ಗುರುವಾರ , ನವೆಂಬರ್ 14, 2019
19 °C

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿ!

Published:
Updated:

ವಿಕ್ಟೋರಿಯಾ ಆಸ್ಪತ್ರೆಗೆ ಬರುವ ರೋಗಿಗಳ ಪಾಡು ಕರುಣಾಜನಕ. ಅವರಿಗೆ ಚಿಕಿತ್ಸೆ ಸಿಗುವುದು ಹಾಗಿರಲಿ ಅವರ ಬಗ್ಗೆ ಸಣ್ಣ ಕಾಳಜಿ ಕೂಡ ವ್ಯಕ್ತವಾಗದಂಥ ಸ್ಥಿತಿ ಇದೆ. ಈ ಬಗ್ಗೆ ಆಸ್ಪತ್ರೆಯೊಳಗೊಂದು ಪುಟ್ಟ ಇಣುಕು ನೋಟವಿದು.

ನಗರದ ‘ದೊಡ್ಡ ಆಸ್ಪತ್ರೆ’ ಎಂದೇ ಹೆಸರಾಗಿರುವ ವಿಕ್ಟೋರಿಯಾ ಆಸ್ಪತ್ರೆಗೆ ರಾಜ್ಯದ ಮೂಲೆ ಮೂಲೆಯಿಂದಲೂ ಜನ ಚಿಕಿತ್ಸೆಗೆಂದು ಬರುತ್ತಾರೆ. ಇಲ್ಲಿನ ವೈದ್ಯಕೀಯ ಸಿಬ್ಬಂದಿ, ಮೆಡಿಕಲ್‌ ವಿದ್ಯಾರ್ಥಿಗಳು ರೋಗಿಗಳೊಂದಿಗೆ ನಡೆದುಕೊಳ್ಳುವ ವರ್ತನೆ ಮಾತ್ರ ಅಸಹನೀಯ. ಸಿಬ್ಬಂದಿಯ ಬೇಕಾಬಿಟ್ಟಿ ದರ್ಬಾರ್‌ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 

ಆಸ್ಪತ್ರೆಗೆ ಬರುವ ರೋಗಿಗಳು ಬಹುತೇಕ ಬಡವರು. ತುರ್ತು ಚಿಕಿತ್ಸೆಗೆಂದು ಧಾವಿಸಿ ಬರುವ ರೋಗಿಗಳಿಗೆ ಇಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಪ್ರಶ್ನಿಸಿದರೆ ಅವರನ್ನು ಆಸ್ಪತ್ರೆಯಿಂದ ಹೊರ ಹಾಕಲಾಗುತ್ತದೆ. ತುರ್ತು ಚಿಕಿತ್ಸೆಗೆಂದು ಬಂದ ರೋಗಿಗಳ ನರಳಾಟವನ್ನು ಕಂಡರೂ ಕಾಣದಂತೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇಲ್ಲಿ ವೈದ್ಯರಿಗಿಂತ ಮೆಡಿಕಲ್‌ ವಿದ್ಯಾರ್ಥಿಗಳದ್ದೇ ಕಾರುಬಾರು.

–ಇದು ತುರ್ತು ಚಿಕಿತ್ಸಾ ವಿಭಾಗಕ್ಕೆ ಬರುವ ರೋಗಿಗಳ ದೂರು. 

ರಾತ್ರಿ ಮತ್ತೊಂದು ಲೋಕ 

ಕತ್ತಲಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಮತ್ತೊಂದು ಲೋಕ ತೆರೆದುಕೊಳ್ಳುತ್ತದೆ. ಕೆಲ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡುತ್ತಿರುತ್ತಾರೆ. ಇನ್ನು ಕೆಲವರು ಚಿಕಿತ್ಸೆ ಪಡೆದ ನಂತರ ವಿರಮಿಸಲು ಜಾಗ ಸಿಗದೆ, ತುರ್ತು ವಿಭಾಗದ ಮೂಲೆ, ಮೂಲೆಗಳಲ್ಲಿ ಹಾಗೆಯೇ ಒರಗಿಕೊಂಡಿರುತ್ತಾರೆ. ಅವರನ್ನು ವಾರ್ಡಿಗೆ ಸಾಗಿಸಬೇಕೆಂದರೆ ಅವರನ್ನು ನೋಡಿಕೊಳ್ಳುವ ಪೋಷಕರು ಪಡುವ ಪಡಿಪಾಟಲು ಯಾರಿಗೂ ಬೇಡ! ‘ಸಿಬ್ಬಂದಿ ಹೇಳುವವರೆಗೂ ಕಾಯಬೇಕು. ಅವರು ನಮ್ಮ ಮೇಲೆ ಕರುಣೆ ತೋರುತ್ತಾರೆ ಎಂದು ಭಾವಿಸಿ ನಾವು ಕಾಯುತ್ತ ಕುಳಿತುಕೊಳ್ಳಬೇಕು. ಒಮ್ಮೆ ಚಿಕಿತ್ಸೆ ನೀಡಿದರೆ ಮುಗಿಯಿತು. ಮತ್ತೆ ಆ ರೋಗಿ ಕಡೆ ತಿರುಗಿ ಕೂಡ ನೋಡುವುದಿಲ್ಲ’ ಎಂದು ಅರ್ಪಿತಾ ಎಂಬ ರೋಗಿಯೊಬ್ಬರು ತಮಗಾದ ನೋವನ್ನು ಹಂಚಿಕೊಂಡರು. 

‘ಆಕೆಗೆ ಕುಳಿತುಕೊಳ್ಳಲು ಆಗುತ್ತಿಲ್ಲ. ಬೆಡ್‌ ಮೇಲೆ ಮಲಗಿಸಿ ಎಂದು ಕೇಳಿಕೊಂಡಿದ್ದಕ್ಕೆ, ನೀವು ಮೊದಲು ಹೊರ ನಡೆಯಿರಿ. ಇಲ್ಲಿ ಇರೋದೆ ಹಾಗೆ. ಬೇಕಿದ್ದರೆ ಕಾಯಿರಿ ಇಲ್ಲವೇ ಬೇರೆ ಆಸ್ಪತ್ರೆಗೆ ಹೋಗಿ ಎನ್ನುತ್ತಾರೆ. ಪಟ್ಟು ಹಿಡಿದರೆ ಸೆಕ್ಯುರಿಟಿಯನ್ನು ಕರೆಯಿಸಿ ಹೊರಕ್ಕೆ ಸಾಗ ಹಾಕುತ್ತಾರೆ. ಎಷ್ಟು ಕೇಳಿಕೊಂಡರು ಬೆಡ್‌ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಿಲ್ಲ. ಗೋಗರೆದಿದ್ದಕ್ಕೆ ಕುಳಿತಲ್ಲೇ ಕೈಗೆ ಡ್ರಿಪ್ಸ್‌ ಹಾಕಿದರು’ ಎಂದು ಅಬ್ದುಲ್‌ ಎನ್ನುವವರು ತಮ್ಮ ಅಳಲು ತೋಡಿಕೊಂಡರು. ‌

‘ಈ ಆಸ್ಪತ್ರೆಯ ವ್ಯವಸ್ಥೆಯೇ ಹೀಗೆ. ಅದರಲ್ಲೂ ರಾತ್ರಿ ಯಾರೊಬ್ಬರೂ ಬಂದು ಏನಾಯಿತು ಎಂದು ಕೇಳುವುದಿಲ್ಲ. ಡ್ರಿಪ್ಸ್‌ ಮುಗಿದ ನಂತರ ನೀವು ಖಾಸಗಿ ಆಸ್ಪತ್ರೆಗೆ ಹೋಗುವುದು ಉತ್ತಮ ಎಂದು ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಸಲಹೆ ನೀಡುತ್ತಾರೆ’ ಇದೆಂಥ ನ್ಯಾಯ ಸ್ವಾಮೀ ಎಂದು ರೋಗಿಯ ಪಾಲಕರೊಬ್ಬರು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ. 

ಬೆಡ್‌ಗಳ ಕೊರತೆ

‘ತುರ್ತು ಚಿಕಿತ್ಸೆಗೆ ಬರುವ ರೋಗಿಗಳನ್ನು ಮಲಗಿಸಲು ಬೆಡ್‌ಗಳೇ ಇಲ್ಲ. ಚಿಕಿತ್ಸೆ ಬೇಕೆಂದರೆ ಗಂಟೆಗಟ್ಟಲೆ ಕಾಯಬೇಕು. ಕಾದು ಕಾದು ರೋಗಿಯ ಪರಿಸ್ಥಿತಿ ಗಂಭೀರವಾದಾಗ ಕುಳಿತಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳನ್ನು ಇಲ್ಲಿ ಪಶುಗಳಂತೆ ಕಾಣುತ್ತಾರೆ. ಜನರಲ್‌ ವಾರ್ಡ್‌ಗಳಲ್ಲಿಯೂ ಹಳೆಯ ಬೆಡ್‌ಗಳ ಮೇಲೆಯೇ ರೋಗಿಗಳನ್ನು ಮಲಗಿಸಲಾಗುತ್ತದೆ. ಅಂಕುಡೊಂಕಾದ ಬೆಡ್‌ಗಳಲ್ಲಿ ಕಾಲು, ಬೆನ್ನು, ಸೊಂಟದ ನೋವಿನಿಂದ ಬಳಲುವ ರೋಗಿಗಳನ್ನು ಸಹ ಮಲಗಿಸಲಾಗುತ್ತಿದೆ’ ಎನ್ನುವುದು ಸಾರ್ವಜನಿಕರ ದೂರು.

120 ವರ್ಷ ಇತಿಹಾಸವಿರುವ ಈ ಆಸ್ಪತ್ರೆ ಕಾಲ ಕಾಲಕ್ಕೆ ಸುಧಾರಣೆ ಕಾಣುವುದರಲ್ಲಿ ಎಡವುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯದ ಬಡವರು, ಕೂಲಿ ಕಾರ್ಮಿಕರು ಹೆಚ್ಚಾಗಿ ಬರುತ್ತಾರೆ. ಬಹುತೇಕ ಅನಕ್ಷರಸ್ಥರಿರುವ ಕಾರಣ ರೋಗಿಗಳಲ್ಲಿ ಸೂಕ್ತ ದಾಖಲೆಗಳಿರುವುದಿಲ್ಲ. ಇಂಥವರ ಬಗ್ಗೆ ಸಂಯಮ ತೋರದ ಸಿಬ್ಬಂದಿ, ರೋಗಿಗಳಿಗೆ ಸರಿಯಾದ ಮಾಹಿತಿಗಳನ್ನು ಕೂಡ ನೀಡುವುದಿಲ್ಲ.

‘ವಾರದಿಂದ ಮಗನ ಚಿಕಿತ್ಸೆಗಾಗಿ ಓಡಾಡುತ್ತಿದ್ದೇನೆ. ಅವನ ಬಗೆಗಿನ ಸೂಕ್ತ ದಾಖಲೆಗಳನ್ನು ನೀಡುತ್ತಿದ್ದೇನೆ. ಅದಾವುದು ಸೂಕ್ತ ಎನಿಸುತ್ತಲೇ ಇಲ್ಲ ಎಂದು ಸಿಬ್ಬಂದಿ ಸಬೂಬು ಹೇಳುತ್ತಾರೆ. ಅದು ಕೊಟ್ಟರೆ ಇದಿಲ್ಲ, ಇದು ಕೊಟ್ಟರೆ ಅದಿಲ್ಲ ಎಂದು ಪೀಡಿಸುವುದೇ ಬಂತು. ಇದರಲ್ಲೇ ಸಮಯ ಕಳೆಯುತ್ತಿದೆ. ಇನ್ನೂ ಚಿಕಿತ್ಸೆಯನ್ನೇ ನೀಡಿಲ್ಲ’ ಎಂದು ರೋಗಿಯೊಬ್ಬರ ಪೋಷಕ ನಾರಾಯಣಪ್ಪ ಹೇಳಿಕೊಂಡರು. 

ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್‌ ಇಲ್ಲ!

ಇಲ್ಲಿ ಬಿಳಿ ಏಪ್ರಾನ್‌ ಹಾಕಿಕೊಂಡ ಯಾರನ್ನಾದರೂ ವೈದ್ಯರೆಂದು ಭಾವಿಸಿಕೊಳ್ಳಬಹುದು. ಹಾಗೆ ವೇಷ ಧರಿಸಿ ಒಳಬಂದವರೆಲ್ಲ ವೈದ್ಯರೇ ಆಗುವಂಥ ಪವಾಡ ಇಲ್ಲಿ ಮಾತ್ರ ಸಾಧ್ಯವೇನೋ. ಏಕೆಂದರೆ ಇಲ್ಲಿ ಯಾವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್‌ಗಳೇ ಇಲ್ಲ! ಇವರು ಯಾವ ಪದವಿ ಓದುತ್ತಿದ್ದಾರೆ ಎನ್ನುವುದು ಅರ್ಥವೇ ಆಗುವುದಿಲ್ಲ. ಯಾವ ವಿಭಾಗದ ಅಥವಾ ಯಾವ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿ ಎಂಬ ಐಡಿ ಕಾರ್ಡ್‌ ಯಾರ ಬಳಿಯೂ ಇರುವುದಿಲ್ಲ. ‘ಇಲ್ಲಿ ಯಾರಿಗೂ ಐಡಿ ಕಾರ್ಡ್‌ ಇಲ್ಲ’ ಎನ್ನುವ ಭಯಾನಕ ಸತ್ಯವನ್ನು ವೈದ್ಯಕೀಯ ವಿದ್ಯಾರ್ಥಿಯೊಬ್ಬರು ತಿಳಿಸಿದರು.

‘ಇಲ್ಲಿ ಬಿಳಿ ಶರ್ಟ್‌, ಏಪ್ರಾನ್‌ ಹಾಕಿಕೊಂಡು ಯಾರು ಬೇಕಾದರೂ ಒಳನುಗ್ಗಬಹುದು. ಹಾಗೆ ಬಂದವರೆಲ್ಲಾ ವೈದ್ಯರೇ! ನೀವು ಯಾವ ವಿಭಾಗದ ವಿದ್ಯಾರ್ಥಿ ಎಂದು ಅವರನ್ನು ವಿಚಾರಿಸುವವರೇ ಇಲ್ಲ. ಆದರೆ, ರೋಗಿಯಾದ ನಮ್ಮನ್ನು ಮಾತ್ರ ಸೆಕ್ಯುರಿಟಿಗಳು ಒಳಗೆ ಬಿಡುವುದಿಲ್ಲ’ ಎಂದು ಶಿವಪ್ಪ ದೂರುತ್ತಾರೆ. 

ಇದನ್ನೂ ಓದಿ: ಡೆಂಗಿ ಹೆಸರಲ್ಲಿ ಸುಲಿಗೆ ದಂಧೆ

ರೋಗಿಗಳನ್ನು ನೋಡಿಕೊಳ್ಳಲು ದೂರದ ಊರುಗಳಿಂದ ಬರುವ ಪೋಷಕರಿಗೆ ಇಲ್ಲಿ ಉಳಿದುಕೊಳ್ಳಲು ಯಾವ ವ್ಯವಸ್ಥೆಯೂ ಇಲ್ಲ. ಹೀಗಾಗಿ ಎಲ್ಲೆಂದರಲ್ಲಿ ಅಥವಾ ರಸ್ತೆಯ ಬದಿಯಲ್ಲಿ ಮಲಗುವ ಪರಿಸ್ಥಿತಿ ಇದೆ. ವಾರ್ಡ್‌ನ ಕಾರಿಡಾರ್‌, ಮೂಲೆಗಳು, ಮೆಟ್ಟಿಲುಗಳ ಬಳಿ ಮತ್ತು ಆಸ್ಪತ್ರೆಯ ಹೊರ ಆವರಣದಲ್ಲಿ ಎಲ್ಲಿ ಜಾಗ ಸಿಗುವುದೊ ಅಲ್ಲಿ ಮುದುಡಿಕೊಂಡು ಮಲಗಿಕೊಂಡವರ ದೃಶ್ಯಗಳು ಇಲ್ಲಿ ಸಾಮಾನ್ಯ. ವೈದ್ಯಾಧಿಕಾರಿಗಳು ಇದೆಲ್ಲವನ್ನು ಕಂಡರೂ ಕಾಣದಂತೆ ವರ್ತಿಸುತ್ತಾರೆ.

ಪ್ರತಿಕ್ರಿಯಿಸಿ (+)