ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿ ಮೇಲೆ ನಿರೀಕ್ಷೆಯ ಭಾರ

Last Updated 18 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಳ್ಳಿಯ ಪುಂಡನಾಗಲಿ, ಕಟ್ಟುನಿಟ್ಟಿನ ಪೊಲೀಸ್‌ ಆಗಲಿ ಅಥವಾ ರೊಮ್ಯಾಂಟಿಕ್‌ ಹೀರೊ ಆಗಲಿ, ಎಲ್ಲ ಪಾತ್ರಗಳಿಗೂ ಸಂಪೂರ್ಣ ಒಗ್ಗಿಕೊಳ್ಳುವವರು ತಮಿಳಿನ ನಟ ಕಾರ್ತಿ. ನಿಜ ಜೀವನದಲ್ಲೂ ಅವರು ತುಂಬಾ ಸರಳ ವ್ಯಕ್ತಿ. ಹೆಸರಾಂತ ನಟರ ಕುಟುಂಬದವರಾದರೂ ಒಂದಿಷ್ಟೂ ಹಮ್ಮು ತೋರದ ಅವರು ಇತ್ತೀಚೆಗಷ್ಟೇ ತಮ್ಮ ಹೊಸ ಚಿತ್ರದ ಪ್ರಚಾರಕ್ಕೆಂದು ನಗರಕ್ಕೆ ಬಂದಿದ್ದರು.

ನಟ ಕಾರ್ತಿ ಬಂದಿದ್ದೇ ತಡ ಅಭಿಮಾನಿಗಳು ಅವರನ್ನು ಸುತ್ತುವರಿದರು. ಅಷ್ಟು ನೂಕಾಟ, ಗದ್ದಲವಿದ್ದರೂ ಕಾರ್ತಿ ಮಾತ್ರ ತುಂಬಾ ಸಾವಧಾನವಾಗಿಯೇ ಅಭಿಮಾನಿಗಳನ್ನು ನೋಡುತ್ತಿದ್ದರು. ದೀಪಾವಳಿ ಹಬ್ಬದ ಸಮಯದಲ್ಲಿ ಸೆಟ್ಟೇರಲಿರುವ ತಮ್ಮ ಹೊಸ ಚಿತ್ರ ‘ಆಲ್ ಇನ್ ಆಲ್ ಅಳಗು ರಾಜ’ ಕುರಿತು ಒಂದಷ್ಟು ಅನಿಸಿಕೆಗಳನ್ನೂ ಹಂಚಿಕೊಂಡರು.

‘ಪರುತಿ ವೀರನ್‌’ ಸಿನಿಮಾ ನಂತರ ತಾವು ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲದಿದ್ದ ಕಾರಣ ಈ ಚಿತ್ರದ ಬಗ್ಗೆ ತುಂಬಾ ಕಾತರದಿಂದ ಕಾಯುತ್ತಿದ್ದಾರೆ ಕಾರ್ತಿ. ರಾಜೇಶ್‌ ನಿರ್ದೇಶನದ ಸಿನಿಮಾ ಆದ್ದರಿಂದ ಮೋಜಿಗೇನೂ ಕಡಿಮೆಯಿಲ್ಲ ಎನ್ನುವುದು ಅವರ ಅಭಿಪ್ರಾಯ. ‘ರಾಜೇಶ್‌ ಇದ್ದ ಕಾರಣಕ್ಕೇ ಚಿತ್ರೀಕರಣದ ಸಮಯವೆಲ್ಲಾ ನಗುವಿನಿಂದ ತುಂಬಿಕೊಂಡಿತ್ತು. ಅವರು  ತುಂಬಾ ಜಾಗರೂಕತೆಯಿಂದ ಕೆಲಸ ನಿರ್ವಹಿಸುತ್ತಾರೆ.

ಎಲ್ಲೂ ಯಾವುದೂ ತಪ್ಪಿ ಹೋಗದಂತೆ ನೋಡಿಕೊಳ್ಳುತ್ತಾರೆ. ಡೈಲಾಗ್‌ ಹೇಳುವುದರಿಂದ ಹಿಡಿದು ಭಾವಾಭಿವ್ಯಕ್ತಿಯವರೆಗೂ ಸೂಕ್ಷ್ಮವಾಗಿ ಗಮನಿಸುತ್ತಾ, ನಟನೊಬ್ಬನ ಕೆಲಸವನ್ನು ಇನ್ನಷ್ಟು ಸರಳಗೊಳಿಸುತ್ತಾರೆ. ಇದುವರೆಗೂ ಅವರು ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿರುವುದರಿಂದ ಈ ಚಿತ್ರದ ಮೇಲೆ ನಿರೀಕ್ಷೆಗಳಿವೆ. ಆ ನಿರೀಕ್ಷೆಗಳೆಲ್ಲವೂ ನಿಜವಾಗುವುದರಲ್ಲಿ ಎರಡು ಮಾತೇ ಇಲ್ಲ’ ಎಂದು ರಾಜೇಶ್ ಬಗ್ಗೆ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು ಕಾರ್ತಿ.

ಚಿತ್ರದಲ್ಲಿ ಸ್ಥಳೀಯ ಟೀವಿ ಚಾನೆಲ್‌ ನಡೆಸುವ ಹಳ್ಳಿ ಹೈದನಾಗಿ ಕಾರ್ತಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಪುಟ್ಟ ಹಳ್ಳಿಯೊಂದರಲ್ಲಿ ನಡೆಸಿದ ಚಿತ್ರೀಕರಣದ ಪ್ರತಿಯೊಂದು ಕ್ಷಣವೂ ಖುಷಿ ಕೊಟ್ಟಿದೆಯಂತೆ. ಆ ಹಳ್ಳಿಯ ಚೆಲುವು ಇಡೀ ಸಿನಿಮಾ ಆವರಿಸಿಕೊಂಡಿದ್ದು, ಅಲ್ಲಿನ ಜನರ ತುಂಬು ಮನಸ್ಸು, ಅಕ್ಕರೆಯನ್ನು ನೆನೆಸಿಕೊಂಡು ಸಂತಸ ಪಟ್ಟರು ಕಾರ್ತಿ.

ಕಾರ್ತಿ ಅವರ ಇತ್ತೀಚಿನ  ‘ಸಗುನಿ’ (ಶಕುನಿ) ಮತ್ತು ‘ಅಲೆಕ್ಸ್‌ ಪಾಂಡಿಯನ್‌’ ಸಿನಿಮಾಗಳಿಗೆ ನಿರಾಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿರುವುದರ ಕುರಿತೂ ಕಾರ್ತಿ ಮಾತನಾಡಿದರು. ‘ನಾನು ಈ  ಸಿನಿಮಾಗಳಿಂದ ಎರಡು ಅಂಶಗಳನ್ನು ಮನದಟ್ಟು ಮಾಡಿಕೊಂಡೆ. ಒಂದು- ಜನ ನನ್ನ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮತ್ತೊಂದು- ನನಗೆ ಒಪ್ಪಿಗೆಯಾಗದ ಕೆಲಸವನ್ನು ಎಂದಿಗೂ ಮಾಡಲೇಬಾರದು’ ಎಂದು ವ್ಯಾಖ್ಯಾನಿಸಿದರು.

ಜನರ ನಿರೀಕ್ಷೆ ಹೆಚ್ಚಿದಂತೆ ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನೂ ಕಾರ್ತಿ ಅರಿತುಕೊಳ್ಳುತ್ತಿದ್ದಾರೆ. ತಮ್ಮ ಶಿಕ್ಷಣವನ್ನು ಅಮೆರಿಕದಲ್ಲಿ ಮುಗಿಸಿ ಭಾರತಕ್ಕೆ ಮರಳಿದ ಸಮಯದಲ್ಲಿ, ತಮ್ಮನ್ನು ಒಬ್ಬ ನಟನಾಗಿ ಜನ ಈ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎಂದು ಕಾರ್ತಿ ನಿರೀಕ್ಷಿಸಿರಲಿಲ್ಲವಂತೆ. ‘ಜನರ ಈ ಪರಿಯ ಮೆಚ್ಚುಗೆ ನನ್ನನ್ನು ಮೂಕನನ್ನಾಗಿಸಿದೆ’ ಎಂದು ಅವರು ಮೌನಕ್ಕೆ ಜಾರಿದರು.

ತಂದೆ ಶಿವಕುಮಾರ್‌, ಅಣ್ಣ ಸೂರ್ಯ ಇಬ್ಬರನ್ನೂ ಜನ ಹೊಗಳುವುದು ಕೇಳಿ ಬೆಳೆದ ಕಾರ್ತಿ, ತಮಗೂ ಅಭಿಮಾನಿಗಳು ಹುಟ್ಟಿಕೊಂಡ ಕ್ಷಣವನ್ನು ನೆನೆದು ಪುಳಕಿತರಾಗುತ್ತಾರೆ. ಜನರಿಗೆಂದೇ ಒಳ್ಳೊಳ್ಳೆ ಸಿನಿಮಾಗಳನ್ನು ಕೊಡಬೇಕೆಂಬ ಜವಾಬ್ದಾರಿಯೂ ಇದೆ ಎನ್ನುತ್ತಾರೆ.
ಇನ್ನು, ಬೆಂಗಳೂರಿಗೂ ಕಾರ್ತಿಗೂ ಉತ್ತಮ ಬಾಂಧವ್ಯವಿದೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಇಲ್ಲಿಗೆ ಬರುತ್ತಿದ್ದ ಕಾರ್ತಿಗೆ ಬೆಂಗಳೂರು ರಜಾ ಕಳೆಯಲು ಸುಂದರ ಸ್ಥಳ.

‘ವರ್ಷಗಳು ಉರುಳಿದಂತೆ ಈ ನಗರ ಸಾಕಷ್ಟು ಬದಲಾಗಿದೆ. ನನಗೆ ಬೆಂಗಳೂರೆಂದರೆ ತುಂಬಾ ಇಷ್ಟ. ಚಿಕ್ಕವನಿದ್ದಾಗ ರಜಾ ಬಂದರೆ ಕುಟುಂಬದೊಂದಿಗೆ ಇಲ್ಲಿಗೆ ಬಂದು ಹೋಗುತ್ತಿದ್ದೆ. ಇಲ್ಲಿನ ತಂಪು ವಾತಾವರಣ ಸದಾ ನೆನಪಿನಲ್ಲಿ ಉಳಿಯುವಂಥದ್ದು. ಫ್ಯಾಷನ್‌, ಲೈಫ್‌ಸ್ಟೈಲ್‌ ಹೀಗೆ ಎಲ್ಲಕ್ಕೂ ಈ ನಗರ ಹೆಸರುವಾಸಿ. ಇಲ್ಲಿಗೆ ಚಿತ್ರದ ಪ್ರಚಾರಕ್ಕೆಂದು ಬಂದಿದ್ದೇನೆ. ಇನ್ನಷ್ಟು ಬಾರಿ ಇಲ್ಲಿಗೆ ಬರುವ ಆಸೆಯಿದೆ’ ಎನ್ನುತ್ತಾ ನಗರದ ಗುಣಗಾನ ಮಾಡಿದರು.
–ಮೇಘಾ ಶೆಣೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT