ಇದ್ದೂ, ಇಲ್ಲದಾಗಿದೆ ಶೌಚಾಲಯ

ಭಾನುವಾರ, ಜೂಲೈ 21, 2019
25 °C

ಇದ್ದೂ, ಇಲ್ಲದಾಗಿದೆ ಶೌಚಾಲಯ

Published:
Updated:

ಬನಶಂಕರಿ ಮೂರನೇ ಹಂತದಲ್ಲಿರುವ ಜನತಾ ಬಜಾರ್‌ನಲ್ಲಿ ನಿತ್ಯವೂ ಸಾವಿರಾರು ಜನರು ಓಡಾಡುತ್ತಾರೆ. ಯಾವಾಗಲೂ ದಟ್ಟಣೆಯಿಂದ ಕೂಡಿರುವ ಪ್ರದೇಶ ಇದಾಗಿದೆ. ಆದರೂ ಇಲ್ಲಿರುವ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲದಿರುವುದು ಶೋಚನೀಯ.

ಎಸ್‌.ಜಿ.ಆಸ್ಪತ್ರೆಯ ಮುಂಭಾಗದ ಉದ್ಯಾನವನಕ್ಕೆ ಹೊಂದಿಕೊಂಡಿರುವ ಏಕೈಕ ಶೌಚಾಲಯಕ್ಕೆ ಬೀಗ ಬಿದ್ದಿದೆ. ಒಂದು ವರ್ಷ ಆಗಿದ್ದರೂ ಈ ಕಡೆಗೆ ಯಾರೂ ಗಮನ ವಹಿಸಿಲ್ಲ. ಪ್ರತಿ ದಿನ ಸಾವಿರಾರು ಜನರು ಮೂತ್ರ ವಿಸರ್ಜನೆಗಾಗಿ ಇಲ್ಲಿಗೆ ಬಂದು ವಾಪಸ್ ಹೋಗುತ್ತಿದ್ದಾರೆ.

ಸಾರ್ವಜನಿಕರ ಬಳಕೆಗಾಗಿಯೇ ಸಾವಿರಾರು ರೂಪಾಯಿ ಖರ್ಚು ಮಾಡಿ ಶೌಚಾಲಯಗಳನ್ನು ಕಟ್ಟಿಸಲಾಗುತ್ತದೆ. ಆದರೆ ಬಳಕೆಗೆ ಅನುಕೂಲ ಮಾಡಿಕೊಡುವ ಬದಲು ಬೀಗ ಹಾಕಿದರೆ ಜನರು ಎಲ್ಲಿಗೆ ಹೋಗಬೇಕು?‌

ಪದ್ಮನಾಭನಗರ ವಾರ್ಡ್‌ನ ಬಿಬಿಎಂಪಿ ಕಚೇರಿ ಕೂಡ ಹತ್ತಿರದಲ್ಲೇ ಇದೆ. ಬಸ್‌ ನಿಲ್ದಾಣ ಕೂಡ ಹತ್ತಿರದಲ್ಲೇ ಇದೆ. ಬನಶಂಕರಿ, ಜಯದೇವ, ಸಿಲ್ಕ್‌ಬೋರ್ಡ್‌, ಮಾರತ್ತಹಳ್ಳಿ, ಇಂದಿರಾನಗರ, ಕೋರಮಂಗಲ ಕಡೆ ಹೋಗುವ ಹತ್ತಾರು ಬಸ್‌ಗಳನ್ನು ಏರಲು ಜನರು ಇಲ್ಲಿಗೆ ಬರುತ್ತಾರೆ. ಅವರೆಲ್ಲಾ ಶೌಚಾಲಯದ ಹಿಂದಿರುವ ಉದ್ಯಾನವನದ ಪಕ್ಕದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಜನರು ಓಡಾಡದ ವಾತಾವರಣ ನಿರ್ಮಾಣವಾಗಿದೆ. ಬಸ್‌ ನಿಲ್ದಾಣವೆಲ್ಲಾ ಮೂತ್ರದ ವಾಸನೆಯಿಂದ ತುಂಬಿಕೊಂಡಿದ್ದು ಜನರು ಬಸ್‌ಗಾಗಿ ಕಾಯಲು ಕಷ್ಟ ಪಡುತ್ತಿದ್ದಾರೆ.

ಬಸ್‌ ನಿಲ್ದಾಣದ ಹತ್ತಿರ ಇರುವ ಅಪಾರ್ಟ್‌ಮೆಂಟ್ ಕಾಂಪೌಂಡ್ ಬದಿಯನ್ನೇ ಜನರು ಶೌಚಾಲಯ ಮಾಡಿಕೊಂಡಿದ್ದಾರೆ. ಉದ್ಯಾನವನ್ನೂ ಕೂಡ ಅಷ್ಟು ಸ್ವಚ್ಛವಾಗಿ ಇಟ್ಟಿಲ್ಲ. ಸುತ್ತಮುತ್ತ ಕಸದ ರಾಶಿ ಹೆಚ್ಚಾಗಿದೆ. ಮದ್ಯದ ಬಾಟಲಿಗಳು ಎಲ್ಲಿ ಬೇಕಲ್ಲಿ ಬಿದ್ದಿರುತ್ತವೆ.

ಹತ್ತಿರದಲ್ಲೇ ಇರುವ ವಿದ್ಯುತ್‌ ಕಂಬದ ವೈರ್‌ಗಳು ರಸ್ತೆ ಕಡೆಗೆ ಬಾಗಿಕೊಂಡಿವೆ. ಜನರು ಅಲ್ಲಿ ಓಡಾಡುವುದು ಕಷ್ಟವಾಗಿದೆ. ಇದರಿಂದ ಅಪಾಯ ಇದ್ದರೂ ಯಾರೂ ಕ್ರಮ ತೆಗೆದುಕೊಂಡಿಲ್ಲ.

ಅನಂತ ಕಲ್ಲಾಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !