ಮಲ್ಲೇಶ್ವರದಂತಹ ಮಲ್ಲೇಶ್ವರದಲ್ಲೇ ಅಂತರ್ಜಲ ವಿಪರೀತ ಇಳಿದುಹೋಗಿದೆ ಎಂದಮೇಲೆ ಬೆಂಗಳೂರಿನ ನೀರಿನ ಭವಿಷ್ಯ ಬತ್ತಿದಂತೆಯೇ ಸರಿ ಎಂದರು ಆ ಹಿರಿಯರು.
`ಕಾಡು ಮಲ್ಲೇಶ್ವರನ ಕೃಪೆಯಿಂದಲೋ, ಹಳೆಯ ಬೆಂಗಳೂರಿನ ಗೆಟಪ್ಪಿನಲ್ಲೇ ಉಳಿದುಕೊಂಡಿದ್ದರಿಂದಲೋ ಮಲ್ಲೇಶ್ವರ ಎಂದರೆ ತಂಪು ತಂಪು ಕೂಲ್ ಕೂಲ್ ಎಂಬಂತಿತ್ತು.

ಎರಡು ನಿವೇಶನಗಳಿಗೆ ನೆರಳು ನೀಡುವಷ್ಟು ವಿಶಾಲವಾದ ವೃಕ್ಷಗಳು, ಅಂಗಳದ ಬದಿಯಲ್ಲಿ ಅಜ್ಜನ ಕಾಲದ ಬಾವಿ, ಹಗ್ಗ ಇಳಿಸಿ ಮೇಲೇರುವಾಗ ಕಿರ್ರ್ ಕಿರ್ರ್ ಎಂದು ಹಾಡುವ ರಾಟೆ, ನಾಗಸಂಪಿಗೆ ಮರ, ತನ್ನ ವಯಸ್ಸಿಗೆ ಸಾಕ್ಷಿಯಾಗಿ ದೊಡ್ಡ ದೊಡ್ಡ ಕುಳಿಗಳಿಂದ ಸಿಂಗಾರಗೊಂಡು ಅಷ್ಟಗಲದ ಬೊಡ್ಡೆಯ ಅರಳಿ, ಅತ್ತಿ, ಭೂಮಿಯ ಸಂದೇಶವನ್ನು ಆಗಸಕ್ಕೆ ಮುಟ್ಟಿಸಲೋ ಎಂಬಂತೆ ಬೆಳೆದಿರುವ ಲಂಬೂ ಮಾವಿನ ಮರ, ನಾಡಹೆಂಚು, ಆವೆಮಣ್ಣಿನ ಇಟ್ಟಿಗೆಯ ಮನೆಗಳು... ಆ ಮಲ್ಲೇಶ್ವರಕ್ಕೆ ಆ ಮಲ್ಲೇಶ್ವರವೇ ಸಾಟಿ ಕಣ್ರೀ~ ಎಂದು ನೆನಪಿನ ಕಣಜವನ್ನು ಕೆದಕಿದರು ಅವರು.

ಮೂರು ದಶಕದಿಂದ ಮಲ್ಲೇಶ್ವರವನ್ನು ಸಮಕಾಲೀನ ನೆಲೆಯಿಂದ ಕಾಣುತ್ತಿರುವ ಸ್ನೇಹಿತ ಹೇಳಿದ: ಮಲ್ಲೇಶ್ವರಕ್ಕೆ ಈಗ ಎರಡು ಗಡಿರೇಖೆಗಳಿವೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ತಲೆಯೆತ್ತಿರುವ ಭಾರೀ ಗೃಹಗುಚ್ಛ (ಅಪಾರ್ಟ್ಮೆಂಟ್) ಆ ಕಡೆ, ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್ ಮತ್ತು ಅದರ ಬೆನ್ನಲ್ಲಿರುವ ಗೃಹಗುಚ್ಛ ಈ ಕಡೆ. ಇಂತಹ ದೊಡ್ಡ ದೊಡ್ಡ ಗೃಹಗುಚ್ಚಗಳ ಗರ್ಭದಲ್ಲಿ ರಿಗ್ಗರ್ಗಳಿಂದ ಕೊರೆದ `ಬೋರ್ವೆಲ್~ ಇರುತ್ತದೆ.

ಒಂದೊಂದು ಮನೆಗೂ ಸಾವಿರಾರು ಲೀಟರ್ ನೀರು ಎಂದರೆ ದಿನಕ್ಕೆ ಲಕ್ಷಾಂತರ ಲೀಟರ್ ನೀರಿನ ಬಾಬತ್ತು ಅಲ್ವಾ ಅದಕ್ಕೆ ಮಾಮೂಲಿ ಬೋರ್ವೆಲ್ ಎತ್ತಿಕೊಡುವ ನೀರು, ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುತ್ತದೆ ಎಂದು ನಕ್ಕ ಅವನು. ರಿಗ್ಗರ್ ಎಂದರೆ ಹತ್ತು ಬೋರ್ವೆಲ್ ಸಾಮರ್ಥ್ಯದ ಭಾರೀ ಯಂತ್ರ. ದೊಡ್ಡ ಸಂಪಿನಷ್ಟು ವಿಶಾಲವಾದ `ಬಾವಿ~ ತೋಡಬಲ್ಲ ರಿಗ್ಗರ್ ಆ ಒಟ್ಟೂ ಪ್ರದೇಶದ ಜಲಮೂಲಕ್ಕೆ ಕನ್ನ ಹಾಕಬಲ್ಲದು.

ಎಲ್ಲೆಂದರಲ್ಲಿ ತಲೆಯೆತ್ತುವ ಬೃಹತ್ ಗೃಹಗುಚ್ಛಗಳು ಒಂದೂರಿನ ಜಲಮೂಲಕ್ಕೇ ಅನಾಮತ್ತು ಕೈಹಾಕುವುದೆಂದರೆ! `ಕುಬೇರ ಕುಟುಂಬಗಳು~ ವಾಸಿಸುವ ತಾಣವೆಂದರೆ ತಮಾಷೆಯಾ?

`ನಿವೇಶನ ತಗೊಂಡ್ರಾ? ಹಾಗಿದ್ರೆ ಮೊದಲು ಒಂದು ಬೋರ್ವೆಲ್ ತೋಡಿಸಿ, ಬೆಂಗಳೂರಿನಲ್ಲಿ ಬದುಕಬೇಕಾದರೆ ಜಲಮೂಲ ಸ್ವಂತದ್ದಿರಬೇಕು ಮಾರಾಯ್ರೆ~ ಎಂಬ ಗಂಭೀರ ಸಲಹೆಯನ್ನು ಈಗ ನಿರ್ಲಕ್ಷಿಸುವಂತಿಲ್ಲ ಬಿಡಿ.
ನಮ್ಮ ನೀರಿನ ದಾಹ ನಿರಂತರ. ಮನೆಗೊಂದು ವಾಹನವಿರಬೇಕು ಎಂದು ಅನುಕೂಲಶಾಸ್ತ್ರ ಹೇಳುತ್ತಿದ್ದವರ ಖಾತೆಯಲ್ಲಿ ಆಜೂಬಾಜೂ ಆರಂಕಿ ಮೊತ್ತ ತಿಂಗಳಾ ತಿಂಗಳು ಜಮಾ ಆಗುವ ಈ ಕಾಲಮಾನದಲ್ಲಿ ಮನೆಯಲ್ಲಿ ತಲೆಗೊಂದರಂತೆಯೋ, ನಿತ್ಯಕ್ಕೊಂದು ಅಪರೂಪಕ್ಕೊಂದು ಎಂದೋ ವಾಹನವಿರಬೇಕಪ್ಪ ಎಂಬ ಐಷಾರಾಮಿಮಂತ್ರ ಪಠಣವಾಗುತ್ತಿದೆ.

ಹೀಗೆ, ಮನೆ ಮುಂದೆ ಕನಿಷ್ಟ ಎರಡು ಚತುಶ್ಚಕ್ರ ವಾಹನ ನಿಂತಿದ್ದರೆ ನಿಮ್ಮ ಮನೆಯವರು ಕಾರ್ಪೊರೇಟ್ ಜಾಲದಲ್ಲಿದ್ದಾರೆ ಎಂಬ ಪಾರದರ್ಶಕ ಸತ್ಯ ಗೇಟಿನಾಚೆ ಹರಡಿಕೊಳ್ಳುವುದು ಖಚಿತ. ಹಾಗೆ ನಿಂತ ವಾಹನಗಳನ್ನು ಪ್ರತಿದಿನ ತೊಳೆಯದಿದ್ದರೆ ಹೇಗೆ? ಒಂದು ಕಾರು ತೊಳೆಯಲು ನಾಲ್ಕು ದೊಡ್ಡ ಬಕೆಟ್ ನೀರು. ನಾವು ಒಂದು ದಿನವಿಡೀ ಬಳಸುವ ನೀರನ್ನು ಈ ಮಂದಿ ಕಾರು ಸ್ನಾನಕ್ಕೆ ಪೋಲು ಮಾಡುತ್ತಾರಲ್ಲ ಅಂತ ಕರುಬುತ್ತಾಳೆ, ಪಕ್ಕದ ಗುಡಿಸಲಿನ ಹೆಣ್ಣುಮಗಳು.

ಪಕ್ಕದ ರಸ್ತೆಯಂಚಿನ ನಲ್ಲಿಯಲ್ಲಿ ದುಡ್ಡುಳ್ಳ ದೊಡ್ಡವರ ಜೊತೆ ವಾಗ್ವಾದ ನಡೆಸದಿದ್ದರೆ ಬಿಂದಿಗೆ ನೀರಿಗೂ ತತ್ವಾರ. ಸಾಲದೆಂಬಂತೆ, ನೀವೆಲ್ಲ ಬಂದು ಸೇರ್ಕೊಂಡಿದ್ದಕ್ಕೇ ಬೆಂಗಳೂರಿನಲ್ಲಿ ಇಷ್ಟೊಂದು ನೀರಿನ ಸಮಸ್ಯೆ ಎಂಬ ನಿರ್ದಾಕ್ಷಿಣ್ಯ ಬೈಗುಳವು ಸಾಮಾಜಿಕ ಸಮಸ್ಯೆಯೊಂದರ ಮತ್ತೊಂದು ಮುಖವನ್ನೆ ತೆರೆದಿಡುತ್ತದೆ. ಕಾರಿನ ಮಜ್ಜನದ ನಂತರ ನೀರಿನ ಪೈಪು ಕೈತೋಟದ ಕಡೆ ನಡೆಯುತ್ತದೆ.

ಆಲಂಕಾರಿಕ ಗಿಡಗಳಿಗೆ ಹನಿ ನೀರು ಉಣಿಸುವ ಕಸರತ್ತಿನಲ್ಲಿ ಅಂಗಳದ ಟೈಲ್ಸ್ನಲ್ಲಿ ನೀರು ನಿಲ್ಲುತ್ತದೆ. ಅದನ್ನು ತೊಳೆದು ಶುಚಿಯಾಗಿಡುವುದೂ ಅದೇ ಪೈಪಿನ ಕೆಲಸ. ಬಿಸಿಲೇರುತ್ತಿದ್ದಂತೆ ಮನೆ/ಕಚೇರಿ/ ಅಂಗಡಿಯ ಗೇಟಿನ ಮುಂದಿನ ರಸ್ತೆಗೆ ನೀರು ಉಣಿಸುವುದು ಬೇಸಿಗೆಯ ಫ್ಯಾಶನ್!

ಕಚೇರಿಯ `ರೆಸ್ಟ್ ರೂಮ್~ (ಶೌಚಾಲಯ!)ನಲ್ಲಿ ಕುಳಿತವಳಿಗೆ ಒಳಗಿನ ಶಬ್ದಮಾಲಿನ್ಯ ಹೊರಗೆ ಕೇಳಿಸಿಬಿಟ್ಟರೆ ಎಂಬ ಮುಜುಗರ... ಜೋರಾಗಿ ನಲ್ಲಿ ಚಾಲೂ ಮಾಡಿ ನಸುನಕ್ಕಳು. ಕಂಪೆನಿಯ ಒಳಚರಂಡಿ ಕೊಳವೆ ಅಷ್ಟೂ ನೀರು ಕುಡಿದು ತೇಗಿತು.
ಪೇಸ್ಟ್ ಅಂಟಿಸಿಕೊಂಡ ಬ್ರಶ್ ತೇವ ಮಾಡಲೆಂದು ನಲ್ಲಿ ತಿರುಗಿಸಿದ ಗೆಳತಿಗೆ ಕನ್ನಡಿಯಲ್ಲಿ ತನ್ನ ಮುಖಾರವಿಂದ ಕಾಣುತ್ತಲೇ ಕನಸು ಚಿಗುರತೊಡಗಿತು.

ಮುಂಗೈಯಿಂದ ಸಿಂಕ್ಗೆ ಇಳಿದ ಪೇಸ್ಟಿನ ನೊರೆಯನ್ನು ಅಳಿಸಿಹಾಕಿತು ತೆರೆದಿಟ್ಟ ನಲ್ಲಿ...
ಎರಡು ಬಕೆಟ್ ನೆನೆಸಿದ ಬಟ್ಟೆಗಳೊಂದಿಗೆ ತಾರಸಿಯೇರಿದವಳು ನಲ್ಲಿಗೆ ವಿರಾಮ ಕೊಟ್ಟದ್ದು ಬರೋಬ್ಬರಿ ಎರಡು ಗಂಟೆಗಳ ತರುವಾಯ!
ಮಂಗಳವಾರ, ಶುಕ್ರವಾರವೆಂದರೆ ಮನೆಯೊಳಗೆ ಹೊರಗೆ ನೀರ ಮಜ್ಜನದ ದಿನ. ಪೂಜಾ ಸಾಮಗ್ರಿ, ಅಡುಗೆ ಮನೆಯ ಪಾತ್ರೆ ಪಗಡೆ `ಬೆಳಗುವುದು~ ಕಡ್ಡಾಯ...
ಅಕ್ಷರಶಃ ಬೆಂದಕಾಳೂರು ಆಗಿರುವ ಬೆಂಗಳೂರಿನ ಬಿಸಿಲಿನ ಅಟ್ಟಹಾಸದ ನಡುವೆ ನೀರಿನ ಹಾಹಾಕಾರ.

ಮಗ್ಗುಲಲ್ಲೇ ಲಂಗುಲಗಾಮಿಲ್ಲದೆ ನೀರು ಚೆಲ್ಲಿ ಆಟವಾಡುವ `ನಾಗರಿಕ~ ಬಂಧುಗಳು. ಮನೆ ಪಕ್ಕದ ವಠಾರದಲ್ಲಿ ಮಟಮಟ ಮಧ್ಯಾಹ್ನ ಗೃಹಿಣಿಯರ ಭಾರೀ ಕಾದಾಟ... ಅವಳು `ಅಷ್ಟು ದೂರದಿಂದ~ ತಂದ ನೀರನ್ನು ಇವಳು ಟಾಯ್ಲೆಟ್ಗೆ ಬಳಸಿದ್ದೇ ಕಾದಾಟದ ಕಾರಣ.
ಬೇಸಿಗೆಯೆಂದರೆ ಹೇಳಿಕೇಳಿ ಸಮಾರಂಭ, ಉತ್ಸವ, ಜಾತ್ರೆ, ಹಬ್ಬಗಳ ಋತು. ಒಂದು ಚೌಲ್ಟ್ರಿಯಲ್ಲಿ ಪಾಳಿಯ ಮೇಲೆ ಸಮಾರಂಭ. ಬೆಳಗ್ಗಿನವರು ಮೂರು ಗಂಟೆಗೆ ಜಾಗ ಖಾಲಿ ಮಾಡಿದರೆ ಮತ್ತೆರಡು ಗಂಟೆ ಚೌಲ್ಟ್ರಿಯ ಆವರಣಕ್ಕೆ ಸ್ನಾನದ ಸೌಭಾಗ್ಯ...
ಇಂತಹ `ನೀರಿನ ಚಿತ್ರ~ಗಳನ್ನು ಕಾಣಬೇಕಾದರೆ ಬೇಸಿಗೆಯೇ ಬರಬೇಕು, ಅಲ್ಲಿ ಬವಣೆಗಳೇ ಇರಬೇಕು..

ಮಣ್ಣಿನ ಕುಡಿಕೆಯಲ್ಲಿ ಬಾಲಕನೊಬ್ಬ ನೀರು ಮಾರಾಟ ಮಾಡುವ ದೃಶ್ಯ ಕಂಡು ನಾಯಕ ಶಾರುಖ್ ಖಾನ್, ಭಾರತದಲ್ಲೂ ಈ ಪರಿ ನೀರಿನ ಬವಣೆಯೇ ಎಂದು ನಿಬ್ಬೆರಗಾಗುವ ಸನ್ನಿವೇಶವೊಂದಿದೆ. ಕಾಂಕ್ರೀಟು ಕಾಡಾಗುತ್ತಿರುವ ಬೆಂಗಳೂರಿನಲ್ಲಿಯೂ ಕುಡಿಕೆಯಲ್ಲಿ ನೀರು ಮಾರಾಟವಾಗುವ ದಿನ ಬಂದರೆ ಅಚ್ಚರಿಯೇನಿಲ್ಲ ಬಿಡಿ. (ಆದರೆ `ಸ್ವದೇಶ್~ನಲ್ಲಿ ಕಂಡಂತೆ ಮಣ್ಣಿನ ಕುಡಿಕೆಯ ಬದಲು ಪ್ಲಾಸ್ಟಿಕ್ ಕುಡಿಕೆಗೆ ಅಲ್ಟ್ರಾ ಮಾಡರ್ನ್ ಬೆಂಗಳೂರಿಗೆ ಮಣ್ಣಿನ ಕುಡಿಕೆ ಸರಿಹೊಂದಲಾರದೇನೊ?).

ಹೇಳಹೆಸರಿಲ್ಲದಂತೆ ಮಾಯವಾಗಿರುವ ಸಾಂಪ್ರದಾಯಿಕ ಬಾವಿಗಳ ಜಾಗದಲ್ಲಿ ಸಂಪ್, ಭಾರೀ ಟ್ಯಾಂಕ್ಗಳು ಕುಳಿತಿವೆ. ಸಾವಿರ ಅಡಿಗೂ ಹೆಚ್ಚು ಭೂಗರ್ಭದಾಳದಲ್ಲಿ ನೀರಿಗಾಗಿ ತಡಕಾಡಿದ ಬೋರ್ವೆಲ್ ಕೊಳವೆಗಳು ಜಲದ ಜಾಡು ಪತ್ತೆ ಹಚ್ಚಲಾರದೆ ಮಂಕಾಗಿವೆ. ಮತ್ತೂ ಆಳದಲ್ಲಿ ತಿಣುಕಾಡುವಂತೆ ಯಂತ್ರದ ಆದೇಶ ಹೊತ್ತ ಮತ್ತೊಂದು ಕೊಳವೆ ಬಾವಿಗಿಳಿದಿದೆ...

ಊರಿಗೆ ಬಂದವಳು ನೀರಿಗೆ ಬಾರಳೇ ಎಂಬ ವ್ಯಂಗ್ಯೋಕ್ತಿ, ಬದುಕನ್ನೇ ಅಣಕಿಸುವಂತೆ ಭಾಸವಾಗುತ್ತದೆ. ನಮಗೂ, ನಿಮಗೂ ಸಮಪಾಲು ಎಂಬ ಹಂಚಿ ಉಣ್ಣುವ (ಕುಡಿಯುವ) ಉದಾರವಾದಿಗಳು ನಾವಾಗಬೇಕಾದ ಅನಿವಾರ್ಯ ಮುಂದಿದೆ. ದುಬಾರಿ ಮೊತ್ತ ತೆತ್ತರೆ ಚಿನ್ನ, ವಜ್ರ ದಕ್ಕೀತು, ನೀರು ದಕ್ಕಲಾರದು ಎಂಬ ಬರದ ಪರಿಸ್ಥಿತಿ ಬರದಿರಲಿ. ಇಂತಹುದೊಂದು ನಾಗರಿಕ ಪ್ರಜ್ಞೆಯೊಂದಿಗೆ ನೀರಿಗೆ ಕೈ ಹಾಕಿದರೆ ನೆರೆಯವರ ದಾಹವೂ ತೀರೀತು. ಬನ್ನಿ, ನಾಗರಿಕರಾಗೋಣ, ನೀರಿಗಾಗಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.