ಸೇರಿದಂತೆ ಹಲವು ಅಂಗಗಳನ್ನು ಕಸಿ ಮಾಡುವ ಅಂಗಾಂಗ ದಾನ ವ್ಯವಸ್ಥೆ ಹಲವರ ಜೀವ ಉಳಿಸುತ್ತಿದೆ. ಮೆದುಳು ಸಾವು (ಬ್ರೇನ್ ಡೆತ್) ಸಂಭವಿಸಿದರೆ ರೋಗಿ ಸತ್ತಂತೆ. ಮೃತ ವ್ಯಕ್ತಿಯು ದಾನಿಯಾಗಿದ್ದಲ್ಲಿ, ಆತನ ಅಂಗಾಂಗಳನ್ನು ಅಗತ್ಯವಿರುವವರಿಗೆ ದಾನ ಮಾಡಿ, ಅವರ ಜೀವ ಉಳಿಸಬಹುದು. 

ಆಗಸ್ಟ್ 13ರಂದು ವಿಶ್ವ ಅಂಗಾಂಗ ದಾನ ದಿನವಾಗಿ ಆಚರಿಸಲಾಯಿತು. ಆದರೆ ಅಂಗಾಂಗ ದಾನದ ಮಹತ್ವ ಹಾಗೂ ಜಾಗೃತಿ ಕೊರತೆ ಎಲ್ಲೆಡೆ ಇರುವುದು ಸಮೀಕ್ಷೆಯ ದತ್ತಾಂಶಗಳನ್ನು ಗಮನಿಸಿದಾಗ ಕಂಡುಬಂದಿದೆ. ಕೆಲವು ಅಂಕಿ–ಅಂಶಗಳು ಇದನ್ನು ದೃಢೀಕರಿಸುತ್ತಿವೆ. ದೇಶದಲ್ಲಿ ಸುಮಾರು 5 ಲಕ್ಷ ಜನರು ಅಂಗಾಂಗಗಳ ತುರ್ತಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಸೂಕ್ತ ಸಮಯಕ್ಕೆ ಅಗತ್ಯ ಅಂಗಾಂಗ ಲಭ್ಯವಾಗದ ಕಾರಣ ಪ್ರತಿ ವರ್ಷ ಲಕ್ಷಾಂತರ ಜನರು ಪ್ರಾಣ ಬಿಡುತ್ತಿದ್ದಾರೆ. ಪ್ರತಿ 12 ನಿಮಿಷಕ್ಕೆ ಅಂಗಾಂಗ ಅಗತ್ಯವಿರುವವರ ಪಟ್ಟಿಗೆ ಒಬ್ಬ ರೋಗಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. 

ಅಂಕಿ–ಅಂಶಗಳ ಪ್ರಕಾರ ದೇಶದಲ್ಲಿ ವರ್ಷಕ್ಕೆ 1.5 ಲಕ್ಷ ಜನರು ಮೂತ್ರಪಿಂಡ (ಕಿಡ್ನಿ) ಕಸಿಗಾಗಿ ಕಾಯುತ್ತಿದ್ದಾರೆ. ಆದರೆ ಈ ಪೈಕಿ 5 ಸಾವಿರ ಜನರಿಗೆ ಮಾತ್ರ ಬದಲಿ ಮೂತ್ರಪಿಂಡ ಸಿಗುತ್ತಿದೆ ಎಂಬ ಅಂಶವು ಅಂಗಾಂಗಗಳ ಅವಶ್ಯಕತೆಯನ್ನು ಸೂಚ್ಯವಾಗಿ ಹೇಳುತ್ತದೆ. 

ಮಿದುಳು ನಿಷ್ಕ್ರಿಯತೆ, ಅಪಘಾತ ಮೊದಲಾದ ಕಾರಣದಿಂದ ಮೃತಪಡುವವರ ಪೈಕಿ ಪ್ರತಿ ವರ್ಷ ಸಾವಿರ ಜನರ ಅಂಗಾಂಗಗಳನ್ನು ಮಾತ್ರ ದಾನ ಮಾಡಲಾಗುತ್ತಿದೆ. ದಾನ ಮಾಡಲು ಮುಂದಾಗುವವರ ಪ್ರಮಾಣ ಏರಿಕೆಯಾಗುತ್ತಿದ್ದರೂ, ಅದರ ವೇಗ ನಿಧಾನಗತಿಯಲ್ಲಿದೆ. 

ಭಾರತದಂತಹ ಅತ್ಯಧಿಕ ಜನಸಂಖ್ಯೆ ಇರುವ ದೇಶದಲ್ಲಿ ಅಂಗಾಂಗಳಿಗೆ ಇರುವ ಪರದಾಟವನ್ನು ಗಮನಿಸಿದರೆ ಜಾಗೃತಿಯ ಕೊರತೆ ಎದ್ದು ಕಾಣುತ್ತಿದೆ. ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಅಂಗಾಂಗ ದಾನ ಘೋಷಣೆ ಮಾಡುವ ಅಗತ್ಯವಿದೆ. ದೇಶದಲ್ಲಿ ನಿತ್ಯ 400 ಜನರು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಪೈಕಿ ಮಿದುಳು ನಿಷ್ಕ್ರಿಯಗೊಂಡವರ ದೇಹದ ಇತರೆ ಅಂಗಗಳನ್ನು ದಾನ ಮಾಡಲು ಅವಕಾಶವಿದೆ. ಭಯ, ಸಾಮಾಜಿಕ ಕಳಂಕಕ್ಕೆ ಹೆದರಿ ಜನರು ಇದರಿಂದ ಹಿಂದೆ ಸರಿಯುತ್ತಿದ್ದಾರೆ.

ಆಗಸ್ಟ್‌ 13 ವಿಶ್ವ ಅಂಗಾಂಗ ದಾನ ದಿನ ಸ್ಮರಣಾರ್ಥ ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯು ಬೈಕ್ ರ‍್ಯಾಲಿಯೊಂದನ್ನು ನಗರದಲ್ಲಿ ಆಯೋಜಿಸಿತ್ತು. ರ‍್ಯಾಲಿಯಲ್ಲಿ  ಹಲವಾರು ಸಂಖ್ಯೆಯ ಬೈಕ್‌ಗಳು ಪಾಲ್ಗೊಂಡಿದ್ದವು. 

ಸಮೀಕ್ಷೆ ಮತ್ತು ಅಧ್ಯಯನಗಳ ಪ್ರಕಾರ ಭಾರತ ದೇಶದಲ್ಲಿ ಪ್ರತಿ ವರ್ಷ ಸುಮಾರು:
• 5,00,000 ಮಂದಿ ರೋಗಿಗಳು ಅಂಗಾಂಗಗಳ ಲಭ್ಯತೆ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ.
• ದೇಶದಲ್ಲಿ 1,50,000 ಮೂತ್ರಕೋಶಗಳ ದಾನದ ಅಗತ್ಯವಿದ್ದು, ಲಭ್ಯವಿರುವುದು ಕೇವಲ 6,000 ಮಾತ್ರ.
• ದೇಶದಲ್ಲಿ 50,000 ಯಕೃತ್ತುಗಳಿಗೆ ಬೇಡಿಕೆ ಇದ್ದು, 1,500 ಮಾತ್ರ ಸಿಗುತ್ತಿದೆ.
• ಸರಿಸುಮಾರು 50,000 ಹೃದಯಗಳ ಅಗತ್ಯವಿದ್ದಲ್ಲಿ ಲಭ್ಯವಿರುವುದು ಕೇವಲ 15 ಮಾತ್ರ.
• 11,00,000 ಮಂದಿ ವಿಶ್ವಾದ್ಯಂತ ಹೊಸ ಕಣ್ಣಿನ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. 

ಅಂಗಾಂಗ ದಾನದ ಮಹತ್ವ

‘ಪ್ರತಿ ಒಂದು ಮಿಲಿಯನ್ ಜನಸಂಖ್ಯೆಯಲ್ಲಿ ಅಂಗಾಂಗ ದಾನದ ಪ್ರಮಾಣ ಕೇವಲ ಶೇ.0.26ರಷ್ಟಿದೆ. ವರ್ಷದಿಂದ ವರ್ಷಕ್ಕೆ ಅಂಗಾಂಗ ದಾನ ಬಯಸುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅರ್ಧ ಮಿಲಿಯನ್‌ನಷ್ಟು ಭಾರತೀಯರು ಅಂಗಾಂಗ ದಾನದ ಅಗತ್ಯವನ್ನು ಎದುರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದಾಗಿ ನಾವು ಅಂಗಾಂಗ ದಾನದ ವಿಚಾರದಲ್ಲಿ ಸಾಕಷ್ಟು ಜನಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ. ಮಾನವನ ಅಂಗಗಳು ಅತ್ಯಂತ ಅಮೂಲ್ಯವಾದದ್ದು ಮತ್ತು ಯಾರಾದರೂ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರೆ ಅವರು ನಿಜವಾಗಿಯೂ ತಮ್ಮ ಜೀವನವನ್ನು ಇನ್ನೊಂದು ಜೀವಕ್ಕೆ ವರ್ಗಾಯಿಸಿ ತಮ್ಮ ಜೀವನವನ್ನೇ ವಿಸ್ತರಿಸಿಕೊಂಡಂತೆ’

–ಬ್ರೇನ್ಸ್ ಆಸ್ಪತ್ರೆಯ ಮುಖ್ಯ ನ್ಯೂರೋಸರ್ಜನ್ ಹಾಗೂ ಸಂಸ್ಥಾಪಕ ಡಾ. ಎನ್.ಕೆ. ವೆಂಕಟರಮಣ.

ಮೂತ್ರಪಿಂಡಗಳ ಬದಲು ಅಗತ್ಯ

‘ಭಾರತದಲ್ಲಿ ಹೆಚ್ಚಿನ ಮೂತ್ರಪಿಂಡ ಕಸಿಗಳಿಗೆ ನೇರದಾನಿ ಕಸಿ ಕಾರಣವಾಗಿದೆ. ಶವದ ಕಸಿ ಮಾಡುವಿಕೆಯು ಅತ್ಯಂತ ಕಡಿಮೆ. ಕೊನೆಯ ಹಂತದ ಪೂತ್ರಪಿಂಡ ಕಾಯಿಲೆ ಹರಡುವಿಕೆಯ ಜತೆಗೆ ಮೂತ್ರಪಿಂಡ ಕಸಿ ಪ್ರಕರಣಗಳ ಹೊರೆಯಲ್ಲಿ ಗಮನಾರ್ಹ ಹೆಚ್ಚಳವಿದೆ. ಈ ಹೊರೆಯನ್ನು ಎದುರಿಸಲು, ಮೂತ್ರಪಿಂಡ ಕಾಯಿಲೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದರ ಜತೆಗೆ ಅಂಗಾಂಗ ದಾನದ ಮಹತ್ವದ ಬಗ್ಗೆಯೂ ಜಾಗೃತಿ ಮೂಡಿಸಬೇಕಾಗಿದೆ’ ಎನ್ನುತ್ತಾರೆ, ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಹಾಗು ಕಸಿ ಚಿಕಿತ್ಸಕ ಡಾ. ದಿಲೀಪ್ ಜಾವಳಿ.

ಯಕೃತ್ತು ದಾನಿಗಳ ಕೊರತೆ

‘ಜಡ ಜೀವನ ಶೈಲಿ ಮತ್ತು ಅತಿಯಾದ ಮದ್ಯಪಾನದಿಂದ ಭಾರತದ ಯುವಕರಲ್ಲಿ ಯಕೃತ್ತಿನ ಸಮಸ್ಯೆ ಹೆಚ್ಚಳವಾಗುತ್ತಿದೆ. ಹೆಚ್ಚಿನವರಲ್ಲಿನ ಅಜ್ಞಾನ ಕೊನೆಯ ಹಂತದ ಯಕೃತ್ತಿನ ಕಾಯಿಲೆಗೂ ಕಾರಣವಾಗುತ್ತಿದೆ. ಈ ರೋಗಿಗಳು ಅಂತಿಮವಾಗಿ ರೋಗದ ಪ್ರಗತಿಗೆ ಪಾತ್ರವಾಗುತ್ತಾರೆ ಮತ್ತು ಪಿತ್ತಜನಕಾಂಗದ ಕಸಿಯ ಅಗತ್ಯ ಎದುರಿಸುತ್ತಾರೆ. ಅಗತ್ಯ ಸಂಖ್ಯೆಯಲ್ಲಿ ಪಿತ್ತಜನಕಾಂಗದ ಲಭ್ಯತೆ ಸಿಗದ ಹಿನ್ನೆಲೆಯಲ್ಲಿ ಅಂಗಾಂಗ ಕಸಿಕಾಗಿ ಕಾಯುವ ಸಮಯ ಹೆಚ್ಚಾಗುತ್ತಿದೆ. ಇಂಥವರ ಪೈಕಿ ಸುಮಾರು ಶೇ.17ರಷ್ಟು ರೋಗಿಗಳು ವಾರ್ಷಿಕವಾಗಿ ಅಂಗಾಂಗ ಸಿಗದೇ ಸಾವನ್ನಪ್ಪುತ್ತಿದ್ದಾರೆ’– ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯ ಹೆಪಾಟೊ ಪ್ಯಾಂಕ್ರಿಯಾಟೊ ಬಿಲಿಯರಿ ಹಿರಿಯ ಸಲಹೆಗಾರರು ಮತ್ತು ಬಹು ಅಂಗಾಂಗ ಕಸಿ ಚಿಕಿತ್ಸಕ ಡಾ. ರೆಹಾನ್ ಸೈಫ್.

ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ:
ರಾಜರಾಜೇಶ್ವರಿನಗರದ ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು 400 ಹಾಸಿಗೆಗಳನ್ನು ಒಳಗೊಂಡ ತೃತೀಯ ಚಿಕಿತ್ಸಾ ಕೇಂದ್ರ.  ಇದು ಅಬುದಾಬಿ ಮೂಲದ ಭಾರತೀಯ ಸಮಾಜಸೇವಕ ಡಾ. ಬಿ.ಆರ್. ಶೆಟ್ಟಿ ಅವರ ಉಪಕ್ರಮ. ಈ ಆಸ್ಪತ್ರೆ ಮ್ಯೂಟಿಗಾರ್ಗನ್ ಟ್ರಾನ್ಸ್‌ಪ್ಲಾಂಟ್‌ ಸೈನ್ಸ್ ಮತ್ತು ಅಂತಾರಾಷ್ಟ್ರೀಯ ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರವಾಗಿದೆ.

ಅಂಗಾಂಗ ಕಸಿ ಪ್ರಕರಣಗಳನ್ನು ನಿಭಾಯಿಸಲು ಆಸ್ಪತ್ರೆಯ ಡಾ. ದಿಲೀಪ್ ಜಾವಳಿ, ಡಾ. ರೆಹನ್ ಸೈಫ್, ಡಾ. ನವೀನ್ ಗಂಜೂ, ಡಾ. ರೊಮೆಲ್ ಎಸ್, ಡಾ. ಗಿರಿಧರ್ ವೆಂಕಟೇಶ್ ಹಾಗೂ ಡಾ. ಮಂಜುನಾಥ್ ಎಸ್. ಅವರಂತ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

Post Comments (+)