ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಕೃಷಿ ಖುಷಿ!

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನೀವು ಸ್ವಾವಲಂಬಿ ಮಹಿಳೆ ಆಗುವ ನಿಟ್ಟಿನಲ್ಲಿ ಯೋಚಿಸುತ್ತಿದ್ದೀರಾ? ನಿಮಗೆ ಸ್ವಂತ ಉದ್ಯೋಗ ಮಾಡುವ ಇಚ್ಛೆ ಇದೆಯೇ, ಮಹಿಳೆಯರಿಗಾಗಿ ಇರುವ ಸರ್ಕಾರದ ಯೋಜನೆಗಳ ಅರಿವಿದೆಯೇ? ನಿಮಗೆ ಮಹಿಳಾ ಸ್ನೇಹಿ ತಂತ್ರಜ್ಞಾನಗಳ ಪರಿಚಯವಿಲ್ಲವೇ? ಹಾಗಾದರೆ ಇದೇ ಶನಿವಾರ ಮತ್ತು ಭಾನುವಾರ (ಡಿ.7 ಮತ್ತು 8) ನಗರದ ಲಾಲ್‌ಬಾಗ್‌ನ ತೋಟಗಾರಿಕೆ ಇಲಾಖೆ ಆವರಣದಲ್ಲಿ ನಡೆಯುವ ‘ರಾಷ್ಟ್ರೀಯ ಕೃಷಿ ಮಹಿಳಾ ಮಹೋತ್ಸವ’ಕ್ಕೆ ಭೇಟಿ ನೀಡಿ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ.

ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಜತೆಯಲ್ಲೇ, ಮಹಿಳಾ ಸ್ನೇಹಿ ತಂತ್ರಜ್ಞಾನಗಳು ಸೇರಿದಂತೆ ತೋಟಗಾರಿಕೆಗೆ ಪೂರಕವಾದ ಸಾಕಷ್ಟು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿರುವ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (ಐಐಎಚ್‌ಆರ್) ಡಿಸೆಂಬರ್ 4ರಂದು ವಿಶ್ವದಾದ್ಯಂತ ಆಚರಿಸುವ ‘ಕೃಷಿಯಲ್ಲಿ ಮಹಿಳೆ ದಿನ’ದ ಅಂಗವಾಗಿ ಈ ಮೇಳವನ್ನು ಆಯೋಜಿಸಿದೆ.

ಈ ಮೇಳಕ್ಕೆ ಐಐಎಚ್‌ಆರ್‌ನ ಮಹಿಳಾ ಘಟಕ ಮತ್ತು ರಾಷ್ಟ್ರೀಯ ಕೃಷಿ ಆವಿಷ್ಕಾರ ಯೋಜನೆ (ಎನ್‌ಎಐಪಿ), ಕರ್ನಾಟಕ ಸರ್ಕಾರ, ತೋಟಗಾರಿಕೆ ಇಲಾಖೆಯ ಸಹಭಾಗಿತ್ವವಿದೆ.

ಈ ಮಹೋತ್ಸವದಲ್ಲಿ ‘ಕೃಷಿಯಲ್ಲಿ ಮಹಿಳೆಯ ಪಾತ್ರ’ ಎಂಬ ವಿಷಯ ಕುರಿತಂತೆ ವಿಚಾರ ಸಂಕಿರಣಗಳು ನಡೆಯಲಿದ್ದು, ತೋಟಗಾರಿಕೆ, ಕೃಷಿ, ಪಶುಪಾಲನೆ ಮುಂತಾದ ವಿಷಯಗಳಲ್ಲಿ ಸಾಧಿಸಿರುವ ಪ್ರಗತಿ ಮತ್ತು ತಮ್ಮ ಕುಟುಂಬಕ್ಕೆ ಕೊಡುಗೆ ನೀಡಿರುವ 50 ಮಹಿಳೆಯರಿಗೆ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ (ಐಸಿಎಆರ್) ಸಂಶೋಧನಾ ಸಂಸ್ಥೆಗಳು ಸನ್ಮಾನ ಏರ್ಪಡಿಸಿವೆ.



ಎರಡು ದಿನ ನಡೆಯಲಿರುವ ಈ ಮೇಳದಲ್ಲಿ ವಿವಿಧ ಸರ್ಕಾರಿ ಸಂಘಟನೆಗಳು ಪಾಲ್ಗೊಳ್ಳುತ್ತಿದ್ದು, ಗ್ರಾಮೀಣ ಕೃಷಿ ಮಹಿಳೆಯರಿಗೆ ಸ್ವಉದ್ಯೋಗ ಕೈಗೊಳ್ಳಲು ಸರ್ಕಾರ ಮತ್ತು ವಿವಿಧ ಇಲಾಖೆಗಳಿಂದ ಲಭ್ಯವಿರುವ ಯೋಜನೆಗಳು ಹಾಗೂ ಗ್ರಾಮೀಣ ಮಹಿಳೆಯರ ಅಭಿವೃದ್ಧಿಗಾಗಿ ಇರುವ ಯೋಜನೆಗಳ ಕುರಿತು ಮಾಹಿತಿ ಒದಗಿಸುತ್ತವೆ. ಮುಕ್ತ ಚರ್ಚೆಗೂ ಅವಕಾಶವಿದೆ.

ಜತೆಗೆ ಐಐಎಚ್‌ಆರ್, ತೋಟಗಾರಿಕೆ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು, ಕೆಎಸ್‌ಎಸ್‌ಆರ್‌ಡಿಐ, ಎನ್‌ಡಿಆರ್‌ಐ ಮತ್ತು ಎನ್‌ಐಎಎನ್‌ಪಿ ಅಭಿವೃದ್ಧಿಪಡಿಸಿರುವ ಹಲವಾರು ಮಹಿಳಾ ಸ್ನೇಹಿ ತಂತ್ರಜ್ಞಾನಗಳ ಪ್ರದರ್ಶನವಿದೆ.

ನೆರೆಯ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಗ್ರಾಮೀಣ ಕೃಷಿ ಮಹಿಳಾ ಉದ್ಯಮಿಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, ಇಲ್ಲಿನ ಮಳಿಗೆಗಳಲ್ಲಿ ತಮ್ಮ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಿದ್ದಾರೆ.

ಗ್ರಾಮೀಣ ಭಾಗದ ಮಹಿಳಾ ಸ್ವಉದ್ಯೋಗಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಕೊಡುವುದು ಈ ಉತ್ಸವದ ಉದ್ದೇಶ ಎನ್ನುತ್ತಾರೆ ಐಐಎಚ್‌ಆರ್‌ನ ಕೃಷಿ ವಿಸ್ತರಣಾ ವಿಭಾಗದ ಪ್ರಧಾನ ವಿಜ್ಞಾನಿ ಡಾ.ನೀತಾ ಖಾಂಡೇಕರ್.
ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT