ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಶಾಲೆ ಕಾಳಜಿ ಹೊಸ ಮಾದರಿಗೆ ನಾಂದಿ

Last Updated 27 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಈ ಯುವಕ ಶಿಕ್ಷಣ ಪ್ರೇಮಿ. ಈ ಕ್ಷೇತ್ರದಲ್ಲಿ ಆಗಾಧ ಬದಲಾವಣೆ ತುಡಿತ ಹೊಂದಿರುವ ಕನಸುಗಾರ. ಖಾಸಗಿ ಶಾಲೆಗಳಷ್ಟೇ ಅಭಿವೃದ್ಧಿ ಹೊಂದಿದರೇ ಸಾಕೇ ? ಸರ್ಕಾರಿ ಶಾಲೆಗಳು ಪ್ರಗತಿ ಸಾಧಿಸಬಾರದೇ? ಆ ಮಕ್ಕಳಿಗೂ ಆಧುನಿಕ ಸವಲತ್ತು ಸಿಗಬೇಕೆಂಬ ಕಾಳಜಿವುಳ್ಳವರು. ಸಮಾನ ಶಿಕ್ಷಣದ ಆಶಯ ಹೊತ್ತವರು.

ಜೆ.ಪಿ ನಗರ 9ನೇ ಹಂತದಲ್ಲಿರುವ ಇಂಡಿಯನ್ ಗ್ಲೋಬಲ್ ಶಾಲಾ ಸಂಸ್ಥಾಪಕ ಪ್ರಮೋದ್‌ ಶ್ರೀನಿವಾಸ್‌ ಸಾಮಾಜಿಕ ಹೊಣೆಗಾರಿಕೆ ಅರಿತವರು. ತಮ್ಮ ಖಾಸಗಿ ಶಾಲೆ ಶಿಕ್ಷಕರು ಬಿಡುವಿನ ಸಮಯದಲ್ಲಿ ಸಮೀಪದ ಸರ್ಕಾರಿ ಶಾಲೆಯಲ್ಲೂ ಬೋಧಿಸಬೇಕು. ಆ ಮಕ್ಕಳೊಂದಿಗೆ ಮುಕ್ತ ಮನಸ್ಸಿನಿಂದ ಬೆರತು ಆಧುನಿಕ ವಿಧಾನದಲ್ಲಿ ಕಲಿಸುವ ನಿಯಮ ಜಾರಿಗೊಳಿಸಿದ್ದಾರೆ. ಇದನ್ನು ಖುದ್ದು ಅವರೇ ಪರಿಶೀಲಿಸುತ್ತಾರೆ. ಮೇಲಾಗಿ, ಆ ಸರ್ಕಾರಿ ಶಾಲೆಯನ್ನು ದತ್ತು ಪಡೆಯಲು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಪ್ರಮೋದ್‌ ಶ್ರೀನಿವಾಸ್, ಇಂಡಿಯನ್ ಗ್ಲೋಬಲ್‌ ಸ್ಕೂಲ್‌ ಸಂಸ್ಥಾಪಕ
ಪ್ರಮೋದ್‌ ಶ್ರೀನಿವಾಸ್, ಇಂಡಿಯನ್ ಗ್ಲೋಬಲ್‌ ಸ್ಕೂಲ್‌ ಸಂಸ್ಥಾಪಕ

ಇಂದಿನ ಮಕ್ಕಳಿಗೆ ಡಿಜಿಟಲ್ ಕಲಿಕೆ ಸುಲಭ. ತಮ್ಮ ಒಡೆತನದ ಖಾಸಗಿ ಶಾಲೆ ಪಠ್ಯಕ್ರಮವನ್ನು ಡಿಜಿಟಲ್ ಕ್ರಮಕ್ಕೆ ಹೊಂದಿಸಿದ್ದಾರೆ. ಬ್ಲಾಗಿಂಗ್, ವಿಡಿಯೊ, ಪಾಡ್‌ಕಾಸ್ಟ್‌, ವೆಬ್‌ನಾರ್‌ ಮತ್ತು ಇತರ ಸಾಧನಗಳ ಮೂಲಕ ಕಲಿಸುವ ವಿಧಾನಕ್ಕೆ ಮೊರೆ ಹೋಗಿದ್ದಾರೆ. ಕಪ್ಪುಹಲಗೆ ಬೋಧನೆಗೆ ಗುಡ್‌ಬೈ ಹೇಳಿದ್ದು, ಸ್ಮಾರ್ಟ್‌ ಕ್ಲಾಸ್‌ ವಿಧಾನ ಅಳವಡಿಸಿಕೊಂಡಿದ್ದಾರೆ. ಈ ಮಾದರಿಯನ್ನು ಸರ್ಕಾರಿ ಶಾಲೆಗೂ ವಿಸ್ತರಿಸುವ ಚಿಂತನೆ ಅವರದ್ದು.

ಇ-ಕ್ಯೂಬ್ - ಕೌಶಲ ಆಧಾರಿತ ಕಾರ್ಯಕ್ರಮ ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಯಲು ಸಹಕಾರಿ. ಇಂತಹ ಕ್ರಿಯಾಶೀಲ ವಿಧಾನ ಅಳವಡಿಸಿಕೊಂಡಾಗ ಮಾತ್ರ ಈಗಿನ ಸನ್ನಿವೇಶಕ್ಕೆ ತಕ್ಕಂತೆ ಸಶಕ್ತ ಶಿಕ್ಷಣ ನೀಡಲು ಸಾಧ್ಯ. ಇದನ್ನು ಸರ್ಕಾರಿ ಶಾಲೆಯಲ್ಲೂ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.

ತರಗತಿ ಕೋಣೆಗಳು ಸೃಜನಶೀಲತೆ ಆರಳಿಸುವ ಕೇಂದ್ರಗಳಾಬೇಕು. ರಾಷ್ಟ್ರನಿರ್ಮಾಣ ಹಾಗೂ ನಾಯಕತ್ವ ಬೆಳವಣಿಗೆಗೆ ಪೂರಕ ವಾತಾವರಣ ಇರಬೇಕು. ಈ ಹಾದಿಯಲ್ಲಿ ಇಂಡಿಯನ್‌ ಗ್ಲೋಬಲ್‌ ಸ್ಕೂಲ್ ಸಾಗಿದೆ. ಪಠ್ಯದಾಚೆಗೆ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮೂಡಿಸುವ ಚಟುವಟಿಕೆಗಳಿಗೆ ಆದ್ಯತೆ ನೀಡಿದೆ. ಉದ್ಯೋಗ ಸಂಬಂಧ ಕೌಶಲಕ್ಕೆ ಒತ್ತು ನೀಡಿದೆ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಶಿಕ್ಷಕರನ್ನೂ ಸಜ್ಜುಗೊಳಿಸಿದೆ.

ಮಕ್ಕಳ ಆಸಕ್ತಿಗೆ ತಕ್ಕಂತೆ ಸೃಜನಶೀಲತೆ, ಅನ್ವೇಷಣೆ ಪ್ರವೃತ್ತಿ ಬೆಳೆಸಲು ಅನೇಕ ಕಾರ್ಯಕ್ರಮ ಈ ಶಾಲೆಯಲ್ಲಿ ರೂಪಿಸಲಾಗಿದೆ. ಭಾಷಾ ಸಾಮರ್ಥ್ಯ, ಸಂವಹನ ಕಲೆ, ಇಂಗ್ಲಿಷ್ ಕಲಿಕೆಗೆ ಗಮನ ನೀಡಲಾಗಿದೆ. ಈ ಅಂಶಗಳನ್ನು ಸರ್ಕಾರಿ ಶಾಲೆ ಮಕ್ಕಳಿಗೂ ಕಲಿಸಲು ಹೋದಾಗ ಪೇಚಿಗೆ ಸಿಲುಕಬೇಕಾಯಿತು ಎನ್ನುತ್ತಾರೆ ಟಿಜಿಐಎಸ್‌ ಸ್ಕೂಲ್‌ನ ಅಕಾಡೆಮಿಕ್ ನಿರ್ದೇಶಕಿ ಉಷಾ ಮೋಹನ್‌.

ನಗರದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಮಕ್ಕಳ ಸಾಮಾಜಿಕ ಹಿನ್ನೆಲೆಯೇ ಬೇರೆ. ಆದರೆ, ಸರ್ಕಾರಿ ಶಾಲೆ ಮಕ್ಕಳ ಸಾಮಾಜಿಕ, ಆರ್ಥಿಕ ಹಿನ್ನೆಲೆಯಿಂದಾಗಿ ಕಲಿಕೆಯಲ್ಲಿ ಬಹುತೇಕರು ಹಿಂದುಳಿದಿರುತ್ತಾರೆ. ಈ ವಿದ್ಯಾರ್ಥಿಗಳ ಮನೋಚಿತ್ತ ಅರಿತರೆ ವಿಭಿನ್ನ ಜಗತ್ತು ನಿರ್ಮಿಸಲು ಸಾಧ್ಯ. ಆರಂಭಿಕ ಹಂತದ‌ಲ್ಲೇ ನೀರು – ಗೊಬ್ಬರ ಹಾಕಿ ಪೋಷಿಸಿದರೆ ಉತ್ತಮ ಫಲ ನಿರೀಕ್ಷಿಸಬಹುದು. ಸರ್ಕಾರಿ ಶಾಲೆ ಮಕ್ಕಳು ಮುಖ್ಯವಾಹಿನಿಗೆ ತೆರೆದುಕೊಳ್ಳಲು ಅವಕಾಶ ಸಿಗಬೇಕಷ್ಟೇ ಎಂದು ಹೇಳುತ್ತಾರೆ.

ಸರ್ಕಾರಿ ಶಾಲೆಗಳ ಅಳಿವು – ಉಳಿವು ಹೋರಾಟ ನಡೆದಿದೆ. ದಾನಿಗಳು, ಸಂಘ – ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ಅರಿತು ಈಗಾಗಲೇ ಹೈಟೆಕ್‌ ಕಟ್ಟಡ ನಿರ್ಮಾಣ, ಪೀಠೋಪಕರಣ ಒದಗಿಸಿ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲೂ ಆರಂಭವಾಗಿರುವ ಎಲ್‌ಕೆಜಿಗೆ ದಾಖಲು ಮಾಡಲು ಪೋಷಕರು ಮುಗಿಬಿದ್ದಿದ್ದಾರೆ. ಇಂತಹ ಆಶಾದಾಯಕ ಬೆಳವಣಿಗೆ ನಡುವೆಯೇ ಈ ಖಾಸಗಿ ಶಾಲೆಯೊಂದರ ಕಾಳಜಿ ಹೊಸ ಮಾದರಿಗೆ ನಾಂದಿ ಹಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT