ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷತೆಗಳ ಕೆಥೆಡ್ರಲ್‌ ಚರ್ಚ್‌

ಪರಂಪರೆ
Last Updated 16 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಸುತ್ತಲೂ ಎತ್ತರದ ಮರಗಳು, ಅದರ ನೆರಳು, ತಂಪಾದ ವಾತಾವರಣದ ನಡುವೆ ಇರುವ ಪ್ರಶಾಂತ ವಾತಾವರಣ. ಮೂರು ಕಡೆಯೂ ಪ್ರಮುಖ ರಸ್ತೆ (ತ್ರಿಕೋನಾಕಾರ)ಗಳಿಂದ ಸುತ್ತುವರೆದಿರುವ ಈ ಜಾಗದ ಬಳಿಯೇ ನಗರದ ಪ್ರಸಿದ್ಧ ಉದ್ಯಾನಗಳಿವೆ (ಕಬ್ಬನ್‌ ಪಾರ್ಕ್‌, ಮಹಾತ್ಮ ಗಾಂಧಿ ಉದ್ಯಾನ). ಕೂಗಳತೆ ದೂರದಲ್ಲಿಯೇ ಚಿನ್ನಸ್ವಾಮಿ ಕ್ರೀಡಾಂಗಣ ಇದೆ. ಇವುಗಳೊಂದಿಗೆ ತನ್ನ ಇತಿಹಾಸ ಬೆಸೆದುಕೊಂಡಿರುವ ಈ ಕಟ್ಟಡ ರಾಜಧಾನಿಯ ಪ್ರಸಿದ್ಧ ಚರ್ಚ್‌ಗಳಲ್ಲಿ ಒಂದು.

ಅದುವೇ ಸೇಂಟ್‌ ಮಾರ್ಕ್ಸ್‌ ಕೆಥೆಡ್ರಲ್‌. ಉದ್ಯಾನನಗರಿಯ ಹಲವು ಪಾರಂಪರಿಕ ಚರ್ಚ್‌ಗಳಲ್ಲಿ ಇದಕ್ಕೆ ಮಹತ್ವದ ಸ್ಥಾನ ಇದೆ. ಬರೋಬ್ಬರಿ 210 ವರ್ಷಗಳ ಇತಿಹಾಸ ಹೊಂದಿರುವ ಇದು ಮಹಾತ್ಮ ಗಾಂಧಿ ರಸ್ತೆಯಲ್ಲಿ ಕಂಡು ಬರುವ ಮೊದಲ ಕಟ್ಟಡ.

ಪ್ರಾಟೆಸ್ಟಂಟ್ ಚರ್ಚ್‌ ಆದ ಇದು ಸುಂದರ, ನಯನ ಮನೋಹರ ಹಾಗೂ ಭವ್ಯ ಕಟ್ಟಡ ಹೊಂದಿದೆ. ವಸಾಹತುಶಾಹಿಯ ವಾಸ್ತುಶೈಲಿಯನ್ನು ಹೊಂದಿದೆ. ಇದನ್ನು ಲಂಡನ್‌ನಲ್ಲಿರುವ ಸೇಂಟ್‌ ಪೌಲ್ಸ್‌ ಕೆಥೆಡ್ರಲ್‌ ಚರ್ಚ್‌ ಮಾದರಿಯಲ್ಲಿ ನಿರ್ಮಿಸಲಾಗಿದೆ. ಚರ್ಚ್‌ ಕಟ್ಟಡ 100 ಅಡಿ ಉದ್ದ, 53 ಅಡಿ ಅಗಲ ಮತ್ತು 20 ಅಡಿ ಎತ್ತರವಿದೆ. ‌ಹಲವು ಬಾರಿ ವಿಸ್ತರಣೆಗೊಂಡಿರುವುದು ಮತ್ತು ಜೀರ್ಣೋದ್ಧಾರಗೊಂಡಿರುವುದು ಈ ಚರ್ಚ್‌ನ ವೈಶಿಷ್ಟ್ಯ. ಧಾರ್ಮಿಕ ಚಟುವಟಿಕೆಯ ಜತೆಗೆ ಹಲವು ಸಮಾಜಮುಖಿ ಕಾರ್ಯಗಳನ್ನೂ ಇದು ಮಾಡಿಕೊಂಡು ಬಂದಿದೆ.

ಕ್ರಿ.ಶ 1799ರಲ್ಲಿ ಟಿಪ್ಪು ಸುಲ್ತಾನ್‌ ಸಾವಿನ ಬಳಿಕ ಮೈಸೂರು ಸಂಸ್ಥಾನದ ಮೇಲೆ ಬ್ರಿಟಿಷರು ಹಿಡಿತ ಸಾಧಿಸಿದರು. ಕ್ರಿ.ಶ 1804ರಲ್ಲಿ ಬ್ರಿಟಿಷ್‌ ರೆಸಿಡೆಂಟ್‌ ತನ್ನ ಆಡಳಿತವನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿದ. 1806ರಲ್ಲಿ ಬ್ರಿಟಿಷರು ಕಂಟೋನ್ಮೆಂಟ್‌ ನಿರ್ಮಿಸಿದರು. ಅಲ್ಲಿ ಬ್ರಿಟಿಷ್‌ ಮಿಲಿಟರಿ ಮತ್ತು ಅವರ ಕುಟುಂಬವೇ ಅಲ್ಲದೆ, ಆಂಗ್ಲೊ ಇಂಡಿಯನ್ನರು, ಮಿಷನರಿಗಳು, ತಮಿಳು ಮಾತನಾಡುವ ಕೆಲಸಗಾರರು ಹಾಗೂ ವ್ಯಾಪಾರಿಗಳು ನೆಲೆಸಿದ್ದರು.

ಮಿಲಿಟರಿಯವರಿಗಾಗಿ ಆರಂಭಗೊಂಡ ಚರ್ಚ್‌: ಕಂಟೋನ್ಮೆಂಟ್‌ನಲ್ಲಿದ್ದ ಮಿಲಿಟರಿಯವರ ಪ್ರಾರ್ಥನೆಗೆಂದು ನಿರ್ಮಾಣವಾದದ್ದು ಸೇಂಟ್‌ ಮಾರ್ಕ್ಸ್‌ ಚರ್ಚ್‌. 1808ರಲ್ಲಿ ಆರಂಭವಾದ ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು 1811ರಲ್ಲಿ. ಕ್ರಿ.ಶ 1812ರಲ್ಲಿ ಚರ್ಚ್‌ ಉದ್ಘಾಟನೆಯಾಯಿತು. 400 ಆಸನದ ಸಾಮರ್ಥ್ಯ ಹೊಂದಿದ್ದ ಈ ಚರ್ಚ್‌ಗೆ ಪ್ರಾರ್ಥನೆಗೆ ಬರುವವರ ಸಂಖ್ಯೆ 2000 ದಾಟಿತು. ಹಾಗಾಗಿ ಈ ಚರ್ಚ್‌ ಅನ್ನು ವಿಸ್ತರಿಸುವಂತೆ ಅಥವಾ ಹೊಸ ಚರ್ಚ್‌ ನಿರ್ಮಿಸುವಂತೆ ಮಿಲಿಟರಿಯವರಿಂದ ಮನವಿಗಳು ಬಂದವು. ಇದರ ಪರಿಣಾಮ 1851ರಲ್ಲಿ ‘ಹೋಲಿ ಟ್ರಿನಿಟಿ’ ಹೊಸ ಚರ್ಚ್‌ ನಿರ್ಮಾಣಗೊಂಡಿತು.

ಸೇಂಟ್‌ ಮಾರ್ಕ್ಸ್‌ ಚರ್ಚ್‌ ಧಾರ್ಮಿಕ ಕಾರ್ಯಗಳ ಜತೆಗೆ ಶೈಕ್ಷಣಿಕ ಸೇವೆಯನ್ನು ನಿಭಾಯಿಸುತ್ತಿತ್ತು. ಶಾಲೆಯೊಂದನ್ನು ತೆರೆಯುವ ಅಗತ್ಯ ಮನಗಂಡು, ಬ್ರಿಟಷ್‌ ಸರ್ಕಾರ ಮತ್ತು ಮೈಸೂರಿನ ಮಹಾರಾಜರ ನೆರವು ಪಡೆದು 1865ರ ಏಪ್ರಿಲ್‌ 19ರಂದು ಬಿಷಪ್‌ ಕಾಟನ್‌ ಸ್ಕೂಲ್‌ ಆರಂಭಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿತ್ತು.

ಪುನರ್‌ ನಿರ್ಮಾಣ ಮತ್ತು ನವೀಕರಣ: 1901–02ರಲ್ಲಿ ಸೇಂಟ್‌ ಮಾರ್ಕ್ಸ್‌ ಚರ್ಚ್‌ ಕಟ್ಟಡವನ್ನು ವಿಸ್ತರಿಸಲಾಯಿತು. ಅದರಲ್ಲಿನ ಆಸನ ಸಾಮರ್ಥ್ಯವನ್ನು 700ಕ್ಕೆ ಏರಿಸಲಾಗಿತ್ತು. ಈ ಕಟ್ಟಡ ಕುಸಿದಿದ್ದರಿಂದ 1906ರಲ್ಲಿ ಅದನ್ನು ನವೀಕರಿಸಲಾಯಿತು. 1905ರಲ್ಲಿ ಬೆಂಗಳೂರಿಗೆ ವಿದ್ಯುತ್‌ ಸಂಪರ್ಕ ದೊರೆಯಿತು (ದೇಶದಲ್ಲಿಯೇ ವಿದ್ಯುತ್‌ ಸಂಪರ್ಕ ಪಡೆದ ಮೊದಲ ನಗರ ಬೆಂಗಳೂರು). 1908ರಲ್ಲಿ ಸೇಂಟ್‌ ಮಾರ್ಕ್ಸ್‌ ಚರ್ಚ್ ವಿದ್ಯುತ್ ಸಂಪರ್ಕ ಪಡೆಯಿತು. ಇದೇ ವರ್ಷ ಚರ್ಚ್‌ನ ಶತಮಾನೋತ್ಸವವೂ ನೆರವೇರಿತು.

1923ರ ಫೆಬ್ರುವರಿ 17ರಂದು ಚರ್ಚ್‌ನಲ್ಲಿ ಸಂಭವಿಸಿದ ಅಗ್ನಿ ಅವಗಡದಲ್ಲಿ ಚರ್ಚ್‌ನ ಬಹುತೇಕ ಭಾಗ ಹಾನಿಗೊಂಡಿತು. ಅದರ ಪುನರ್‌ ನಿರ್ಮಾಣ ಕಾರ್ಯ 1924ರ ಫೆಬ್ರುವರಿಯಲ್ಲಿ ಪೂರ್ಣಗೊಂಡಿತು. ಇದಾದ ನಂತರ ಪುನಃ ಚರ್ಚ್‌ ಕಟ್ಟಡ ಕುಸಿಯಿತು. ಅದನ್ನು 1926ರಿಂದ 1927ರ ಅವಧಿಯಲ್ಲಿ ಮತ್ತೆ ನಿರ್ಮಿಸಲಾಯಿತು. 1947ರಲ್ಲಿ ದಕ್ಷಿಣ ಭಾರತ ಸಭೆಯ ಕರ್ನಾಟಕ ಕೇಂದ್ರ ಡಯೋಸಿಸ್‌ನ ಮುಖ್ಯ ಮಂದಿರವಾಗಿ ‘ಕೆಥೆಡ್ರಲ್‌’ (ಆರಾಧನಾ ಮಂದಿರ) ಮಟ್ಟಕ್ಕೆ ಈ ಚರ್ಚ್‌ ಏರಿತು.

ವಾಸ್ತುಶೈಲಿ:ಕೆಥೆಡ್ರಲ್ ಚರ್ಚ್‌ ವಿವಿಧ ಬಗೆಯ ವಾಸ್ತುಶೈಲಿಯ ಮಿಶ್ರಣ. ಅದರ ನವೀಕರಣ, ಪುನರ್‌ ನಿರ್ಮಾಣಗಳ ಸಂದರ್ಭದಲ್ಲಿ ಹಲವು ಬಗೆಯ ವಾಸ್ತುಶೈಲಿಗಳು ಇಲ್ಲಿ ಮೇಳೈಸಿವೆ. ಸುಂದರ ವಾಸ್ತುಶಿಲ್ಪದಿಂದ ಕಂಗೊಳಿಸುವ ಈ ಕಟ್ಟಡ ರೋಮನ್‌ ಶೈಲಿಯ ಸಾಲು ಕಮಾನುಗಳನ್ನು ಹೊಂದಿದೆ. ಗರ್ಭಾಂಕಣದ ಮೇಲೆ ಗುಮ್ಮಟವಿದ್ದು, ಅದರ ತುದಿಯಲ್ಲಿ ಶಿಲುಬೆಯಿದೆ. ಈ ವಿಶಾಲ ಸೌಧದ ಒಳಭಾಗ ವಿಶೇಷವಾಗಿ ಸಭಾಂಗಣವು ಮರದ ಹಲಗೆಗಳಿಂದ ಮಾಡಿದ ಪಿಠೋಪಕರಣಗಳಿಂದ ತುಂಬಿದೆ. ಪ್ರಬೋಧನಾ ಪೀಠ, ವರ್ಣರಂಜಿತ ಗಾಜಿನ ಕಿಟಕಿಗಳನ್ನು ಇದು ಒಳಗೊಂಡಿದೆ. ಇಲ್ಲಿರುವ ಘಂಟೆಗೆ ದೇಶದಲ್ಲಿಯೇ ಅತ್ಯುತ್ತಮ ನಿರ್ವಹಣೆ ಹೊಂದಿರುವ ಘಂಟೆ ಎಂಬ ಹೆಗ್ಗಳಿಕೆಯಿದೆ. ಇಲ್ಲಿನ ವರ್ಣರಂಜಿತ ಗಾಜುಗಳು ಚರ್ಚ್‌ನ ಸೌಂದರ್ಯ ಹೆಚ್ಚಿಸಿವೆ.

ಇದಲ್ಲದೆ ಹಿರಿಯ ನಾಗರಿಕರ ಮನೆ, ಮ್ಯೂಸಿಕ್‌ ಸ್ಕೂಲ್‌ (1990) ತೆರೆದು ಅವುಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. 2008ರಲ್ಲಿ 200ನೇ ವರ್ಷ ಆಚರಿಸಿಕೊಂಡಿರುವ ಚರ್ಚ್‌ 210 ವರ್ಷಗಳ ಯಶಸ್ವಿ ಹಾದಿಯಲ್ಲಿ ಸಾಗಿದೆ.

ಈ ಚರ್ಚ್‌ನ ಆರಂಭದ ದಿನಗಳಲ್ಲಿ ಚರ್ಚ್‌ನ ವಾಸ್ತುಶಿಲ್ಪಿಗಳು ಇದನ್ನು ಅತ್ಯಂತ ಚಿಕ್ಕ ಮತ್ತು ಕಡಿದಾಗಿರುವ ಕೆಟ್ಟ ವಿನ್ಯಾಸದಲ್ಲಿರುವ ಚರ್ಚ್‌ ಎಂದು ಟೀಕಿಸಿದ್ದರು. ಆದರೆ ಆ ನಂತರ ನಡೆದ ನವೀಕರಣ, ಪುನರ್‌ ನಿರ್ಮಾಣ ಕಾರ್ಯಗಳಿಂದ ಚರ್ಚ್‌ಗೆ ಸುಂದರ ಗೊಮ್ಮಟ ಬಂದಿದೆ. ವಿಶೇಷ ವಾಸ್ತುಶೈಲಿಗಳ ಮಿಶ್ರಣದಿಂದಾಗಿ ಇದು ಸುಂದರ, ಭವ್ಯ ಪಾರಂಪರಿಕ ಕಟ್ಟಡವಾಗಿ ನಮ್ಮ ಮುಂದಿದೆ.

ಸಡಗರದಿಂದ ಕ್ರಿಸ್‌ಮಸ್‌ ಆಚರಣೆ
ಈ ಚರ್ಚ್‌ನಲ್ಲಿ ಏಪ್ರಿಲ್‌ನಲ್ಲಿ ನಡೆಯುವ ಸೇಂಟ್‌ ಮಾರ್ಕ್ಸ್‌ ಡೇ, ಸೆಪ್ಟೆಂಬರ್‌ನಲ್ಲಿ ನಡೆಯುವ ‘ಹಾರ್ವೆಸ್ಟ್‌ ಫೆಸ್ಟ್‌’, ನವೆಂಬರ್‌ನಲ್ಲಿ ನಡೆಯುವ ಸೈನಿಕರ ಸ್ಮರಣಾ ದಿನ ಹಾಗೂ ಡಿಸೆಂಬರ್‌ನಲ್ಲಿ ನಡೆಯುವ ಕ್ರಿಸ್‌ಮಸ್‌ ಪ್ರಮುಖ ಆಚರಣೆಗಳಾಗಿವೆ. ಅವುಗಳ ಜತೆಗೆ ಗುಡ್‌ಫ್ರೈಡೆ, ಈಸ್ಟರ್‌ ಹಬ್ಬಗಳು ವಿಶೇಷವಾದವು.

‘ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಡಿಸೆಂಬರ್‌ ತಿಂಗಳ ಪೂರ್ತಿ ಒಂದಲ್ಲ ಒಂದು ಕಾರ್ಯಕ್ರಮಗಳು ಚರ್ಚ್‌ನಲ್ಲಿ ನಡೆಯುತ್ತವೆ. ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುವ ಚರ್ಚ್‌ ಕ್ರಿಸ್‌ಮಸ್‌ ಅನ್ನು ಸಡಗರ ಸಂಭ್ರಮದಿಂದ ಆಚರಿಸುತ್ತದೆ. ಜತೆಗೆ ಹೊಸ ವರ್ಷವನ್ನೂ ಸಂಭ್ರಮದಿಂದ ಭರಮಾಡಿಕೊಳ್ಳುತ್ತದೆ. ಚರ್ಚ್‌ನಲ್ಲಿ ಪ್ರತಿ ಭಾನುವಾರ ವಿಶೇಷ ಪ್ರಾರ್ಥನೆಗಳಿರುತ್ತವೆ. ತಿಂಗಳಲ್ಲಿ ಎರಡು ದಿನ (ಶುಕ್ರವಾರಗಳಂದು) ವಿಶೇಷವಾಗಿ ಹಿರಿಯ ನಾಗರಿಕರು ಪ್ರಾರ್ಥಿಸಲು ಅವಕಾಶ ಕಲ್ಪಿಸಲಾಗಿದೆ’ ಎನ್ನುತ್ತಾರೆ ಚರ್ಚ್‌ನ ರೆವರೆಂಡ್‌ ಡಾ. ವಿನ್ಸೆಂಟ್‌ ವಿನೋದ್‌ ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT