ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಣೆ ನಾದದ ಹಾದಿಯಲ್ಲಿ ಬಾಲಕೃಷ್ಣ

ಅಕ್ಷರ ಗಾತ್ರ

‘ಮೈಸೂರು ಬಾನಿ’ ಎಂದೊಡನೆಯೇ ನೆನಪಿಗೆ ಬರುವ ಹೆಸರುಗಳು ವೀಣೆ ಶೇಷಣ್ಣ ಮತ್ತು ದೊರೆಸ್ವಾಮಿ ಅಯ್ಯಂಗಾರ್. ಡಾ.ದೊರೆಸ್ವಾಮಿ ಅಯ್ಯಂಗಾರ್ ಅವರ ಪುತ್ರ ಡಿ.ಬಾಲಕೃಷ್ಣ. ಕರ್ನಾಟಕ ಸಂಗೀತದ ಹಿರಿಯ ವೈಣಿಕರಾಗಿ ಸುಪರಿಚಿತರು.

ಬಾಲ್ಯದಲ್ಲಿ ತಂದೆಯಿಂದ ವೀಣಾಭ್ಯಾಸ ಮಾಡಿದ ಬಾಲಕೃಷ್ಣ, ದಕ್ಷ ಶಿಕ್ಷಣ, ಸತತ ಸಾಧನೆಗಳಿಂದ ವಾದ್ಯದ ಮೇಲೆ ಪ್ರಭುತ್ವ ಗಳಿಸಿದರು. ಅವರ ಕೃತಿ ಭಂಡಾರವೂ ಅಗಾಧ. ಅವರ ಬತ್ತಳಿಕೆಯಲ್ಲಿ ಅನೇಕ ಅಪರೂಪ ಕೃತಿಗಳೂ, ಕ್ಲಿಷ್ಟ ಪಲ್ಲವಿಗಳೂ, ಹಸನಾದ ರಾಗಗಳು- ರಾರಾಜಿಸುತ್ತಿವೆ.

ತಂದೆಯ ಜೊತೆ ಅನೇಕ ವರ್ಷ ಸಹವಾದನ ಮಾಡಿ, ಗಾಢ ಅನುಭವ ಪಡೆದಿದ್ದಾರೆ. ಈ ಅನುಭವದಿಂದ ಅವರ ವಾದನ ಸಾಂಪ್ರದಾಯಿಕ ಶೈಲಿಯಲ್ಲಿ ಹೊಮ್ಮಿ ಆರ್ದ್ರ ಅನುಭವ ನೀಡುತ್ತದೆ.

ಮೈಸೂರು ಬಾನಿಯ ಅತ್ಯುತ್ತಮ ಅಂಶಗಳನ್ನೆಲ್ಲಾ ಬಾಲಕೃಷ್ಣ ಅವರ ವೀಣೆಯಲ್ಲಿ ಕೇಳಬಹುದು. ಯಾವ ಚಮತ್ಕಾರಗಳಿಗೂ ಕೈ ಹಾಕದ ಒಂದು ಗಂಭೀರ ವೀಣೆ ಕೇಳಿದ ಅನುಭವ ಕೇಳುಗರಿಗೆ ಆಗುವುದು, ಸಹಜ. ಅಪರೂಪವಾದ ಕೃತಿಗಳು, ತ್ರಿಮೂರ್ತಿಗಳ ರಚನೆಗಳು, ಮೈಸೂರು ವಾಗ್ಗೇಯಕಾರರ ರಚನೆಗಳು, ತಿಲ್ಲಾನ, ನಗುಮಾ, ಪು.ತಿ.ನ ಅವರ ಗೀತೆಗಳು - ಹೀಗೆ ಅವರ ವೀಣಾವಾದನದಲ್ಲಿ ಎಲ್ಲ ಪ್ರಮುಖ ಅಂಶಗಳನ್ನೂ ಕಾಣಬಹುದು.

ಎಂ.ಎಸ್.ಸಿ. ಪದವೀಧರರಾಗಿರುವ ಅವರು, ರಿಸರ್ವ್‌ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿದ್ದರು. ಈಚೆಗೆ ನಿವೃತ್ತರಾಗಿದ್ದಾರೆ. ದೇಶದ ವಿವಿಧೆಡೆ ನಡೆದ ಪ್ರಮುಖ ಸಭೆ-ಸಮ್ಮೇಳನಗಳಲ್ಲಿ ಕಛೇರಿ ನೀಡಿದ್ದಾರೆ. ವಿದೇಶಗಳಲ್ಲೂ ಮೈಸೂರು ಸಂಗೀತ ಪರಿಮಳವನ್ನು ಪಸರಿಸಿದ್ದಾರೆ.

ವಿಶೇಷವಾಗಿ ರಷ್ಯಾ, ಜರ್ಮನಿಗಳಲ್ಲಿ ನಡೆದ ‘ಇಂಡಿಯಾ ಫೆಸ್ಟಿವಲ್’ಗಳಲ್ಲಿ ನಡೆದ ‘ಪಂಚವೀಣೆ’ಯ ಭಾಗವಾಗಿದೆ. ಅವರ ಹೆಮ್ಮೆ ಆಕಾಶವಾಣಿಯ ‘ಎ-ಟಾಪ್’ ಕಲಾವಿದರಾದ ಅವರು ಸಹಜವಾಗಿಯೇ ‘ಸಂಗೀತ ಸಮ್ಮೇಳನ’ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದಾರೆ.

ಬಾಲಕೃಷ್ಣ ಅವರು ರಾಗ, ಕೃತಿ, ಪಲ್ಲವಿ, ಬಾನಿಗಳನ್ನು ಕುರಿತು ಮ್ಯೂಸಿಕ್ ಅಕಾಡೆಮಿ, ಗಾಯನ ಸಮಾಜ- ಮುಂತಾದ ಕಡೆ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಬೋಧಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂದು ವೇದಿಕೆಯಲ್ಲಿ ಬೆಳಗುತ್ತಿರುವ ಅನೇಕ ಯುವ ಕಲಾವಿದರು, ಬಾಲುರವರ ಶಿಷ್ಯರೇ ಎಂಬುದು ಗಮನಾರ್ಹ ಸಂಗತಿ. ಪಂಚವೀಣೆ, ತ್ರಿವೀಣೆ, ಯುಗಳ ವೀಣೆ, ವಾದ್ಯಗೋಷ್ಠಿಗಳನ್ನೂ ಬಾಲಕೃಷ್ಣ ನಿರ್ದೇಶಿಸಿದ್ದಾರೆ.

ಅನೇಕ ಬಿರುದು-ಪ್ರಶಸ್ತಿಗಳೂ ಸಂದಿವೆ. ಕರ್ನಾಟಕ ಗಾನಕಲಾ ಪರಿಷತ್‌ನ ಯುವ ಕಲಾವಿದರ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ‘ಗಾನಕಲಾಶ್ರೀ’ ಬಿರುದು; ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’, ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್... ಹೀಗೆ ಹತ್ತಾರು ಗೌರವಗಳಿಗೆ ಬಾಲಕೃಷ್ಣ ಭಾಜನರಾಗಿದ್ದಾರೆ. 

ಕಲಾಭೂಷಣ ಗೌರವ
ರಾಜಾಜಿನಗರದಲ್ಲಿ ಭಾನುವಾರ ತ್ಯಾಗರಾಜ ಗಾನಸಭಾ ಆಯೋಜಿಸಿರುವ ಸಂಗೀತೋತ್ಸವದಲ್ಲಿ ಪದ್ಮಭೂಷಣ ಡಾ.ಕೆ.ರಾಧಾಕೃಷ್ಣ ಅವರು ವೀಣಾ ವಿದ್ವಾನ್ ಡಿ.ಬಾಲಕೃಷ್ಣ ಅವರಿಗೆ ‘ಕಲಾಭೂಷಣ’ ಬಿರುದು ಪ್ರದಾನ ಮಾಡಲಿದ್ದಾರೆ.

ಇದೇ ಸಂದರ್ಭ ರೂಪಾ ಶ್ರೀಧರ್ ಮತ್ತು ರೇಖಾ ಹರಿನಾಥ್ (ಗಾಯನ), ಬಿ.ಆರ್. ಶ್ರೀನಿವಾಸ್ (ಮೃದಂಗ), ಶಂಕರ ಶಾಸ್ತ್ರಿ (ಸಮಾಜ ಸೇವೆ), ಗಂಗಾಧರ ಶಾಸ್ತ್ರಿ (ವೇದ), ತಿರುಮಲಾಚಾರ್ (ವೇದ) ಮತ್ತು ಕೆ.ಎನ್.ಕೃಷ್ಣಮೂರ್ತಿ ಗುರುವಂದನಾ ಸಮಿತಿ ಟ್ರಸ್ಟ್ (ಸಂಗೀತ ಸಂಸ್ಥೆ) ಅವರನ್ನು ಸನ್ಮಾನಿಸಲಾಗುವುದು.

ಸ್ಥಳ– ಶ್ರೀ ವಾಣಿ ವಿದ್ಯಾಕೇಂದ್ರ, 4ನೇ ಮುಖ್ಯರಸ್ತೆ, 2ನೇ ಹಂತ, ರಾಜಾಜಿನಗರ. ಬೆಳಿಗ್ಗೆ 11.15

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT