ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಕ್ ಚೌದರಿಗೆ ಸಿತಾರ್ ವಾದ್ಯ ನಮನ

Last Updated 15 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಮಳೆಯಲ್ಲೂ ಈಗ ರಾಗಾಲಾಪಗಳು ಆರಂಭಗೊಂಡಿವೆ. ಅದರೊಟ್ಟಿಗೆ ಸಂಗೀತದ ನಾದವೂ ತಟತಟನೆನ್ನುತ್ತಿದ್ದರೆ ಇನ್ನೂ ಛಂದವಲ್ಲವೇ? ಅದರ ಸಲುವಾಗಿಯೇ ಇದೇ ವಾರಾಂತ್ಯಕ್ಕೊಂದು ಸಂಗೀತ ಕಾರ್ಯಕ್ರಮವೊಂದು ಆಯೋಜನೆಗೊಂಡಿದೆ.

ಸಿತಾರ್ ವಾದಕ ದೀಪಕ್ ಚೌದರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಿರುವ ಈ ಕಾರ್ಯಕ್ರಮದಲ್ಲಿ ಅವರ ಶಿಷ್ಯ ಪ್ರಬೀರ್ ಭಟ್ಟಾಚಾರ್ಯ ಸಿತಾರ್ ನುಡಿಸಲಿದ್ದಾರೆ. ಕಲ್ಕತ್ತಾ ಮೂಲದ ದೀಪಕ್ ಚೌದರಿ ಕಿರಿಯ ವಯಸ್ಸಿನಲ್ಲೇ ಸಂಗೀತ ಕಲಿಯಲಾರಂಭಿಸಿದವರು. ಸಂತೋಷ ಬ್ಯಾನರ್ಜಿ ಎಂಬುವವರಲ್ಲಿ ಮೊದಲ ಪಾಠ ಆರಂಭಿಸಿದ ಅವರು ನಂತರ ಸಿತಾರ್ ಮಾಂತ್ರಿಕ ರವಿಶಂಕರ್ ಅವರ ಗಮನಕ್ಕೆ ಬಂದು, ಅವರ ಹಿರಿಯ ಶಿಷ್ಯರಾಗಿ ಗುರುತಿಸಿಕೊಂಡಿದ್ದರು.

ಕಲಿಕೆಯ ಹಂತದಿಂದಲೂ ಕಾರ್ಯಕ್ರಮಗಳನ್ನು ನೀಡಲಾರಂಭಿಸಿದ್ದ ದೀಪಕ್ ಚೌದರಿ ಅವರು, ರವಿಶಂಕರ್ ಅವರಿಗೆ ಭಾರತದಾದ್ಯಂತ ಹಾಗೂ ವಿದೇಶಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಾಥ್ ನೀಡಿದ್ದರು. ಸಿತಾರ್ ವಾದನ ಅಷ್ಟೇ ಅಲ್ಲದೇ ಸಿನಿಮಾ, ಧಾರಾವಾಹಿ ಹಾಗೂ ನಾಟಕಗಳಿಗೂ ಸಂಗೀತ ಸಂಯೋಜಿಸಿದ್ದವರು. ಅದರ ಜೊತೆಜೊತೆಗೇ ಆಸಕ್ತರಿಗೆ ಸಿತಾರ್ ವಾದನದ ಪಾಠವೂ ನಡೆಯುತ್ತಿತ್ತು. 2007ರಲ್ಲಿ ತೀರಿಕೊಂಡ ದೀಪಕ್ ಚೌದರಿ ಅವರಿಗೆ ಅವರ ಶಿಷ್ಯ ಪ್ರಬೀರ್ ಸಿತಾರ್ ವಾದನದ ಮೂಲಕ ನಾದನಮನ ಸಲ್ಲಿಸಲಿದ್ದಾರೆ. ಪ್ರಬೀರ್ ಅವರ ಸಿತಾರ್ ವಾದನಕ್ಕೆ ರವೀಂದ್ರ ಯಾವಗಲ್ ಅವರು ತಬಲಾ ಸಾಥ್ ನೀಡಲಿದ್ದಾರೆ.

ಪ್ರಬೀರ್ ಭಟ್ಟಾಚಾರ್ಯ ಅವರೂ ಸಹ ಕೋಲ್ಕತ್ತಾ ಮೂಲದವರಾದರೂ ಬೆಂಗಳೂರಿನಲ್ಲಿ ನೆಲೆಸಿರುವವರು. ದೀಪಕ್ ಚೌದರಿ ಅವರಲ್ಲಿ ಮೈಹರ್ ಫರಾಣೆಯ ಸೂಕ್ಷ್ಮಗಳನ್ನು ಕಲಿತವರು. ಸರೋದ್ ಹಾಗೂ ಹಲವು ವಾದ್ಯ ಸಂಗೀತದಲ್ಲಿ ಉಸ್ತಾದರೇ ಆಗಿದ್ದ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರಿಂದ ಹೆಚ್ಚು ಪ್ರಚಲಿತಗೊಂಡ ಮೈಹರ್ ಫರಾಣೆಯನ್ನು ಅವರ ನೆಚ್ಚಿನ ಶಿಷ್ಯ ಪಂ ರವಿಶಂಕರ್ ಹಾಗೂ ಅವರ ಮಗಳು ಅನ್ನಪೂರ್ಣಾದೇವಿಯರಿಗೆ ಕಲಿಸಿ ಅದರ ಸಾರವನ್ನು ಜಗತ್ತಿಗೆ ಸಾರಿದರು. ಹಾಗಾಗಿ ಅದೇ ಪರಂಪರೆಗೆ ಪ್ರಬೀರ್ ಭಟ್ಟಾಚಾರ್ಯ ಸೇರುತ್ತಾರೆ. ಜುಲೈ 18 ಸಂಜೆ 5.30ಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT